ಚಂಡೀಗಢದ ಸೆಕ್ಟರ್ 49ರಲ್ಲಿ ವಾಸವಾಗಿರುವ 88 ವರ್ಷದ ಬ್ರೂಮ್ ವಾರಿಯರ್ (ಕಸಪೊರಕೆ ಯೋಧ) ಎಂದು ಪ್ರಸಿದ್ಧರಾಗಿರುವ ಇಂದರ್ ಜೀತ್ ಸಿಂಗ್ ಸಿಧು ತಮ್ಮ ಇಳಿವಯಸ್ಸನ್ನೂ ಲೆಕ್ಕಿಸದೇ ಬೆಳಿಗ್ಗೆ 6ಗಂಟೆಗೆ ಎದ್ದು ತಮ್ಮ ಪರಿಸರದ ರಸ್ತೆಗಳನ್ನು ಸ್ವಚ್ಛಗೊಳಿಸಲು ಹೊರಡುತ್ತಾರೆ. ಅವರೇನು ಸಾಮಾನ್ಯ ಕಸ ಹೊಡೆಯುವ ಅಥವಾ ಗುಜರಿ ಹೆಕ್ಕುವ ವ್ಯಕ್ತಿ ಎಂದುಕೊಳ್ಳಬೇಡಿ. ಪಂಜಾಬಿನ ಸಂಗ್ರೂರ್ ಜಿಲ್ಲೆಯಲ್ಲಿ 1938ರಲ್ಲಿ ಜನಿಸಿದ ಈ ಹಿರಿಯರು 1960ರ ದಶಕದಲ್ಲೇ ಐಪಿಎಸ್ ಅಧಿಕಾರಿಯಾದವರು. 1996ರಲ್ಲಿ ಪಂಜಾಬಿನ ಡೆಪ್ಯುಟಿ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯಿಂದ ನಿವೃತರಾದವರು. ನಿವೃತ್ತಿಯ ನಂತರ ಇವರಿಗೇಕೆ ಕಸಹೆಕ್ಕುವ ದುರ್ಗತಿ ಬಂತು ಎಂದುಕೊಳ್ಳಬೇಡಿ.
ನಿವೃತ್ತಿಯ ನಂತರ ತಮ್ಮ ಪರಿಸರದ ರಸ್ತೆಗಳಲ್ಲಿನ ಮಾಲಿನ್ಯದ ಕುರಿತು ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದಾಗ ಏನೂ ಪ್ರಯೋಜನ ಆಗಲಿಲ್ಲ. ಆಗ ಅವರು ಸ್ವತ: ತಾವೇ ಕಸಪೊರಕೆ ಹಿಡಿದು ರಸ್ತೆಗಳನ್ನು ಗುಡಿಸಿದರು. ಮೊದಮೊದಲು ಜನರು ಅವರನ್ನು ಗೇಲಿ ಮಾಡಿದರು. ಜನರ ಪರಿಹಾಸ್ಯವನ್ನು ಲೆಕ್ಕಿಸದೇ, ಚಳಿ-ಮಳೆ ಎನ್ನದೇ, ಅನಾರೋಗ್ಯ-ಇಳಿವಯಸ್ಸನ್ನು ಲೆಕ್ಕಿಸದೇ ಅವರು ತಮ್ಮ ಕಾರ್ಯ ಮುಂದುವರೆಸಿದರು.
ಗತ್ತು ಗೈರತ್ತಿನ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದವರು ನಿವೃತ್ತಿಯ ನಂತರ ಬರುತ್ತಿದ್ದ ಕೈ ತುಂಬಾ ಪಿಂಚಣಿಯಲ್ಲಿ ಸುಖ-ನೆಮ್ಮದಿಯಿಂದ ಐಶಾರಾಮದ ಬದುಕನ್ನು ನಡೆಸಬಹುದಿತ್ತು. ನಿವೃತ್ತಿಯ ನಂತರವೂ ನನಗೆ.. ಗೌರವ ಸಿಗಲಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲ ಎಂದೆಲ್ಲಾ ರಾಗ ಆಲಾಪಿಸುವ ಹುದ್ದೆ ತ್ಯಜಿಸಿದ ರಾಜಕರಾರಣಿಗಳ-ನಿವೃತ್ತ ಉನ್ನತ ಅಧಿಕಾರಿಗಳನ್ನು ಕಾಣುತ್ತೇವೆ. ಕೆಲವು ಸೈನ್ಯಾಧಿಕಾರಿಗಳು ನಿವೃತ್ತಿಯ ನಂತರ ಸೇನಾ ನೆಲೆಗಳ ಹತ್ತಿರವೇ ನೆಲೆಸಿ ತಮ್ಮ ಬೇಕು ಬೇಡಗಳಿಗೆ ಸೇವೆಯಲ್ಲಿದ್ದಾಗ ತಮ್ಮ ಜ್ಯೂನಿಯರ್ ಆಗಿದ್ದ ಅಧಿಕಾರಿಗಳಿಗೆ ಕರೆ ಮಾಡುವುದನ್ನು ಕಂಡಿದ್ದೇನೆ. ಮೊನ್ನೆ ಮೊನ್ನೆ ರಾಜ್ಯದ ಹಿರಿಯ ರಾಜಕಾರಣಿಯೋರ್ವರು ವಿಧಾನಸೌಧದ ಬಳಿ ತಮ್ಮ ಕಾರು ಪಾರ್ಕಿಂಗ್ ಅವಕಾಶ ಕೊಡಲಿಲ್ಲ ಎಂಬ ವಿಷಯದಲ್ಲಿ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಪತ್ರಿಕೆಯಲ್ಲಿ ಓದಿದ್ದೆ. ಇಂತಹವರ ನಡುವೆ ಸಿಧು ಭಿನ್ನರಾಗಿ ಕಾಣುತ್ತಾರೆ. ಇದಲ್ಲವೇ ನಿಜವಾದ ಪರಿಸರ ಪ್ರೀತಿ?
