ಗಾಡ್ is not ರೀಚಬಲ್

ಪತ್ರಕರ್ತ ರವೀಂದ್ರ ಮುದ್ದಿಯವರು ಬರೆದ ರೋಚಕ ಕಾದಂಬರಿ ‘ಗಾಡ್ is not ರೀಚಬಲ್’ ನ ದ್ವಿತೀಯ ಮುದ್ರಣ ಹೊರಬಂದಿದೆ. ಈ ಕಾದಂಬರಿಗೆ ಖ್ಯಾತ ಬರಹಗಾರ್ತಿ ಪ್ರತಿಭಾ ನಂದಕುಮಾರ್ ಬಹಳ ಚೊಕ್ಕದಾದ ಮುನ್ನುಡಿ ಬರೆದಿದ್ದಾರೆ. “ಅಂತರ್ಮುಖಿ ಹುಡುಕಾಟದ ಕಥೆ” ಎನ್ನುತ್ತಾ ಪ್ರತಿಭಾ ನಂದಕುಮಾ‌ರ್ ಬರೆಯುತ್ತಾರೆ…

“ಈ ಕಾದಂಬರಿಯ ಶೀರ್ಷಿಕೆ is not ಎನ್ನುವುದನ್ನು ಇಂಗ್ಲಿಷಿನಲ್ಲಿ ಬರೆದು ಗಾಡ್ ಮತ್ತು ರೀಚಬಲ್ ಅನ್ನು ಕನ್ನಡದಲ್ಲಿ ಬರೆದಿರುವ ಮೂಲಕ ಗಾಡ್ ರೀಚಬಲ್ ಎನ್ನುವ ಧ್ವನ್ಯಾರ್ಥವನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ.

ಗೌತಮ ಸಾಯಲು ಹೊರಟ ಕ್ಷಣದಿಂದ ಪ್ರಾರಂಭವಾಗಿ ನಡುವೆ ಹಲವಾರು ತಿರುವುಗಳನ್ನು ಪಡೆದುಕೊಂಡು ಅವನು ಕೊನೆಯಲ್ಲಿ ಮತ್ತೆ ಬದುಕಿಗೆ ಮುಖ ಮಾಡಿದ ಗಳಿಗೆಯವರೆಗೆ ಕುತೂಹಲಕಾರಿಯಾಗಿ ಸಾಗುತ್ತಲೇ, ಗೌತಮನ ಹುಡುಕಾಟಕ್ಕೊಂದು ಅಂತರ್ಮುಖಿ ಆಶಾವಾದವನ್ನು ಉದ್ದಕ್ಕೂ ಎಲ್ಲೂ ವಾಚ್ಯವಾಗದೆ ಸೂಚ್ಯವಾಗಿ ಬಿಂಬಿಸುತ್ತಲೇ ಇರುತ್ತದೆ. ಉತ್ತಮ ಪತ್ರಕರ್ತನ ದೃಷ್ಟಿಕೋನ ಅರಿವಿಲ್ಲದೆಯೇ ಕೆಲಸ ಮಾಡುತ್ತಾ ಅನಗತ್ಯ ವಿವರಗಳಿಲ್ಲದೆ ಚೊಕ್ಕದಾದ ನಿರೂಪಣೆಯಿಂದಾಗಿ ಪುಟಗಳನ್ನು ಎಗರಿಸಿಕೊಂಡು ಓದುವ ಚಾನ್ಸ ಇಲ್ಲದಂತಾಗಿದೆ. ಘನವಾದ ಸಂಗತಿಗಳನ್ನೂ ಕೆಲವೊಮ್ಮೆ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿ ಮುಂದಕ್ಕೆ ಸಾಗುವುದರಿಂದ ಓದುಗರಿಂದ ಎಚ್ಚರಿಕೆಯ ಓದನ್ನು ಬಯಸುತ್ತದೆ.

