ಸಾಗಿದಷ್ಟೂ ಮುಗಿಯದ ಕಿಕ್ಕಿರಿದ ರಸ್ತೆಯ ಮಧ್ಯೆ ವರುಣ್ ತನ್ನ ಬೈಕ್ ಅನ್ನು ನುಸಿಳಿಕೊಂಡು ಹೇಗೋ ಮನೆಯನ್ನು ತಲುಪಿದ. ಅದು ತಿಂಗಳಾಂತ್ಯದ ಶುಕ್ರವಾರದ ಸಂಜೆ, ಬೆಂಗಳೂರು ನಗರ ಪಾರ್ಟಿಯ ಗುಂಗಿನಲ್ಲಿತ್ತು. ವರುಣ್ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿ ಇನ್ನೂ ಒಂದು ತಿಂಗಳಷ್ಟೇ ಆಗಿತ್ತು. ಬೆಂಗಳೂರೂ ಹೊಸದು, ಕೆಲಸದ ಬದುಕೂ ಹೊಸದು. ಆತನ ಸ್ನೇಹಿತರೆಲ್ಲ ಅಂದು ರಾತ್ರಿ ಊಟಿಗೆ ಹೊರಡುವ ಯೋಜನೆಯಲ್ಲಿ ತಲ್ಲೀನರಾಗಿದ್ದರು. ಆದರೆ ವರುಣ್‌ಗೆ ಮಾತ್ರ ವಿಪರೀತ ಆಯಾಸ. ಪಕ್ಕದಲ್ಲಿದ್ದ ಕುರ್ಚಿಯೇ ಅವನನ್ನೇ ಕಾಯುತ್ತಿದ್ದಂತಿತ್ತು. ದಿನವಿಡೀ ಕೆಲಸದ ಭಾರವನ್ನು ಅದು ಅರ್ಥ ಮಾಡಿಕೊಂಡಿತೋ ಏನೋ! ಅದರ ಮೇಲೆ ಕಾಲು ಚಾಚಿ ಕುಳಿತು ಕಣ್ಣು ಮುಚ್ಚಿದ.

ಅಷ್ಟರಲ್ಲಿ ಪಕ್ಕದಲ್ಲಿದ್ದ ರೇಡಿಯೋದಲ್ಲಿ ಹಳೆಯ ಗೀತೆ ಮೊಳಗತೊಡಗಿತು.

"ಮಲ್ನಾಡ್ ಅಡಿಕೆ......." 

 ಆ ಸ್ವರಗಳು ಅವನನ್ನು ವರ್ಷಗಳ ಹಿಂದಿನ ಬಾಲ್ಯದ ನೆನಪಿನಂಗಳಕ್ಕೆ ಕರೆದೊಯ್ದವು.

******

ಮಲೆನಾಡಿನ ಕಾಡಿನ ಮಧ್ಯೆ, ಬೆಟ್ಟಗಳ ಮಡಿಲಲ್ಲಿ ಮಳೆಗೋಸ್ಕರವೇ ಹುಟ್ಟಿದಂತಿದ್ದ ಪುಟ್ಟ ಹಳ್ಳಿ "ಗುಡ್ಡೆಮಟ್ಟೆ". ಹನ್ನೆರಡು ಮನೆಗಳ ಆ ಊರಿನಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿದ್ದರು. ಅದು ಜಿಟಿಜಿಟಿ ಮಳೆಯ ಮುಸ್ಸಂಜೆ. ಪ್ರತಿ ಮನೆಯ ಬಚ್ಚಲಿನ ಹಂಡೆಯಿಂದ ಏಳುತ್ತಿದ್ದ ಬಿಸಿನೀರಿನ ಆವಿ ಹೆಂಚನ್ನು ಸೀಳಿ ಹೊರಬಂದು ಮಳೆಯ ಮಂಜಿನೊಂದಿಗೆ ಬೆರೆತುಹೋಗುತ್ತಿತ್ತು. ದೂರದಲ್ಲಿ ಕಪ್ಪೆಗಳ ಕೂಗು, ಹತ್ತಿರದಲ್ಲಿ ಹರಿಯುವ ತೊರೆಯ ಸದ್ದು, ಸುತ್ತಲೂ ಮಣ್ಣಿನ ಪರಿಮಳ.

