ತಿಮ್ಮ ಶಾಲೆಗೆ ಹೊರಟಿದ್ದ. ದಾರಿಯಲ್ಲಿ ಪಾನಿಪೂರಿ ಅಂಗಡಿಯೊಂದು ಕಾಣಿಸಿತು. ಬೆಳಗಿನ ಹೊತ್ತಾಗಿದ್ದರಿಂದ ಅಂಗಡಿ ಇನ್ನೂ ತೆರೆದಿರಲಿಲ್ಲ. ಮಧ್ಯಾಹ್ನ ಟ್ಯೂಷನ್‌ಗೆ ಹೋಗುವಾಗಲೂ ನೋಡಿದ, ಆಗಲೂ ಅಂಗಡಿ ತೆರೆದಿರಲಿಲ್ಲ. ಸಂಜೆ ಗೆಳೆಯರೊಂದಿಗೆ ಆಟಕ್ಕೆ ಹೋದಾಗ ಅಂಗಡಿ ತೆರೆದಿತ್ತು. ತಿಮ್ಮನಿಗೆ ಬೇಕಾಗಿದ್ದುದೂ ಅದೇ. ಪಾನಿಪೂರಿ ತಿಂದ.
ಎಷ್ಟಾದರೂ ಸ್ವಚ್ಛವಲ್ಲದ ನೀರಿನಿಂದ ಮಾಡಿದ ಪಾನಿ, ಕೆಟ್ಟ ಎಣ್ಣೆಯಲ್ಲಿ ಕರಿದ ಪೂರಿ. ಹೊಟ್ಟೆ ಕೆಟ್ಟಿತು. ಆದರೂ ಪಾನಿಪೂರಿ ತಿನ್ನುವ ಆಸೆ ಮಾತ್ರ ಕಡಿಮೆಯಾಗಲಿಲ್ಲ.
ಈಗ ತಿಮ್ಮ ಒಂದು ಊರಿಗೆ ಹೊರಟಿದ್ದಾನೆ ಎಂದುಕೊಳ್ಳಿ. ದಾರಿಯಲ್ಲಿ ಪಾನಿಪೂರಿ ಅಂಗಡಿಯೊಂದು ಕಾಣಿಸಿದಾಗ ನಿಂತು ತಿನ್ನುತ್ತಾನೆ. ಸ್ವಲ್ಪ ದೂರ ಹೋದ ಮೇಲೆ ಮತ್ತೊಂದು ಅಂಗಡಿ ಕಾಣಿಸುತ್ತದೆ. ಅಲ್ಲೂ ತಿನ್ನುತ್ತಾನೆ. ಇನ್ನಷ್ಟು ದೂರ ಹೋದಾಗ ಮತ್ತೊಂದು ಅಂಗಡಿ. ಆದರೆ ಏಕೋ, ಈ ಬಾರಿ ಪಾನಿಪೂರಿಯ ರುಚಿ ಸರಿಯಾಗಿ ಅನಿಸುವುದಿಲ್ಲ.
ಹಿಂದಿನ ಅಂಗಡಿಗೇ ಮರಳುತ್ತಾನೆ. ಅಲ್ಲಿನ ರುಚಿ ಸ್ವಲ್ಪ ಪರವಾಗಿಲ್ಲ ಅನಿಸಿದರೂ ಏನೋ ಕೊರತೆ. ಮತ್ತೆ ಪ್ರಯಾಣ ಮುಂದುವರಿಸುತ್ತಾನೆ. ಈಗ ಅಂಗಡಿ ಯಾವುದೂ ಕಾಣಿಸದಿದ್ದರೂ ಪಾನಿಪೂರಿ ತಿನ್ನುವ ಚಪಲ ಮಾತ್ರ ಕಡಿಮೆಯಾಗುವುದಿಲ್ಲ. ಮುಂದೆ ಹೋಗುವುದನ್ನು ಬಿಟ್ಟು ಹಿಂದೆ ಬಂದು ತಿನ್ನುತ್ತಾನೆ.