ಹೌದು. ಅವರು ಓರ್ವ ಸಂತನoತೆ ಸಮಾಜಕ್ಕಾಗಿ ಬದುಕುತ್ತಿದ್ದಾರೆ. ಸಮಾಜಕ್ಕಾಗಿ ಮಾಡುವ ಯಾವುದೇ ಕೆಲಸ ಕೀಳಲ್ಲ ಎನ್ನುವ ಇಂದರ್ ಜೀತ್ ಸಿಂಗ್ ಸಿಧು Cleanliness is godliness ಎನ್ನುತ್ತಾರೆ. ಸಿಖ್ಖರ ಗುರು ಗುರುನಾನಕರ ಬೋಧನೆಯಿಂದ ಸ್ಫೂರ್ತಿ ಪಡೆದು ಪ್ರಕೃತಿಯನ್ನು ಸ್ವಚ್ಛವಿರಿಸುವುದು ನಮ್ಮ ನೈತಿಕ ಜವಾಬ್ಧಾರಿ ಎನ್ನುತ್ತಾರೆ. ವಾಯು ನಮ್ಮ ಗುರು, ನೀರು ತಂದೆ ಮತ್ತು ಭೂಮಿ ನಮ್ಮ ತಾಯಿ ಎನ್ನುವ ಸಿಧು ಯಾರಾದರೂ ಭೂಮಿಯನ್ನು ಹೊಲಸು ಮಾಡುತ್ತಾರಾದರೆ ಅವರಿಗಿಂತ ಕೀಳು ದರ್ಜೆಯ ವ್ಯಕ್ತಿ ಮತ್ತೊಬ್ಬರಿಲ್ಲ ಎನ್ನುತ್ತಾರೆ.
ದಶಕಗಳಿಂದ ಸ್ವಚ್ಛತೆಯ ದಿನಚರಿಯನ್ನು ರೂಢಿಸಿಕೊಂಡಿರುವ ಅವರು ಎಂದೂ ತಮ್ಮ ಕೆಲಸದ ಪ್ರಚಾರ ಮಾಡಿಕೊಂಡವರಲ್ಲ. ಸ್ವಚ್ಛ ಭಾರತದ ದೊಡ್ಡ ಬ್ಯಾನರ್ ಕಟ್ಟಲಿಲ್ಲ. ಭಾಷಣ ಕೊರೆಯಲಿಲ್ಲ. ಉಪದೇಶ ಮಾಡಲಿಲ್ಲ. ಅವರದೇನಿದ್ದರೂ ಕೈಯಲ್ಲಿ ಸಾಮಾನ್ಯ ಪೊರಕೆ, ತಳ್ಳುಗಾಡಿಯೊಂದಿಗಿನ ಸ್ವಚ್ಛತೆಯ ದಿನಚರಿ. ಸ್ವಚ್ಛತೆಯ ಕ್ರಮಾಂಕದಲ್ಲಿ ಚಂಡೀಗಢ ಹಿಂದುಳಿದಿರುವುದಕ್ಕೆ ಅವರಲ್ಲಿ ಬೇಸರವಿತ್ತು. ಚಂಡೀಗಢ ಭಾರತದ ನಂಬರ್ ಒನ್ ಸ್ವಚ್ಛ ನಗರವಾಗಬೇಕೆಂಬ ಕನಸು ಕಂಡವರು. ಹಾಗೆಂದು ಅವರು ಸುಮ್ಮನೆ ಕೂರಲಿಲ್ಲ. ಸ್ವತ: ಪೊರಕೆ ಹಿಡಿದು ಬೀದಿಗಳನ್ನು ಸ್ವಚ್ಛಗೊಳಿಸಿದರು. ತಮ್ಮ ಕಾರ್ಯದಿಂದ ಪರಿವರ್ತನೆ ಮಾಡಲು ಹೊರಟರು. ವಿದೇಶದ ರಸ್ತೆಗಳು ಸ್ವಚ್ಛ ಎನ್ನುವವರೊಂದಿಗೆ ನಮ್ಮಲ್ಲಿ ಏಕೆ ಸಾಧ್ಯವಿಲ್ಲ ಎಂದು ಸವಾಲೆಸೆದರು. 2025ರಲ್ಲಿ ಈ ಹಿರಿಯರ ಪರಿಸರ ಪ್ರೇಮ ವೈರಲ್ ಆಯಿತು. ಉದ್ಯಮಿ ಆನಂದ ಮಹೀಂದ್ರ ಮತ್ತಿತರು ಇವರ ಸೇವೆಯನ್ನು ಕೊಂಡಾಡಿ ಬರೆದರು.
