ಕಲಬುರ್ಗಿಯ ವಿದ್ಯಾರ್ಥಿ ಬಳಗದ ಪ್ರಸಿದ್ಧ ರಸ್ತೆಯೆಂದರೆ ಅದು ನಮ್ಮ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜ್ ರಸ್ತೆ. ರಸ್ತೆಯ ಎಡಬಲಕ್ಕೆ ಎಲ್ಲ ಬಗೆಯ ಅಂಗಡಿಗಳು ತುಂಬಿಕೊಂಡಿದ್ದವು. ನಾನು ನಿಮಗೆ ತೋರಿಸುತ್ತಿರುವ ಕಾಲ ಸಾವಿರದ ಒಂಭೈನೂರ ತೊಂಬತ್ತೆಂಟರಿಂದ ಎರಡು ಸಾವಿರದ ಎರಡು ಮೂರರ ಸಮಯ. ಆ ಅಂಗಡಿಗಳಲ್ಲಿ ಜಾಸ್ತಿ ವಿದ್ಯಾರ್ಥಿಗಳು ಸೇರುತ್ತಿದ್ದ ಜಾಗಗಳೆಂದರೆ ಸ್ಪೈರಲ್ ಬೈಂಡಿಂಗ್ ಮತ್ತು ಝೆರಾಕ್ಸ್, ವಿಡಿಯೋ ಕ್ಯಾಸೆಟ್, ಹೋಟೆಲ್ ಗಳು. Ade ರಸ್ತೆಯಲ್ಲಿ ಇದ್ದ ಒಂದು ಪ್ರಮುಖ ಆಕರ್ಷಣೆ ಎಂದರೆ ಆಂಜನೇಯ ಸ್ವಾಮಿ ದೇವಸ್ಥಾನ. ಕೆಲವರು ಹೇಳುವ ಪ್ರಕಾರ ಈ ದೇವಸ್ಥಾನ ರಾತ್ರೋ ರಾತ್ರಿ ಉದ್ಭವ ಆಗಿತ್ತು, ಹನುಮಪ್ಪ ಅಲ್ಲಿ ಕುಳಿತಮೇಲೆ ಜಾಗ ಆತನದೇ ಆಯಿತು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈಗ ಈ ಹನುಮಪ್ಪ ಸುಪ್ರಸಿದ್ಧ ಕೋರಂಟಿ ಹನುಮಪ್ಪನಷ್ಟೇ ಆಪ್ತನಾದ.
ತಿಮ್ಮಾಪುರಿ ಚೌಕನಿಂದ ಬರಬೇಕಾದರೆ ಈ ಹನುಮಪ್ಪನ ದೇವಸ್ಥಾನಕ್ಕೆ ಸ್ವಲ್ಪ ಮುಂಚೆ ಒಂದಸ್ತು ಮೇಲೆ ಒಂದು ದಿನ ಒಂದು ಸಿನಿಮಾ ಥಿಯೇಟರ್ ಶುರುವಾಯ್ತು. ಇದೇ ನಮ್ಮ ಕಥಾವಸ್ತು LD ಥಿಯೇಟರ್. ಅದು ಹೇಗೆ ಲೀಗಲ್ ಆಗಿತ್ತೋ ಗೊತ್ತಿಲ್ಲ ಆದರೆ ಅಲ್ಲಿ ಹೊಸ ಹಳೆಯ ಚಿತ್ರಗಳು ಬರುತ್ತಿದ್ದವು. ಲೇಸರ್ ಡಿಸ್ಕ್ ಪ್ರೊಜೆಕರ್ ಉಪಯೋಗಿಸಿ ಈಗಿನ ಮಲ್ಟಿಫ್ಲೆಕ್ಸ್ ಥರಾನೇ ಚಿತ್ರ ತೋರಿಸಲಾಗುತ್ತಿತ್ತು. ಆ ಲೇಸರ್ ಡಿಸ್ಕ್ ಸಾರ್ವಜನಿಕವಾಗಿ ತೋರಿಸುವುದು ಅಪರಾಧ ಎಂಬ ಸ್ಕ್ರೀನ್ ತೋರುತ್ತಿತ್ತು ಸಿನೆಮಾ ಶುರು ಆಗುವ ಮೊದಲು!!
ಜೋಶ್, ಫೈನಲ್ ಡೆಸ್ಟಿನೇಷನ್, ಮೆಟ್ರಿಕ್ಸ್, ಮಿಷನ್ ಇಂಪಾಸಿಬಲ್ ಅಂಥ ಒಳ್ಳೆ ಚಿತ್ರಗಳ ಜೊತೆ ರಾತ್ರಿ ಅಮೇರಿಕನ್ ಪೈ ನೋಡಿದ್ದೂ ಅಲ್ಲೇನೆ! ಒಂದು ಸಲ ಶೋಲೆ ಚಿತ್ರ ನೋಡಿದ ನೆನಪು ಅಲ್ಲಿ, ಆದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಅಂದು ನೋಡಿದ ಚಿತ್ರದಲ್ಲಿ ಕೊನೆಗೆ ಗಬ್ಬರ್ ಸಿಂಗ್ನನ್ನು ಪೊಲೀಸರು ಹಿಡಿದುಕೊಂಡು ಹೋಗುವದಿಲ್ಲ ಬದಲಾಗಿ ಠಾಕೂರ ಅವನನ್ನು ಒದ್ದಾಗ ಗೋಡೆಗೆ ಇರುವ ಸಲಾಕೆಗೆ ಬೆನ್ನು ಸಿಕ್ಕಿಕೊಂಡು ಅವನು ಸತ್ತೆ ಹೋಗುತ್ತಾನೆ. ಇದು ಆ ಚಿತ್ರದ ಆಲ್ಟರ್ನೆಟ್ ಮುಕ್ತಾಯ ಆಗಿತ್ತು.. ಹಿಂಸೆ ಅತಿ ಆಯಿತು ಎಂಬ ಸೆನ್ಸರ್ ಬೋರ್ಡ್ ಆಕ್ಷೇಪಣೆಯಿಂದ ಮತ್ತು ಅಪರಾಧಿಗಳಿಗೆ ಇನ್ನೊಂದು ಅವಕಾಶ ಕೊಡಬೇಕು ಅನ್ನುವ ಅಂದಿನ ಮನೋ ವಿಕಾರದ ಕಾರಣ ಚಿತ್ರದ ಕೊನೆಯನ್ನು ಬದಲಿಸಿದ್ದರು.
ಹೀಗೆ ಎಲ್ಲೂ ಕಾಣದ ಚಿತ್ರ ತೋರಿಸಿದ ಆ ಥಿಯೇಟರ್ ಮುಂದೆ ಮುಚ್ಚಿ ಹೋಯಿತು. ಈಗ ಕಲಬುರ್ಗಿಯಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನೋಡಿದಾಗ ನಾವು ಕಂಡ LD ಥಿಯೇಟರ್ ನೆನಪಾಗುತ್ತದೆ.
ಪ್ರತಿಕ್ರಿಯೆ (1)
ನಮ್ಮ ಕಾಲೇಜ ದಿನಗಳು ನೇನಪಾಯೀತು.
ಬರೆದದ್ದು ಸಾರ್ಥಕವಾಯ್ತು 🙂