ಬಾಗಿಲಿನ ಗಂಟೆ ಬಾರಿಸಿದಾಗ ಸಾಗರ ವೇಗವಾಗಿ ಹೋಗಿ ಬಾಗಿಲು ತೆರೆದ. ಕೊರಿಯರ್ನವನ ಕೈಯಿಂದ ಪಾರ್ಸೆಲ್ ತೆಗೆದುಕೊಂಡು ಒಳಗೆ ಬಂದ.
“ಮತ್ತೇನು ತರಿಸಿದ್ರಿ?” ಸೀಮಾ ಕೇಳಿದಳು.
ಸಾಗರನ ಹೊಸ ಹೊಸ ಸಾಮಾನುಗಳ ತೋರಿಸೋ ವಿಚಾರ ಅವಳಿಗೆ ಚೆನ್ನಾಗಿಯೇ ಗೊತ್ತು. ಪಾರ್ಸೆಲ್ ಬಂದಾಗಲೆಲ್ಲ ಅದರಲ್ಲಿ ಏನಿರಬಹುದು ಎಂಬ ಕುತೂಹಲಕ್ಕಿಂತ, ಇದನ್ನು ಇಟ್ಟಿಕೊಳ್ಳಲು ಮನೆಯಲ್ಲಿ ಎಲ್ಲಿ ಜಾಗ ಮಾಡಬೇಕು ಎಂಬ ಚಿಂತೆಯೇ ಅವಳಿಗೆ ಹೆಚ್ಚಾಗಿರುತ್ತಿತ್ತು.
“ಇದು sizing kit,” ಎಂದ ಸಾಗರ.
“ಅದೇನು?”
“ರಿಂಗ್ ಸೈಜ್ ಸರಿಯಾಗಿ ಇದೆಯಾ ಅಂತ ನೋಡಬೇಕು.”
ಸೀಮಾಳ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ಆಸೆ ಮೂಡಿತು.
“ಓಹೋ! ಡೈಮಂಡ್ ರಿಂಗ್ ತೋರಿಸೋ ಪ್ಲಾನ್ ಇದೆಯಾ?”
“ಅಯ್ಯೋ, ಅದೆಲ್ಲ ಏನಿಲ್ಲ. ಇದು ಪೇಮೆಂಟ್ ರಿಂಗ್.”
ಆಸೆ ಕ್ಷಣಾರ್ಧದಲ್ಲಿ ಮಾಯವಾಯಿತು.
“ಪೇಮೆಂಟ್ ರಿಂಗಾ? ಅದೇನು ಹೊಸದು ಈಗ?”
“ರಿಂಗ್ ಹಾಕಿಕೊಂಡೇ ಪೇಮೆಂಟ್ ಮಾಡಬಹುದು. ಮೊಬೈಲ್ ತೆಗೆಯಬೇಕಿಲ್ಲ, ಕಾರ್ಡ್ ಬೇಕಿಲ್ಲ. ಸುಮ್ಮನೆ ಪೇಮೆಂಟ್ ಮಷೀನ್ ಹತ್ತಿರ ಕೈ ತೋರಿಸಿದರೆ ಆಯಿತು.”
ಸಾಗರನ ಮುಖದಲ್ಲಿ ಹೊಸ ಆಟಿಕೆ ಸಿಕ್ಕ ಮಗುವಿನ ಸಂಭ್ರಮವಿತ್ತು.
ಸೀಮಾ ತಲೆಯ ಮೇಲೆ ಕೈಯಿಟ್ಟಳು.
“ಇನ್ನೊಂದು ಹೊಸ ಗ್ಯಾಜೆಟ್ ಬೇಕಿತ್ತಾ ನಿಮಗೆ?”
“ಚಿಂತೆ ಬಿಡು. ಇದು ಮನೆಯಲ್ಲಿ ಎಲ್ಲೂ ಜಾಗ ಹಿಡಿಯೋದಿಲ್ಲ.”
