ವಾಕಿಂಗ್ ಗೆಳೆಯರಿಗೆ ವಿದಾಯ ಹೇಳಿ ಮನೆ ಒಳಗೆ ಹೊಕ್ಕರು ರಾಯರು, ಸನ್ನಿಧಿ ಕಾಫಿ ಹೀರುತ್ತಾ ಯಾವುದೋ ಕಾಲ್ ಅಲ್ಲಿ ಇದ್ದಳು. "ನಿನ್ನ ಮುದ್ದು ಮಗಳಿಗಷ್ಟೇನಾ ಕಾಫಿ? ನಾನೂ ಕೂಡ ಹೊರಗಿಂದ ಬಂದೆ" ಕೀಟಲೆ ಮಾಡಿದರು ರಾಯರು. "ತೊಗೊಳ್ಳಿ ಕಾಫಿ" ಅಂತ ಗ್ಲಾಸ್ ಕುಕ್ಕರಿಸಿ ಮತ್ತೆ ವಾಟ್ಸಾಪ್ ಅಲ್ಲಿ ಮುಳುಗಿದರು ಸೀತಮ್ಮ. "ನೀನು ಏನೇ ಹೇಳು ಸನ್ನಿಧಿ, ನಿಮ್ಮ ಕೆಲಸ ಮಾಡಲಿಕ್ಕೆ AI ಗೆ ಹೇಗೆ ಬರುತ್ತೆ ಜ್ಞಾನ ಅನ್ನೋದೇ ಒಂದು ಸೋಜಿಗ" ಅಂದರು ಸೀತಮ್ಮ. "ಅಮ್ಮ, ನೀನು ಅದು ಹೇಗೆ ಇದೇ ರೀತಿ ಕಾಫಿ ಮಾಡ್ತೀಯ ಪ್ರತಿ ಸಲ? ಸಕ್ಕರೆ, ಕಾಫಿ ಡಿಕಾಕ್ಷನ್ ಎಷ್ಟೆಷ್ಟು ಅಂತ ಹೆಂಗೆ ಗೊತ್ತಾಗುತ್ತೆ?" ಕೇಳಿದಳು ಸನ್ನಿಧಿ.

"ಅದಕ್ಕೂ ಇದಕ್ಕೂ ಏನೇ ಸಂಬಂಧ! ಮಾಡಿ ಮಾಡಿ ಗೊತ್ತಾಗಿದೆ, ನಮ್ಮಮ್ಮ ಮಾಡಿದ್ದು ನೋಡಿದ್ದೆ, ಆಮೇಲೆ ನಾನೇ ಮಾಡಿದೀನಿ ಇಷ್ಟ ವರ್ಷ!" ಅಂದರು ಸೀತಮ್ಮ. "ಇದು ಹೀಗೆ ಅಮ್ಮ, ಈಗ ನಿನಗೆ ಎಷ್ಟು ಏನು ಹಾಕಬೇಕು, ಎಷ್ಟು ಉರಿಯಲ್ಲಿ ಬಿಸಿ ಮಾಡಬೇಕು ಎಲ್ಲಾ ಯಾರು ಹೇಳಬೇಕಾಗಿಲ್ಲ! ಅದನ್ನ ನೀನು ಕಲಿತಾಗಿದೆ ಅಲ್ವಾ?". "ನಾವು ಮಾಡೋ ಕೆಲಸ ಪ್ರೋಗ್ರಾಮ್ಮಿಂಗ್, ಅದನ್ನ ಕಂಪ್ಯೂಟರ್ ಅಲ್ಲಿ ಇಟ್ಟಿರ್ತೀವಿ, ಅದಕ್ಕೆ ಬೇಕಾಗೋ ಎಲ್ಲಾ ದಾಖಲೆಗಳನ್ನೂ ಇಟ್ಟಿರ್ತೀವಿ". "ಕೆಲವು ಕಂಪನಿಗಳು ಇಂಥ ಎಲ್ಲಾ ಟ್ರೈನಿಂಗ್ ಡೇಟಾ ತಗೊಂಡು AI ಗೆ ಕಲಿಸಿ ಅದನ್ನ ಒಂದು ಮಾಡೆಲ್ ಮಾಡಿ ಇಟ್ಟುಕೊತಾರೆ" ಎಂದು ಕಾಫಿ ಮುಗಿಸಿದಳು.

"ಮಿಲಿಂದ್ ಸೋಮನ ಅಥವಾ ಐಶ್ವರ್ಯಾ ರೈ ಅಂಥ ಮೋಡೆಲ್ಲಾ!" ಎಂದರು ರಾಯರು. "ಅಲ್ಲಪ್ಪ ಇದು ಕಂಪ್ಯೂಟರ್ ಮಾಡೆಲ್ ಇದು ಒಂದು ಫೈಲ್ ಅಷ್ಟೇ! ಅದರಿಂದ ಜ್ಞಾನ ಹೇಗೆ ತೆಗೆಯಬೇಕು ಅನ್ನೋದು ಕಂಪ್ಯೂಟರ್ಗಳಿಗೆ ಗೊತ್ತಿರುತ್ತದೆ"

ಸೀತಮ್ಮ: "ಹಾಗಾದ್ರೆ ನನ್ನ ಕಾಫಿ ಜ್ಞಾನನು ಒಂದು ಮಾಡೆಲ್ಲೇ! ಆದ್ರೆ ನನ್ನ ಫೈಲ್ ಯಾರ ಹತ್ರಾನೂ ಕೊಡಲ್ಲ, ಆ ಕಾಫಿ ರೆಸಿಪಿ ನನ್ಜೊತೇನೆ ಹೋಗೋದು!" ಎಲ್ಲರ ನಗು ಮನೆ ತುಂಬಿತು.

ಸೀತಮ್ಮ: "ಸರಿ ಬಿಡು, ಆ ಫೈಲ್‌ಗೆ ಒಂದು ಪ್ರಶ್ನೆ ಕೇಳಿದ್ರೆ ಉತ್ತರಾನೂ ಕೊಡುತ್ತಾ?"

ಸನ್ನಿಧಿ: "ಅದೇ ಇನ್ನೊಂದು ಕಥೆ ಅಮ್ಮ, ನಾಳೆ ಹೇಳ್ತೀನಿ!"