ಸಕ್ಕರೆ ಕಾಯಿಲೆ ಬಾಧಿತರಿಗೆ ವೈದ್ಯರು “ಸಿಹಿ ತಿನಿಸುಗಳು ಮತ್ತು ಸಿಹಿ ಹಣ್ಣುಗಳು ನಿಷಿದ್ಧ” ಎಂದು ಎಚ್ಚರಿಕೆ ನೀಡುತ್ತಾರೆ. ಕೆಲವರು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.

ಆದರೆ ಇನ್ನು ಕೆಲವರಿಗೆ ಸಂಕಟ ಶುರುವಾಗುತ್ತದೆ. ಯಾಕೆಂದರೆ ಸಿಹಿತಿನಿಸುಗಳೆಂದರೆ ಅವರಿಗೆ ಆಸೆ. ಕೆಲವರಿಗಂತೂ ಯಾವುದೋ ಸಿಹಿ ತಿನಿಸು ಎಂದರೆ ಪಂಚಪ್ರಾಣ: ಗುಲಾಬ್ ಜಾಮೂನ್, ಮೈಸೂರು ಪಾಕ್, ರಸಗುಲ್ಲಾ, ಹೋಳಿಗೆ, ಜಿಲೇಬಿ ಅಥವಾ ರಸ್-ಮಲೈ. ಹಾಗೆಯೇ ಮಾವಿನ ಹಣ್ಣು. ಅದನ್ನು ಕಂಡರೆ ತಿನ್ನಲೇ ಬೇಕೆಂಬ ಚಡಪಡಿಕೆ.

ಸಿಹಿ ತಿನ್ನುವ ಆಸೆ ಮತ್ತು ವೈದ್ಯರ ನಿಷೇಧ. ಈ ಉಭಯ ಸಂಕಟದಿಂದ ಪಾರಾಗುವುದು ಹೇಗೆ? ಅದಕ್ಕೊಂದು ಉಪಾಯವಿದೆ.

ಆ ಉಪಾಯ ಒಂದು ವಾಸ್ತವ ಸಂಗತಿಯನ್ನು ಅವಲಂಬಿಸಿದೆ. ಅದೇನೆಂದರೆ, ಸಿಹಿತಿನಿಸು ಅಥವಾ ಸಿಹಿ ಹಣ್ಣು ತಿನ್ನುವಾಗ, ಪ್ರತೀ ಬಾರಿಯೂ ನಮಗೆ ಅದು ಹೊಸ ಅನುಭವ ಅಲ್ಲ. ಬದಲಾಗಿ, ಮೊದಲ ಬಾರಿ ಅದನ್ನು ಸವಿದಾಗ ಆಗಿದ್ದ ಸವಿಯಾದ ಅನುಭವದ “ಟೇಪ್” ಅನ್ನು ನಮ್ಮ ಮೆದುಳು ಪುನಃ ಚಾಲೂ ಮಾಡುತ್ತದೆ.

ಆದ್ದರಿಂದ, ಯಾವುದೇ ಸಿಹಿ ತಿನಿಸನ್ನು ಅಥವಾ ಸಿಹಿ ಹಣ್ಣನ್ನು ತಿನ್ನಬೇಕೆಂಬ ಆಸೆ ಅತಿಯಾದಾಗ ಹೀಗೆ ಮಾಡಬಹುದು: ಕಣ್ಣುಗಳನ್ನು ಮುಚ್ಚಿಕೊಂಡು ಆ ಸಿಹಿತಿನಿಸು/ ಸಿಹಿ ಹಣ್ಣನ್ನು ಪ್ರಪ್ರಥಮ ಬಾರಿ ತಿಂದಾಗ ಆಗಿದ್ದ ಅನುಭವವನ್ನು ನೆನಪು ಮಾಡಿಕೊಂಡರಾಯಿತು.

ಇಷ್ಟಾದರೂ ಆ ಅತ್ಯಾಸೆಯನ್ನು ತಡೆಯಲಾಗಲಿಲ್ಲ ಎಂದಾದರೆ, ಇನ್ನೂ ಒಂದು ಉಪಾಯವಿದೆ. ಆ ಸಿಹಿ ತಿನಿಸಿನ ಸಣ್ಣ ಚೂರನ್ನು ಬಾಯಿಗೆ ಹಾಕಿಕೊಳ್ಳಿ; ಅದನ್ನು ನುಂಗಬೇಡಿ. ಒಂದು ನಿಮಿಷದ ನಂತರ ಆ ಸಣ್ಣ ಚೂರನ್ನು ಉಗುಳಿ ಬಿಡಿ. ಹೀಗೆ ಮಾಡಿದರೆ ನಿಮ್ಮ ಆಸೆಯೂ ತೀರುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಸಾಧ್ಯತೆಯೂ ತಪ್ಪುತ್ತದೆ, ಅಲ್ಲವೇ?