ತೊತ್ತಪುರದ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ವರುಣ್‌ಗೆ ಆಗಲೇ ತಾಯಿ ತೀರಿ ಮೂರು ವರ್ಷಗಳಾಗಿದ್ದವು. ತಂದೆ ಗೋಪಾಲನೇ ಅವನಿಗೆ ಅಪ್ಪನೂ, ಅಮ್ಮನೂ ಆಗಿದ್ದರು. ಊರಿನ ಗೌರವಸ್ಥರಲ್ಲಿ ಒಬ್ಬರಾಗಿದ್ದ ಗೋಪಾಲನ ಮಾತಿಗೆ ಎಲ್ಲರೂ ಬೆಲೆ ಕೊಡುತ್ತಿದ್ದರು.

ಮಲೆನಾಡಿನ ಮಳೆ ಒಮ್ಮೆ ಹಿಡಿದರೆ ಸುಲಭಕ್ಕೆ ಬಿಡುವಂತದ್ದಲ್ಲ. ರಸ್ತೆಯ ಮೇಲಿದ್ದ ಮಣ್ಣು ಬತ್ತ ನೆಡಲು ಸಿದ್ಧವಾಗಿರುವ ಗದ್ದೆಯಂತಿತ್ತು. ಅಂಥ ಕೆಸರಿನಲ್ಲಿ ಶಾಲೆಯಿಂದ ಮನೆಗೆ ಬಂದ ವರುಣ್, ಸೀದಾ ಬಚ್ಚಲಿಗೆ ಹೋಗಿ ಹಂಡೆಯ ಬಿಸಿನೀರಿನಲ್ಲಿ ಸ್ನಾನ ಮಾಡಿ ದೇವರ ಮನೆಯ ಮುಂದೆ ಕುಳಿತ.

ಅಷ್ಟರಲ್ಲಿ ಅವನ ಗೆಳೆಯರ ಗುಂಪು ಮನೆಯ ಮುಂದೆ ಬಂದು, "ವರುಣ್... ವರುಣ್..." ಎಂದು ಕೂಗತೊಡಗಿತು. ಒಳಗಿದ್ದ ಗೋಪಾಲ, "ಬಂದ್ರು ಮಾಣಿಗಳು... ಊರು ಹಾಳು ಮಾಡೋಕೆ!" ಎಂದು ಗೊಣಗುತ್ತಾ ಅಡುಗೆಮನೆಯಲ್ಲಿ ರಾತ್ರಿ ಯಾವ ಸಾರು ಮಾಡಬೇಕು ಎಂಬ ಚರ್ಚೆಯಲ್ಲಿದ್ದರು.

ವರುಣ್ ಮೆಲ್ಲನೆ ಹೊರಗೆ ಜಾರಲು ಹೊರಟಾಗ,

"ಎಲ್ಲೂ ಹೋಗೋದು ಬೇಡ. ಪೇಟೆಗೆ ಹೋಗ್ಬೇಕು." ಎಂದರು ತಂದೆ. ಅಷ್ಟೇ ಸಾಕು. ವರುಣನ ಮನಸ್ಸು ಪೇಟೆಯತ್ತ ಓಡತೊಡಗಿತು. ಶ್ಯಾಮಣ್ಣನ ಅಂಗಡಿಯ ಪೆಪ್ಪರ್‌ಮಿಂಟ್, ಯಲ್ಲವ್ವನ ಕಾಂಡಿಮೆಂಟ್ಸ್‌ನ ಚೆಟ್ಟಂಬಡೆ ಎಲ್ಲವೂ ಕಣ್ಣಮುಂದೆ ಸುಳಿದಾಡಿದವು.

