ರಸ್ಲಾನ್ ಎಂಬಾತ ಒಬ್ಬ ಮಾಫಿಯಾ ಗ್ಯಾಂಗ್ ಲೀಡರ್ ಮತ್ತು ಅಪರಾಧ ಕಾದಂಬರಿಗಳ ಬರಹಗಾರ. ಆತ ಕೊಲೆ, ರಕ್ತಪಾತ, ಬಂದೂಕು ಮತ್ತು ಬುಲೆಟುಗಳ ಬದುಕು ಸಾಕು ಎಂದು ನಿರ್ಧರಿಸಿ, ನೆಮ್ಮದಿಯ ಜೀವನ ನಡೆಸಲು ತಯಾರಾಗುತ್ತಾನೆ.   

ತನ್ನ ಹೆಂಡತಿ ಕಾತ್ಯಾ ಮತ್ತು ಮಗಳು ಲಾನೀ ಅವರನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುತ್ತಾನೆ.

ಇತ್ತ ಕಾತ್ಯಾ ಒಬ್ಬ ವಕೀಲನನ್ನು ಮದುವೆ ಆಗುತ್ತಾಳೆ. ಲಾನೀ ಇನ್ನೊಂದು ಮಾಫಿಯಾ ಗ್ಯಾಂಗ್ ಲೀಡರ್-ನ ಮಗ ಸ್ಟೀಫನ್ ಅನ್ನು ಪ್ರೀತಿಸುತ್ತಾಳೆ. ಇವರಿಬ್ಬರ ಮದುವೆ ನಿಶ್ಚಯವಾಗುತ್ತದೆ. ಸ್ಟೀಫನನ ತಂದೆ ತನ್ನ ಬದ್ಧ ವೈರಿ ಎಂಬುದನ್ನು ತಿಳಿದ ರಸ್ಲಾನ್  ಮದುವೆಯ ಕೆಲವು ದಿನ ಮುಂಚೆ ಮನೆಗೆ ಮರಳುತ್ತಾನೆ. ತನ್ನ ಅಜ್ಜಿಯಿಂದ ಬಳುವಳಿ ಬಂದ “ಮದುವೆ-ಉಂಗುರ”ವನ್ನು ಲಾನೀಗೆ ಕೊಡುತ್ತಾನೆ. 

ಆತ ಮನೆಯಿಂದ ಹೊರಟು ಹೋದಾಗ, ಅವನ ಬದುಕು ತಲೆಕೆಳಗಾಗುತ್ತದೆ. ಆತನ ಮನೆಗೆ ಮಾಫಿಯಾ ಗ್ಯಾಂಗಿನವರ ದಾಳಿ. ಅವರಿಂದ ಕಾತ್ಯಾಳ ಕೊಲೆ. ಲಾನೀಯ ಕುತ್ತಿಗೆಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ. ಅವಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಶುರು. 

ಇದರಿಂದ ಕುದ್ದು ಹೋದ ರಸ್ಲಾನ್ ತನಗಾದ ಅನ್ಯಾಯಕ್ಕೆ ತಾನೇ ನ್ಯಾಯ ಪಡೆಯಲು ಪಣ ತೊಡುತ್ತಾನೆ. ಮಾಜಿ ಪತ್ನಿಯ  ಕೊಲೆ ಮತ್ತು ದಾಳಿಯ ಸಂಚುಗಾರರ ಪತ್ತೆಗೆ ಹೊರಡುತ್ತಾನೆ. ಆದರೆ ಅವನ ಮೇಲೆ ಮತ್ತೆಮತ್ತೆ ದಾಳಿ ಆಗುತ್ತದೆ. 

“ಕೊಲೆಗಾರರ ಪತ್ತೆಗೆ ನಾನು ಸಹಾಯ ಮಾಡುತ್ತೇನೆ” ಎನ್ನುತ್ತಾನೆ ಕಾತ್ಯಾಳನ್ನು ಮದುವೆಯಾಗಿದ್ದ ವಕೀಲ. ಆದರೆ, ಕಾತ್ಯಾಳ ಕೊಲೆಯ ಮುನ್ನಾ ದಿನ ಆತ ಅವಳ ಹೆಸರಿನಲ್ಲಿ ದೊಡ್ಡ ಮೊತ್ತದ ಇನ್ಷೂರೆನ್ಸ್ ಪಾಲಿಸಿ ಖರೀದಿಸಿದ್ದ! 

