"ಇನ್ನೊಂದು ಲೋಟ ಕಾಫಿ ಸಿಗುತ್ತಾ" ಎಂದು ನ್ಯೂಸ್ ಪೇಪರ್ ಓದುತ್ತಲೇ ಕೇಳಿದರು ರಾಮರಾಯರು. "ಏನಿವತ್ತು ಬೇಗ ಸ್ನಾನ ಮಾಡೋ ವಿಚಾರ ಇಲ್ಲವೋ" ಎಂದು ದೇವರಿಗೆ ಪೂಜೆ ಸಲ್ಲಿಸುತ್ತಲೇ ಪತಿದೇವನಿಗೆ ಗದರಿದರು ಸೀತಮ್ಮ. "ಅಮ್ಮ ತಿಂಡಿ ಬೇಗ, ಆಫೀಸಿಗೆ ಲೇಟಾಗುತ್ತೆ" ಎನ್ನುತ್ತಾ ಸ್ನಾನ ಮಾಡಿ ಬಟ್ಟೆ ಬದಲಿಸಲು ಓಡಿದಳು ಮಗಳು ಸನ್ನಿಧಿ.
"ಈ AI ನಮ್ಮ ಮಕ್ಕಳ ಕೆಲಸ ತಿನ್ನುತ್ತ ಇದೆಯಂತೆ, ಇನ್ನೂ ಎರಡು ಮೂರು ವರ್ಷದ ಮೇಲೆ ಪ್ರೋಗ್ರಾಮರ್ ಕೆಲಸವೇ ಬೇಕಿಲ್ಲವಂತೆ" ಎಂದು ಪೇಪರ್ ಓದುತ್ತಾ ಗೊಣಗಿದರು ರಾಯರು. "ಏನಿದು AI, ಅದು ಯಾಕೆ ನಮ್ಮ ಮಕ್ಕಳ ಕೆಲಸ ಕಸಿಯುವದು? ಮಿನಿಸ್ಟರ್ಗಳು ಏನು ಮಾಡ್ತಾ ಇದ್ದಾರೆ!" ಎಂದರು ಸೀತಮ್ಮ.
ರಾಯರು: "AI ಅಂದ್ರೆ ಯಾರೋ ಮನುಷ್ಯ ಅಲ್ಲ ಕಣೆ ಅದು ಒಂದು ಸಾಫ್ಟ್ವೇರು"
ಸೀತಮ್ಮ: " ಸಾಫ್ಟ್ವೇರ್ ಆದ್ರೆ ಅದನ್ನ ಬರೆದವರು ಜನರೇ ತಾನೇ! ಯಾಕೆ ಬರೀಬೇಕು ಅಂಥದ್ದೆಲ್ಲ!"
ರಾಯರು: "ದುಡ್ಡು ಕಣೆ! ಕಡಿಮೆ ಜನ ಇಟ್ಕೊಂಡು ಅಷ್ಟೇ ಕೆಲಸ ಮಾಡಿಸೋಕೆ ಆದರೆ ಉಳಿಯುತ್ತಲ್ಲ ದುಡ್ಡು!"
ಸನ್ನಿಧಿ: "ದುಡ್ಡೆನೂ ಉಳಿಯಲ್ಲ ಅಪ್ಪಾ, ಟೋಕನ್ಸ್ ಗೆ ಎಷ್ಟೋ ದುಡ್ಡು ಖರ್ಚಾಗುತ್ತೆ"
ರಾಯರು: "ನಿಮಗೆ ದುಡ್ಡು ಕೊಡೋದು ಅಲ್ದೆ ಟೋಕನ್ಸ್ ಗೂ ಖರ್ಚು ಮಾಡ್ತಾರ?"
ಸನ್ನಿಧಿ: "ಹೌದು ಮತ್ತೆ, ಅದಕ್ಕೂ ಖರ್ಚಾಗುತ್ತೆ!"
ಸೀತಮ್ಮ ದೋಸೆ ಪ್ಲೇಟಿಗೆ ಹಾಕುತ್ತಾ "ಅದಕ್ಕೆ ಮತ್ತೆ ಕೆಲವರನ್ನು ಮನೆಗೆ ಕಳಿಸ್ತಾ ಇರೋದು! ಅಲ್ವಾ?"
ರಾಯರು: "ಪರವಾಗಿಲ್ಲ ಕಣೆ, ಚೆನ್ನಾಗೆ ಅರ್ಥ ಮಾಡ್ಕೊಂಡೆ!"
ಸೀತಮ್ಮ: "ಆದ್ರು ಒಂದು ಅರ್ಥ ಆಗಲಿಲ್ಲ. ಮನುಷ್ಯರು ಮಾಡೋ ಕೆಲಸ ಅದು ಹೆಂಗೆ ಸಾಫ್ಟ್ವೇರ್ ಮಾಡುತ್ತೆ?"
ಸನ್ನಿಧಿ: "ಅದು ಕಲಿಯುತ್ತೆ, ಕಲಿತು ನಮ್ಮಂತೆ ಕೆಲಸಾನು ಮಾಡುತ್ತೆ"
ಸೀತಮ್ಮ: "ನನಗ್ಯಾಕೆ ಬೇಕು, ಅದು ಏನು ಅನ್ನೋದು ನನಗಂತೂ ಅರ್ಥ ಆಗ್ತಿಲ್ಲ"
ಸನ್ನಿಧಿ: "ನಮಗೂ ಇನ್ನೂ ಸರಿಯಾಗಿ ಅರ್ಥ ಆಗಿಲ್ಲಮ್ಮ ಆದರೆ ಅದರ ಎಫೆಕ್ಟ ಮಾತ್ರ ಆಗ್ತಾ ಇದೆ. ನಮ್ಮ ಕೆಲಸ ಸುಲಭಾನು ಮಾಡುತ್ತೆ ಅದು"
ಸೀತಮ್ಮ: "ನೀನು ಮೊದಲೇ ವಿಧೇಯವಾಗಿ ಕೆಲಸ ಮಾಡೋಳು.. ಅದಕ್ಕೆ ಎಲ್ಲ ಕಲಿಸಿಬಿಡಬೇಡ. ಆಮೇಲೆ ನೀನೇ ಬೇಡದವಳಾಗಿಬಿಡುತ್ತಿ!"
ಸರಿಯಮ್ಮ ಅಂತ ಹೇಳಿ ಆಫೀಸಿಗೆ ಹೊರಟಳು. "ನನ್ನ ಕಾಫಿ ಎಲ್ಲೆ?" ಅಂದರು ರಾಯರು. "ಹಾ! ಇದಕ್ಕೆ ಬಂದಿಲ್ಲವೋ AI!" ಎನ್ನುತ್ತಾ ಅಡುಗೆ ಮನೆಗೆ ನಡೆದರು ಸೀತಮ್ಮ.
ಪ್ರತಿಕ್ರಿಯೆ (1)
ಸಂಭಾಷಣೆಯ ಮೂಲಕ AI ಬಗ್ಗೆ ಸರಳವಾಗಿ ಮಾಹಿತಿ ನೀಡಿದ ರೀತಿ ತುಂಬಾ ಚೆನ್ನಾಗಿದೆ. ಉತ್ತಮ ಪ್ರಯತ್ನ!