ಅಷ್ಟರಲ್ಲಿ ತೋಟದ ಆಳು ನಿಂಗಪ್ಪ ಎದುರಿಗೆ ಬಂದು, "ಎಲ್ಲಿಗೆ ಪಯಣ?" ಎಂದು ಕೇಳಿದ. ಅವನನ್ನು ನೋಡಿದ ಗೋಪಾಲ, "ನಾಳೆ ಇವನ ಹುಟ್ಟಿದ ಹಬ್ಬ. ಇವನ ಅಮ್ಮ ಹೇಳಿದ ಹಾಗೆ ಒಂದು ಹೊಸ ಶರ್ಟು ತರಬೇಕು ಎಂದರು. ಅದನ್ನು ಕೇಳಿದ ವರುಣ್ ಕುಣಿಯತೊಡಗಿದ. "ಈ ಬಣ್ಣದ ಶರ್ಟು... ಆ ಬಣ್ಣದ ಶರ್ಟು... ಬಣ್ಣದ ಬಣ್ಣದ ಶರ್ಟು..." ಎಂದು ಕುಣಿಯುತ್ತಾ ಮೆಟ್ಟಿಲಿಳಿಯುವಾಗ ಅಲ್ಲೇ ಇಟ್ಟಿದ್ದ ರೇಡಿಯೋಗೆ ಕಾಲು ತಗುಲಿತು.

ಧಡಾಕ್!

ರೇಡಿಯೋ ನೆಲಕ್ಕೆ ಬಿದ್ದು ಎರಡು ತುಂಡಾಯಿತು. ಬೆಳಗಿನ ಕೃಷಿ ವಾರ್ತೆಯಿಂದ ಹಿಡಿದು ರಾತ್ರಿ ಚಲನಚಿತ್ರ ಗೀತೆಗಳವರೆಗೆ ಒಂದನ್ನೂ ತಪ್ಪಿಸದೆ ಕೇಳುತ್ತಿದ್ದ ಗೋಪಾಲನಿಗೆ ಅದು ಜೀವದಷ್ಟು ಪ್ರಿಯವಾದ ವಸ್ತು. ಒಡೆದುಹೋದ ರೇಡಿಯೋ ಕಂಡ ಕ್ಷಣವೇ ಅವರ ಸಹನೆ ಒಡೆದುಹೋಯಿತು. ಬೈಯುತ್ತಲೇ ವರುಣ್‌ಗೆ ಎರಡು ಏಟು ಬಿದ್ದವು. ತಡೆಯಲು ಬಂದ ನಿಂಗಪ್ಪನಿಗೂ ಮಂಗಳಾರತಿ ಆಯಿತು. ಕಾರಣ, ಆ ರೇಡಿಯೋವನ್ನು ಮೆಟ್ಟಿಲಿನ ಬಳಿ ಇಟ್ಟದ್ದೇ ಅವನು!

******

ಮೊಬೈಲ್‌ನಲ್ಲಿ ಸಂದೇಶದ ಧ್ವನಿ ಕೇಳುತ್ತಿದ್ದಂತೆ ವರುಣ್ ನೆನಪಿನ ಲೋಕದಿಂದ ವಾಸ್ತವಕ್ಕೆ ಮರಳಿದ. ಸ್ಕ್ರೀನ್ ತೆರೆದು ನೋಡಿದ.

"Your account has been credited with ₹43,000."

ಅದು ಅವನ ಜೀವನದ ಮೊದಲ ತಿಂಗಳ ಸಂಬಳ. ಒಂದು ದೀರ್ಘ ನಿಟ್ಟುಸಿರು ಅವನ ಎದೆಯಿಂದ ಹೊರಬಂತು. ಇನ್ನೆರಡು ದಿನಗಳಲ್ಲಿ ಅಪ್ಪನ ಹುಟ್ಟುಹಬ್ಬ. ತಾಯಿ ಬದುಕಿದ್ದಾಗ ಮಾಡಿದ ಮಾತನ್ನು ಉಳಿಸಿಕೊಂಡಂತೆ, ಪ್ರತಿ ವರ್ಷ ಅಪ್ಪ ಅವನ ಹುಟ್ಟುಹಬ್ಬಕ್ಕೆ ಹೊಸ ಶರ್ಟು ಕೊಡುತ್ತಿದ್ದರು. "ಈಗ ನನ್ನ ಸರದಿ..." ಎಂದು ಮನಸ್ಸಿನಲ್ಲೇ ಹೇಳಿಕೊಂಡ ವರುಣ್, ತನ್ನ ಮೊದಲ ಸಂಬಳದಲ್ಲೇ ಅಪ್ಪನಿಗೆ ಒಂದು ಶರ್ಟು ಕೊಡಬೇಕೆಂದು ತೀರ್ಮಾನಿಸಿದ.