ಕಾದಂಬರಿಯ ಪಾತ್ರಗಳು ಎಲ್ಲೆಲ್ಲಿ ಎಷ್ಟೆಷ್ಟು ಬರಬೇಕೋ ಅಷ್ಟಷ್ಟೇ ಬಂದುಹೋಗುತ್ತವೆ. ಉತ್ತಮ ಕ್ರೈಮ್ ಡ್ರಿಲ್ಲರ್‌ಗಳಲ್ಲಿ ಅಪರಾಧ ಸ್ಥಳವನ್ನು ನೋಡಿದಾಕ್ಷಣ ಪತ್ತೇದಾರನಿಗೆ ಅಪರಾಧ ಘಟಿಸಿದ ವಿವರಗಳು ತಿಳಿಯುವಂತೆ, ಹೇಳದೆ ಉಳಿದ ಭಾವ, ಚಿಂತನೆ, ತರ್ಕಗಳನ್ನು ಊಹಿಸಿಕೊಳ್ಳಲು ಅಥವಾ ಬೆಳೆಸಿಕೊಳ್ಳಲು ಓದುಗರಿಗೆ ಅವಕಾಶವಿದೆ. ಇದು ಒಳ್ಳೆಯ ಬರಹದ ಲಕ್ಷಣ. ಕಾದಂಬರಿಕಾರ ಅನಗತ್ಯ ಸ್ಪೂನ್ ಫೀಡಿಂಗ್ ಮಾಡಿಲ್ಲ, ಮಾಡಬಾರದು.

ಗೌತಮ, ಸುಬ್ರಮಣಿ, ಅವರ ತಾಯಿ ಶಾರದಮ್ಮ ಮತ್ತು ಅಹಲ್ಯೆ ಅವರು ಪರಸ್ಪರರ ಬದುಕಿನೊಳಗೆ ಹಾಸುಹೊಕ್ಕಾಗುವ ವಿಚಿತ್ರ ರೀತಿಯೇ ಈ ಕಾದಂಬರಿಯ ಕೇಂದ್ರ ಸತ್ವ USP. ಇಲ್ಲಿ ದೇವರ ಪರಿಕಲ್ಪನೆಯೇ ಬೇರೆ ಬೇರೆ ಪಾತ್ರಗಳಿಗೆ ಬೇರೆ ಬೇರೆ. ಅವರವರ ಹುಡುಕಾಟವೇ ಒಂದು ರೀತಿಯಲ್ಲಿ ಅವರವರ ಅಧ್ಯಾತ್ಮ ಪಥ. ಹಾಗಾಗಿ ಆ ಹುಡುಕಾಟದಲ್ಲಿ ಅವರ ಕೈ ಹಿಡಿದ ಅಗೋಚರ ಶಕ್ತಿ ಅವರಿಗರಿವಿಲ್ಲದೆಯೇ ಅವರನ್ನು ಒಂದು ಬಿಂದುವಿನತ್ತ ಕರೆದೊಯ್ಯುತ್ತದೆ.