ಭಾರತ ಸರ್ಕಾರ ಸಿಧು ಅವರ ಸ್ವಚ್ಛತಾ ಅಭಿಯಾನವನ್ನು ಪರಿಗಣಿಸಿ ಅವರಿಗೆ 2026ರಲ್ಲಿ ಪದ್ಮಶ್ರಿ ನೀಡಿ ಸಮ್ಮಾನಿಸಿದೆ. ಅವರ ಕಾರ್ಯ ಅದೆಷ್ಟೋ ಜನರಿಗೆ ಪ್ರೇರಣೆ ನೀಡಿದೆ. ಮೊದಲು ಅವರನ್ನು ನೋಡಿ ಗೇಲಿ ಮಾಡಿದ ಚಂಡೀಗಢದ ಜನತೆ ನಂತರ ಅವರ ಬೆಂಬಲಕ್ಕೆ ನಿಂತರು. ತಮ್ಮ ಆಸುಪಾಸು ಸ್ವಚ್ಛತಾ ಕಾರ್ಯ ನಡೆಸಿ ಬೆಂಬಲಿಸಿದರು. ಸಿಧು ಎಂದೂ ತಮ್ಮ ಕಾರ್ಯಕ್ಕೆ ಮಾನ್ಯತೆ ಸಿಗಬೇಕೆಂದು ಅಪೇಕ್ಷಿಸಲಿಲ್ಲ. ಅಧಿಕಾರದಲ್ಲಿದ್ದಾಗಲೂ ನಿವೃತ್ತಿಯ ನಂತರವೂ ಅಹಂಕಾರದ ಅಮಲಿನಲ್ಲಿ ಮೈಮರೆಯುವ ಜನರ ನಡುವೆ ಅವರು ಸಾಮಾನ್ಯ ಸ್ವಚ್ಛತಾಕರ್ಮಿಯಂತೆ ಕಾಣುತ್ತಾರೆ. ಡೆಪ್ಯುಟಿ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್ ನಂತಹ ಉನ್ನತ ಹುದ್ದೆಯಿಂದ ನಿವೃತ್ತರಾದ ವ್ಯಕ್ತಿಯಂತೆ ದೂರದೂರದವರೆಗೂ ಕಾಣುವುದಿಲ್ಲ. ಇವರಲ್ಲವೇ ನಿಜವಾದ ಸಂತ ಪರಂಪರೆಯನ್ನು ಎತ್ತಿ ಹಿಡಿದವರು? ಇದಲ್ಲವೇ ನಿಜವಾದ ಪರಿಸರ ಪ್ರೇಮ?
ಈ ದೇಶ, ಸಮಾಜ ನಮಗೆ ಬಹಳಷ್ಟು ಕೊಟ್ಟಿದೆ. ನಮ್ಮಲ್ಲೂ ಆ ಜವಾಬ್ಧಾರಿ ಇರಬೇಡವೇ?ಎಲ್ಲವನ್ನೂ ಯಾರೋ ಮಾಡಲಿ ಎಂದು ಅಪೇಕ್ಷಿಸುವುದು ಎಷ್ಟು ಸರಿ? ನಮ್ಮಿಂದಾದಷ್ಟು ಸಮಾಜಕ್ಕಾಗಿ, ದೇಶಕ್ಕಾಗಿ ನಾವು ಮಾಡಬೇಕು ಎಂಬ ಕರ್ತವ್ಯಪ್ರಜ್ಞೆ ನಮ್ಮಲ್ಲಿ ಇರಬೇಕಲ್ಲವೇ? ಗುಡ್ಡಬೆಟ್ಟ-ನದಿ-ಸಮುದ್ರವಿಹಾರಕ್ಕೆ ಹೋದವರು ಅಲ್ಲೇ ತಿಂದುoಡು ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡುವವರಿಗೆ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ ಎಂಬ ಜ್ಞಾನ ಯಾವಾಗ ಬರುವುದು? ಒಲೆ ಹತ್ತಿ ಉರಿದಡೆ ನಿಲಲಬಹುದಲ್ಲದೇ ಧರೆ ಹತ್ತಿ ಉರಿದಡೆ ನಿಲಲುಬಾರದು ಎಂದಿದ್ದಾರೆ ಬಸವಣ್ಣನವರು. ಪ್ರಕೃತಿ ಮುನಿದರೆ ನಮ್ಮ ಬದುಕು ತರಗೆಲೆಗಳಂತೆ ಆಗುವುದೆನ್ನುವುದನ್ನು ಮರೆಯದಿರೋಣ.
-ಬೈಂದೂರು ಚಂದ್ರಶೇಖರ ನಾವಡ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!