22 ಡಿಸೆಂಬರ್ 1938ರ ಮುಂಜಾನೆ. ದಕ್ಷಿಣ ಆಫ್ರಿಕಾದ ಪೂರ್ವ ಕೇಪ್-ನಲ್ಲಿರುವ ಪೂರ್ವ ಲಂಡನ್ ಮ್ಯೂಸಿಯಂನ ಕ್ಯುರೇಟರ್ ಮಾರ್ಜೋರಿ ಕೊರ್ಟಿನೇ ಲಾಟಿಮರ್ ಅವರಿಗೊಂದು ಫೋನ್ ಕರೆ ಬಂತು.

ಅಲ್ಲಿನ ಟ್ರಾಲರ್-ಗಳಲ್ಲಿ ಮೀನು ಹಿಡಿಯುವವರಿಗೆ ಅವರೊಂದು ವಿನಂತಿ ಮಾಡಿದ್ದರು. ನದಿ-ಸಮುದ್ರದಿಂದ ಹಿಡಿದ ಮೀನುಗಳಲ್ಲಿ ಏನಾದರೂ ವಿಶೇಷ ಕಾಣಿಸಿದರೆ ತಕ್ಷಣವೇ ತನಗೆ ತಿಳಿಸಬೇಕೆಂದು. ಆ ದಿನ ಚಲುಮ್ನಾ ನದಿಯಲ್ಲಿ ಮೀನಿಗಾಗಿ ಬಲೆ ಬೀಸಿದ್ದ ಕ್ಯಾಪ್ಟನ್ ಹೆಂಡ್ರಿಕ್ ಗೂಸೆನ್ ಅವರಿಗೆ ಬಲೆಗೆ ಬಿದ್ದಿದ್ದ ಒಂದು ಮೀನಿನಲ್ಲೇನೋ ವಿಶೇಷ ಕಾಣಿಸಿತ್ತು. ಆ ಬಗ್ಗೆ ಅವರು ಫೋನ್ ಮಾಡಿದ್ದರು.

ಕೊರ್ಟಿನೇ ಲಾಟಿಮರ್ ಟ್ರಾಲರ್-ಗಳು ತಂಗುವ ಸ್ಥಳಕ್ಕೆ ದಾವಿಸಿದರು. ಅಲ್ಲಿ ಶಾರ್ಕ್, ನಕ್ಷತ್ರ ಮೀನು, ಸಮುದ್ರಕಳೆ, ಸ್ಪಂಜು ಇವೆಲ್ಲದರ ನಡುವೆ ಹೆಜ್ಜೆಯಿಡುತ್ತಾ ಸಾಗಿದರು. ಆಗ ಕಾಣಿಸಿತು ಆ “ವಿಶೇಷ ಮೀನು”. ಅವರು ನೋಡಿದ್ದ ಮೀನುಗಳಲ್ಲಿ ಅದುವೇ ಅತ್ಯಂತ ಸುಂದರವಾಗಿತ್ತು. “ಅದೊಂದು ಚೈನಾದಿಂದ ತರಿಸಿದ ಆಭರಣದಂತಿತ್ತು” ಎಂದು ಅವರು ದಾಖಲಿಸಿದ್ದಾರೆ.

ಐದಡಿ ಉದ್ದದ, ತೆಳು ನೀಲಿ ಬಣ್ಣದ, ಬಿಳಿ ಬಣ್ಣದ ಕಲೆಗಳಿರುವ, ಕಾಮನಬಿಲ್ಲಿನಂತೆ ಬಣ್ಣ ಪ್ರದರ್ಶಿಸುವ, ಮೈತುಂಬ ಗಡುಸಾದ ಪೊರೆಗಳಿರುವ, ನಾಲ್ಕು ಈಜು-ರೆಕ್ಕೆಗಳಿರುವ, ದೊಡ್ಡ ಬಾಲವಿರುವ ಮೀನು ಅದಾಗಿತ್ತು. (ಫೋಟೋ ನೋಡಿ.)

ಕೋರ್ಟಿನೇ ಲಾಟಿಮರ್ ಅವರಿಗೆ ಅದೇನೆಂದು ತಿಳಿಯಲಿಲ್ಲ. ಹಾಗಾಗಿ ಹತ್ತಿರದ ರೋಡ್ಸ್ ವಿಶ್ವವಿದ್ಯಾಲಯದ ಪರಿಣತ ಜೇಮ್ಸ್ ಸ್ಮಿತ್ ಅವರಿಗೆ ಫೋನ್ ಮಾಡಿದರು. ಅವರು ಉತ್ತರಿಸಲಿಲ್ಲ. ಯಾಕೆಂದರೆ ಅವರು ರಜೆ ಹಾಕಿ ಹೋಗಿದ್ದರು.

