ಮೂವರು ಪುರುಷರು ಮತ್ತು ಒಬ್ಬ ಪುಟ್ಟ ಬಾಲಕಿ (3 Men And A Little Lady) ಎಂಬ 1990ರ ಅಮೆರಿಕನ್ ಸಿನಿಮಾದ ಕತೆ:   

ಐದು ವರುಷ ಪ್ರಾಯದ ಪುಟ್ಟ ಬಾಲಕಿ ಮೇರಿಯ ಅಮ್ಮ ಸಿಲ್ವಿಯಾ. ಆಕೆ ಪ್ರಸಿದ್ಧ ಸಿನಿಮಾ ನಟಿ. ಬಾಲಕಿ ಮೇರಿಯ ಮೇಲೆ ಪೀಟರ್, ಮೈಕೇಲ್ ಹಾಗೂ ಜಾಕ್ - ಈ ಮೂವರಿಗೆ ಭಾರೀ ಪ್ರೀತಿ. ಇವರು ಮೂವರೂ ಮೇರಿಯನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಇವರೆಲ್ಲರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. 

ಸುಮಾರು ಒಂದು ವರುಷದ ನಂತರ ಸಿಲ್ವಿಯಾಳನ್ನು ಕಾಣಲು ಅವಳ ತಾಯಿ ಬರುತ್ತಾಳೆ. ಆಕೆ ಸಿಲ್ವಿಯಾಳಿಗೆ ಹೇಳುತ್ತಾಳೆ, “ಪೀಟರ್ ನಿನ್ನನ್ನು ಪ್ರೀತಿಸುತ್ತಿದ್ದಾನೆ. ಆದರೆ ಅದನ್ನು ನಿನಗೆ ಹೇಳಲು ಅವನಿಗೆ ಯಾವತ್ತೂ ಸಾಧ್ಯವಾಗಲಿಕ್ಕಿಲ್ಲ.”

ಇದಾಗಿ ಕೆಲವೇ ದಿನಗಳಲ್ಲಿ ಸಿಲ್ವಿಯಾ “ಅಮ್ಮಾ, ನಾನು ಎಡ್ವರ್ಡನನ್ನು ಮದುವೆ ಆಗುತ್ತೇನೆ” ಎಂದು ತಿಳಿಸುತ್ತಾಳೆ. ಅವನು ಬ್ರಾಡ್-ವೇಯ ಚಲನಚಿತ್ರ ನಿರ್ದೇಶಕ. ಮದುವೆಯ ನಂತರ ತಾನು ಇಂಗ್ಲೆಂಡಿನಲ್ಲಿ ನೆಲೆಸುತ್ತೇನೆಂದು ಹೇಳುತ್ತಾಳೆ ಸಿಲ್ವಿಯಾ. 

ಈ ನಡುವೆ, ನಿರ್ದೇಶಕ ಎಡ್ವರ್ಡನನ್ನು ಪೀಟರ್ ತಮ್ಮ ಮನೆಗೆ ಆಹ್ವಾನಿಸುತ್ತಾನೆ. ಅವನಿಗೆ ನಿಜವಾಗಿಯೂ ಬಾಲಕಿ ಮೇರಿಯ ಬಗ್ಗೆ ಕಾಳಜಿ ಇದೆಯೇ ಎಂದು ಪರೀಕ್ಷಿಸಲು ಪ್ರಯತ್ನಿಸುತ್ತಾನೆ. ಎಡ್ವರ್ಡ್ ಹೊರಟು ಹೋದ ನಂತರ, ಪೀಟರನ ವರ್ತನೆಗಾಗಿ ಸಿಲ್ವಿಯಾ ಆಕ್ಷೇಪಿಸುತ್ತಾಳೆ. ಅವರಿಬ್ಬರೊಳಗೆ ಜಗಳವಾಗಿ, ಸಿಲ್ವಿಯಾ ಪೀಟರನ ಕೆನ್ನೆಗೆ ಒಂದೇಟು ಬಾರಿಸಿ, ಮನೆಯಿಂದ ಹೊರಗೆ ಧಾವಿಸುತ್ತಾಳೆ.  

 

ಅನಂತರ ತನ್ನ ಮದುವೆಗಾಗಿ ಮಗಳು ಮೇರಿ ಮತ್ತು ತಾಯಿಯ ಜೊತೆ ಸಿಲ್ವಿಯಾ ಇಂಗ್ಲೆಂಡಿನ ಹಳ್ಳಿಯ ಬಂಗಲೆ ತಲಪುತ್ತಾಳೆ. ಆಗ ಎಡ್ವರ್ಡ್ ಬಗ್ಗೆ ಪುಟ್ಟ ಮೇರಿಯ ದೂರು, “ಅವನು ನನ್ನನ್ನು ಇಷ್ಟ ಪಡುವುದಿಲ್ಲ. ನನಗೆ ಬಯ್ಯುತ್ತಾನೆ.” 

