ಹಿಂದೊಮ್ಮೆ ಕಡಿಮೆ ಖರ್ಚಿನಲ್ಲಿ ತಯಾರಾದ ಮುಂಗಾರು ಮಳೆ ಹಿಟ್ ಆದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಂಥ ಚಿತ್ರ ಕನ್ನಡದಲ್ಲಿ ಮಾತ್ರ ಹಿಟ್ ಆಗೋದು ಸಾಧ್ಯ ಎಂಬ ಮಾತುಗಳೂ ಕೇಳಿಬಂದಿದ್ದವು. ನಮ್ಮ ಪ್ರೇಕ್ಷಕರನ್ನು ಒಲಿಸಿಕೊಳ್ಳುವುದು ಒಂದು ದೊಡ್ಡ ಕೆಲಸ. ಒಂದೆರಡು ಒಳ್ಳೆಯ ಹಾಡು, ಎರಡು ಫೈಟು, ಮೂರು ನಾಲ್ಕು ತಮಾಷೆಯ ಸೀನ್‌ಗಳಿದ್ದರೆ ಕನ್ನಡದ ಪ್ರೇಕ್ಷಕರನ್ನು ಗೆಲ್ಲಬಹುದು ಎಂದುಕೊಂಡರೆ ಅದು ಅಷ್ಟು ಸುಲಭವಲ್ಲ.
ಪ್ರೇಮದ ಊರಲಿ ಚಿತ್ರದಲ್ಲಿ ಪ್ರೀತಿ, ಪ್ರೇಮ, ಕಾಮಿಡಿ, ತ್ಯಾಗ ಇತ್ಯಾದಿಗಳಿರಬಹುದು ಅಂದುಕೊಂಡಿದ್ದೆ. ಆದರೆ ನಿರ್ದೇಶಕ ಮನೋಜ್ ಕುಮಾರ್ ಇಲ್ಲಿ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ.
ಗಂಡುಬೀರಿ ಹೆಣ್ಣು, ಹಳ್ಳಿ ಹೈದ, ನಗರದ ಕನಸಿನ ಕನ್ಯೆ, ಅಪ್ಪ-ಮಗ, ಅಣ್ಣ-ತಂಗಿಯ ಸಂಬಂಧಗಳು... ಎಲ್ಲವೂ ಇವೆ. ಒಂದೆರಡು ಹಾಡುಗಳ ಕೆಲವು ಸಾಲುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಕಥೆಯಲ್ಲಿ ತಿರುವುಗಳಿಲ್ಲ ಆದರೆ ತಿರುಳಿದೆ. ಸಾಹಸ ದೃಶ್ಯಗಳಿಲ್ಲ, ಆದರೆ ನಿಜವಾದ ಪೌರುಷವಿದೆ. ಕಾಮಿಡಿ ಸಹ್ಯವಾಗಿದೆ. ಪ್ರೀತಿ-ಪ್ರೇಮ ಅತಿರೇಕಕ್ಕೆ ಹೋಗುವುದಿಲ್ಲ. ಹಾಗೆಯೇ ತ್ಯಾಗ-ಗೀಗದ ಅನಗತ್ಯ ನಾಟಕವೂ ಇಲ್ಲ!
ತ್ರಿಕೋನ ಪ್ರೇಮದ ಕಥೆಯನ್ನು ಇಷ್ಟು ಚೆನ್ನಾಗಿ ತೋರಿಸಿರುವುದನ್ನು ನಾನು ಎಲ್ಲೂ ಕಂಡಿಲ್ಲ. ಪ್ರೀತಿಸಿದವರು ಸಿಗಬೇಕು, ಇಲ್ಲವೇ ಅದೊಂದು ತ್ಯಾಗದ ಕಥೆಯಾಗಬೇಕು ಎಂಬ ಸಿದ್ಧ ಮಾದರಿಗಳಿವೆ. ಆದರೆ ಇಲ್ಲಿ ಪ್ರೀತಿಯನ್ನು ತೋರಿಸಿರುವ ಪರಿಯೇ ವಿಭಿನ್ನ.
ಪ್ರೇಮದ ಕಥೆಯಲ್ಲಿ ನಂಬಿಕೆಗೆ ಪ್ರೂಫ್ ಬೇಡ, ಫೀಲ್ ಸಾಕು ಎಂಬ ವಿಚಾರ ನನಗೆ ಬಹಳ ಇಷ್ಟವಾಯಿತು.
ರೈತರಿಗೆ ಹೆಣ್ಣು ಸಿಗದಿರುವುದು, ಓದಿದವರು ಬೇಸಾಯ ಮಾಡಬಾರದು ಎಂಬಂಥ ಸಾಮಾಜಿಕ ಸಮಸ್ಯೆಗಳಿಗೆ ಮತ್ತು ನಂಬಿಕೆಗಳಿಗೆ ಚಿತ್ರದಲ್ಲಿ ಒಳ್ಳೆಯ ಉತ್ತರವಿದೆ. ಉಪದೇಶದ ರೀತಿಯಲ್ಲಿ ಹೇಳದೆ, ಕಥೆಯ ಮೂಲಕವೇ ಈ ವಿಚಾರಗಳನ್ನು ಮುಟ್ಟಿಸಿರುವುದು ವಿಶೇಷ.
ಒಟ್ಟಾರೆ, ಇದೊಂದು ಒಳ್ಳೆಯ ಪಾರಿವಾರಿಕ ಚಿತ್ರ. ಕನ್ನಡಿಗರಿಗೆ ಅಬ್ಬರವೇ ಬೇಕಿಲ್ಲ; ಮನಸ್ಸಿಗೆ ಒಳ್ಳೆಯ ಫೀಲ್ ಕೊಡುವ ಚಿತ್ರವಾದರೆ ಸಾಕು ಎಂಬುದನ್ನು ಪ್ರೇಮದ ಊರಲಿ ನೆನಪಿಸುತ್ತದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!