ರಕ್ಷಣಾ ಬಜೆಟ್ಟಿನ ದೊಡ್ಡ ಪಾಲು ಸೈನಿಕರ ವೇತನ-ಪೆನ್ಷನ್‌ಗೆ ವ್ಯಯವಾಗುತ್ತಿರುವುದನ್ನು ತಡೆಯಲು ಅಗ್ನಿಪಥ ಯೋಜನೆ ಜಾರಿಗೆ ತರಲಾಯಿತು ಎಂಬ ಆರೋಪ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೇಲಿದೆ. ಯೋಜನೆ ಪ್ರಾರಂಭವಾದಾಗ ಅದರ ವಿರುದ್ಧ ಸೈನ್ಯ ಸೇವೆಯ ಉದ್ಯೋಗಾವಕಾಶವನ್ನೇ ನೆಚ್ಚಿಕೊಂಡಿದ್ದ ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ಕೇವಲ 5ವರ್ಷ ಶಾಸಕ, ಸಂಸತ್ ಸದಸ್ಯ ಚುನಾಯಿತರಾದವರಿಗೆ ಸಾವಿರಾರು ರೂ ಪಿಂಚಣಿ ಕೊಡಲಾಗುತ್ತದೆ, ದೇಶಕ್ಕಾಗಿ ದುಡಿದ ಸೈನಿಕರಿಗೆ ಪಿಂಚಣಿ ಇಲ್ಲ ಎನ್ನುವುದು ವಿಷಾದನೀಯ ಹೌದು. ವಿರೋಧ ಪಕ್ಷದ ಕೆಲವು ನಾಯಕರಂತೂ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು ಸಮಾಪ್ತಗೊಳಿಸುವುದಾಗಿ ಹೇಳಿದರು. ಅಗ್ನಿವೀರ ಆಯ್ಕೆಯಾದವರಿಗೆ 4ವರ್ಷದ ಸೇವಾವಧಿಯ ನಂತರ ಪಿಂಚಣಿಯೂ ಇಲ್ಲ, ಬದಲಿ ನೌಕರಿಯೂ ಇಲ್ಲ ಎಂಬ ಯುವಜನರ ಕೋಪವನ್ನು ಶಮನಗೊಳಿಸಲು ಈಗ ಮೊದಲ ಬ್ಯಾಚ್ ಹೊರಬರುವ ಸಮಯದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ ಕರ್ನಾಟಕ ಸರ್ಕಾರ ಇದುವರೆಗೆ ಅಂತಹ ಯಾವುದೇ ಆದೇಶ ನೀಡಿಲ್ಲ ಎನ್ನುವುದು ವಿಷಾದನೀಯ. ಅರೆ ಸೇನಾ ಪಡೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವ ಆದೇಶ ಈಗಾಗಲೇ ಹೊರಬಿದ್ದಿದೆ. ಅಗ್ನಿವೀರರನ್ನು ಖಾಯಂಗೊಳಿಸುವ ಅನುಪಾತ 25% ನಿಂದ 50% ಹೆಚ್ಚಿಸಲು ಸೇನೆ ಸರ್ಕಾರಕ್ಕೆ ಬಲವಾಗಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಿ.