"ನಾನು ಊಟಿಗೆ ಬರಲ್ಲ. ಊರಿಗೆ ಹೋಗ್ಬೇಕು." ಎಂದು ಸ್ನೇಹಿತರಿಗೆ ಹೇಳಿ ಊರಿಗೆ ಕರೆ ಮಾಡಿದ. ಎಂದಿನಂತೆ ಫೋನ್ ಎತ್ತುತ್ತಿದ್ದ ನಿಂಗಪ್ಪ ಆದ್ಯಾಕೋ ಅಂದು ಫೋನ್ ಎತ್ತಲಿಲ್ಲ. 

ಅಂದಿನ ಸಂಜೆಯೇ ವರುಣ್ ಒಂದು ಶರ್ಟು ಖರೀದಿಸಿ, ಮರುದಿನ ಬೆಳಗ್ಗೆಯೇ ಹೊರಡಲು ಮಲಗಿದ.

 ******

ಬೆಳಕು ಮೂಡುವ ಮೊದಲೇ ಬೈಕ್ ಸ್ಟಾರ್ಟ್ ಆಯಿತು. ಅದು ಏಳು-ಎಂಟು ಗಂಟೆಗಳ ಸುದೀರ್ಘ ಪಯಣ. ಮಲೆನಾಡಿನ ಮಳೆ ಅವನಿಗೆ ಯಾವತ್ತೂ ಕಿರಿಕಿರಿಯಲ್ಲ; ಅದು ಮಲೆನಾಡಿನ ಪ್ರತಿಯೋರ್ವರಿಗೂ ಒಂದು ರೀತಿಯ ಸಂಭ್ರಮ.

ಹೀಗೆ ಮಳೆಯಲ್ಲಿ ಸಾಗುತ್ತಿರುವ ವರುಣ್ ಗೆ ರಸ್ತೆ ಬದಿಯ ಟೀ ಅಂಗಡಿಗಳು ಕೈಬೀಸಿ ಕರೆಯುವಂತಿದ್ದವು. ಅಲ್ಲಲ್ಲಿ ಬೈಕ್ ನಿಲ್ಲಿಸಿ ಚಹಾ ಕುಡಿದು, ಒಂದಷ್ಟು ಫೋಟೋ ಕ್ಲಿಕ್ಕಿಸಿ ಮತ್ತೆ ಪ್ರಯಾಣ ಮುಂದುವರಿಸಿದ.

ಗುಡ್ಡೆಮಟ್ಟೆಯ ಒಳರಸ್ತೆಗೆ ಬೈಕ್ ತಿರುಗಿದ ಕ್ಷಣವೇ ಅವನ ಮನಸ್ಸಿಗೆ ವರ್ಣಿಸಲಾಗದ ನೆಮ್ಮದಿ. ಆ ಉಬ್ಬು-ತಗ್ಗಿನ ರಸ್ತೆಗಳೇ ಆ ಊರಿನ ಹೆಗ್ಗುರುತು. ಒಮ್ಮೆ ಆ ರಸ್ತೆಗಳನ್ನು ಸೈಕಲ್‌ನಲ್ಲಿ ಹತ್ತುವುದೇ ಸಾಹಸವಾಗಿತ್ತು. ಅದೇ ದಾರಿಯಲ್ಲಿ ಅಪ್ಪನ M80 ಹಿಂದೆ ಕುಳಿತು ತೋಟಕ್ಕೂ, ಪೇಟೆಗೂ ಹೋಗುತ್ತಿದ್ದ ದಿನಗಳು ನೆನಪಾದವು.