ಅದನ್ನು ಆಕಸ್ಮಿಕಗಳು ಎಂದೂ ಕರೆಯಬಹುದು. ಐದು ವರ್ಷ ಕಾಣೆಯಾಗಿದ್ದ ಗೌತಮನನ್ನು ನೋಡಿ ಅಣ್ಣ ಸುಬ್ರಮಣಿ ಐದು ವರ್ಷಗಳ ಕಾಲ ನೀನು ಎಲ್ಲಿದ್ದೆ, ಏನು ಮಾಡ್ತಿದ್ದೆ ಎಂದು ಕೇಳಿದಾಗ ಅವನ ದನಿಯ ಆದ್ರ್ರತೆ ಕೇಳಿ ಗೌತಮ ಹೇಳಿಕೊಳ್ಳಲೇ ಬೇಕೆಂದು ತೀರ್ಮಾನಿಸಿ "ಅಣ್ಣಾ ಅವತ್ತು ಏನಾಯ್ತು ಅಂದ್ರೆ" ಎಂದು ಹೇಳುವಷ್ಟರಲ್ಲಿ ಫೋನ್ ರಿಂಗ್ ಆಗಿ ಕರ್ತವ್ಯದ ಕರೆಗೆ ಓಗೊಟ್ಟು ಸುಬ್ರಮಣಿ ತೆರಳುತ್ತಾನೆ. ಗಂಡ ಸಮುದ್ರದಲ್ಲಿ ಮುಳುಗಿ ತೀರಿಕೊಂಡ ಮೇಲೆ ಮಗ ಗೌತಮನನ್ನೂ ಅನಾಥ ಸುಬ್ರಮಣಿಯನ್ನೂ ಅಷ್ಟೆಲ್ಲ ಕಷ್ಟಪಟ್ಟು ಬೆಳೆಸಿದ ಶಾರದಮ್ಮ ಯಾರೋ ಜೋತಿಷಿ ಹೇಳಿದ ಕಾರಣಕ್ಕೆ ಮಕ್ಕಳನ್ನೇ ಬಿಟ್ಟು ಕಾಶಿಗೆ ಹೋಗಿಬಿಡುತ್ತಾಳೆ. ಶಿಕ್ಷಕನಾಗಬೇಕಿದ್ದ ಗೌತಮ ಡ್ರಗ್ ಪೆಡ್ಲರ್ ಆಗುತ್ತಾನೆ. ಆಕಸ್ಮಿಕವಾಗಿ ಸಿಕ್ಕಿ ಗೌತಮನನ್ನು ಬದುಕಿಸಿದ ಅಹಲೈಯೇ ಅವನನ್ನು ತೊರೆಯುತ್ತಾಳೆ. ಗಂಗೊಳ್ಳಿಯಿಂದ ದೂರವಾದ ಗೌತಮ ಮತ್ತೆ ಸುರಕ್ಷಿತವೆಂದು ಅಹಲ್ಯಯನ್ನೂ ಕರೆದುಕೊಂಡು ಗಂಗೊಳ್ಳಿಯ ಕಡೆಗೆ ಸಾಗುತ್ತಾನೆ. ಕಾಶಿಯಲ್ಲಂತೂ ಆಕಸ್ಮಿಕಗಳೇ ಪಾತ್ರಗಳನ್ನು ಮುಖಮೌಖಿಯಾಗಿಸುತ್ತವೆ.