ಪೀಟರ್ ಮತ್ತು ಮೈಕೆಲ್ ಕೂಡ ಆ ಹಳ್ಳಿಯ ಬಂಗಲೆ ತಲಪುತ್ತಾರೆ. ಬಾಲಕಿ ಮೇರಿಯನ್ನು ಮದುವೆಯ ನಂತರ,            ಪೈಲ್-ಫೋರ್ಟ್ ಅಕಾಡೆಮಿ ಫಾರ್ ಗರ್ಲ್ಸ್ ಎಂಬ ಶಾಲೆಗೆ ಸೇರಿಸಲು ಎಡ್ವರ್ಡ್ ತಯಾರಿ ನಡೆಸಿದ್ದಾನೆ ಎಂದು ಪೀಟರ್ ಮತ್ತು ಮೈಕಲ್ ಅವರಿಗೆ ತಿಳಿಯುತ್ತದೆ. ಇದನ್ನು ಸಿಲ್ವಿಯಾಳಿಗೆ ಪೀಟರ್ ಹೇಳಿದರೂ ಅವಳು ನಂಬುವುದಿಲ್ಲ. ಎಡ್ವರ್ಡ್ ಕೂಡ ಅದು ಸುಳ್ಳೆಂದು ಹೇಳುತ್ತಾನೆ. ಈ ಬಗ್ಗೆ ವಾಗ್ವಾದ ನಡೆದು ಎಡ್ವರ್ಡ್ ಮತ್ತು ಸಿಲ್ವಿಯಾ ಹೊರನಡೆಯುತ್ತಾರೆ. 

ಅಷ್ಟರಲ್ಲಿ ಆ ಬಂಗಲೆಗೆ ಬಂದು ಸೇರಿಕೊಂಡ ಜಾಕ್ ಪೀಟರ್-ನಿಗೆ ಹೇಳುವ ಮಾತು: “ನೀನು ಸಿಲ್ವಿಯಾಳನ್ನು ಪ್ರೀತಿಸುತ್ತಿದ್ದಿ, ಅವಳೂ ನಿನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಾನು ಗಮನಿಸಿದ್ದೇನೆ.” ಇದನ್ನು ಕೇಳಿದ ಮೈಕೇಲನ ಪ್ರಶ್ನೆ, “ಹಾಗಿದ್ದರೆ ಅವಳು ಎಡ್ವರ್ಡನನ್ನು ಯಾಕೆ ಮಾಡುವೆ ಆಗುತ್ತಿದ್ದಾಳೆ?” ಇದಕ್ಕೆ ಜಾಕ್-ನ ಉತ್ತರ, “ಯಾಕೆಂದರೆ ನನ್ನನ್ನು ಮದುವೆ ಆಗುತ್ತೀಯಾ ಎಂದು ಪೀಟರ್ ಸಿಲ್ವಿಯಾಳನ್ನು ಕೇಳಲೇ ಇಲ್ಲ.” 

ಅದು ನಿಜವೆಂದು ಪೀಟರ್-ಗೆ ಅರ್ಥವಾಗುತ್ತದೆ. ಮೇರಿಯನ್ನು ಮುಂದಿನ ವರುಷ ಸೇರಿಸಲಿಕ್ಕಾಗಿ ಪೈಲ್-ಫೋರ್ಟ್ ಶಾಲೆಗೆ ಎಡ್ವರ್ಡ್ ಶುಲ್ಕ ಪಾವತಿಸಿದ್ದನ್ನು ಪೀಟರ್ ಪತ್ತೆ ಮಾಡಿದ್ದ. ಅವನು ಆ ಶಾಲೆಗೆ ಹೋಗುತ್ತಾನೆ. ಅಲ್ಲಿ ಮೇರಿಯ ಶಾಲಾ ಪ್ರವೇಶ ಶುಲ್ಕವನ್ನು ಎಡ್ವರ್ಡ್ ಪಾವತಿಸಿದ್ದ ರಶೀದಿ ಕದಿಯುತ್ತಾನೆ. ಆಕಸ್ಮಿಕವಾಗಿ ಆ ಶಾಲೆಯ ಮಹಿಳಾ ಮುಖ್ಯೋಪಾಧ್ಯಾಯಿನಿ ಎಲ್ಸ್-ಪೆತ್ ಕೈಗೆ ಸಿಕ್ಕಿ ಬೀಳುತ್ತಾನೆ. 

ಆಕೆ ಪೀಟರನನ್ನು ತಪ್ಪು ತಿಳಿಯುತ್ತಾಳೆ. ಆಗ ಆಕೆಗೆ ಎಲ್ಲವನ್ನೂ ಪೀಟರ್ ವಿವರಿಸುತ್ತಾನೆ. ಬಳಿಕ ಆಕೆಯೊಂದಿಗೆ ಕಾರಿನಲ್ಲಿ  ಮದುವೆ ನಡೆಯಲಿದ್ದ ಚರ್ಚಿಗೆ ಧಾವಿಸುತ್ತಾನೆ. ಅತ್ತ, ಮೈಕೇಲ್ ಹಾಗೂ ಜಾಕ್ ಆ ಮದುವೆಯನ್ನು ನಿಧಾನಿಸಲು ಉಪಾಯ ಮಾಡಿದ್ದರು. ಮೈಕೇಲ್ ಆ ಚರ್ಚಿನ ಧರ್ಮಾಧಿಕಾರಿಯನ್ನು ಅಪಹರಿಸಿದ. ಈ ಗೊಂದಲದಲ್ಲಿ ಅಲ್ಲಿಗೆ ಧರ್ಮಾಧಿಕಾರಿಯಾಗಿ  ಮಾರುವೇಷ ಧರಿಸಿದ ಜಾಕ್ ಬಂದು ಮದುವೆಯ ವಿಧಿವಿಧಾನಗಳನ್ನು ನಿಧಾನಿಸಿದ.

