ನಾವೆಲ್ಲರೂ ರಂಗೋಲಿಗಳನ್ನು ನೋಡಿ, ಬರೆದು, ಬಣ್ಣ ತುಂಬಿ ಸಂತೋಷ ಪಟ್ಟವರು. ನಮ್ಮ ಭಾರತದ ಹೆಮ್ಮೆಯ ಪಾರಂಪರಿಕ ಕಲೆ ರಂಗೋಲಿ. ಇದು ನೆಲದಲ್ಲಿ ರೇಖೆಗಳಿಂದ ಅಥವಾ ರೇಖಾ ವಿನ್ಯಾಸಗಳಿಗೆ ಬಣ್ಣ ತುಂಬಿ ಮನಸೆಳೆಯುವ ಚಿತ್ರಾಕೃತಿಗಳನ್ನು ರಚಿಸುವ ಕಲೆ.

ಪ್ರತಿ ದಿನ ಮುಂಜಾನೆ ಮನೆಯ ಮಹಿಳೆ ಮನೆಯ ಪ್ರವೇಶದ್ವಾರದಲ್ಲಿ ರಂಗೋಲಿ ಬರೆಯುವ ಮೂಲಕ ಅವಳ ಬಿಡುವಿಲ್ಲದ ಕೆಲಸಗಳು ಶುರು.

ರಂಗೋಲಿ ಬಗ್ಗೆ ಇನ್ನಷ್ಟು ತಿಳಿಯೋಣ:

ಉದ್ದೇಶ: ಮನೆಗೆ ಮುಂಜಾನೆ ಮನೆದೇವರನ್ನು ಮತ್ತು ಸಮೃದ್ಧಿಯನ್ನು ಆಹ್ವಾನಿಸುವುದು. ಮನೆಗೆ ಅತಿಥಿಗಳನ್ನು ಗೌರವದಿಂದ ಸ್ವಾಗತಿಸುವ ಭಾರತೀಯ ಸಂಸ್ಕೃತಿ ಇದಕ್ಕೆ ಪ್ರೇರಣೆ.

ಸಾಂಕೇತಿಕತೆ: ರಂಗೋಲಿ ಮನೆಗೆ ಶುಭ ತರುತ್ತದೆ ಮತ್ತು ನಕಾರಾತ್ಮಕ-ಶಕ್ತಿಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಎಂಬ ನಂಬಿಕೆ. ಯಾಕೆಂದರೆ ರಂಗೋಲಿ ಸಕಾರಾತ್ಮಕ ಶಕ್ತಿಯ ಸಂಕೇತ. ಇದಕ್ಕೆ ಪೂರಕವಾಗಿ, ರಂಗೋಲಿ ಬರೆದು ಅದರ ಕೇಂದ್ರದಲ್ಲಿ ಅಥವಾ ಪರಿಧಿಯಲ್ಲಿ ದೀಪ ಹಚ್ಚಿ ಇಡುವುದು ಪದ್ಧತಿ.

ಅಗತ್ಯ ವಸ್ತುಗಳು: ಬಣ್ಣದ ಹುಡಿಗಳು, ಒಣಗಿಸಿದ ಅಕ್ಕಿ ಹುಡಿ, ಸುಣ್ಣದ ಹುಡಿ, ಹೂವಿನ ದಳಗಳು (ಗುಲಾಬಿ)

ವಿನ್ಯಾಸಗಳು: ಜ್ಯಾಮಿತಿಯ, ಕಮಲದ, ಹೂಗಳ, ಹಣ್ಣುಗಳ, ದೇವರುಗಳ ಇತ್ಯಾದಿ ವಿನ್ಯಾಸಗಳು. ಇವು ರಚನಾಕಾರರ ಸೃಜನಶೀಲತೆಗೆ ಸವಾಲು.

ರಚಿಸುವ ವಿಧಾನ: ನೆಲದಲ್ಲಿ ಚುಕ್ಕೆಗಳ ಜಾಲ ಬರೆದು, ನಂತರ ಅವನ್ನು ವಿಧವಿಧವಾಗಿ ಜೋಡಿಸುವುದು. ಅಥವಾ ಕೈಯಿಂದ ರೇಖೆಗಳ ವಿನ್ಯಾಸ ಬರೆಯುವುದು. ಅನಂತರ, ರೇಖೆಗಳು ಮೂಡಿಸಿದ ವಿನ್ಯಾಸಗಳಲ್ಲಿ ಬಣ್ಣ ತುಂಬುವುದು.

