ನಿಮ್ಮ ಪರಿಚಿತರೊಬ್ಬರು 10 - 12 ವರುಷಗಳಿಂದ ತಮ್ಮ ಮನೆಯ ಸಮಾರಂಭಗಳಿಗೆ ನಿಮ್ಮನ್ನು ಆಹ್ವಾನಿಸುತ್ತಿದ್ದಾರೆ. ನೀವು ಆ ಸಮಾರಂಭಗಳಿಗೆ ಹೋಗಿ ಅವರ ಆತಿಥ್ಯ ಸ್ವೀಕರಿಸಿದ್ದೀರಿ ಎಂದಿರಲಿ.

ಇತ್ತೀಚೆಗೆ ಅವರ ಮನೆಯ ಮದುವೆ ನಿಶ್ಚಿತಾರ್ಥ ಅಥವಾ ಮಗುವಿನ ನಾಮಕರಣಕ್ಕೆ ಹೋಗಲು ನಿಮಗೆ ಸಾಧ್ಯವಾಗಿರಲಿಲ್ಲ.

“ಏನೋ ತೊಂದರೆ ಆಗಿರಬೇಕು. ಹಾಗಾಗಿ ಬರಲಿಲ್ಲವೇನೋ…” ಎಂದು ಹಲವರು ಅದನ್ನೆಲ್ಲ ಮರೆತು ಬಿಡುತ್ತಾರೆ.

ಆದರೆ ಕೆಲವರಿರುತ್ತಾರೆ. ಅದನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅವರ ಪ್ರಕಾರ ಆಹ್ವಾನಿಸಿದರೂ ನೀವು ಭಾಗವಹಿಸದೆ ಇದ್ದದ್ದು ದೊಡ್ಡ ಅಪರಾಧ! ನಿಮಗೆ “ಬುದ್ಧಿ ಕಲಿಸಲು” ಅವರು ಕಾಯುತ್ತಿರುತ್ತಾರೆ. ಮುಂದೊಂದು ದಿನ ಅವಕಾಶ ಸಿಕ್ಕಾಗ, “ಏನು? ಭಾರೀ ದೊಡ್ಡ ಜನ ಆಗಿದ್ದಿ. ನಾನು ಕರೆದರೂ ಮಗುವಿನ ನಾಮಕರಣಕ್ಕೆ ಬರಲಿಲ್ಲ … ಬೇರೆಲ್ಲಾ ಸಮಾರಂಭಗಳಿಗೆ ಹೋಗಲಿಕ್ಕೆ ನಿನಗೆ ಪುರುಸೊತ್ತು ಇರುತ್ತದೆ …” ಎಂದೆಲ್ಲ ತಗಾದೆ ತೆಗೆಯುತ್ತಾರೆ. ನಿಮ್ಮೊಂದಿಗೆ ಜಗಳ ಶುರು ಮಾಡುತ್ತಾರೆ! ಇತರರ ಎದುರು ನಿಮಗೆ ಅವಮಾನ ಮಾಡುವುದೇ ಅವರ ಉದ್ದೇಶ. ನಿಮಗೆ ಒಂದಷ್ಟು ಬಯ್ದು, ಮಾತಿನಲ್ಲಿ ಜಾಡಿಸಿದರೆ ಅವರ ಅಹಂ ತಣಿಯುತ್ತದೆ, ಅಷ್ಟೇ.

ಇಂತಹ ಸಂದರ್ಭಗಳಲ್ಲಿ ನೀವೇನು ಮಾಡಬೇಕು? ಮೌನದಿಂದಿರಬೇಕು. ಯಾಕೆಂದರೆ, ಆಗ ನೀವು ಪ್ರತಿಕ್ರಿಯಿಸಿದರೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದೀತು.

ಇಂತಹ ಒಂದು ಪ್ರಕರಣದಲ್ಲಿ “ನಾನು ಕರೆದಾಗ ನೀವು ಬರಲಿಲ್ಲ. ನಿಮಗೆ ಸೊಕ್ಕು ತಲೆಗೇರಿದೆ. ಇನ್ನು ನಿಮ್ಮ ಮನೆಯ ಯಾವುದೇ ಸಮಾರಂಭಕ್ಕೆ ನಾವ್ಯಾರೂ ಬರೋದಿಲ್ಲ” ಎಂದು ಆಹ್ವಾನಿಸಿದಾತ ಎಗರಾಡಿದ್ದನ್ನು ನಾನು ಕಂಡಿದ್ದೇನೆ.

ಅದಕ್ಕಾಗಿಯೇ “ಮನಸ್ಸಿನಲ್ಲಿ ವಿಷ ತುಂಬಿದ” ಇಂತಹ ವ್ಯಕ್ತಿಗಳ ಸಂಪರ್ಕ ಕಡಿದುಕೊಳ್ಳುವುದು ಜಾಣತನ. ಅವರ ಅಧಿಕಾರದ ದರ್ಪ ಹಾಗೂ ಸಂಪತ್ತಿನ ಸೊಕ್ಕು ಮುಂದೊಂದು ದಿನ ಇಳಿದೇ ಇಳಿಯುತ್ತದೆ. ಇಂಥವರ ದುರ್ವರ್ತನೆಯಿಂದ ನಮ್ಮ ನೆಮ್ಮದಿ ಹಾಳಾಗದಿರಲು ಅವರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು, ಅಲ್ಲವೇ?