"EV ಕಾರು ಯಾಕೆ ತೆಗೆದುಕೊಂಡೆ?", "ಎಲ್ಲಿಗೆ ಹೋಗುತ್ತೀಯ?", "ಚಾರ್ಜ್ ಮಾಡಲು ಗಂಟೆಗಟ್ಟಲೆ ಸಮಯ ವ್ಯರ್ಥ ಅಲ್ಲವೇ?", "ಚೀನಾದ ವಾಹನ, ಬಾಳಿಕೆ ಬರೋದಿಲ್ಲ!" — ಕಳೆದ ಮೂರು ವರ್ಷಗಳಲ್ಲಿ ಇಂತಹ ಪ್ರಶ್ನೆಗಳನ್ನೂ, ಟೀಕೆಗಳನ್ನೂ ಸಾಕಷ್ಟು ಕೇಳಿದ್ದೇನೆ.
ಇತ್ತೀಚೆಗೆ ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣ (E20/E85) ಕುರಿತ ಚರ್ಚೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ವಿದ್ಯುತ್ ವಾಹನ (Electric Vehicle - EV) ಬಗ್ಗೆ ನನ್ನ ಮೂರು ವರ್ಷದ ವೈಯಕ್ತಿಕ ಅನುಭವ ಹಂಚಿಕೊಳ್ಳುವುದು ಸೂಕ್ತವೆನಿಸಿತು. ಇದು ಯಾರನ್ನೂ ಮನವೊಲಿಸುವ ಪ್ರಯತ್ನವಲ್ಲ. EV ತೆಗೆದುಕೊಳ್ಳಬೇಕೋ ಬೇಡವೋ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ. ಆದರೆ ಅನುಭವದ ಆಧಾರದ ಮೇಲೆ ಕೆಲವು ಸಂಗತಿಗಳನ್ನು ಹಂಚಿಕೊಳ್ಳಬಹುದು, ಈ ಮಾಹಿತಿ ಇತರರಿಗೆ ಸಹಾಯವಾಗಬಹುದು ಎಂದಷ್ಟೇ ಈ ಲೇಖನ.
EV ಕುರಿತು ಸರಿಯಾದ ಮಾಹಿತಿ ತಲುಪಲಿ ಎಂಬ ಉದ್ದೇಶದಿಂದ ನಾನು ಒಂದು YouTube ಚಾನೆಲ್ ಕೂಡ ಆರಂಭಿಸಿದ್ದೇನೆ. ಆದರೆ ನನ್ನ ಪರಿಚಯದವರಲ್ಲಿ ಅದನ್ನು ನೋಡಿ ಯಾರಾದರೂ EV ಖರೀದಿಸಿದ್ದಾರೆ ಎನ್ನುವ ಮಾಹಿತಿ ನನಗಿಲ್ಲ. ಇದ್ದರೆ ತಿಳಿಸಿದರೆ ಸಂತೋಷ.
ಮೂರು ವರ್ಷದ ಲೆಕ್ಕಾಚಾರ: ನಾನು ಬಳಸುತ್ತಿರುವ ವಾಹನ BYD E6. ಇದುವರೆಗೆ ಸುಮಾರು 41,000 ಕಿಲೋಮೀಟರ್ ಸಂಚರಿಸಿದೆ. ಈ ಅವಧಿಯಲ್ಲಿ ಕಳಪೆ ರಸ್ತೆಯಿಂದ ಲಿಂಕ್ ರಾಡ್ ಮುರಿದ ಕಾರಣ ಸುಮಾರು ₹2,000 ವೆಚ್ಚವಾಯಿತು. ಉಳಿದ ಸರ್ವಿಸಿಂಗ್ ಸೇರಿ ಒಟ್ಟು ನಿರ್ವಹಣಾ ವೆಚ್ಚ ₹15,000 ಕೂಡ ಆಗಿಲ್ಲ. ಚಾರ್ಜಿಂಗ್ಗೆ ಇದುವರೆಗೆ ಸುಮಾರು ₹50,000 ಖರ್ಚಾಗಿದೆ. ಒಟ್ಟಾರೆ ಸುಮಾರು ₹65,000 ವೆಚ್ಚದಲ್ಲಿ 41,000 ಕಿಲೋಮೀಟರ್ ಸಂಚರಿಸಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ಅನೇಕ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವೂ ಇದಕ್ಕಿಂತ ಹೆಚ್ಚಿರಬಹುದು.