ಭಾರತದ ವಿವಿಧ ಪ್ರದೇಶಗಳಲ್ಲಿ ರಂಗೋಲಿಗೆ ಬೇರೆಬೇರೆ ಹೆಸರು:

ಉತ್ತರ ಭಾರತ - ಚೌಕ್-ಪುರಾನಾ; ಮಹಾರಾಷ್ಟ್ರ- ರಂಗೋಲಿ; ಬಿಹಾರ - ಅರಿಪನ್; ಬಂಗಾಳ - ಅಲ್ಪನಾ;

ರಾಜಸ್ಥಾನ ಮತ್ತು ಮಧ್ಯಪ್ರದೇಶ - ಮಂದನಾ; ಆಂಧ್ರಪ್ರದೇಶ - ಮುಗ್ಗುಲು; ಒಡಿಸ್ಸಾ - ಜೋತಿ;

ಹಿಮಾಲಯ ಪ್ರದೇಶ - ಐಪನ್; ಗುಜರಾತ್ - ಗಾಹುಲಿ ಅಥವಾ ಸತಿಯಾ; ಕೇರಳ - ಪುವಿದಲ್;

ಕರ್ನಾಟಕ - ರಂಗವಲ್ಲಿ; ಮಥುರಾ ಮತ್ತು ವೃಂದಾವನ - ಸಂಜಿ

ಇವೆಲ್ಲ ಹೆಸರುಗಳೇ ಭಾರತದ ಎಲ್ಲೆಡೆಗಳಲ್ಲಿ ರಂಗೋಲಿ ಪರಂಪರೆಯ ಭಾಗ ಎಂಬುದರ ಪುರಾವೆ, ಅಲ್ಲವೇ?

ರಂಗೋಲಿ ಚಿತ್ರಿಸಲು ಕಲಿಯುವುದು ಹೇಗೆ?

ರಂಗೋಲಿ ಚಿತ್ರಿಸಲು ಕಲಿಯುವುದು ಬಹಳ ಸುಲಭ. ಹಲವು ಮನೆಗಳಲ್ಲಿ ಅಜ್ಜಿ ಅಥವಾ ಅಮ್ಮ ಮಕ್ಕಳಿಗೆ ರಂಗೋಲಿ ಬಿಡಿಸುವುದನ್ನು ಬಾಲ್ಯದಲ್ಲಿ ಕಲಿಸುತ್ತಾರೆ.

ಪುಸ್ತಕದ ಮಳಿಗೆಗಳಲ್ಲಿ ಹತ್ತಾರು ರಂಗೋಲಿ ಪುಸ್ತಕಗಳು ಲಭ್ಯ. ಅವನ್ನು ನೋಡಿ ಕಲಿಯಬಹುದು. ಈಗಂತೂ ಇನ್ನೂ ಸುಲಭ. ಹಲವಾರು ವೆಬ್-ಸೈಟುಗಳಲ್ಲಿ ಸಾವಿರಾರು ರಂಗೋಲಿ ವಿನ್ಯಾಸಗಳು ಪುಕ್ಕಟೆಯಾಗಿ ಸಿಗುತ್ತವೆ.

ಅಂತಹ ಕೆಲವು ವೆಬ್-ಸೈಟುಗಳ ಹೆಸರು ಮತ್ತು ಲಭ್ಯವಿರುವ ರಂಗೋಲಿಗಳ ಸಂಖ್ಯೆಯ ಪಟ್ಟಿ ಇಲ್ಲಿದೆ:

Shutterstock: 46,150

Pexels: 9,000

iStock: 2,564

Pinterest: 310

Pixabay: 70

Freepik

Adobe Stock

“ಗೂಗಲ್”ನಲ್ಲಿ ಹುಡುಕಲು ಸುಳಿವು:

1.(Type) Easy Kolam for Kids (to get 60+ Rangoli)

2.(Type) 3x3 Dot Rangoli Designs OR

7x7 Dot Rangoli Designs (to get Rangoli from YouTube)

3.(Type) Rangoli for Pre-school, Kindergarten and Elementary School Kids (to get simple designs)

ಕೆಲವು ಚಂದದ ರಂಗೋಲಿಗಳ ಫೋಟೋ ಇಲ್ಲಿವೆ. ಇನ್ನೇಕೆ ತಡ? ನಿಮ್ಮ ರಂಗೋಲಿಗಳನ್ನು ಶುರು ಮಾಡಿ.

ಫೋಟೋ 1 (10 ರಂಗೋಲಿಗಳು) … ಕೃಪೆ: ಷಟರ್ ಸ್ಟೋಕ್ (ವೆಬ್-ಸೈಟ್)