ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಜೆಪಿ ನಗರದಿಂದ ಮೆಜಿಸ್ಟಿಕ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ. ಅದುವರೆಗೆ ಖಾಲಿ ಇದ್ದ ರೈಲು ಆರ್‌ ವಿ ರೋಡ್ ಸ್ಟೇಷನ್ನಿಗೆ ಬಂದಾಗ ಒಮ್ಮೆಲೇ ಪ್ರಯಾಣಿಕರ ನೂಕು ನುಗ್ಗಲು ಸ್ಥಿತಿ ಉಂಟಾಯಿತು. ಕ್ಲೀನ್‌ ಶೇವ್‌, ಪ್ಯಾಂಟ್‌ ಇನ್‌ ಷರ್ಟ್‌ನಲ್ಲಿ ಆಕರ್ಷಕ ವ್ಯಕ್ತಿತ್ವದ ಮಧ್ಯ ವಯಸ್ಸಿನ ವ್ಯಕ್ತಿ ಓರ್ವರು ನನ್ನ ಪಕ್ಕದಲ್ಲಿ ಖಾಲಿ ಇದ್ದ ಆಸನದಲ್ಲಿ ಬಂದು ಕುಳಿತುಕೊಂಡರು. ಅವರ ಹಾವ ಭಾವ, ಗಾಂಭೀರ್ಯದ ನಡೆಯಿಂದ ಮೆಟ್ರೋದಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಸರ್ಕಾರಿ ಅಥವಾ ಅರೆ ಸರ್ಕಾರಿ ನಿಗಮದ ಉದ್ಯೋಗಿ ಇರಬಹುದೆಂದುಕೊಂಡೆ. ನೂಕು ನುಗ್ಗಲಲ್ಲಿ ಅವರಿಗಿಂತ ಕೊಂಚವಷ್ಟೇ ಹಿರಿಯರಿರಬಹುದೆನ್ನುವ ವ್ಯಕ್ತಿಯೋರ್ವರು ನುಗ್ಗಿ ಬಂದು ಅವರೆದುರು ನಿಂತರು. ಕುಳಿತ ವ್ಯಕ್ತಿಯತ್ತ ಕೊಂಚ ಒರಟಾಗಿಯೇ “ಏಳಿ ಏಳಿ ನಾನು ಕುಳಿತುಕೊಳ್ಳಬೇಕು..” ಎಂದರು.

ಕುಳಿತವರು ಪ್ರಶ್ನಾರ್ಥಕ ದೃಷ್ಟಿಯಿಂದ ಕೆಲವು ಸೆಕೆಂಡು ಆಗಂತುಕನತ್ತ ನೋಡಿದರು. ನಿಂತ ವ್ಯಕ್ತಿ ಪುನ: ಮುಂದುವರೆದು “ನೋಡಿ, ನನಗೆ ಕಾಲು ನೋವಿದೆ. ನೀವು ನನಗಿಂತ ಸಣ್ಣವರು. ಏಳಿ ನನಗೆ ಸೀಟು ಬಿಟ್ಟುಕೊಡಿ” ಎಂದರು. ಅದು ಯಾಚಕನ ದನಿಯಂತಿರದೇ, ತನ್ನ ವಯಸ್ಸಿನ ಕಾರಣದಿಂದ ಅಧಿಕಾರಯುತವಾಗಿ ಸೀಟು ಕಿತ್ತುಕೊಳ್ಳುವವನ ದನಿಯಂತಿತ್ತು. ಕುಳಿತವರು ಸೀಟು ಬಿಡುವುದಿಲ್ಲ ಎಂದರೆ ಏನೋ ದೊಡ್ಡ ರಾದ್ಧಾಂತ ನಡೆಯಬಹುದೇನೋ ಎಂದುಕೊಂಡೆ. ಸೀಟಿನಲ್ಲಿ ಆರಾಮಾಗಿ ಕುಳಿತ ವ್ಯಕ್ತಿ ಒಂದರೆಕ್ಷಣ ಅವರನ್ನು ದಿಟ್ಟಿಸಿ ನೋಡಿದರು. ಕೆಲವು ಸೆಕೆಂಡುಗಳ ನಂತರ ಅವರು ಮೌನವಾಗಿ ಮತ್ತು ಅಷ್ಟೇ ಘನಗಾಂಭೀರ್ಯದಿಂದ ಆಸನ ತೆರವು ಮಾಡಿದರು. ಈ ನಡುವಿನ ಕೆಲವು ಸೆಕೆಂಡುಗಳಲ್ಲಿ ಅವರ ಮನಸ್ಸಿನಲ್ಲಿ ಅನೇಕ ಅವ್ಯಕ್ತ ಪ್ರಶ್ನೆಗಳು ಎದ್ದಿರಬಹುದು. ಈ ವ್ಯಕ್ತಿ ಎಷ್ಟು ಒರಟಾಗಿ ತನಗೆ ಸೀಟು ಬಿಟ್ಟುಕೊಡುವಂತೆ ದಬಾಯಿಸುತ್ತಿರುವನಲ್ಲ…? ನನಗಿಂತ ಈತ ಅಬ್ಬಬ್ಬಾ ಎಂದರೆ 7-8 ವರ್ಷ ದೊಡ್ಡವನಿರಬಹುದು. ನಾನು ಇವನಿಗೆ ಸೀಟು ಬಿಟ್ಟು ಕೊಡಬೇಕೇ…? ಎಂದೆಲ್ಲಾ ಪ್ರಶ್ನೆಗಳು ಉದ್ಭವವಾಗಿರಬಹುದೇನೋ..ಅವರ ಮನಸ್ಸಿನಲ್ಲಿ. ಸೀಟು ಕೇಳುವವರು ಸ್ವಲ್ಪ ನಯವಾಗಿ ಕೇಳಬಾರದಿತ್ತೇ ಅಂದುಕೊಂಡೆ ಮನಸ್ಸಿನಲ್ಲೇ.

