ವಿಕೃತ ಮಾನವರ (ಮ್ಯೂಟಂಟುಗಳ) ಪ್ರೀತಿ-ದ್ವೇಷಗಳ ಕತೆ ಇದು. 1865ನೇ ಇಸವಿಯಲ್ಲಿ ಜೇಮ್ಸ್ ಹೌಲೆಟ್ ಎಂಬ ಬಾಲಕನ ಕಣ್ಣೆದುರಿನಲ್ಲೇ ಅವನ ತಂದೆಯ ಕೊಲೆಯಾಗುತ್ತದೆ. ಈ ಭೀಕರ ಘಟನೆಯಿಂದಾಗಿ, ಅವನಲ್ಲಿ ದ್ವೇಷ ತುಂಬುತ್ತದೆ. ಇದರಿಂದಾಗಿ ಅವನು ವಿಕೃತ ಮಾನವನಾಗುತ್ತಾನೆ. ಅವನು ಇಚ್ಛಿಸಿದಾಗೆಲ್ಲ ಅವನ ಕೈಬೆರಳುಗಳ ಬುಡದಿಂದ ಚೂಪಾದ ತುದಿಗಳಿರುವ ಉಕ್ಕಿನ ಸರಳುಗಳು ಮೂಡುತ್ತವೆ. ಅವನೇ ಲೋಗನ್. ಅವನಿಗೆ ವೂಲ್ವರಿನ್ ಎಂಬ ಹೆಸರೂ ಇರುತ್ತದೆ. (ವೂಲ್ವರಿನ್ ಸರಣಿಯಲ್ಲಿ ಇನ್ನೂ ಕೆಲವು ಸಿನಿಮಾಗಳು ನಿರ್ಮಾಣವಾಗಿವೆ.)

ಲೋಗನನ ಸೋದರ ವಿಕ್ಟರ್ ಅಗಾಧ ಬಲಶಾಲಿ. ಇವನ ಬೆರಳುಗಳ ತುದಿಯಲ್ಲಿ ಉಕ್ಕಿನ ಉಗುರುಗಳಿರುತ್ತವೆ. ಇವರಿಬ್ಬರೂ ತಮ್ಮ ಬಾಲ್ಯದ ಊರಿನಿಂದ ಹೊರಟು ಹೋಗುತ್ತಾರೆ. ಅನಂತರ ಅಮೆರಿಕಾದ ಸಿವಿಲ್ ಯುದ್ಧ, ಎರಡು ಜಾಗತಿಕ ಮಹಾಯುದ್ಧಗಳು ಮತ್ತು ವಿಯೆಟ್ನಾಂ ವಿರುದ್ಧ ಅಮೆರಿಕಾದ ಯುದ್ಧ - ಇವುಗಳಲ್ಲಿ ಭಾಗವಹಿಸುತ್ತಾರೆ. ವಿಯೆಟ್ನಾಮಿನಲ್ಲಿ ಮಾಡಿದ ಅಪರಾಧಕ್ಕಾಗಿ ಇವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇವರಿಬ್ಬರೂ ಆ ಶಿಕ್ಷೆಯಿಂದ ಪಾರಾಗುತ್ತಾರೆ. 

ಆ ಸಮಯದಲ್ಲಿ ಮೇಜರ್ ವಿಲಿಯಮ್ ಸ್ಟ್ರೈಕರ್ ಎಂಬಾತ ಇವರನ್ನು “ಎಕ್ಸ್ ತಂಡ” ಎಂಬ ಮ್ಯೂಟಂಟುಗಳ ತಂಡಕ್ಕೆ ಸೇರಿಸಿಕೊಳ್ಳುತ್ತಾನೆ. ತಂಡದ ಪ್ರತಿಯೊಬ್ಬ ಸದಸ್ಯನಲ್ಲಿಯೂ ಒಂದು ವಿಶೇಷತೆ ಇರುತ್ತದೆ. ಆದರೆ ಆ ತಂಡದ ಸದಸ್ಯರ ಅಂಕೆ ಮೀರಿದ ಅಪರಾಧಿ ವರ್ತನೆಗಳಿಂದ ಬೇಸತ್ತ ಲೋಗನ್ ತಂಡ ತೊರೆದು ಹೋಗುತ್ತಾನೆ. 

ಲೋಗನ್ ಕೆನಡಾದ ಪರ್ವತಕ್ಕೆ ಹೋಗಿ ಅಲ್ಲಿ ಕಲ್ಯಾ ಎಂಬಾಕೆಯ ಜೊತೆ ಮನೆ ಮಾಡಿ ನೆಲೆಸುತ್ತಾನೆ. ಅವನು ಅಲ್ಲಿ ಲಾಗರ್ ಆಗಿ ಅಂದರೆ ಮರಗಳನ್ನು ಕಡಿದು, ದಿಮ್ಮಿ ತಯಾರಿಸುವ ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನು ಇರುತ್ತಾನೆ. 