ಅವನ ಮಾತಿಗೆ ಸೀಮಾಳ ಬಳಿ ಉತ್ತರವೇ ಇರಲಿಲ್ಲ.
───
ಎರಡು ದಿನಗಳ ನಂತರ ಪೇಮೆಂಟ್ ರಿಂಗ್ ಮನೆಗೆ ಬಂತು.
ಸಾಗರನ ಸಂಭ್ರಮ ಹೇಳತೀರದು. ಪಾರ್ಸೆಲ್ ತೆರೆದು ರಿಂಗನ್ನು ಕೈಯಲ್ಲಿ ಹಿಡಿದು, ಅದರ ವಿನ್ಯಾಸವನ್ನೆಲ್ಲ ಪರೀಕ್ಷಿಸಿದ. ನಂತರ ಮೊಬೈಲ್ ತೆಗೆದುಕೊಂಡು ಸೆಟಪ್ ಶುರು ಮಾಡಿದ.
“ಇದು ಹೇಗೆ ಕೆಲಸ ಮಾಡುತ್ತೆ ಅಂತ ನೋಡೋಣ,” ಎಂದು ತನಗೆ ತಾನೇ ಹೇಳಿಕೊಂಡ.
ಸೀಮಾ ದೂರದಿಂದಲೇ ಅವನ ಚಟುವಟಿಕೆಗಳನ್ನು ಗಮನಿಸುತ್ತಿದ್ದಳು.
ಅಷ್ಟರಲ್ಲಿ ಮಗಳು ಬಂದು, “ಅಪ್ಪಾ, ನನ್ನ ಯಾರ್ನ್ ಖಾಲಿಯಾಗಿದೆ. ಹೊಸದು ತಗೊಳ್ಳಬೇಕು,” ಎಂದಳು.
ಇತ್ತೀಚೆಗೆ ಅವಳಿಗೆ ಕ್ರೋಶೆ ಮಾಡುವ ಹೊಸ ಹವ್ಯಾಸ ಶುರುವಾಗಿತ್ತು. ಅಪ್ಪನಂತೆಯೇ ಮಗಳಿಗೂ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿ.
“ಆಯ್ತಮ್ಮ, ಹೋಗೋಣ,” ಎಂದ ಸಾಗರ.
ಮಗಳು ಯಾರ್ನ್ ಖರೀದಿಸಲು ಕೇಳಿದ್ದೇ ತಡ, ಹೊರಡಲು ಸಿದ್ಧನಾದ. ಸೀಮಾಳಿಗೆ ಆಶ್ಚರ್ಯವಾಯಿತು.
ಅಪ್ಪ-ಮಗಳು ಹೊರಡಲು ಸಿದ್ಧರಾದರು.
ಆದರೆ ಸಾಗರನ ಮನಸ್ಸು ಇನ್ನೂ ಪೇಮೆಂಟ್ ರಿಂಗ್ನಲ್ಲೇ ಇತ್ತು.
ಮೊಬೈಲ್ನಲ್ಲಿ ಏನೋ ನೋಡುತ್ತಾ ಇದ್ದಕ್ಕಿದ್ದಂತೆ, “ಅಯ್ಯೋ!” ಎಂದ.
“ಏನಾಯ್ತು ಅಪ್ಪಾ?” ಮಗಳು ಕೇಳಿದಳು.
“ದುಡ್ಡು ವ್ಯಾಲೆಟ್ಗೆ ಹಾಕಿದ್ದೆ. ಆದರೆ ರಿಂಗ್ ಆ್ಯಪ್ನಲ್ಲಿ ಕಾಣಿಸ್ತಾ ಇಲ್ಲವಲ್ಲ!”
“ಅಪ್ಪಾ, ನಿಮಗೆ ಮೋಸ ಆಗಿದೆ!” ಮಗಳು ತಕ್ಷಣ ತೀರ್ಮಾನ ಕೊಟ್ಟಳು.
ಅಷ್ಟರಲ್ಲಿ ಸೀಮಾ ಅಲ್ಲಿಗೆ ಬಂದಳು.