ಆದರೂ ಸೀಟಿನಲ್ಲಿ ಕುಳಿತ ಆ ಅಜಾನುಬಾಹು ವ್ಯಕ್ತಿ ಸಹನಾಮೂರ್ತಿಯಂತೆ ಕಂಡರು. ಒಂದೇ ಒಂದೇ ಮಾತಾಡಲಿಲ್ಲ. ತಾನೇಕೆ ಸೀಟು ಬಿಡಬೇಕು? ಈ ಸೀಟೇನೂ ಹಿರಿಯ ನಾಗರಿಕರಿಗೆ ರಿಸರ್ವ್‌ ಆಗಿದೆಯೇ? ಎಂದು ಪ್ರಶ್ನೆ ಮಾಡಲಿಲ್ಲ. ಗೊಣಗಲಿಲ್ಲ. ತಮ್ಮ ಸೀಟನ್ನು ಗೌರವಯುತವಾಗಿಯೇ ಬಿಟ್ಟುಕೊಟ್ಟರು. ಇದಲ್ಲವೇ? ದೊಡ್ಡ ಮನಸ್ಸು? ಅವರ ಸ್ಥಳದಲ್ಲಿ ನಾನಾಗಿದ್ದರೆ ಹಾಗೆ ಮಾಡಲು ನನ್ನಿಂದ ಸಾಧ್ಯವಾಗುತ್ತಿತ್ತೇ ಎಂದು ಆಲೋಚಿಸುತ್ತಿದ್ದೆ. ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಎಂದು ಬರೆದಿರುವ ಸೀಟಿನಲ್ಲೇ ಯುವಕ-ಯುವತಿಯರು ಕುಳಿತುಕೊಂಡಿರುತ್ತಾರೆ. ಹಿರಿಯ ನಾಗರಿಕರನ್ನು ಕಂಡರೂ ಕ್ಯಾರೇ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತಿರುತ್ತಾರೆ. ಅಧಿಕಾರದ ಕುರ್ಚಿಯಾಗಲೀ ಅಥವಾ ಬಸ್ಸಿನ ಸೀಟಾಗಲಿ ತಮಗೆ ಸಿಕ್ಕಿದ್ದನ್ನು ತಾವಾಗಿಯೇ ಖುಷಿಯಿಂದ ಬಿಟ್ಟು ಕೊಡುವುದು ಉದಾರತನ. ಅಷ್ಟು ಸುಲಭವಾಗಿ ನಮ್ಮದನ್ನು ಇತರರಿಗೆ ಬಿಟ್ಟು ಕೊಡಲು ನಮ್ಮ ಬಡಪೆಟ್ಟಿಗೆ ಒಪ್ಪುವುದಿಲ್ಲ. ಹಿಂದೆಲ್ಲಾ ಹಿರಿಯರಿಗೆ ಸೀಟು ಬಿಟ್ಟುಕೊಡುವ ಸಂಸ್ಕಾರ ಇತ್ತು. ಇತ್ತೀಚೆಗೆ ಹಿರಿಯರನ್ನು ಆದರಿಸುವ, ಗೌರವಿಸುವ ಸಂಸ್ಕಾರದ ಒರತೆ ಕ್ಷೀಣವಾಗುತ್ತಿದೆ.

