ರಜಾಕಾಲದಲ್ಲಿ ಕ್ರಿಕೆಟ್, ಫುಟ್-ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್-ಬಾಲ್ ಇಂತಹ ಆಟಗಳ ಬದಲು ಬೀದಿಯಾಟಗಳನ್ನು ಆಡಬಹುದು. ಈಗ ಕ್ರಿಕೆಟ್ ಆಟದ ಗೀಳಿನಿಂದಾಗಿ ಈ ಬೀದಿಯಾಟಗಳು ಮರೆತು ಹೋಗಿವೆ. ಆದರೂ ಹಲವು ಊರುಗಳಲ್ಲಿ ಮಕ್ಕಳು ಈ ಆಟಗಳನ್ನು ಆಡುವುದನ್ನು ಕಾಣಬಹುದು. ಯಾಕೆಂದರೆ, ಅನೇಕ ಬೀದಿಯಾಟಗಳನ್ನು ಆಡಲು ಬ್ಯಾಟು ಅಥವಾ ಬಾಲು ಇಂತಹ ಪರಿಕರಗಳು ಬೇಕಾಗಿಲ್ಲ. ಇನ್ನು ಕೆಲವು ಆಟಗಳಿಗೆ ಮಕ್ಕಳು ತಮ್ಮ ಮನೆಯ ಪರಿಸರದಲ್ಲಿ ಸಿಗುವ ವಸ್ತುಗಳಿಂದ ಆಟದ ಪರಿಕರಗಳನ್ನು ತಯಾರಿಸಿಕೊಳ್ಳಬಹುದು. ಉದಾಹರಣೆಗೆ, ಚಿನ್ನಿ-ದಾಂಡು, ಬಿಲ್ಲು-ಬಾಣ ಆಟಗಳು. ಇನ್ನು ಕೆಲವು ಆಟಗಳಿಗೆ ತೀರಾ ಕಡಿಮೆ ಬೆಲೆಯಲ್ಲಿ ಅಗತ್ಯವಾದ ಪರಿಕರಗಳನ್ನು ಖರೀದಿಸಬಹುದು. ಉದಾಹರಣೆಗೆ ಗೋಲಿ ಆಟ, ಬುಗರಿ ಆಟ.
ಗೋಲಿ ಆಟ: ಇದನ್ನು ಆಡಲು ಬೇಕಾದ ಬಣ್ಣಬಣ್ಣದ ಗೋಲಿಗಳನ್ನು ಅಂಗಡಿಗಳಿಂದ ಖರೀದಿಸಬಹುದು.
ಆಟ ಆಡುವ ವಿಧಾನ: ಪ್ರತಿಯೊಬ್ಬ ಆಟಗಾರನು ಒಂದು ಗೋಲಿ ತರಬೇಕು. ಆಟವಾಡುವ ಜಾಗದಲ್ಲಿ ಒಂದು ಮರದ ಕಡ್ಡಿಯಿಂದ ಒಂದು ಗುಳಿ ಮಾಡಬೇಕು. ಆ ಗುಳಿಯಿಂದ ಆರು ಅಡಿ ದೂರದಲ್ಲಿ ಆಟಗಾರ ಮಂಡಿಯೂರಿ ಕುಳಿತುಕೊಳ್ಳಬೇಕು. ಗೋಲಿಯನ್ನು ಎಡಗೈ ತೋರುಬೆರಳು ಮತ್ತು ಬಲಗೈ ಬೆರಳುಗಳಿಂದ ಹಿಡಿದುಕೊಳ್ಳಬೇಕು. ಬಲಗೈ ತೋರುಬೆರಳಿನಿಂದ ಎಡಗೈ ತೋರುಬೆರಳನ್ನು (ಗೋಲಿಯ ಸಹಿತ) ಹಿಂದಕ್ಕೆ ಬಿಲ್ಲಿನ ಹೆದೆಯಂತೆ ಎಳೆದುಕೊಂಡು, ನಂತರ ಬಿಟ್ಟು ಬಿಡಬೇಕು. ಈಗ ಆ ಗೋಲಿ ಗುಳಿಯ ಕಡೆಗೆ ಹಾರುತ್ತದೆ. ಗೋಲಿ ಅಲ್ಲಿನ ಗುಳಿಯ ಆಚೆಗೂ ಹೋಗಿ ಬೀಳಬಹುದು. ಇದಲ್ಲದೆ, ಗುಳಿಯ “ದಾರಿ”ಯಲ್ಲಿ ಇತರ ಆಟಗಾರರ ಗೋಲಿ ಇದ್ದರೆ, ಅವನ್ನು ಆ ದಾರಿಯಿಂದ ಆಚೆಗೆ ಹೊಡೆದು ಹಾಕಬೇಕು. ಅಥವಾ ದಾರಿಗೆ ಅಡ್ಡವಾಗಿರುವ ಗೋಲಿಯನ್ನು ಆಟಗಾರ ತನ್ನ ಗೋಲಿಯಿಂದ ಹೊಡೆದು ಅದನ್ನೂ ತನ್ನ ಗೋಲಿಯೊಂದಿಗೆ ಗುಳಿಗೆ ನೂಕಬೇಕು.