 

ಮದುವೆಯ ಚರ್ಚಿಗೆ ಧಾವಿಸಿ ಬರುತ್ತಿದ್ದ ಪೀಟರನ ಕಾರು ಅಪಘಾತಕ್ಕೆ ಈಡಾಗುತ್ತದೆ. ಅನಂತರ ಅಲ್ಲಿದ್ದ ಕುರಿಗಾಹಿಯ ಮೋಟಾರ್ ಬೈಕಿನಲ್ಲಿ ಎಲ್ಸ್-ಪೆತ್ ಜೊತೆ ಪೀಟರ್ ಚರ್ಚಿಗೆ ಬರುತ್ತಾನೆ.  ಮೇರಿಯ ಶಾಲಾ ಶುಲ್ಕವನ್ನು ಎಡ್ವರ್ಡ್  ಪಾವತಿಸಿದ್ದ ರಶೀದಿಯನ್ನು ಸಿಲ್ವಿಯಾಳಿಗೆ ಪೀಟರ್ ತೋರಿಸುತ್ತಾನೆ. ಅದನ್ನು ಸಿಲ್ವಿಯಾ ಅನುಮಾನಿಸಿದಾಗ ಮುಖ್ಯೋಪಾಧ್ಯಾಯಿನಿ ಎಲ್ಸ್-ಪೆತ್ ಅದು ಸಾಚಾ ರಶೀದಿ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಸಿಲ್ವಿಯಾಳಿಗೆ ಎಡ್ವರ್ಡ್ ಸುಳ್ಳು ಹೇಳುತ್ತಿದ್ದ ಎಂದು ಆಕೆ ತಿಳಿಸುತ್ತಾಳೆ. ಆಗ ಸಿಲ್ವಿಯಾ ಸಿಟ್ಟಾಗಿ ಎಡ್ವರ್ಡ್-ಗೆ ರೇಗುತ್ತಾಳೆ,  “ನೀನು ನನಗೆ ಸುಳ್ಳು ಹೇಳಿದೆ.” 

ತಾನು ಮಾಡಿದ್ದು ಸರಿ ಎಂದು ಎಡ್ವರ್ಡ್ ವಾದಿಸುತ್ತಾ ಬಾಲಕಿ ಮೇರಿಯನ್ನು ಆತ ನಿಂದಿಸಿದಾಗ ಪೀಟರ್ ರೊಚ್ಚಿಗೆದ್ದು  ಅವನಿಗೆ ಹೊಡೆಯುತ್ತಾನೆ. ಆ ಏಟಿನಿಂದ ಎಡ್ವರ್ಡ್ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಇವೆಲ್ಲ ಬೆಳವಣಿಗೆಗಳಿಂದ ನೊಂದ ಸಿಲ್ವಿಯಾ ತಾನು ಮನೆಗೆ ವಾಪಾಸು ಹೋಗುತ್ತೇನೆ ಎಂದು ಹೊರಡುವಾಗ ಪೀಟರ್ ಅವಳನ್ನು ತಡೆದು ತನ್ನ ಪ್ರೇಮ ನಿವೇದನೆ ಮಾಡುತ್ತಾನೆ. “ನಾನು ನಿನ್ನನ್ನು ಮದುವೆ ಆಗುತ್ತೇನೆ ಯಾಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಘೋಷಿಸುತ್ತಾನೆ.

ಆಗ ಎಡ್ವರ್ಡನಿಗೆ ಪ್ರಜ್ಞೆ ಬರುತ್ತದೆ. ಅವನು ಸಿಲ್ವಿಯಾ ಜೊತೆ ಅದಾಗಲೇ ತನ್ನ ಮದುವೆ ಆಗಿದೆ ಎನ್ನುತ್ತಾನೆ. ಅಷ್ಟರಲ್ಲಿ ಜಾಕ್ ತನ್ನ ಮಾರುವೇಷ ಕಳಚಿ, ಆ ಮದುವೆ ವಿಧಿಬದ್ಧವಾಗಿ ನಡೆದೇ ಇಲ್ಲ. ಯಾಕೆಂದರೆ ತಾನು ಮಾರುವೇಷದ ಧರ್ಮಾಧಿಕಾರಿ ಎಂದು ತಿಳಿಸುತ್ತಾನೆ. ಅನಂತರ ಸಿಲ್ವಿಯಾ ಜೊತೆ ಪೀಟರನ ಮದುವೆ ಸಾಂಗವಾಗಿ ಜರಗುತ್ತದೆ. 

(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 09-02-2011ರ ಬುಧವಾರ ನೋಡಿದ ಸಿನೇಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)