ಆರು ವರುಷಗಳ ನಂತರ, ಮೇಜರ್ ಸ್ಟ್ರೈಕರ್ ಮತ್ತು ಏಜೆಂಟ್ ಜೀರೋ ಲೋಗನ್ ಅನ್ನು ಸಂಪರ್ಕಿಸಿ, ತಮ್ಮ ತಂಡಕ್ಕೆ ವಾಪಾಸು ಬರಬೇಕೆಂದು ಒತ್ತಾಯಿಸುತ್ತಾರೆ. ಲೋಗನ್ ನಿರಾಕರಿಸುತ್ತಾನೆ. ಆದರೆ ಕಾಡಿನಲ್ಲಿ ಕಲ್ಯಾಳ ರಕ್ತಸಿಕ್ತ ದೇಹ ಕಾಣುತ್ತಾನೆ. ಅವಳನ್ನು ಕೊಂದವನು ವಿಕ್ಟರ್ ಎಂದು ಲೋಗನನಿಗೆ ತಿಳಿಯುತ್ತದೆ. ಅನಂತರ ಒಂದು ಮದ್ಯದ ಮಳಿಗೆಯಲ್ಲಿ ವಿಕ್ಟರನನ್ನು ಪತ್ತೆ ಮಾಡಿ ಅವನ ಮೇಲೆ ದಾಳಿ ಮಾಡುತ್ತಾನೆ. ಆದರೆ ಕಾದಾಟದಲ್ಲಿ ಲೋಗನ್ ಸೋಲುತ್ತಾನೆ.   

ಅನಂತರ, ಮೇಜರ್ ಸ್ಟ್ರೈಕರ್ ಪುನಃ ಪರ್ವತಕ್ಕೆ ಬಂದು, ಲೋಗನ್ ಅನ್ನು ಪುಸಲಾಯಿಸುತ್ತಾನೆ, “ನೀನು ವಿಕ್ಟರನನ್ನು ಸೋಲಿಸಬೇಕು. ಅದಕ್ಕಾಗಿ ಇನ್ನಷ್ಟು ಶಕ್ತಿಶಾಲಿ ಆಗಬೇಕು.” ಹಾಗಾಗಲಿಕ್ಕಾಗಿ, ಲೋಗನನ ಎಲುಬುಗಳಿಗೆ ದಳಪತಿ “ಅಡಮಾಂಟಿಯಂ ಲೋಹ” ತುಂಬುತ್ತಾನೆ. ಆ ಲೋಹ ತುಂಬಿದ ಎಲುಬುಗಳು ಉಕ್ಕಿನಂತೆ ಆಗುವ ಕಾರಣ ಅವನನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ. 

ಇಂತಹ ಲೋಗನನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಕೆಂಬ ದುರುದ್ದೇಶದಿಂದ ಅವನ “ನೆನಪನ್ನೆಲ್ಲ” ಅಳಿಸಿ ಹಾಕಲು ಸ್ಟ್ರೈಕರ್ ಆದೇಶಿಸುತ್ತಾನೆ. ಇದನ್ನು ತಿಳಿದ ಲೋಗನ್ ಅಲ್ಲಿಂದ ಪಲಾಯನ ಮಾಡುತ್ತಾನೆ ಮತ್ತು ಸ್ಟ್ರೈಕರ್ ಹಾಗೂ ವಿಕ್ಟರ್ ಅನ್ನು ಕೊಂದು ಹಾಕುವ ನಿರ್ಧಾರ ಮಾಡುತ್ತಾನೆ. 

ಇವರ ಬಣದಲ್ಲಿ ಬದುಕಿ ಉಳಿದಿದ್ದ ಇಬ್ಬರ ಸಹಾಯದಿಂದ “ಥ್ರೀ ಮೈಲ್ಸ್ ದ್ವೀಪ”ಕ್ಕೆ ಲೋಗನ್ ತಲಪುತ್ತಾನೆ. ಅಲ್ಲಿರುತ್ತದೆ ಸ್ರೈಕರ್ ಅವನ ಪ್ರಯೋಗಾಲಯ. ವಿಕ್ಟರನ ನೆರವಿನಿಂದ ಹಲವು ಮ್ಯೂಟೆಂಟು ವ್ಯಕ್ತಿಗಳನ್ನು ಅಲ್ಲಿ ಕೂಡಿ ಹಾಕಿದ್ದ ಸ್ಟ್ರೈಕರ್. ಅವರ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದ. ಅಲ್ಲಿ ಕಲ್ಯಾ ಇದ್ದಳು! ಲೋಗನ್ ಆಕೆಯ ಬಳಿ ಕಾರಣ ಕೇಳಿದಾಗ, “ನನ್ನ ವಜ್ರಹೃದಯದ ತಂಗಿ ಇಲ್ಲಿ ಸೆರೆಯಾಳು. ಅವಳ ಬಿಡುಗಡೆಗಾಗಿ ನಿನ್ನೊಂದಿಗೆ ನನ್ನ ಸಾವಿನ ನಾಟಕ ಆಡಿದೆ” ಎನ್ನುತ್ತಾಳೆ. 