ರೈಲು ಮೆಜೆಸ್ಟಿಕ್‌ ತಲುಪುತ್ತಿದ್ದಂತೆ ನಾನು ಇಳಿಯಲು ಸಿದ್ಧನಾದೆ. ನನ್ನ ಪಕ್ಕದಲ್ಲೇ ಕುಳಿತಿದ್ದ ಆ ಹಿರಿಯ ನಾಗರಿಕ ತಮಗೆ ಸೀಟು ಬಿಟ್ಟು ಕೊಟ್ಟಿದ್ದ ಮಧ್ಯವಯಸ್ಕರನ್ನು ಕರೆದು “ಬಾರಪ್ಪಾ ಕುಳಿತುಕೋ” ಎಂದರು. “ನೋಡಪ್ಪಾ, ನನಗೆ ನಿಂತುಕೊಂಡು ಪ್ರಯಾಣ ಮಾಡುವುದು ಕಷ್ಟ. ಹಾಗಾಗಿ ನಿನ್ನನ್ನು ಏಳಿಸಬೇಕಾಯ್ತು” ಎಂದರು. ಈಗ ಅವರ ದನಿ ಕೊಂಚ ಮೆತ್ತಗೆ ಇತ್ತು. ಸೀಟು ಕೇಳುವಾಗಲೂ ಹೀಗೆ ನಯವಿನಯದಲ್ಲೇ ಕೇಳಬಹುದಿತ್ತಲ್ಲ ಎಂದುಕೊಂಡೆ. ತನ್ನ ಸೀಟು ಬಿಟ್ಟುಕೊಟ್ಟ ಆ ಸಹೃದಯಿ ವ್ಯಕ್ತಿಯ ನಡತೆ ನನ್ನನ್ನು ತುಂಬಾ ಪ್ರಭಾವಿಸಿತು. ಅವರು ನಾನು ತೆರವು ಮಾಡಿದ ಸೀಟಿನಲ್ಲಿ ಕುಳಿತುಕೊಂಡರು. “ನೀವು ನಿಜವಾಗ್ಲೂ ಗ್ರೇಟ್‌ ಸರ್‌, ಬಹಳ ಸುಲಭವಾಗಿ ಸೀಟು ಬಿಟ್ಟುಕೊಟ್ರಿ…” ಎಂದು ಅವರಿಗೆ ಸೆಲ್ಯೂಟ್‌ ಹೇಳಿದೆ. ಅವರು ಮಂದಹಾಸ ಬೀರಿದರು. ಅವರಿಬ್ಬರ ನಡುವೆ ಈಗ ಸಂವಾದವೂ ಶುರುವಾಗಿತ್ತು.

ಬದುಕು ಹೀಗೆಯೇ. ತಾಳಿದವನು ಬಾಳಿಯಾನು. ಸಹನೆ ಇದ್ದರೆ ಬದುಕು ಸುಂದರ. ದಕ್ಕಿದ್ದನ್ನೂ ಅನ್ಯರಿಗಾಗಿ ಕೊಡುವ ಉದಾರತೆ, ಬಿರುನುಡಿಯನ್ನು ಸಹಿಸುವ ಶಕ್ತಿ, ಕಷ್ಟವನ್ನು ಎದುರಿಸುವ ಸಹಿಷ್ಣುತೆ ಇದ್ದರೆ ಶಾಂತಿ-ಸಮಾಧಾನ-ಯಶಸ್ಸು ನಮ್ಮನ್ನು ಅರಸಿಕೊಂಡು ಬರುತ್ತದೆ. ಎಷ್ಟೋ ಬಾರಿ ಕ್ಷುಲ್ಲಕ ಕಾರಣಕ್ಕೆ ಸಹನೆ ಕಳೆದುಕೊಳ್ಳುತ್ತೇವೆ. ಸಹನೆಯಿಂದ ಬಂದಿದ್ದು ಎದುರಿಸುವುದು, ಶಾಂತರಾಗಿ ಎದುರಿನವರ ಮಾತು ಕೇಳುವ ಸೌಮ್ಯತೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ಕೊಡುತ್ತದೆ. ಇದು ಸಾಮಾನ್ಯರಿಗೂ, ಅಧಿಕಾರದ ಕುರ್ಚಿಗಾಗಿ ಕಾದಾಡುವವರಿಗೂ ಸಮಾನವಾಗಿ ಅನ್ವಯಿಸುತ್ತದೆ.

-- ಬೈಂದೂರು ಚಂದ್ರಶೇಖರ ನಾವಡ