ಲಾನೀಗೆ ಉಡುಗೊರೆ ಕೊಟ್ಟ ಚಿನ್ನದ ಉಂಗುರವನ್ನು ಚಿನ್ನಾಭರಣಗಳ ಮಳಿಗೆಯೊಂದರ ಮಾಲೀಕ ಖರೀದಿಸಿದ್ದಾನೆಂದು ಪತ್ತೆ ಮಾಡುತ್ತಾನೆ ರಸ್ಲಾನ್. ಆ ಮಾಲೀಕನಿಂದ ಆ ಚಿನ್ನದುಂಗುರ ಮಾರಿದವನ ಜಾಡು ಹಿಡಿಯುತ್ತಾನೆ ರಸ್ಲಾನ್. ಅಷ್ಟರಲ್ಲಿ ಆ ಚಿನ್ನಾಭರಣ ಮಳಿಗೆಯ ಮಾಲೀಕನ ಕೊಲೆ ಆಗುತ್ತದೆ. 

ಇದರಿಂದಾಗಿ ಆ ಚಿನ್ನದುಂಗುರ ಮಾರಿದವನೇ ಕಾತ್ಯಾಳ ಕೊಲೆಗಾರ ಮತ್ತು ಲಾನೀಯ ದಾಳಿಕೋರ ಎಂಬ ಸುಳಿವು. ರಸ್ಲಾನ್ ರೋಷದಿಂದ ಅವನನ್ನೂ ಅವನ ಸಹಚರನನ್ನು ಬಡಿದು ಸಾಯಿಸುತ್ತಾನೆ. ಆತ ಸಾಯುವ ಮುನ್ನ, ಅವನಿಂದ ಇದೆಲ್ಲ ಸ್ಟೀಫನನ ತಂದೆಯ ಸಂಚು ಎಂಬು ಮಾಹಿತಿ ಸಂಗ್ರಹಿಸುತ್ತಾನೆ ರಸ್ಲಾನ್.

ತದನಂತರ, ಸ್ಟೀಫನನ ತಂದೆಯ ಜೊತೆ ರಸ್ಲಾನನ ಮುಖಾಮುಖಿ. ಆಗ ತಿಳಿಯುತ್ತದೆ ಸಂಚಿನ ಕಾರಣ. ಸ್ಟೀಫನನ ತಂದೆ ರಸ್ಲಾನನಿಗೆ ಹೇಳುತ್ತಾನೆ: “I will not allow your blood to mix with my blood. Never.” (ನಿನ್ನ ರಕ್ತದೊಂದಿದೆ ನನ್ನ ರಕ್ತ ಬೆರೆಯಲು ನಾನು ಬಿಡೋದಿಲ್ಲ. ಖಂಡಿತವಾಗಿ ಬಿಡೋದಿಲ್ಲ.) 

ಇದಾಗುತ್ತಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾನೀ ಅವಳ ಕೊಲೆಗೆ ಸ್ಟೀಫನನ ತಂದೆ ಸಂಚು ರೂಪಿಸುತ್ತಾನೆ. ಇದರಲ್ಲಿ ಆಸ್ಪತ್ರೆಯಲ್ಲಿ ಕಾವಲಿದ್ದ ಪೊಲೀಸರೂ ಷಾಮೀಲು. ಸ್ಟೀಫನ್ ಜೊತೆ ಸೇರಿಕೊಂಡು ಆಸ್ಪತ್ರೆ ಮೇಲೆ ವಿರೋಧಿ  ಮಾಫಿಯಾ ಗ್ಯಾಂಗಿನವರ ದಾಳಿಯನ್ನು ಎದುರಿಸುತ್ತಾನೆ ರಸ್ಲಾನ್. ಕೊನೆಗೆ ಸ್ಟೀಫನನ ತಂದೆಯನ್ನು ಕೊಂದು ಹಾಕುತ್ತಾನೆ. 

ಹೀಗೆ, ತನ್ನ ವೈರಿಗಳೆಲ್ಲರನ್ನು ನಾಶ ಮಾಡಿದ ನಂತರ ಮಗಳು ಲಾನೀಗೆ ಅದೇ “ಮದುವೆ-ಉಂಗುರ”ವನ್ನು ಪುನಃ ತೊಡಿಸುತ್ತಾನೆ ರಸ್ಲಾನ್. 

(15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 11-02-2011ರ ಶುಕ್ರವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)