“ಈಗೇನಾಯ್ತು?”
“ರಿಂಗ್ ಆ್ಯಪ್ನಲ್ಲಿ ಕಾಣಿಸ್ತಾ ಇಲ್ಲ. ವ್ಯಾಲೆಟ್ಗೆ ದುಡ್ಡು ಹಾಕಿದ್ದೇನೆ.”
“ಅಬ್ಬಬ್ಬಾ! ಆ ಫೇಸ್ಬುಕ್ ಜಾಹೀರಾತುಗಳನ್ನು ಹೇಗೆ ನಂಬಿಬಿಡ್ತೀರಾ ನೀವು? ಏನೋ ಹೊಸದು ಅಂತ ಕಂಡರೆ ಸಾಕು, ತಕ್ಷಣ ಆರ್ಡರ್ ಮಾಡಬೇಕು!”
ಸಾಗರನಿಗೆ ಸ್ವಲ್ಪ ಕಸಿವಿಸಿಯಾಯಿತು.
“ಇನ್ನೂ ಸರಿಯಾಗಿ ನೋಡಿಲ್ಲ. ಮೊದಲು ಅಂಗಡಿಗೆ ಹೋಗಿ ಟ್ರೈ ಮಾಡೋಣ.”
ಮಗಳು ನಕ್ಕಳು.
“ಬನ್ನಿ ಅಪ್ಪಾ. ನಿಮ್ಮ ರಿಂಗ್ ನಿಜವಾಗಿಯೂ ಕೆಲಸ ಮಾಡುತ್ತಾ ಇಲ್ವಾ ಅಂತ ಪರೀಕ್ಷೆ ಮಾಡೋಣ.”
ಸೀಮಾ ಇಬ್ಬರನ್ನೂ ನೋಡಿ ತಲೆ ಅಲ್ಲಾಡಿಸಿದಳು.
ಯಾರ್ನ್ ಖರೀದಿಸಲು ಹೊರಟಿದ್ದ ಅಪ್ಪ-ಮಗಳ ಪ್ರಯಾಣಕ್ಕೆ ಈಗ ಹೊಸ ಉದ್ದೇಶವೂ ಸೇರಿಕೊಂಡಿತ್ತು.
───
ಅಂಗಡಿಗೆ ಹೋದಾಗ ಮಗಳು ತನಗೆ ಬೇಕಾದ ಬಣ್ಣದ ಯಾರ್ನ್ಗಳನ್ನು ಹುಡುಕತೊಡಗಿದಳು. ಸಾಗರ ಮಾತ್ರ ಮೊಬೈಲ್ನಲ್ಲಿ ರಿಂಗ್ ಆ್ಯಪ್ನ್ನು ಮತ್ತೆ ಮತ್ತೆ ತೆರೆದು ನೋಡುತ್ತಿದ್ದ.
ಅಷ್ಟರಲ್ಲಿ ಅವರ ಮುಂದೆ ಇದ್ದ ಮಹಿಳೆ ಖರೀದಿಸಿದ ವಸ್ತುಗಳಿಗೆ ಕಾರ್ಡ್ ಮೂಲಕ ಪೇಮೆಂಟ್ ಮಾಡುತ್ತಿದ್ದಳು.
ಕಾರ್ಡ್ ಕೊಟ್ಟು, “Just tap it,” ಎಂದಳು.
ತನ್ನ ಸರದಿ ಬಂದಾಗ ಮೊಬೈಲ್ನಲ್ಲಿ ಮತ್ತೊಮ್ಮೆ ವ್ಯಾಲೆಟ್ ಪರಿಶೀಲಿಸಿದ. ಈ ಬಾರಿ ಹಣ ಸರಿಯಾಗಿ ಕಾಣಿಸುತ್ತಿತ್ತು.
ಮುಖದಲ್ಲಿ ಮತ್ತೆ ಉತ್ಸಾಹ ಮೂಡಿತು.
