ಮಂಗಳೂರು ಬಳಕೆದಾರರ ವೇದಿಕೆಯ ಸಲಹೆಯಂತೆ ಫಲಿತಾಂಶ ನಿರ್ದೇಶಿತ ಕಾರ್ಯತಂತ್ರ ಅನುಸರಿಸಿದ ಪ್ರಕರಣ ಇದು.

ಬಳಕೆದಾರರಾದ ಎ.ಎ. ಕಾರಂತರು ಪೂರೈಕೆದಾರರಿಗೆ ಬರೆದ ಪತ್ರದ ಯಥಾಪ್ರತಿ ಮತ್ತು ಕಾರ್ಯತಂತ್ರದ ವಿವರ ಇಲ್ಲಿದೆ.

ಎ.ಎ. ಕಾರಂತ,

16, ಅಶಿಯಾನಾ ಲೇ ಔಟ್

ಹಿರಿಯ ಪ್ರಾಥಮಿಕ ಶಾಲೆಯ ಎದುರು,

ಅಶೋಕ ನಗರ, ಮಂಗಳೂರು - 575 006 - ಇವರಿಂದ

ಸುಧೀರ

ಶ್ರಿಂಗಾರ ಜುವೆಲರ್ಸ್

ಮಹಾತ್ಮಾ ಗಾಂಧಿ ರಸ್ತೆ, ಮಂಗಳೂರು - 575 003- ಇವರಿಗೆ

ಮಾನ್ಯರೇ,

ನಿಮ್ಮ ಅಂಗಡಿಯಲ್ಲಿ ದಿನಾಂಕ 14-2-98ರಂದು ಎರಡು ಚಿನ್ನದ ಬಳೆ ಮಾಡಿಸಿಕೊಳ್ಳುವ ಸಲುವಾಗಿ 3,000/- ರೂಪಾಯಿ ಎಡ್ವಾನ್ಸ್ ನೀಡಿದ್ದೆ. ನೀವು ಒಂದು ತಿಂಗಳೊಳಗೆ ಬಳೆ ಮಾಡಿಕೊಡುತ್ತೀರೆಂದು ತಿಳಿಸಿದ್ದೀರಿ. ಆದರೆ ನಾನು ಅನೇಕ ಸಲ ನಿಮ್ಮ ಅಂಗಡಿಗೆ ಬಂದಾಗಲೂ ನೀವು ಬಳೆ ಮಾಡಿ ಕೊಡಲಿಲ್ಲ. 1998 ಜೂನ್ ತಿಂಗಳವರೆಗೂ ವಾರಕ್ಕೆ ಎರಡು ಬಾರಿ ನಿಮ್ಮ ಅಂಗಡಿಗೆ ಭೇಟಿ ನೀಡಿದ್ದೇನೆ. ಆದರೆ ನಿಮ್ಮಿಂದ ಸರಿಯಾದ ಉತ್ತರ ಸಿಗಲಿಲ್ಲ.

ಈಗ ನನಗೆ ಬಳೆಯ ಅಗತ್ಯವಿಲ್ಲ. ನಾನು ನಿಮ್ಮೊಡನೆ ಕೊಟ್ಟ ಹಣ ರೂಪಾಯಿ 3,000/- ಮತ್ತು ಶೇಕಡಾ 18ರಂತೆ ಈ ವರೆಗಿನ ಬಡ್ಡಿ ಮತ್ತು ನನಗಾದ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂಪಾಯಿ 300/-ನ್ನು ಸೇರಿಸಿ ನನಗೆ ಕೊಡಬೇಕಾಗಿ ಅಪೇಕ್ಷಿಸುತ್ತೇನೆ.

ಇತೀ ತಮ್ಮ ವಿಶ್ವಾಸಿ,

(ಸಹಿ) ಎ.ಎ. ಕಾರಂತ

ತಾ. 16-7-1998

ಯಥಾಪ್ರತಿ: ಬಳಕೆದಾರರ ವೇದಿಕೆ, ಮಂಗಳೂರು

ಸಮಸ್ಯೆ ಪರಿಹಾರಕ್ಕಾಗಿ ಫಲಿತಾಂಶ ನಿರ್ದೇಶಿತ ಕಾರ್ಯತಂತ್ರ

ಈ ಪತ್ರ ಬರೆದು ಒಂದು ತಿಂಗಳಾಗುತ್ತ ಬಂದರೂ ಶ್ರಿಂಗಾರ ಜುವೆಲ್ಲರ್ಸ್-ನವರು ಸ್ಪಂದಿಸದಿರುವುದರಿಂದ ತಾ. 14-8-1998ರಲ್ಲಿ ಜ್ಞಾಪನ ಪತ್ರ ಬರೆದರು. ಈ ಪತ್ರಕ್ಕೂ ಉತ್ತರ ಕೊಡದಿದ್ದಾಗ, ಮಂಗಳೂರು ಬಳಕೆದಾರರ ವೇದಿಕೆಯ ಸಲಹೆಯಂತೆ ಎ. ಎ. ಕಾರಂತರು ಈ ವಿಷಯವನ್ನು ಅಧ್ಯಕ್ಷರು, ಚಿನ್ನದ ಕೆಲಸಗಾರರ ಸಂಘ, ಮಂಗಳೂರು - ಇವರಿಗೆ ಒಂದು ಪತ್ರ ಬರೆದು ತಿಳಿಸಿ, ತನಗೆ ಸದ್ರಿ ಹಣವನ್ನು ಸುಧೀರರಿಂದ ಕೊಡಿಸಬೇಕೆಂದು ಕೇಳಿಕೊಂಡರು.

ಪರಿಣಾಮವಾಗಿ ಸುಧೀರರು ತನಗೆ ಹಣವನ್ನು ಎರಡು ಕಂತುಗಳಲ್ಲಿ ಹಿಂತಿರುಗಿಸಿದ್ದಾರೆ ಎಂದು ಕಾರಂತರು ಡಿಸೆಂಬರ್ 1998ರಲ್ಲಿ ಮಂಗಳೂರು ಬಳಕೆದಾರರ ವೇದಿಕೆಗೆ ತಿಳಿಸಿದ್ದಾರೆ.

ಸಂಗ್ರಹ: ಬಳಕೆದಾರರ ಶಿಕ್ಷಣ, 20-3-1999