ದೂರದ ಪ್ರಯಾಣ: ಊಹಿಸಿದಷ್ಟು ಕಷ್ಟವಲ್ಲ : ಮೂರು ವರ್ಷಗಳಲ್ಲಿ 25ಕ್ಕೂ ಹೆಚ್ಚು ದೂರದ ಪ್ರಯಾಣಗಳನ್ನು ಮಾಡಿದ್ದೇನೆ. ದೂರ ಎಂದರೆ ಕನಿಷ್ಠ 250 ಕಿಮೀ ಎಂದು ಲೆಕ್ಕ ಹಾಕಿದ್ದೇನೆ. ಪ್ರತಿ ಪ್ರಯಾಣಕ್ಕೂ ಹೊರಡುವ ಮುನ್ನ ಸುಮಾರು ಹದಿನೈದು ನಿಮಿಷಗಳ ಯೋಜನೆ ಮಾಡಿದರೆ ಸಾಕಾಗುತ್ತದೆ. ಈ 25 ಪ್ರಯಾಣಗಳಲ್ಲಿ ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ "ರೇಂಜ್ ಆತಂಕ" (range anxiety) ಅನುಭವಿಸಿದ್ದೇನೆ. ಆದರೆ ಬ್ಯಾಟರಿ ಸಂಪೂರ್ಣ ಖಾಲಿಯಾಗಿ ವಾಹನವನ್ನು ಟೋ ಮಾಡಿಸಬೇಕಾದ ಪರಿಸ್ಥಿತಿ ಎಂದಿಗೂ ಬಂದಿಲ್ಲ.
ಒಮ್ಮೆ ಭಾರೀ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ನಾಲ್ಕೈದು ಗಂಟೆ ವಿಳಂಬವಾಗಿತ್ತು. ಉಳಿದ ಎಲ್ಲಾ ಪ್ರಯಾಣಗಳು ಯೋಜನೆಯಂತೆ ನಡೆದಿವೆ. ದಕ್ಷಿಣ ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಜನರು ಊಹಿಸುವುದಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಬಹುತೇಕ ಚಾರ್ಜಿಂಗ್ ಮನೆ ಅಥವಾ ಕಚೇರಿಯಲ್ಲಿಯೇ ಆಗುತ್ತದೆ. ವಾಹನವನ್ನು ಚಾರ್ಜ್ಗೆ ಸಂಪರ್ಕಿಸಲು ಹದಿನೈದು ಸೆಕೆಂಡು, ನಂತರ ಚಾರ್ಜ್ ಆದ ಮೇಲೆ ಹಿಂತೆಗೆಯಲು ಮತ್ತೊಂದು ಹದಿನೈದು ಸೆಕೆಂಡು ಹೀಗೆ ಒಟ್ಟು ಅರ್ಧ ನಿಮಿಷ ಸಾಕು. ಉಳಿದ ಸಮಯದಲ್ಲಿ ವಾಹನ ತಾನೇ ಚಾರ್ಜ್ ಆಗುತ್ತದೆ.
ಇದು ಬಟ್ಟೆ ಒಗೆಯುವ ಯಂತ್ರದಂತೆಯೇ. ಬಟ್ಟೆ ಒಗೆಯಲು ಹಾಕಿದ ನಂತರ ಅದರ ಮುಂದೆ ಕುಳಿತು ಕಾಯುವುದಿಲ್ಲ. ಹಾಗೆಯೇ EV ಕೂಡ. ದೂರದ ಪ್ರಯಾಣದಲ್ಲಿ ಊಟ ಅಥವಾ ವಿಶ್ರಾಂತಿಯ ಸಮಯದಲ್ಲಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಊಟ ತಿಂಡಿ ಮುಗಿದು ಹತ್ತು ಅಥವಾ ಹದಿನೈದು ನಿಮಿಷ ಹೆಚ್ಚುವರಿ ಸಮಯ ಮೀಸಲಿಟ್ಟರೆ ಸಾಕು, ಕಾರ್ ಚಾರ್ಜಿಂಗ್ ಮುಗಿದು ಹೋಗಿರುತ್ತದೆ.
41,000 ಕಿಲೋಮೀಟರ್ ಪೆಟ್ರೋಲ್ ಕಾರಿನಲ್ಲಿ ಸಂಚರಿಸಿದ್ದರೆ, ಪ್ರತಿ 400 ಕಿಲೋಮೀಟರ್ಗೆ ಒಮ್ಮೆ ಪೆಟ್ರೋಲ್ ತುಂಬಿಸಿ, ಪ್ರತಿ ಸಲ ಪೆಟ್ರೋಲ್ ಬಂಕಿಗೆ ಹೋಗಿ ಪೆಟ್ರೋಲ್ ಹಾಕಲು ಹತ್ತು ನಿಮಿಷ ಎಂದು ಲೆಕ್ಕ ಹಾಕಿದರೆ, ಸುಮಾರು 17 ಗಂಟೆ ಪೆಟ್ರೋಲ್ ಹಾಕಲು ಕಳೆದಿರಬೇಕಾಗುತ್ತಿತ್ತು. ಆದರೆ ಮನೆ ಚಾರ್ಜಿಂಗ್ನಿಂದ ಕಳೆದ ಮೂರು ವರ್ಷಗಳಲ್ಲಿ ಚಾರ್ಜಿಂಗ್ಗೆ ನಾನು ವ್ಯಯಿಸಿದ ಸಕ್ರಿಯ ಸಮಯ ಒಂದು ಗಂಟೆಯೂ ಆಗಿಲ್ಲ.