ಪ್ರತಿಯೊಬ್ಬ ಆಟಗಾರನು ತನ್ನ ಸರದಿಗೆ ಕಾದು ಆಟವಾಡಬೇಕು. ಈ ಆಟದಲ್ಲಿ ಗೆಲ್ಲುವುದು ಯಾರು? ಇತರ ಎಲ್ಲಾ ಆಟಗಾರರ ಗೋಲಿಗಳನ್ನು ಯಾರು ಮೊದಲು ಗುಳಿಗೆ ಹಾಕುತ್ತಾನೋ ಅವನೇ ಆಟದಲ್ಲಿ ಗೆಲ್ಲುತ್ತಾನೆ. ಇದನ್ನು ಸಾಧಿಸಲು ಎರಡು - ಮೂರು ಗಂಟೆ ಆಟವಾಡಬೇಕಾಗುತ್ತದೆ!
ಬಿಲ್ಲುಬಾಣ: ಇದು ಎಲ್ಲರಿಗೂ ಗೊತ್ತಿರುವ ಆಟ. ಇದನ್ನು ಆಡಲು ಬಿಲ್ಲು ಮತ್ತು ಬಾಣಗಳನ್ನು ತಯಾರಿಸಿ ಕೊಳ್ಳಬೇಕು. 3 - 4 ಅಡಿ ಉದ್ದದ ಬಿದಿರಿನ ಕೋಲು ತುಸು ಬಾಗಿಸಿ, ಅದರ ಎರಡೂ ತುದಿಗಳಿಗೆ ಒಂದು
ಹಗ್ಗ ಬಿಗಿದರೆ ಬಿಲ್ಲು ತಯಾರು. ಹಾಗೆಯೇ, ಬಿದಿರಿನ ಕೋಲುಗಳಿಂದ ಹತ್ತಾರು ಬಾಣಗಳನ್ನು ತಯಾರಿಸಿ. ಕಂಪೌಂಡಿನ ಗೋಡೆಯಲ್ಲಿ ಅಥವಾ ಅಗಲವಾದ ಮರದ ಕಾಂಡದಲ್ಲಿ ಒಂದು “ಗುರಿ” (ಟಾರ್ಗೆಟ್) ಗುರುತಿಸಿ.
ಆ ಗುರಿಗೆ ಆಟಗಾರರು ಸರದಿಯಲ್ಲಿ ನಿಗದಿತ ಅವಧಿಯಲ್ಲಿ (10 - 15 ನಿಮಿಷ) ಬಾಣಗಳನ್ನು ಹೊಡೆಯಬೇಕು. ನಿಗದಿತ ಅವಧಿಯಲ್ಲಿ ಯಾರು ಅತಿ ಹೆಚ್ಚು ಬಾಣಗಳನ್ನು ಕರಾರುವಾಕ್ಕಾಗಿ ಗುರಿಗೆ ಹೊಡೆಯುತ್ತಾರೋ ಅವರೇ ಈ ಆಟದಲ್ಲಿ ಗೆದ್ದಂತೆ. ಈಗಂತೂ ಆಟಿಕೆಗಳ ಅಂಗಡಿಗಳಲ್ಲಿ ರೆಡಿ-ಮೇಡ್ ಬಿಲ್ಲುಬಾಣಗಳು ಸಿಗುತ್ತವೆ. ಅವನ್ನು ಖರೀದಿಸಿ ಆಟವಾಡಬಹುದು.
