ನನ್ನ ಏಳು ವರ್ಷದ ಮಗನನ್ನು ಬೆಳಿಗ್ಗೆ ಎಬ್ಬಿಸಲು ಹೋದೆ. ಅವನನ್ನು ತಬ್ಬಿಕೊಂಡು, ಬೆನ್ನ ಮೇಲೆ ಮೆಲ್ಲಗೆ ಕೈ ಸವರಿ ಏಳಲು ಹೇಳಿದೆ. ಆದರೆ ಅವನು ನನ್ನನ್ನು ಬಿಡಿಸಿಕೊಳ್ಳಲು ಬಿಡದೆ ಇನ್ನಷ್ಟು ಬಿಗಿಯಾಗಿ ತಬ್ಬಿಕೊಂಡ.
ಸ್ವಲ್ಪ ಸಮಯದ ನಂತರ ಅವನನ್ನು ಬಿಡಿಸಿದಾಗ ಅವನ ಕಣ್ಣಲ್ಲಿ ನೀರು ತುಂಬಿತ್ತು. ಅದನ್ನು ಕಂಡು ನಾನು ಏನಾಯಿತು ಎಂದು ಕೇಳುವಷ್ಟರಲ್ಲಿ, ಅವನು ನಗುತ್ತಾ, “ನಾನು ಅಳುತ್ತಿಲ್ಲ, ಆದರೂ ಕಣ್ಣಲ್ಲಿ ನೀರು ಬರುತ್ತಿದೆ!” ಎಂದ.
ನನಗೆ ಆಶ್ಚರ್ಯವಾಯಿತು. ಆಲಿಂಗನ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಒತ್ತಡವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಎಲ್ಲೋ ಕೇಳಿದ್ದೆ. ಆದರೆ ಮಗನ ಕಣ್ಣಲ್ಲಿ ನೀರು ಕಂಡ ಆ ಕ್ಷಣ, ಆಲಿಂಗನದ ಹಿಂದಿರುವ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಮೂಡಿಸಿತು. ತಕ್ಷಣ Claude AI ಮೊರೆ ಹೋದೆ.
AI ಅಧ್ಯಯನ ಮಾಡಲು ಎಷ್ಟು ಉಪಯುಕ್ತ ಸಾಧನ ಎನ್ನುವುದು ಇಂತಹ ಸಂದರ್ಭಗಳಲ್ಲಿ ಗೊತ್ತಾಗುತ್ತದೆ. ಐದು ಸಂಶೋಧನಾ ಪ್ರಬಂಧಗಳನ್ನು ಆಧರಿಸಿ ಆಲಿಂಗನದ ಪ್ರಯೋಜನಗಳ ಬಗ್ಗೆ ತಿಳಿದುಕೊಂಡೆ.
Cohen ಮತ್ತು ಅವರ ಸಹೋದ್ಯೋಗಿಗಳ ಸಂಶೋಧನೆಯ ಪ್ರಕಾರ, ಆತ್ಮೀಯರ ಸಾಮಾಜಿಕ ಬೆಂಬಲ, ಅದರಲ್ಲೂ ಆಲಿಂಗನದಂತಹ ಪ್ರೀತಿಯ ಅಭಿವ್ಯಕ್ತಿಗಳು, ಒತ್ತಡದ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡಬಹುದು.
Feldman ಅವರ ಸಂಶೋಧನೆಗಳಲ್ಲಿ ತಾಯಿ ಮತ್ತು ಮಗುವಿನ ನಡುವಿನ ಚರ್ಮದ ಸ್ಪರ್ಶ ಹಾಗೂ ನಿಕಟ ಸಂಪರ್ಕದ ಮಹತ್ವವನ್ನು ವಿವರಿಸಲಾಗಿದೆ. ವಿಶೇಷವಾಗಿ ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ, ಇಂತಹ ಸಂಪರ್ಕವು ಒತ್ತಡ ನಿಯಂತ್ರಣ, ನಿದ್ರೆ ಮತ್ತು ಬೆಳವಣಿಗೆಗೆ ಪ್ರಯೋಜನಕಾರಿಯಾಗಬಹುದು. ಅಂದರೆ, ಮಗುವಿಗೆ ಉಪಕರಣಗಳ ನೆರವು ಎಷ್ಟು ಮುಖ್ಯವೋ, ಪ್ರೀತಿಯ ಸ್ಪರ್ಶವೂ ಅಷ್ಟೇ ಮಹತ್ವದ್ದು.
Brown ಅವರ ಸಂಶೋಧನೆಯೂ ಕುಟುಂಬದವರು ಮತ್ತು ಗೆಳೆಯರೊಂದಿಗಿನ ನಿಕಟ ಸಂಪರ್ಕದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂತಹ ಸಂಬಂಧಗಳು ಒಂಟಿತನದ ಭಾವನೆಯನ್ನು ಕಡಿಮೆ ಮಾಡಲು ನೆರವಾಗಬಹುದು.