ಬ್ಯಾಟರಿ ಆರೋಗ್ಯ: ಮೂರು ವರ್ಷಗಳಲ್ಲಿ ಬ್ಯಾಟರಿಯ ಕಾರ್ಯಕ್ಷಮತೆ ಗಮನಾರ್ಹವಾಗಿ ಕುಸಿದಿದೆಯೇ ಎಂಬ ಪ್ರಶ್ನೆ ಸಾಮಾನ್ಯ. ನನ್ನ ಅನುಭವದಲ್ಲಿ ಅಂತಹ ವ್ಯತ್ಯಾಸ ಕಂಡಿಲ್ಲ. ತೀವ್ರ ಬೇಸಿಗೆಯಲ್ಲಿ ಪ್ರತಿ ಕಿಮೀಗೆ ಸ್ವಲ್ಪ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಆದರೆ ವಾಹನದ ಒಟ್ಟಾರೆ ರೇಂಜ್ ಬಹುತೇಕ ಮೊದಲಿನಂತೆಯೇ ಇದೆ.
ಪ್ರತಿದಿನ ಚಾರ್ಜ್ ಮಾಡಬೇಕೇ? ಇಲ್ಲ. EV ಮೊಬೈಲ್ ಫೋನ್ ಅಲ್ಲ. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಮೂರು ಅಥವಾ ನಾಲ್ಕು ಬಾರಿ ಕಾರು ಚಾರ್ಜ್ ಮಾಡಿದರೆ ಸಾಕಾಗುತ್ತದೆ. ದಿನಕ್ಕೆ 150–200 ಕಿಲೋಮೀಟರ್ ಓಡಿಸುವವರಿಗೆ ಮಾತ್ರ ಪರಿಸ್ಥಿತಿ ಭಿನ್ನವಾಗಿರಬಹುದು. ಭಾರತದಲ್ಲಿ ಸರಾಸರಿ ದಿನದ ವಾಹನ ಬಳಕೆ ಸುಮಾರು 30 ಕಿಲೋಮೀಟರ್ ಮಾತ್ರ.
ಚಾಲನಾ ಅನುಭವ: EVಯ ಪ್ರಮುಖ ಶಕ್ತಿ ಅದರ ಚಾಲನಾ ಅನುಭವ. Instant torque ಕಾರಣ ವಾಹನ ಅತ್ಯಂತ ಸುಲಭವಾಗಿ ಮತ್ತು ನಯವಾಗಿ ಚಲಿಸುತ್ತದೆ. ನಗರ ಸಂಚಾರದಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ.
ಹೌದು, ಗಂಟೆಗೆ 110–120 ಕಿ.ಮೀ. ವೇಗದ ನಂತರ ಬ್ಯಾಟರಿ ಬಳಕೆ ವೇಗವಾಗಿ ಹೆಚ್ಚುತ್ತದೆ. ನನ್ನ ದೃಷ್ಟಿಯಲ್ಲಿ ಇದು ಒಂದು ರೀತಿಯಲ್ಲಿ ರಸ್ತೆ ಸುರಕ್ಷತೆಯನ್ನೂ ಉತ್ತೇಜಿಸುತ್ತದೆ.
ಸೌರಶಕ್ತಿ ಮತ್ತು ಸ್ವಾವಲಂಬನೆ: ನನ್ನ ಮನೆಯಲ್ಲಿ EV ಬರುವ ಮೊದಲೇ ಸೌರಶಕ್ತಿ ವ್ಯವಸ್ಥೆ ಇತ್ತು. ಆದ್ದರಿಂದ ಇಂಧನದ ಬೆಲೆ ಏರಿಕೆ, ಅಂತಾರಾಷ್ಟ್ರೀಯ ಯುದ್ಧಗಳು ಅಥವಾ ರಾಜಕೀಯ ಬೆಳವಣಿಗೆಗಳು ನನ್ನ ದೈನಂದಿನ ಸಂಚಾರದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕಳೆದ ಮೂರು ವರ್ಷಗಳಿಂದ ಪೆಟ್ರೋಲ್ ಬಂಕ್ಗೆ ಹೋಗುವ ಅಗತ್ಯವೇ ಬಂದಿಲ್ಲ. ಪೆಟ್ರೋಲ್ನ ಸುವಾಸನೆ ಮಾತ್ರ ನನಗೆ ಕೆಲವೊಮ್ಮೆ ಮಿಸ್ ಆಗುತ್ತದೆ!
(ಒಂದು EV ಮಾಲೀಕರ ಅನುಭವ) ಮಾದರಿ ಚಿತ್ರ ಕೃಪೆ: ಅಂತರ್ಜಾಲ ತಾಣ
ಮುಂದುವರಿಯುತ್ತದೆ…
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!