ಪಲ್ಟಿ ಆಟ: ಆರಂಭ ಮತ್ತು ಮುಕ್ತಾಯ ಎಂದು ಗುರುತಿಸಿದ ಎರಡು ಬಿಂದುಗಳ ನಡುವೆ ಪಲ್ಟಿ ಹೊಡೆಯುವ ಆಟ. ಆ ಬಿಂದುಗಳ ನಡುವೆ ಅತಿ ಹೆಚ್ಚು ಪಲ್ಟಿ ಹೊಡೆಯುವವನೇ ಈ ಆಟದಲ್ಲಿ ಗೆಲ್ಲುತ್ತಾನೆ. ಒಂದು ಎಚ್ಚರಿಕೆ: ಇದರಲ್ಲಿ ಭಾಗವಹಿಸಬೇಕಾದರೆ, ಮನೆಯಲ್ಲಿ ಹಾಸಿಗೆಯಲ್ಲಿ ಪಲ್ಟಿ ಹೊಡೆದು ಚೆನ್ನಾಗಿ ಅಭ್ಯಾಸ ಮಾಡುವುದು ಅಗತ್ಯ. ಇಲ್ಲವಾದರೆ, ಸಮತೋಲನ ತಪ್ಪಿ ಕುತ್ತಿಗೆಗೆ ಹಾನಿ ಆದೀತು. ಚೆನ್ನಾಗಿ ಅಭ್ಯಾಸ ಮಾಡಿದ ಮಕ್ಕಳು ಈ ಆಟವನ್ನು ಉತ್ಸಾಹದಿಂದ ಆಡಬಲ್ಲರು.
ಮರ ಮುಟ್ಟುವ ಆಟ: ಸುಲಭವಾದ ಈ ಆಟ ಆಡಲು ಇಬ್ಬರು ಆಟಗಾರರು ಅಗತ್ಯ. ಒಬ್ಬನು ಓಡುವವನು, ಇನ್ನೊಬ್ಬ ಅಟ್ಟಿಸಿಕೊಂಡು ಹೋಗುವವನು. ಓಡುವವನು ಒಂದು ಮರವನ್ನು ಅಥವಾ ಗಿಡವನ್ನು ಅಥವಾ ಮನೆಯ ಗೇಟನ್ನು (ಒಂದಾದ ನಂತರ ಒಂದರಂತೆ) ಕೈಯಿಂದ ಮುಟ್ಟುತ್ತಾ ಓಡುತ್ತಿರಬೇಕು (ಅಟ್ಟಿಸಿಕೊಂಡು ಬರುವವನ ಕೈಗೆ ಸಿಗದಂತೆ).
ಅವನು ಹೀಗೆ ಓಡುತ್ತಿರುವಾಗ, ಎರಡನೆಯವನು ಅವನನ್ನು ಅಟ್ಟಿಸಿಕೊಂಡು ಹೋಗುತ್ತಾ, ಓಡುವವನು ಮರ, ಗಿಡ ಅಥವಾ ಗೇಟು ಮುಟ್ಟದಿರುವ ಸಮಯದಲ್ಲಿ ಅವನನ್ನು ಹಿಡಿಯಬೇಕು; ಆಗ ಓಡುವವನು ಆಟದಲ್ಲಿ ಸೋತು, ಅಟ್ಟಿಸಿಕೊಂಡು ಬಂದವನು ಗೆದ್ದ ಎಂಬಲ್ಲಿಗೆ ಆಟದ ಮೊದಲ ಹಂತ ಮುಕ್ತಾಯ.
ಅನಂತರ ಎರಡನೆಯ ಹಂತದಲ್ಲಿ, ಅಟ್ಟಿಸಿಕೊಂಡವನು ಓಡಬೇಕು ಮತ್ತು ಆಗ ಓಡಿದವನು ಈಗ ಅಟ್ಟಿಸಿಕೊಂಡು ಹೋಗಬೇಕು. ಹಳ್ಳಿಪಟ್ಟಣಗಳ ಗಲ್ಲಿಗಳಲ್ಲಿ ಓಡುವಾಗ ಜಾಣತನದಿಂದ ಮತ್ತು ವೇಗವಾಗಿ ಓಡಬಲ್ಲವರು, ಅಟ್ಟಿಸಿಕೊಂಡು ಬರುವವನ ಕೈಗೆ ಸಿಗದೆ ಈ ಆಟದಲ್ಲಿ ಗೆಲ್ಲುತ್ತಾರೆ.