ಇನ್ನು ಗೆಳೆಯ-ಗೆಳತಿಯರು ಅಥವಾ ದಂಪತಿಗಳ ವಿಷಯಕ್ಕೆ ಬಂದರೆ, ಆಲಿಂಗನದ ಪ್ರಯೋಜನಗಳು ಮತ್ತಷ್ಟು ಆಸಕ್ತಿದಾಯಕವಾಗುತ್ತವೆ. Grewen ಮತ್ತು ಅವರ ಸಹೋದ್ಯೋಗಿಗಳ ಅಧ್ಯಯನದಲ್ಲಿ ಆತ್ಮೀಯ ಸಂಗಾತಿಯೊಂದಿಗಿನ ಬೆಚ್ಚಗಿನ ಸಂಪರ್ಕ ಹಾಗೂ ಆಲಿಂಗನವು ರಕ್ತದೊತ್ತಡ ಮತ್ತು ಒತ್ತಡದ ಪ್ರತಿಕ್ರಿಯೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದೆಂದು ಕಂಡುಬಂದಿದೆ. ಆಲಿಂಗನದ ಸಂದರ್ಭದಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಕೂಡ ಸಾಮಾಜಿಕ ಬಾಂಧವ್ಯ ಮತ್ತು ಭಾವನಾತ್ಮಕ ಯೋಗಕ್ಷೇಮದಲ್ಲಿ ಪಾತ್ರ ವಹಿಸುತ್ತದೆ.
ಹಾಗಾದರೆ, ಇಷ್ಟೆಲ್ಲ ತಿಳಿದ ಮೇಲೆ ನಾವೇನು ಮಾಡಬೇಕು?
ನಿಮ್ಮ ಆತ್ಮೀಯರಿಗೆ ಒಂದು ಜಾದೂ ಕೀ ಝಪ್ಪಿ ಕೊಟ್ಟು ನೋಡಿ!
ವಯಸ್ಸು ಏನೇ ಇರಲಿ, ಕೆಲವೊಮ್ಮೆ ಮಾತುಗಳಿಂದ ಹೇಳಲಾಗದ ಪ್ರೀತಿಯನ್ನು ಒಂದು ಆಲಿಂಗನ ಹೇಳಬಲ್ಲದು. ಮನಸ್ಸಿನಲ್ಲಿರುವ ಒತ್ತಡ, ಬೇಸರ ಅಥವಾ ದಣಿವನ್ನು ಹಂಚಿಕೊಳ್ಳಲು ಅದೊಂದು ಸುಂದರ ಮಾರ್ಗವಾಗಬಹುದು. ಎಲ್ಲ ಸಮಸ್ಯೆಗಳಿಗೂ ಆಲಿಂಗನವೇ ಪರಿಹಾರವಲ್ಲದಿದ್ದರೂ, ನಮ್ಮನ್ನು ಅರ್ಥಮಾಡಿಕೊಳ್ಳುವವರು ನಮ್ಮ ಜೊತೆಗಿದ್ದಾರೆ ಎಂಬ ಭರವಸೆಯನ್ನು ಅದು ನೀಡಬಲ್ಲದು.
ಆದರೆ ಆಲಿಂಗನಕ್ಕೆ ಒಂದು ಸಣ್ಣ ಎಚ್ಚರಿಕೆ ಇದೆ. ನಿಮ್ಮ ಗೆಳೆಯ, ಗೆಳತಿ ಅಥವಾ ಆತ್ಮೀಯರು ಅದಕ್ಕೆ ಒಪ್ಪಿರಬೇಕು ಅಷ್ಟೇ! ಅವರ ಒಪ್ಪಿಗೆಯಿಲ್ಲದೆ ತಬ್ಬಿಕೊಳ್ಳಲು ಹೋದರೆ, ಒತ್ತಡ ಕಡಿಮೆ ಮಾಡುವ ಬದಲು ಬೇರೆ ರೀತಿಯ ಒತ್ತಡವನ್ನೇ ಮೈಮೇಲೆ ಎಳೆದುಕೊಂಡಂತಾಗಬಹುದು. ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ಜೈಲಿಗೂ ಹೋಗಬೇಕಾದೀತು!
ಹಾಗಾಗಿ, ಪ್ರೀತಿ ಇದ್ದರೆ ತಬ್ಬಿಕೊಳ್ಳಿ. ಆದರೆ ಮೊದಲು ಒಪ್ಪಿಗೆ ಪಡೆಯಿರಿ!
References
1. Cohen et al. (2015), Psychological Science.
2. Feldman et al. (2014), Biological Psychiatry.
3. Brown et al. (2021).
4. Grewen et al., Psychosomatic Medicine.
5. Berretz et al. (2022).
ಪ್ರತಿಕ್ರಿಯೆ (1)
Interesting observation 👍