ಈಗ ಪಾನಿಪೂರಿಯ ರುಚಿಯೂ ಸಾಕಾಗಿದೆ. ಹಾಗಾಗಿ ಮಸಾಲ ಪೂರಿಗೆ ಬದಲಾಯಿಸುತ್ತಾನೆ. ಅಲ್ಲಿಯೂ ಅದೇ ಪುನರಾವರ್ತನೆ!
ನಾವೆಲ್ಲ ಒಂದಿಲ್ಲೊಂದು ಚಪಲಕ್ಕೆ ಶರಣಾದವರೇ. ಆದರೆ ಒಂದು ವಿಷಯ ಗಮನಿಸಬೇಕು. ರುಚಿ ಕಡಿಮೆಯಾಗುತ್ತಿರುವುದು ನಾಲಿಗೆಯಲ್ಲಿ, ಪಾನಿಪೂರಿಯಲ್ಲಿ ಅಲ್ಲ ಎನ್ನುವುದು ನಮಗೆ ಅರ್ಥವೇ ಆಗುವುದಿಲ್ಲ. ಪ್ರತಿ ಬಾರಿ ಅಂಗಡಿಗೆ ಹಿಂದಿರುಗುವಾಗ ನಮ್ಮ ಗುರಿಯಿಂದ ದಾರಿ ತಪ್ಪುತ್ತಿದ್ದೇವೆ ಎನ್ನುವುದೂ ಅರಿವಿಗೆ ಬರುವುದಿಲ್ಲ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ನಮಗೊಂದು ನಿರ್ದಿಷ್ಟ ಗುರಿ ಇದ್ದಾಗ ಚಪಲ ನಮ್ಮನ್ನು ದಾರಿ ತಪ್ಪಿಸುತ್ತಿದೆ ಎಂದು ಅನಿಸಬಹುದು. ಆದರೆ ಗೊತ್ತು ಗುರಿ ಇಲ್ಲದಿದ್ದಾಗ ನಮ್ಮ ಇಡೀ ಸಮಯವೇ ಚಪಲಗಳಿಗೆ ಮೀಸಲಾಗಿಬಿಡುತ್ತದೆ.
ಹತ್ತು ಮೈಲಿ ಮುಂದೆ ಹೋಗಬೇಕೆಂದು ಹೊರಟಾಗ ನಮ್ಮ ಚಪಲ ನಮ್ಮನ್ನು ಒಂದೆರಡು ಮೈಲಿ ಹಿಂದಕ್ಕೆ ಕರೆದುಕೊಂಡು ಬರುತ್ತದೆ. ಚಪಲ ಹೆಚ್ಚಾದಂತೆ ಮುಂದೆ ಸಾಗುವುದನ್ನೇ ಮರೆತು ಮತ್ತೆ ಮತ್ತೆ ಹಿಂದಕ್ಕೆ ಬರುತ್ತಿರುತ್ತೇವೆ. ಇದೊಂದು ಸುಳಿ. ಇದರಿಂದ ಹೊರಬರದ ಹೊರತು ಗುರಿ ತಲುಪಲು ಸಾಧ್ಯವಿಲ್ಲ.
ಹನುಮಂತನೂ ಮಂಗನ ರೂಪದಲ್ಲೇ ಇದ್ದವನು. ಚಂಚಲತೆಗೆ ಹೆಸರಾದ ಮಂಗನ ರೂಪದಲ್ಲಿದ್ದರೂ, ಗುರಿ ಸಾಧನೆಯಲ್ಲಿ ಅವನಿಗಿದ್ದ ಏಕಾಗ್ರತೆ ಮತ್ತು ದೃಢಸಂಕಲ್ಪ ಅಸಾಧಾರಣವಾದದ್ದು.
ಚಪಲಕ್ಕೆ ಶರಣಾಗದೆ, ಗುರಿಯೆಡೆಗೆ ಸಾಗುವುದನ್ನು ಹನುಮಂತನಿಂದ ಕಲಿಯೋಣ.
ಮಾರುತಿ ನಮಗೆ ದಾರಿದೀಪವಾಗಲಿ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!