ಕುಂಟೆಬಿಲ್ಲೆ: ಇದು ಹುಡುಗಿಯರ ಅಚ್ಚುಮೆಚ್ಚಿನ ಆಟ. ಹುಡುಗರೂ ಇದನ್ನು ಆಡುತ್ತಾರೆ. ಇದನ್ನು ಆಡಲು ಬೇಕಾದದ್ದು ಒಂದೂವರೆ ಅಂಗುಲ ಅಗಲದ ಗುಂಡಗಿನ ಮತ್ತು ಚಪ್ಪಟೆ ಕಲ್ಲು.
ಆಟವಾಡುವ ವಿಧಾನ: ನೆಲದಲ್ಲಿ 9 ಅಡಿ ಉದ್ದ, ಐದಾರು ಅಡಿ ಅಗಲದ ಆಯತಾಕಾರ ಗುರುತಿಸಬೇಕು. ಅದನ್ನು ಒಂದಡಿ ಅಗಲದ ಬೇರೆಬೇರೆ ಕೋಣೆಗಳಾಗಿ ವಿಭಾಗಿಸಿ, ಗೆರೆ ಎಳೆಯಬೇಕು. ನಡುವಣ ನಾಲ್ಕು ಕೋಣೆಗಳ ವಿರುದ್ಧ ಮೂಲೆಗಳನ್ನು ಜೋಡಿಸುವಂತೆ ಗೆರೆ (ಕರ್ಣ ರೇಖೆ) ಎಳೆದು, ಅಲ್ಲಿ ನಾಲ್ಕು ತ್ರಿಕೋನ ರಚಿಸಬೇಕು. ಗಮನಿಸಿ: ಈ ತ್ರಿಕೋನಗಳ ಕೆಳಭಾಗದಲ್ಲಿ ಮತ್ತು ಮೇಲ್-ಭಾಗದಲ್ಲಿ ಮೂರು ಸಮಾಂತರ ಕೋಣೆಗಳು ಇರುತ್ತವೆ.
ಆಟಗಾರರು ಒಬ್ಬೊಬ್ಬರಾಗಿ ಒಂದು ಕಾಲಿನಲ್ಲಿ ನಿಂತು ಕುಪ್ಪಳಿಸುತ್ತಾ ಆಟದ ಕಲ್ಲನ್ನು, ಕಾಲಿನ ಹೆಬ್ಬೆರಳಿನಿಂದ ತಳ್ಳುತ್ತಾ ಮುಂದಕ್ಕೆ ಒಯ್ಯಬೇಕು. ಮೊದಲ ಮೂರು ಕೋಣೆಗಳ ಮೂಲಕ ಆಟದ ಕಲ್ಲನ್ನು ದಾಟಿಸಿ, ನಂತರ ನಾಲ್ಕು ತ್ರಿಕೋನ ಕೋಣೆಗಳು, ಅನಂತರ ಕೊನೆಯ ಮೂರು ಕೋಣೆಗಳಾಚೆಗೆ ಆಟದ ಕಲ್ಲನ್ನು ಹೆಬ್ಬೆರಳಿನಿಂದ ದಾಟಿಸಬೇಕು. ನೆಲದಲ್ಲಿ ಗುರುತಿಸಿದ ಎಲ್ಲ ಕೋಣೆಗಳ ಮೂಲಕ ಆಟದ ಕಲ್ಲನ್ನು ಕಾಲಿನ ಹೆಬ್ಬೆರಳಿನಿಂದ ಮೊದಲು ದಾಟಿಸಿದವಳೇ ಆಟದಲ್ಲಿ ಗೆಲ್ಲುತ್ತಾಳೆ.