ಇದಕ್ಕೆ ಪೂರಕವಾಗಿ ಹಲವಾರು ಅವ್ಯಕ್ತ, ಅದೃಶ್ಯ ಸಂಗತಿಗಳು ಕುತೂಹಲಕಾರಿಯಾಗಿ ಕಥೆಯನ್ನು ಬೆಳೆಸುತ್ತವೆ. ಯಾರೂ ಮುಟ್ಟಿರದ ದೇವರ ಕೋಣೆಯ ಟ್ರಂಕ್, ಅಹಲೈಯ ಕೈಗೆ ಸಿಕ್ಕ ಜಾತಕದ ಭವಿಷ್ಯ, ಕೆಂಪು ಬಟ್ಟೆಯ ಗಂಟು, ಸರಿದುಹೋದ ನಾಗರಹಾವು, ಕಾಶಿಯಲ್ಲಿ ಯುಕ್ತ ಗಳಿಗೆಗಳಲ್ಲಿ ಕಾಣಿಸಿಕೊಂಡ ಅಘೋರಿ, ಚಿತೆಯ ಮೇಲಿನ ಅನಾಥ ಹೆಣ ತಾಯಿಯದೇ ಇರಬಹುದೇ ಎಂದು ಓಡಿ ಹೋಗಿ, ಮುಖ ನೋಡಿ ಅಲ್ಲವೆಂದು ಅನುಭವಿಸಿದ ನಿರಾಳ ಭಾವ.. ಹೀಗೆ ಅಡಿಗಡಿಗೆ ಮುಟ್ಟಿ ಮಾಯವಾಗುವ ಚಿತ್ರಗಳು ಕಥೆಗೆ ಹಲವು ಆಯಾಮಗಳನ್ನು ಕೊಟ್ಟಿವೆ. ಇದುವರೆಗೆ ಕವನ, ಕಥಾ ಸಂಕಲನ ಪ್ರಕಟಿಸಿದ್ದಾರೆ. ಇದು ರವೀಂದ್ರ ಮುದ್ದಿ ಅವರ ಮೊದಲ ಕಾದಂಬರಿ. ಅವರಿಂದ ಇನ್ನಷ್ಟು ಕೃತಿಗಳನ್ನು ಎದುರು ನೋಡುವಂತೆ ಮಾಡುತ್ತದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಬದುಕಿನ ವಿಚಿತ್ರಗಳನ್ನು ಶೋಧಿಸಲೆತ್ನಿಸುವ ಕಾದಂಬರಿ’ ಎನ್ನುತ್ತಾರೆ ಡಾ. ಟಿ.ಎಸ್.ಗೊರವರ. ಅವರ ಪ್ರಕಾರ “ಪತ್ರಕರ್ತರು ಕತೆ, ಕವಿತೆ, ಕಾದಂಬರಿಗಳಂಥ ಸೃಜನಶೀಲ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಬಹಳ ಕಮ್ಮಿ. ಅವರೇನಿದ್ದರೂ 'ನ್ಯೂಸ್'ಗಳ ಬೆನ್ನತ್ತಿ, 'ಡೆಡ್‌ಲೈನ್'ಗಳ ಒತ್ತಡದಲ್ಲಿ ಬರಹ ಮಾಡುವುದೇ ಹೆಚ್ಚು. ಆದರೆ ಕೆಲವರು ಎರಡೂ ಕ್ಷೇತ್ರದಲ್ಲಿ ಕಾರ್ಯಶೀಲರಾಗಿ ಕನ್ನಡದ ಓದುಗರನ್ನು ಸೆಳೆದವರಿದ್ದಾರೆ. ಇಂಥವರ ಸಾಲಿಗೆ ಈಗಾಗಲೇ ಕಥಾ ಸಂಕಲ-ಪ್ರಕಟಿಸಿರುವ, ಈಗ 'ಗಾಡ್ Is Not ರೀಚಬಲ್' ಕಾದಂಬರಿ ಬರೆದಿರುವ ರವೀಂದ್ರ ಮುದ್ದಿಯವರು ಕೂಡ ಸೇರುತ್ತಾರೆ.”

ಕಾದಂಬರಿಯನ್ನು ಬರೆದ ರವೀಂದ್ರ ಮುದ್ದಿಯವರು “ನನ್ನೊಳಗಿನ ಹುಡುಕಾಟ…” ಎನ್ನುತ್ತಾ ಗಾಡ್ is not ರೀಚಬಲ್' ನನ್ನೊಳಗಿನ ಹುಡುಕಾಟ..! ಕಡಲ ಬಗೆಗಿನ ಮೋಹ, ಗೊತ್ತಿಲ್ಲದ ಊರುಗಳು, ಜಗತ್ತಿನಲ್ಲಿ ತಾಯಿ ಮಾಡುವ ತ್ಯಾಗ, ಆಕಸ್ಮಿಕವಾಗಿ ಹುಟ್ಟುವ ಪ್ರೀತಿ, ಹೃದಯ ಚೂರುಮಾಡುವ ಘಟನೆಗಳು, ಜೀವನದಲ್ಲಿ ನಡೆಯುವ ಚಮತ್ಕಾರ, ನಮಗರಿವಿಲ್ಲದೆ ದೇವರಿಗೆ ಶರಣಾಗುವ ನಾವು! ಹೀಗೆ ಹುಡುಕುತ್ತ ಹೋದ ನನಗೆ ದಕ್ಕಿದ್ದು ಈ 'ಗಾಡ್ is not ರೀಚಬಲ್' ಕಾದಂಬರಿ. ಈ ಕಥೆಗೋಸ್ಕರ ಒಂದು ವರ್ಷ ಅವಧಿಯಲ್ಲಿ ಕುಂದಾಪುರದಿಂದ ಕಾಶಿ ತನಕ ಪಯಣ ಮಾಡಿದ್ದೇನೆ. ಆ ಸಂದರ್ಭದಲ್ಲಿ ಗ್ರಹಿಸಿದ ಸಂಗತಿಗಳನ್ನೇ ನನ್ನ ಕಲ್ಪನೆಯ ಕಥಾಲೋಕದಲ್ಲಿ ಅಕ್ಷರಬೀಜ ಬಿತ್ತಿ ಬೆಳೆದಿದ್ದೇನೆ. ಅದಲ್ಲದೆ ಹಲವಾರು ಪರಿಣಿತರು ಹಾಗೂ ಗೆಳೆಯರ ಜೊತೆ ಚರ್ಚೆ ಮಾಡಿದ್ದೇನೆ. ದಿನನಿತ್ಯವೂ ಕಥೆಗೆ ಪೂರಕವಾಗುವ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡು ಈ ಕಾದಂಬರಿಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ್ದೇನೆ.