ಮಗಳ ಕಡೆ ತಿರುಗಿ, “ಟ್ರೈ ಮಾಡೋಣಾ?” ಎಂದು ಕೇಳಿದ.
ಮಗಳು ನಗುತ್ತಾ ತಲೆಯಾಡಿಸಿದಳು.
ಸಾಗರ ತನ್ನ ಕೈಯಲ್ಲಿದ್ದ ರಿಂಗನ್ನು ಪೇಮೆಂಟ್ ಮಷೀನ್ ಹತ್ತಿರ ತೆಗೆದುಕೊಂಡು ಹೋದ. ರಿಂಗು ಮಷೀನ್ಗೆ ತಾಗುವಂತೆ ಕೈಯನ್ನು ಮುಟ್ಟಿಸಿದ.
ಒಂದು ಕ್ಷಣ...
ನಂತರ ಬೀಪ್!
ಪೇಮೆಂಟ್ ಆಯಿತು!
ಸಾಗರನ ಮುಖ ಅರಳಿತು.
“ನೋಡಿದೆಯಾ! ಮ್ಯಾಜಿಕ್!”
ಪೇಮೆಂಟ್ ಮಾಡಿದ ಖುಷಿಗಿಂತ, ತಾನು ಖರೀದಿಸಿದ ಗ್ಯಾಜೆಟ್ ಕೆಲಸ ಮಾಡುತ್ತಿದೆ ಎಂಬ ಸಂತೋಷವೇ ಅವನಿಗೆ ಹೆಚ್ಚಾಗಿತ್ತು.
ಅಂಗಡಿಯವಳೂ ಆಶ್ಚರ್ಯದಿಂದ ಅವನ ಕೈಯನ್ನೊಮ್ಮೆ, ರಿಂಗನ್ನೊಮ್ಮೆ ನೋಡಿದಳು.
ಆ ನೋಟ ಸಾಗರನಿಗೆ ಇನ್ನಷ್ಟು ಖುಷಿ ಕೊಟ್ಟಿತು.
ಮಗಳ ಯಾರ್ನ್ ಖರೀದಿಯಾಗಿತ್ತು. ಪೇಮೆಂಟ್ ರಿಂಗ್ನ ಪರೀಕ್ಷೆಯೂ ಯಶಸ್ವಿಯಾಗಿತ್ತು.
───
ಮನೆಗೆ ಬಂದ ಸಾಗರನಿಗೆ ಮೊದಲು ಸಿಕ್ಕಿದ್ದು ಸೀಮಾ.
“ಯಾರ್ನ್ ಸಿಕ್ಕಿತಾ?” ಎಂದು ಕೇಳಿದಳು.
“ಸಿಕ್ಕಿತು. ರಿಂಗ್ ಕೂಡ ಕೆಲಸ ಮಾಡುತ್ತೆ!”
ಅವನ ಉತ್ಸಾಹವನ್ನು ಗಮನಿಸಿದ ಸೀಮಾ ನಗುತ್ತಾ ಕೇಳಿದಳು.
“ಮಗಳಿಗೆ ಯಾರ್ನ್ ಕೊಡಿಸೋಕೆ ಹೋಗಿದ್ರಾ, ಇಲ್ಲ ನಿಮ್ಮ ರಿಂಗ್ ಟೆಸ್ಟ್ ಮಾಡೋದಕ್ಕೂ?”
ಸಾಗರ ಸ್ವಲ್ಪವೂ ಯೋಚಿಸದೆ ಉತ್ತರಿಸಿದ.
“ಎರಡಕ್ಕೂ!”
ಸೀಮಾ ನಗುವುದನ್ನು ತಡೆಯಲಾಗಲಿಲ್ಲ. ಸಾಗರ ಜೊತೆಗೂಡಿದ
ಪ್ರತಿಕ್ರಿಯೆ (1)
ಹೊಸ ಪ್ರಯೋಗ ಚೆನ್ನಾಗಿದೆ. ಮೋಸ ಹೋಗಲಿಲ್ಲ
😊