ಟಯರ್ ಉರುಳಿಸುವುದು: ಇದನ್ನು ಆಡಲು ಹಳೆಯ ಸ್ಕೂಟರ್, ಮೋಟಾರ್-ಬೈಕ್ ಅಥವಾ ಸೈಕಲ್ ಟಯರ್ ಮತ್ತು ಒಂದಡಿ ಉದ್ದದ ಮರದ ಕೋಲು ಸಾಕು. ಪ್ರತಿಯೊಬ್ಬ ಆಟಗಾರ ಒಂದು ಹಳೆಯ ಟಯರ್ ತರಬೇಕು. ಎಲ್ಲ ಆಟಗಾರರೂ ಸಾಲಾಗಿ ನಿಂತು ತಮ್ಮತಮ್ಮ ಟಯರುಗಳನ್ನು ನೆಲಕ್ಕೆ ಲಂಬವಾಗಿ ಇಟ್ಟು, ಅದಕ್ಕೆ ಮರದ ಕೋಲಿನಿಂದ ಹೊಡೆಯುತ್ತಾ ಅದನ್ನು ಉರುಳಿಸುತ್ತಾ ಮುಂದಕ್ಕೆ ಸಾಗಬೇಕು. ಟಯರ್ ಅಡ್ಡಕ್ಕೆ ಬೀಳಿಸಿದವರೆಲ್ಲ ಆಟದಿಂದ ಹೊರಕ್ಕೆ ಹೋಗಬೇಕು. ಅತೀ ಹೆಚ್ಚು ಸಮಯ ತಮ್ಮ ಟಯರನ್ನು ನೆಲಕ್ಕೆ ಲಂಬವಾಗಿ ಉರುಳಿಸಿಕೊಂಡು ಮುಂದಕ್ಕೆ ಸಾಗಿದವರೇ ಈ ಆಟದಲ್ಲಿ ಗೆಲ್ಲುತ್ತಾರೆ.
ಜೋಕಾಲಿ: ರಜಾ ಸಮಯದಲ್ಲಿ ಮನೆಯ ಹತ್ತಿರದ ಮರಕ್ಕೆ ಜೋಕಾಲಿ ಕಟ್ಟಿ ತೂಗುವುದು ಹುಡುಗಿಯರಿಗೆ ಇಷ್ಟವಾದ ಆಟ. ಜೋಕಾಲಿಯಲ್ಲಿ ಕುಳಿತವಳನ್ನು ಇನ್ನೊಬ್ಬಳು ನೆಲದಲ್ಲಿ ನಿಂತು ಆರಂಭದಲ್ಲಿ ತೂಗುತ್ತಾಳೆ. ಅನಂತರ ಜೋಕಾಲಿಯಲ್ಲಿ ಕುಳಿತವಳು ಜೀಕಿನಿಂದ ಜೀಕೆಗೆ ಜೋಕಾಲಿಯನ್ನು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ತೂಗಿಕೊಳ್ಳುತ್ತಾಳೆ. ಉಳಿದೆಲ್ಲರಿಗಿಂತ ಹೆಚ್ಚಿನ ಎತ್ತರಕ್ಕೆ ಜೋಕಾಲಿಯನ್ನು ತೂಗಿಕೊಂಡ ಹುಡುಗಿಯೇ ಈ ಆಟದಲ್ಲಿ ಗೆಲ್ಲುವವಳು. (ಫೋಟೋ ಕೃಪೆ: ಗೆಟ್ಟಿ ಇಮೇಜಸ್ ಜಾಲತಾಣ)
ಕಣ್ಣುಮುಚ್ಚಾಲೆ, ಚಿನ್ನಿದಾಂಡು, ಬುಗರಿ, ಕಬಡ್ಡಿ - ಇಂತಹ ಇನ್ನೂ ಅನೇಕ ಬೀದಿಯಾಟಗಳು ಜನಪ್ರಿಯ. ರಜಾಕಾಲದಲ್ಲಿ ಇಂತಹ ಐದಾರು ಆಟಗಳನ್ನು ಕಲಿತು, ಆಯಾ ವಠಾರದ ಮಕ್ಕಳೊಂದಿಗೆ ಆಡುತ್ತಿದ್ದರೆ ಒಂದೆರಡು ತಿಂಗಳ ರಜಾ ಮುಗಿದೇ ಹೋಗುತ್ತದೆ, ಅಲ್ಲವೇ?
ಆಧಾರ: ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ “ಭಾರತದ ಕೆಲವು ಬೀದಿಯಾಟಗಳು”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!