ಸದ್ಯ ಸೈನ್ಯ ಸೇವೆಗೆ ಅಧಿಕಾರಿಗಿಂತ ಕೆಳ ಸ್ತರದಲ್ಲಿ ಇರುವ ಅವಕಾಶವೆಂದರೆ ಅಗ್ನಿವೀರರಾಗಿ ಆಯ್ಕೆ. ಇಂದಿನ ಐಟಿಬಿಟಿ ಜಮಾನಾದಲ್ಲಿ ಒಂದೇ ಕೆಲಸದಲ್ಲಿ ಅಥವಾ ಒಂದೇ ಕಂಪೆನಿಯಲ್ಲಿ ಯುವ ಪೀಳಿಗೆ ದೀರ್ಘ ಸೇವೆ ಸಲ್ಲಿಸುವುದಿಲ್ಲ. ಆ ದೃಷ್ಟಿಯಲ್ಲಿ ನೋಡುವಾಗ ಅಗ್ನಿವೀರ ಅಷ್ಟೇನೂ ಕಳಪೆ ಯೋಜನೆ ಅಲ್ಲ ಎನ್ನಬಹುದು. ಅಧ್ಯಯನಶೀಲರಿಗೆ ಅವಕಾಶಗಳ ಬರವಿಲ್ಲ. ಅಗ್ನಿವೀರರು ಕಡಿಮೆ ವಯಸ್ಸಿನವರಾದ್ದರಿಂದ ನಾಲ್ಕು ವರ್ಷ ಸೈನ್ಯ ಸೇವೆ ಸಲ್ಲಿಸಿ ನಾಗರಿಕ ಬದುಕಿಗೆ ಮರಳಿ ಶಿಕ್ಷಣ ಮುಂದುವರೆಸಬಹುದು ಅಥವಾ ತಮಗಿಷ್ಟ ಬಂದ ಉದ್ಯೋಗ ಪ್ರಾರಂಭಿಸಬಹುದು. ನಾಗರಿಕ ಸೇವೆಗಳ ತಯ್ಯಾರಿ ನಡೆಸಬಹುದು. ನಾಲ್ಕು ವರ್ಷದ ಸೇವಾ ಕಾಲದಲ್ಲಿ ಪ್ರಥಮ ವರ್ಷದಲ್ಲಿ ಮಾಸಿಕ ವೇತನ 30000/- ಎರಡನೆ ವರ್ಷ33000/- ಹಾಗೂ ಮೂರು ಮತ್ತು ನಾಲ್ಕನೇ ವರ್ಷದಲ್ಲಿ ಅನುಕ್ರಮವಾಗಿ 36500/- ಮತ್ತು 40000/- ಇರುತ್ತದೆ. ಈ ವೇತನದಲ್ಲಿ ಮಾಸಿಕ ರೂ 9000/- ದಿಂದ ರೂ 12000/- ಕಡಿಗೊಳಿಸಲಾಗುತ್ತದೆ ಮತ್ತು ಸರ್ಕಾರ ಅಷ್ಟೇ ಮೊತ್ತವನ್ನು ಸೇರಿಸಿ ಸೇವಾ ಸಮಾಪ್ತಿಯಲ್ಲಿ ಸುಮಾರು ಹನ್ನೆರಡು ಲಕ್ಷರೂ ಒಂದು ಕಂತಿನಲ್ಲಿ ನೀಡುತ್ತದೆ.

ಇದಲ್ಲದೇ ಸೇವಾವಧಿಯಲ್ಲಿ ಇತರ ಸೈನಿಕರಿಗೆ ಸಿಗುವಂತೆ ಆಯಾಯ ಪ್ರದೇಶಗಳ ಭತ್ಯೆಗಳು ಸಿಗುತ್ತವೆ. ಆದರೆ ಅವರಿಗೆ ತುಟ್ಟಿ ಭತ್ಯ ಅಥವಾ ಗ್ರಾಚುಯಿಟಿ ಇರುವುದಿಲ್ಲ. ಸೇವಾವಧಿಯಲ್ಲಿ 48ಲಕ್ಷ ರೂಗಳ ವಿಮಾ ಸೌಲಭ್ಯ ಇರುತ್ತದೆ. ನಾಲ್ಕು ವರ್ಷದ ನಂತರ ಸೇನೆಯಲ್ಲಿ ಖಾಯಂ ನೇಮಕಾತಿ ಸೌಲಭ್ಯ ಇರುತ್ತದೆ. ಪ್ರತಿಭಾನ್ವಿತ ಅಗ್ನಿವೀರರಿಗೆ ಕಮಿಷಂಡ್ ಅಧಿಕಾರಿಯಾಗುವ ಭರಪೂರ ಅವಕಾಶಗಳು ಇರುತ್ತವೆ. ಎರಡು ವರ್ಷ ಸೇವೆಯ ನಂತರ ಆರ್ಮಿ ಕೆಡೆಟ್ ಕಾಲೇಜ್ ಎಂಟ್ರೆನ್ಸ್ ಎಕ್ಸಾಮಿನಲ್ಲಿ ಉತ್ತೀರ್ಣರಾದವರಿಗೆ ಸರ್ವೀಸ್ ಸೆಲೆಕ್ಷನ್ ಬೋರ್ಡ್ನ ಸಂದರ್ಶನಕ್ಕೆ ಕಳಿಸಲಾಗುವುದು. ಈ ಪರೀಕ್ಷೆಗಳಿಗೆ ಸೇನೆಯ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸಹ ನೀಡಲಾಗುತ್ತದೆ. ಹಾಗಾಗಿ ಅಧಿಕಾರಿಯಾಗಬಯಸುವ ಅಗ್ನಿವೀರ ಯೋಜನೆ ಯುವಕರಿಗೆ ಉತ್ತಮ ಅವಕಾಶ ನೀಡುತ್ತದೆ. ಇದು ನೇರ ನೇಮಕಾತಿಯ ಎನ್‌ಡಿಎ( ನೇಶನಲ್ ಡಿಫೆನ್ಸ್ ಅಕಾಡೆಮಿ) ಮತ್ತು ಸಿಡಿಎಸ್ (ಕಂಬೈoಡ್ ಡಿಫೆನ್ಸ್ ಸರ್ವಿಸಸ್) ಎಕ್ಸಾಮ್ ಗಳಿಗೆ ಹೋಲಿಸಿದರೆ ಅತ್ಯಂತ ಸುಲಭದ ಎಕ್ಸಾಮ್‌ಗಳಾಗಿರುತ್ತವೆ.

ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಅಗ್ನಿವೀರರು ಸೇನೆಯ ವಿಫುಲ ಅನುಭವದ ಆಧಾರದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಸೈನ್ಯ ಶಿಸ್ತು, ತಾಂತ್ರಿಕ ಜ್ಞಾನ, ವ್ಯಾವಹಾರಿಕ ಅನುಭವ ಮುಂದಿನ ಬದುಕಿಗೆ ಉತ್ತಮ ಸಿದ್ಧತೆ ಮಾಡಿಸುತ್ತದೆ ಎಂದರೆ ತಪ್ಪಾಗದು. ಸೇನೆಯ ಕಠಿಣ ತರಬೇತಿಯಲ್ಲಿ ಅರ್ಜಿಸಿದ ಕಷ್ಟ ಸಹಿಷ್ಣುತೆ, ಸಾಹಸ, ದೃಢ ನಿಶ್ಚಯ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ನಾಯಕತ್ವಗುಣ ಮತ್ತು ತಾಳ್ಮೆ ಯುವಕ-ಯುವತಿಯರನ್ನು ಪರಿಪಕ್ವರನ್ನಾಗಿಸುತ್ತದೆ. ಸೂಕ್ತ ತಯ್ಯಾರಿ ನಡೆಸಿ ಆಡಳಿತಾತ್ಮಕ ಹುದ್ದೆಗಳಿಗೆ ಆಯ್ಕೆಯಾಗಬಹುದು. ಅನೇಕ ಯುವಕರಿಗೆ ಸೇನೆಯ ಸಾಹಸದ ಬದುಕನ್ನು ಕೆಲವು ವರ್ಷ ನೋಡಬೇಕೆಂಬ ಆಸೆ ಇರುತ್ತದೆ. ಅಂತಹ ಯುವಕರಿಗೆ ಅಗ್ನಿವೀರ ಒಳ್ಳೆಯ ಅವಕಾಶ.

ಇಸ್ರೇಲ್‌ನಂತಹ ಅನೇಕ ರಾಷ್ಟ್ರಗಳಲ್ಲಿ ಇರುವಂತೆ ಕಡ್ಡಾಯ ಮಿಲಿಟರಿ ತರಬೇತಿ ಜಾರಿಗೊಳಿಸುವುದು ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಕಾರ್ಯಸಾಧುವಲ್ಲ. ಶತ್ರುರಾಷ್ಟ್ರಗಳಿಂದ ಸುತ್ತುವರೆದಿರುವ ಭಾರತಕ್ಕೆ ದೊಡ್ಡ ಸೇನೆ ಮತ್ತು ರಿಸರ್ವ ಪಡೆಗಳನ್ನು ಇರಿಸಿಕೊಳ್ಳುವುದು ಅನಿವಾರ್ಯ. ಅದೇ ರೀತಿಯಲ್ಲಿ ಹೆಚ್ಚುತ್ತಿರುವ ಸೈನಿಕರ ಸರಾಸರಿ ವಯಸ್ಸನ್ನು ಕಡಿಮೆ ಇರಿಸಿಕೊಳ್ಳುವ ಅಗತ್ಯವೂ ಇದೆ. ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡು ಜಾರಿಗೆ ತಂದ ಅಗ್ನಿಪಥ ಯೋಜನೆಯಲ್ಲಿ ಸುಧಾರಣೆಯ ಅಗತ್ಯ ಇದೆ. ವರ್ತಮಾನದ ಜಾಗತಿಕ ತಲ್ಲಣಗಳನ್ನು ನೋಡುವಾಗ ಒಳ-ಹೊರಗಿನ ಶತ್ರುಗಳನ್ನು ಎದುರಿಸುವಲ್ಲಿ ಅಗ್ನಿವೀರರು ದೇಶದ ಸಹಾಯಕ್ಕೆ ಬರಲಿದ್ದಾರೆ. ಅವರ ಸೇವೆ, ಅನುಭವ, ತರಬೇತಿ ವ್ಯರ್ಥ ಆಗದಿರಲಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜತೆಯಾಗಿ ಅಗ್ನಿವೀರರ ಭವಿಷ್ಯವನ್ನು ಸುನಿಶ್ಚಿತಗೊಳಿಸಲಿ. ಅಗ್ನಿವೀರರಾಗಲು ಕರಾವಳಿಯ ಯುವಕರು ಆಸಕ್ತಿ ತೋರಲಿ.

✍️ ಬೈಂದೂರು ಚಂದ್ರಶೇಖರ ನಾವಡ