ಹೀಗೆ ಮುಂದೆ ಸಾಗುತ್ತಿದ್ದಾಗ, ಎಂದಿಗೂ ಮುಚ್ಚದೇ ಇರುವ ಮನೆಯ ಗೇಟನ್ನು ನಿಂಗಪ್ಪ ಬೀಗ ಹಾಕುತ್ತಿರುವುದು ಅವನ ಕಣ್ಣಿಗೆ ಬಿತ್ತು. ಅವನು ಬೈಕ್ ಹತ್ತಿರ ಹೋಗಿ ಜೋರಾಗಿ ಹಾರ್ನ್ ಮಾಡಿದ. ಹಠಾತ್ತನೆ ತಿರುಗಿ ನೋಡಿದ ನಿಂಗಪ್ಪ ಬೆಚ್ಚಿಬಿದ್ದ. "ಹೊಯ್! ಎಂತ ಮರ್ರೆ... ಇಷ್ಟು ಬೇಗ ಬಂದ್ರಿ?"

ವರುಣ್ ನಗುತ್ತಾ, "ನಿಮ್ ಯಜಮಾನರ ಹುಟ್ಟಿದ್ ಹಬ್ಬ ಅಲ್ವೇ... ಬೇಗ ಬರಲೇಬೇಕು." ಎಂದು ಬೈಕ್ ಮನೆಯೊಳಗೆ ತೆಗೆದುಕೊಂಡು ಹೋದ. ಮನೆಯೊಳಗೆ ಕಾಲಿಟ್ಟ ಕ್ಷಣ ಅವನ ದೃಷ್ಟಿ ಒಂದು ಮೂಲೆಯತ್ತ ಹರಿಯಿತು. ಒಮ್ಮೆ ಬೆಳಗ್ಗೆಯಿಂದ ರಾತ್ರಿವರೆಗೆ ಮನೆಯನ್ನೇ ತನ್ನ ಧ್ವನಿಯಿಂದ ತುಂಬಿಸುತ್ತಿದ್ದ ಆ ರೇಡಿಯೋ ಈಗ ಧೂಳು ಹಿಡಿದು, ಜೇಡರ ಬಲೆಗಳ ಮಧ್ಯೆ ಮೌನವಾಗಿ ಮಲಗಿತ್ತು. ಅದರ ಮೌನವೇ ಮನೆಯ ಖಾಲಿತನವನ್ನು ಹೇಳುತ್ತಿತ್ತು.. 

ಕೈಯಲ್ಲಿದ್ದ ಶರ್ಟನ್ನು ಬಿಗಿಯಾಗಿ ಹಿಡಿದು ವರುಣ್ ಹಿತ್ತಲಿನ ಬಾಗಿಲು ತೆರೆದು, ಗದ್ದೆಯ ಒಂದು ಮೂಲೆಯಲ್ಲಿದ್ದ ಕಟ್ಟೆಯ ಬಳಿಗೆ ನಡೆದುಹೋಗಿ ಕಣ್ಣು ಮುಚ್ಚಿದ.

ಅಪ್ಪನ ನಗು...

ಅಪ್ಪನ ಧ್ವನಿ...

ಅಪ್ಪನ ಹೊಡೆತ...

ಅಪ್ಪನ ಮುದ್ದು...

ಅಪ್ಪನ ನೆನಪುಗಳು ಒಂದೊಂದಾಗಿ ಮನಸ್ಸಿನೊಳಗೆ ಹರಿಯತೊಡಗಿದವು.

ಹೌದು...

ಅಪ್ಪ ಅವನನ್ನು ಅಗಲಿ ಎರಡು ತಿಂಗಳಾಗಿತ್ತು.

ಅಂದು ವರುಣ್ ತನ್ನ ಮೊದಲ ಸಂಬಳದಲ್ಲಿ ಕೊಂಡ ಶರ್ಟು, ಅಪ್ಪನ ನೆನಪಿಗೆ ಹೊದಿಕೆಯಾಯಿತು. ಇತ್ತ ಮಲೆನಾಡಿನಲ್ಲಿ ಮಳೆ ಇನ್ನೂ ಸುರಿಯುತ್ತಲೇ ಇತ್ತು. 

ಆದರೆ... ಆ ದಿನ ವರುಣನ ಕಣ್ಣಲ್ಲಿ ಸುರಿದ ಮಳೆ ಮಾತ್ರ ಯಾರಿಗೂ ಕಾಣಲಿಲ್ಲ......

ಅಪ್ಪನಿಗೂ...