ಕ್ಯುರೇಟರ್ ಕೋರ್ಟಿನೇ ಲಾಟಿಮರ್ ಅವರಿಗೆ ಮುಂದೇನು ಮಾಡುವುದೆಂದು ತಿಳಿಯಲಿಲ್ಲ. “ನೀವು ಅದರ ಬಗ್ಗೆ ಬಹಳ ಗದ್ದಲ ಮಾಡುತ್ತಿದ್ದೀರಿ. ಅದೇನೂ ದೊಡ್ಡ ಸಂಗತಿಯಲ್ಲ” ಎಂದು ಮ್ಯೂಸಿಯಂನ ಚೇರ್-ಮನ್ ಕ್ಯುರೇಟರ್ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದರು. ಆ ನಗರದಲ್ಲಿ ಆ ಮೀನನ್ನು ಸಂರಕ್ಷಿಸಿ ಇಡಬಹುದಾದ ಶೀತಾಗಾರ ಇದ್ದದ್ದು ಕೇವಲ ಎರಡು. ಅವುಗಳಲ್ಲೊಂದು ಶವಾಗಾರ. ಅವೆರಡೂ ಕ್ಯುರೇಟರಿಗೆ ಸಹಕರಿಸಲು ಒಪ್ಪಲಿಲ್ಲ. ಹಾಗಾಗಿ, ಆಕೆ ಸ್ಥಳೀಯ ಟಾಕ್ಸಿಡರ್ಮಿಸ್ಟ್ (ಸತ್ತ ಪ್ರಾಣಿಗಳ ಚರ್ಮದೊಳಗೆ ಮೆತ್ತೆ ತುಂಬಿ ಅವನ್ನು ಸಂರಕ್ಷಿಸಿ ಇಡುವವನು.) ಅವರ ಸಹಕಾರ ಕೋರಿದಳು. ಅವರಿಬ್ಬರೂ ಸೇರಿ ಫಾರ್ಮಾಲ್ಡಿಹೈಡಿನಲ್ಲಿ ನೆನೆ ಹಾಕಿದ ವಾರ್ತಾಪತ್ರಿಕೆ ಮತ್ತು ಬೆಡ್-ಷೀಟಿನಲ್ಲಿ ಆ ಮೀನನ್ನು ಸುತ್ತಿಟ್ಟರು. ಬೇಸಗೆಯಲ್ಲಿ ಆ ಮೀನಿನ ದೇಹದಿಂದ ಗಾಬರಿಯಾಗುವ ಪ್ರಮಾಣದಲ್ಲಿ ಎಣ್ಣೆಯ ಅಂಶ ಹೊರಬಂತು.

ಅಂತೂ 3 ಜನವರಿ 1939ರಂದು ಕ್ಯುರೇಟರ್ ಕೋರ್ಟಿನೇ ಲಾಟಿಮರ್ ಅವರ ಪತ್ರ ಜೇಮ್ಸ್ ಸ್ಮಿತ್ ಅವರ ಕೈಸೇರಿತು. ಅದನ್ನು ಓದಿದ ತಕ್ಷಣವೇ ಅವರಿಗೆ ನೆನಪಾದದ್ದು ಕೋಲಾಕಾಂತ್ ಎಂಬ ಮೀನು. ಅದು 70 ಮಿಲಿಯನ್ ವರುಷಗಳ ಹಿಂದೆ ನಿರ್ವಂಶವಾಗಿದೆ ಎಂದು ಎಣಿಸಲಾಗಿತ್ತು! ಕೊನೆಗೂ ಜೇಮ್ಸ್ ಸ್ಮಿತ್ ಫೆಬ್ರವರಿ 16ರಂದು ಪೂರ್ವ ಲಂಡನಿಗೆ ಆಗಮಿಸಿದರು. ಅಲ್ಲಿ, ಸಂರಕ್ಷಿಸಿ ಇಡಲಾಗಿದ್ದ ಆ ಮೀನನ್ನು ಕಂಡ ಕೂಡಲೇ ಅವರಿಗೆ ಮಿಂಚು ಹೊಡೆದಂತಾಯಿತು. ಯಾಕೆಂದರೆ ಅದು ಕೋಲಾಕಾಂತ್ ಮೀನು ಎಂಬುದು ಖಚಿತವಾಗಿತ್ತು.

ಈ ಶೋಧವನ್ನು ಅವರು ಜಗತ್ ಪ್ರಸಿದ್ಧ ವೈಜ್ಞಾನಿಕ ನಿಯತಕಾಲಿಕ “ನೇಚರ್”ನಲ್ಲಿ ಘೋಷಿಸಿದರು. ಆ ಮೀನಿನ ಶೋಧಕ್ಕೆ ಕಾರಣರಾದ ಕ್ಯುರೇಟರ್ ಮಾರ್ಜೋರಿ ಕೊರ್ಟಿನೇ ಲಾಟಿಮರ್ ಮತ್ತು “ಕಳೆದು ಹೋದ ಮೀನನ್ನು ಹುಡುಕಿ ಕೊಟ್ಟ” ನದಿ ಚಲುಮ್ನಾ ನೆನಪಿಗಾಗಿ ಆ ಮೀನಿಗೆ “ಲಾಟಿಮೆರಿಯಾ ಚಲುಮ್ನೆ” ಎಂದು ಹೆಸರಿಟ್ಟರು.

ಫೋಟೋ: ಕೊಲಾಕಾಂತ್ ಮೀನಿನ ಫೋಟೋ … ಕೃಪೆ: ನೇಚರ್ ವರ್ಕ್ಸ್ ಆಸ್ಟ್ರೇಲಿಯಾ ವೆಬ್-ಸೈಟ್