ಸಾಹಿತ್ಯದಲ್ಲಿ ಹೊಸ ಹರಿವು ಬೇರೆ ಬೇರೆ ಆಯಾಮಗಳಲ್ಲಿ ಬಲು ವೇಗವಾಗಿ ಹರಿಯುತ್ತಿದೆ. ಹೊಸ ಹರಿವಿನಲ್ಲಿ, ಹರಿಗೋಲು ಹಾಕುತ್ತ ಬಂದ ನಾನೂ ಈಗ ನಿಮ್ಮುಂದೆ ಕಾದಂಬರಿಯೊಂದನ್ನು ಹಿಡಿದು ನಿಂತಿದ್ದೇನೆ. ಸ್ವತಃ ಓದುಗರೂ ಈ ಕಥೆಯಲ್ಲಿನ ಪಾತ್ರಧಾರಿಗಳ ಜೊತೆ ಪಯಣ ಮಾಡಬೇಕು ಎನ್ನುವ ಆಶಯದಿಂದ ಕಟ್ಟಿದ ಕಾದಂಬರಿಯಿದು.

ಈಗಾಗಲೇ ನನ್ನ ಸಿಗ್ನಲ್ ಜಂಪ್ ಹಾಗೂ ವರದಾ ತೀರದ ಕಥೆಗಳನ್ನು ಓದಿ ಹರಸಿದ್ದೀರಿ. ಈಗ ನನ್ನ ಈ ಗಾಡ್ is not ರೀಚಬಲ್ ಮೊದಲ ಕಾದಂಬರಿಯನ್ನು ಓದಿ, ಇಷ್ಟವಾದರೆ ನಾಲ್ಕಕ್ಷರ ಬರೆದು ಹರಸಿ. ಓದುಗರಿಂದ ತಿಳಿದುಕೊಳ್ಳಬೇಕಾಗಿದ್ದು ತುಂಬಾ ಇದೆ ಎಂದು ನಂಬಿದವನು ನಾನು. ಕೊನೆಯದಾಗಿ ನನ್ನ ಈ ಕಾದಂಬರಿಗೆ 'ಗಾಡ್ is not ರೀಚಬಲ್' ಎನ್ನುವ ಟೈಟಲ್ ಯಾಕೆ..? ತಾವು ಓದಿಯೇ ತಿಳಿದುಕೊಳ್ಳಬೇಕು.” ಸುಮಾರು ನೂರು ಪುಟಗಳ ಈ ಕಾದಂಬರಿಯನ್ನು ಲೇಖಕರು “ನಾನು ಬರಿ ಕಿಸೆಯಲ್ಲಿ ಓಡಾಡುತ್ತಿದ್ದಾಗ ಪ್ರೀತಿಯಿಂದ ಚಹಾ ಕುಡಿಸಿ, ಬೆನ್ನು ತಟ್ಟಿದ ಧಾರವಾಡದ ನನ್ನೆಲ್ಲಾ ಗೆಳೆಯರು ಮತ್ತು ಹಿತೈಷಿಗಳಿಗೆ’ ಅರ್ಪಣೆ ಮಾಡಿದ್ದಾರೆ