ಅಷ್ಟರಲ್ಲಿ, ಸ್ಟ್ರೈಕರ್ ಪ್ರಚಂಡ ಬಲಶಾಲಿಯಾದ ವೇಡ್ (ವೆಪನ್ ಇಲೆವೆನ್) ಎಂಬ ಇನ್ನೊಬ್ಬ ವಿಕೃತ ಮನುಷ್ಯನನ್ನು ಅಲ್ಲಿ ತಯಾರು ಮಾಡಿ, ವಿಕ್ಟರ್ ಮತ್ತು ಲೋಗನ್ ಮೇಲೆ ಏರಿ ಹೋಗಲು ಆದೇಶಿಸುತ್ತಾನೆ. 

ಆಗ ವಿಕ್ಟರ್ ಮತ್ತು ಲೋಗನ್, ವೇಡ್ ವಿರುದ್ಧ ಭಯಂಕರ ಕಾದಾಟ ನಡೆಸುತ್ತಾರೆ. ಈ ನಡುವೆ, ಆ ಪ್ರಯೋಗಾಲಯದಲ್ಲಿ ಸೆರೆಯಾಳುಗಳಾಗಿದ್ದ ಎಲ್ಲರನ್ನೂ ಕಲ್ಯಾ ಬಿಡುಗಡೆ ಮಾಡಿ, ಸುರಕ್ಷಿತ ತಾಣಕ್ಕೆ ಕರೆದೊಯ್ಯುತ್ತಾಳೆ. ಆದರೆ ಅವಳಿಗೆ ಮಾರಣಾಂತಿಕ ಗಾಯಗಳು ಆಗುತ್ತವೆ. ಹೊಸ ಮ್ಯುಟೆಂಟ್ ವೇಡ್ ಅನ್ನು ಅಂತೂ ಲೋಗನ್ ಕೊಂದು ಹಾಕುತ್ತಾನೆ. ಆಗ  ಅಲ್ಲಿಗೆ ಬಂದ ಸ್ಟ್ರೈಕರ್ ಅಡಮಾಂಟಿಯಂ ಲೋಹದ ಬುಲೆಟುಗಳನ್ನು ಲೋಗನನ ತಲೆಗೆ ಹೊಡೆಯುತ್ತಾನೆ. ಇದರಿಂದಾಗಿ ಲೋಗನ್ ಪ್ರಜ್ಞೆ ತಪ್ಪಿ ಬೀಳುತ್ತಾನೆ ಮತ್ತು ಅವನಿಗೆ ಹಿಂದಿನದೆಲ್ಲ ಮರೆತು ಹೋಗುತ್ತದೆ.

,

ಸ್ಟ್ರೈಕರ್ ಕಲ್ಯಾಳಿಗೆ ಬುಲೆಟ್ ಹೊಡೆಯುವ ಮುನ್ನ, ಅವಳು ತನ್ನ ಮ್ಯುಟೆಂಟ್ ಶಕ್ತಿ ಪ್ರಯೋಗಿಸಿ, ಅವನನ್ನು ಅಲ್ಲಿಂದಾಚೆಗೆ ಕಳಿಸಿ, “Turn and walk till your feet bleed” (ಅತ್ತ ತಿರುಗಿ, ನಿನ್ನ ಪಾದಗಳಿಂದ ರಕ್ತ ಸುರಿಯುವ ವರೆಗೆ ನಡೆಯುತ್ತಾ ಹೋಗು”) ಎಂದು ಆದೇಶಿಸುತ್ತಾಳೆ. ತದನಂತರ, ತನ್ನ ಗಾಯಗಳಿಂದಾಗಿ ಅವಳು ಸತ್ತು ಬೀಳುತ್ತಾಳೆ. ಆಗ ಲೋಗನನಿಗೆ ಪ್ರಜ್ಞೆ  ಬರುತ್ತದೆ. ಆದರೆ, ನೆನಪು ಕಳೆದುಕೊಂಡ ಅವನಿಗೆ ಕಲ್ಯಾಳ ಶವ ಕಂಡರೂ ಆಕೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.  

(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ, 08-02-2011ರ ಮಂಗಳವಾರ ನೋಡಿದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾಸಾರಾಂಶ.)