ನಗಿಸುವುದು ಖಂಡಿತಾ ಸುಲಭದ ಕೆಲಸ ಅಲ್ಲ. ನಮ್ಮೂರಿನ ಸಂಸ್ಥೆಯೊಂದು ಪ್ರಸಿದ್ಧ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್‌ರನ್ನು ಕಾರ್ಯಕ್ರಮಕ್ಕೆ ಕರೆಯಲು ಬಯಸಿ ಫೋನ್‌ ಮೂಲಕ ಸಂಪರ್ಕಿಸಿದ್ದರು. ಆಗ ಅವರು ನಿಮ್ಮೂರಿಗೆ ಬರಲು ಸಾಧ್ಯ ಇಲ್ಲ ಎಂದರಂತೆ. ಕಾರಣ ಕೇಳಿದ್ದಕ್ಕೆ ನಿಮ್ಮ ಕುಂದಾಪುರ-ಉಡುಪಿ ಕಡೆಯ ಜನರು ಬಹಳ ಗಂಭೀರ ಸ್ವಭಾವದವರು. ಅವರಿಗೆ ಹಾಸ್ಯಪ್ರಜ್ಞೆ ಇಲ್ಲ. ಏನೇ ಹಾಸ್ಯ ಮಾಡಿದರೂ ನಮ್ಮಲ್ಲಿಯ ಜನರಂತೆ ಪ್ರತಿಕ್ರಿಯೆ ತೋರದೇ ಬಿಗುವಾಗಿ ಕುಳಿತಿರುತ್ತಾರೆ ಎಂದರಂತೆ. ಉತ್ತರ ಕರ್ನಾಟಕದಲ್ಲಿ ಭಾರೀ ಬೇಡಿಕೆಯ ಈ ಹಾಸ್ಯ ಭಾಷಣಕಾರನಿಗೆ ಆಯೋಜಕರು “ ನಮ್ಮ ಜನ ಹಾಸ್ಯವನ್ನು ಇಷ್ಟ ಪಡುತ್ತಾರೆ. ಜೋರಾಗಿ ಶಿಳ್ಳೆ ಹಾಕುವುದು, ಕೇಕೆ ಹಾಕಿ ಅರಚುವುದಿಲ್ಲ ನಿಜ. ಅವರಿಗೆ ನಿಮ್ಮ ಮಾತು ಇಷ್ಟವಾದರೆ ಕುಳಿತು ಕೇಳುತ್ತಾರೆ.‌ ಶಾಂತವಾಗಿ ಕುಳಿತು ಕೇಳುತ್ತಿದ್ದಾರೆ ಎಂದರೆ ಇಷ್ಟವಾಯಿತೆಂದೇ ತಿಳಿಯಿರಿ. ಇಷ್ಟವಾಗದಿದ್ದರೆ ಎದ್ದು ಹೋಗುತ್ತಾರೆ ಅಷ್ಟೇ” ಎಂದು ಸಮಜಾಯಿಷಿ ನೀಡಿದಾಗ ಪ್ರಾಣೇಶ್‌ ಅವರು ಬರಲು ಒಪ್ಪಿದರಂತೆ.

ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನರನ್ನು ನಗಿಸುವುದು ಕೊಂಚ ಕಷ್ಟದ ಕೆಲಸ ಹೌದು. ಮಾತು ಮಾತಿಗೆ ಸೂ..ಬೋ.. ಎಂದು ಕರೆದುಕೊಳ್ಳುವ ಬೈಗುಳದ-ಅಶ್ಲೀಲ ಹಾಸ್ಯ ಚಟಾಕಿಗಳನ್ನು ನಮ್ಮ ಪ್ರಜ್ಞಾವಂತ ಜನ ಕೀಳು ದರ್ಜೆಯ ತಮಾಷೆಯ ಶ್ರೇಣಿಯಲ್ಲಿಡುತ್ತಾರೆ. ವೇದಿಕೆಯಲ್ಲಿ ಅಂತಹ ಸಂಭಾಷಣೆ ಅಥವಾ ಹಾಸ್ಯವನ್ನು ಜನರು ಇಷ್ಟಪಡುವುದಿಲ್ಲವಾದರೆ ಅದು ನಮ್ಮ ಪ್ರಬುದ್ಧತೆಯ ಲಕ್ಷಣ. ಉತ್ತರ ಕರ್ನಾಟಕದ ಬಹುಭಾಗದ ಹಾಸ್ಯದಲ್ಲಿ ಹಾಸುಹೊಕ್ಕಾಗಿರುವ ಅಂತಹ ಶಬ್ಧಗಳು ನಮ್ಮಲ್ಲಿ ಕೀಳು ಮಟ್ಟದ ಹಾಸ್ಯ ಎಂದು ಪರಿಗಣಿಸಲ್ಪಡುತ್ತವೆ. ಯಕ್ಷಗಾನ-ತಾಳಮದ್ದಲೆಗಳಲ್ಲೂ ಹಾಸ್ಯದ ಹೆಸರಲ್ಲಿ ಅಸಂಬದ್ಧ ಮಾತು ಕೇಳಿದಾಗ ಜನ ಬೇಜಾರುಪಟ್ಟುಕೊಂಡು ಎದ್ದು ಹೋಗುತ್ತಾರೆ.

ಸಮಾಜದ ಅಂಕು-ಡೊಂಕನ್ನು ಎತ್ತಿ ತೋರಿಸುತ್ತ ಹಾಸ್ಯಭರಿತ ಚುಟುಕುಗಳಿಂದ ರಂಜಿಸಿದ ದಿನಕರ ದೇಸಾಯಿ, ಡುಂಡಿರಾಜರಂತಾಗಲು ಎಲ್ಲರಿಂದ ಸಾಧ್ಯವಿಲ್ಲ. ನಗೆಯುಕ್ಕಿಸುವ ಕಾರ್ಟೂನುಗಳನ್ನು ರಚಿಸಿ ರಂಜಿಸುತ್ತಿದ್ದ ಆರ್‌ ಕೆ ಲಕ್ಷ್ಮಣ್‌ ಅವರ ಪ್ರತಿಭೆ ಅಸಾಧಾರಣ ಹಾಗೂ ಅನನ್ಯ. ತಮ್ಮ ಅಭಿನಯ-ಅಭಿವ್ಯಕ್ತಿಯಿಂದಲೇ ನಗೆಯ ಹೊನಲು ಹರಿಸುತ್ತಿದ್ದ ಆಂಗ್ಲ ನಟ ಚಾರ್ಲಿ ಚಾಪ್ಲಿನ್‌ರಂತೆ ಕನ್ನಡ ಸಿನಿಮಾದಲ್ಲಿ ದಿವಂಗತ ನರಸಿಂಹ ರಾಜು ಅವರ ಅಭಿನಯದಲ್ಲಿ ಎಲ್ಲಿಯೂ ಅಶ್ಲೀಲತೆಯಾಗಲೀ, ಆಕ್ಷೇಪಾರ್ಹವಾಗಲೀ ಕಾಣಿಸುವುದೇ ಇಲ್ಲ. ತಮ್ಮನ್ನೇ ಹಾಸ್ಯದ ವಸ್ತುವಾಗಿರಿಸಿಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅಜಾತಶತ್ರು ಎನಿಸಿದ್ದರು. ನಾನು ಅವಿವಾಹಿತನಾಗಿ ಉಳಿದಿರಬಹುದು, ಆದರೆ ಎಂದಿಗೂ ಬ್ರಹ್ಮಚಾರಿಯಾಗಿ ಉಳಿಯಲಿಲ್ಲ ಎನ್ನುವ ಅವರ ಧೀಮಂತಿಕೆಯ ಹಾಸ್ಯ ಅನುಕರಣೀಯ.

ಹಾಸ್ಯಕ್ಕೆಂದು ಹೇಳಿದ್ದು ಕೆಲವೊಮ್ಮೆ ವಿವಾದದ ಕಿಡಿ ಹೊತ್ತಿಸಿ ಬಿಡುತ್ತದೆ. ಜಾತಿ, ಧರ್ಮ, ರೀತಿ-ರಿವಾಜುಗಳ ಮಾನ-ಸಮ್ಮಾನ, ಅಭಿಮಾನ-ಸಂವೇದನೆಗಳು ಹೆಚ್ಚಾಗಿ ನಾವಿಂದು ಅತಿ ಸಂವೇದನಾಶೀಲರಾಗಿಬಿಟ್ಟಿದ್ದೇವೆ. ಡಿಜಿಟಲ್‌ ಯುಗದ ಸುದ್ದಿ ಮಾಧ್ಯಮಗಳು, ಜಾಲತಾಣಗಳು, ಸ್ವತಂತ್ರ ದೃಶ್ಯ ಮಾಧ್ಯಮ ವರದಿಗಾರರು ಸಂದರ್ಭದಿಂದ ಹೊರತೆಗೆದು ಕಡ್ಡಿಯನ್ನು ಗುಡ್ಡ ಮಾಡಿ ಕಿಡಿ ಹೊತ್ತಿಸಿಬಿಡುತ್ತಾರೆ. ಹಲವು ವರ್ಷಗಳ ಹಿಂದೆ ವಿವಾದವಾಗದ ಮಾತು ಈಗ ವಿವಾದ ಆಗಿಬಿಡುತ್ತಿದೆ. ಸಲುಗೆಯಿಂದ ಹೇಳಿದ್ದನ್ನು ಅಪಾರ್ಥವಾಗಿಸಿಕೊಂಡು ಆವಾಂತರ ಮಾಡಿ ಬಿಡುತ್ತೇವೆ. ಹಾಗಾಗಿ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಕತೆ ಮುಗಿಯಿತು ಎಂಬಂತಾಗಿದೆ,

ಆಡಿದ ಮಾತನ್ನು ಹಿಂದೆಗೆದುಕೊಂಡರೂ ಅದು ಮನಸ್ಸಿನ ಮೇಲೆ ಬೀರಿದ ಪ್ರಭಾವ ಉಳಿದೇ ಬಿಡುತ್ತದೆ. ಶರೀರಕ್ಕೆ ಆದ ಗಾಯ ಸ್ವಲ್ಪ ಸಮಯದಲ್ಲೇ ವಾಸಿಯಾಗುತ್ತದೆ. ಆದರೆ ಮನಸ್ಸಿಗೆ ಆದ ನೋವು ದೀರ್ಘ ಕಾಲ ಕಾಡುತ್ತದೆ. ಉಕ್ಕಿನ ಮನುಷ್ಯ ಎನಿಸಿದ್ದ ಲಾಲಕೃಷ್ಣ ಅಡ್ವಾಯಣಿಯವರು 2005 ರಲ್ಲಿ ಪಾಕಿಸ್ತಾನಕ್ಕೆ ಹೋದಾಗ ಮೊಹಮದ್‌ ಅಲಿ ಜಿನ್ನಾ ಮ್ಯೂಸಿಯಂನಲ್ಲಿ ಜಿನ್ನಾರನ್ನು ಹೊಗಳಿ ಅವರೊಬ್ಬ ಮಹಾನ್‌ ನಾಯಕ, ಸೆಕ್ಯುಲರ್‌ ರಾಜಕಾರಣಿ ಎಂದು ಬರೆದರು. ಅವರ ಅದೊಂದು ಹೇಳಿಕೆ ಅವರ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಕೋಪಕ್ಕೆ ಕಾರಣವಾಯಿತು. ಹಿಂದುತ್ವದ ಹರಿಕಾರರಾಗಿ ಕೀರ್ತಿಯ ಶಿಖರದಲ್ಲಿದ್ದ ಅಡ್ವಾಣಿ ಪಕ್ಷದ ಕಾರ್ಯಕರ್ತರ ದೃಷ್ಟಿಯಿಂದ ಕೆಳಗೆ ಬಿದ್ದು ಬಿಟ್ಟರು. ರಾಮಜನ್ಮಭೂಮಿ ಆಂದೋಲನದ ಮೂಲಕ ಜನಪ್ರಿಯರಾಗಿದ್ದ ಅವರ ವರ್ಚಸ್ಸಿಗೆ ಒಂದು ಸಣ್ಣ ಮಾತಿನಿಂದ ಧಕ್ಕೆಯಾಯಿತು.

ಹಾಸ್ಯವೂ ಹಾಗೆಯೆ. ಹಳಿ ತಪ್ಪದಂತೆ ಜಾಗ್ರತೆ ವಹಿಸುವ ಅಗತ್ಯ ಇದೆ . ಇಷ್ಟ ಆಗದಿದ್ದರೆ ಕುಟುಂಬದ, ನಾಲ್ಕು ಗೋಡೆಯ ನಡುವೆ, ಸಂಬಂಧಿಗಳ ಮಧ್ಯೆ ನಡೆದ ಹಾಸ್ಯವೂ ಸಂಬಂಧ ಕೆಡಿಸಲು ಕಾರಣವಾಗಬಹುದು. ಮನೆಯೊಳಗಿನ ಮಕ್ಕಳು, ಕಿರಿಯ ಸದಸ್ಯರೂ ಸಹ ಹಿರಿಯರ ನಕಾರಾತ್ಮಕ ಹಾಸ್ಯವನ್ನು ವಿರೋಧಿಸಬಹುದು. ಎಷ್ಟೋ ಸಂದರ್ಭದಲ್ಲಿ ಸಣ್ಣ ಮಕ್ಕಳು ಎಂದು ಅವರಿಗೆ ಮಾಡಿದ ತಮಾಷೆ ಮಕ್ಕಳ ಮುನಿಸಿಗೆ ಕಾರಣವಾಗುತ್ತದೆ. ಎಂದ ಮೇಲೆ ಸಾರ್ವಜನಿಕವಾಗಿ ಮಾಡುವ ತಮಾಷೆ ಆರೋಗ್ಯಕರವಾಗಿದ್ದರೇ ಚೆನ್ನ. ಲೋಕೋ ಭಿನ್ನ ರುಚಿ. ಮೂರನೇ ವ್ಯಕ್ತಿಯ ಮೇಲಿನ ಹಾಸ್ಯಕ್ಕಿಂತ ನಮ್ಮ ಮೇಲೇ ನಾವೇ ಹಾಸ್ಯ ಮಾಡಿಕೊಳ್ಳುವುದು ಸೂಕ್ತ. ಒಟ್ಟಿನಲ್ಲಿ ಹಾಸ್ಯ ಈಗ ಸುಲಭವಾಗಿ ಜೀರ್ಣವಾಗದ ವ್ಯಂಜನ. ಉಗುಳುವವರು ನುಂಗುವವರು ಇಬ್ಬರೂ ಎಚ್ಚರವಾಗಿರಬೇಕು.

---ಬೈಂದೂರು ಚಂದ್ರಶೇಖರ ನಾವಡ