ಹಳ್ಳಿಗಳು ಸೊಗಸಿನ ಬಳ್ಳಿಗಳು. ಇಲ್ಲಿಯ ನಿತ್ಯದ ಬೆಳಗು, ಭಾಷೆ, ಸಂಸ್ಕೃತಿ, ಜಾತ್ರೆ-ನಿಬ್ಬಣ ಎಲ್ಲವೂ ತುಂಬಾ ಚಂದದ ಅನುಭವಗಳಿಂದ ಕೂಡಿರುತ್ತವೆ. ನಮ್ಮೂರ ಸಂಗಪ್ಪಗೌಡರು ವಿಚಿತ್ರ ಸ್ವಭಾವದ ವ್ಯಕ್ತಿ. ಮದುವೆಗೆ ಮುಂಚೆ ಅವ್ವನ ಆಶ್ರಯದಲ್ಲಿಯೇ ಹೆಚ್ಚು ಬೆಳೆದಿದ್ದರು. ಗೌಡರಿಗೆ ಪರೂರಿನ ಕುಸ್ತಿ ಆಟಗಳೆಂದರೆ ಪಂಚಪ್ರಾಣ. ಅವ್ವ ಎಷ್ಟೇ ಬೈದರೂ ಈ ಆಟಗಳನ್ನು ನೋಡಲು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಊರಲ್ಲಿ ಎಲ್ಲರೊಂದಿಗೆ ಆ ಗೌಡಕಿಯ ಗತ್ತಿನಲ್ಲಿಯೇ ಮಾತನಾಡಿಸುತ್ತಿದ್ದರು. ಇನ್ನೂ ಕೈಕಾಲು ಚೆನ್ನಾಗಿದ್ದು ಭಿಕ್ಷೆ ಬೇಡಲು ಬಂದವರನ್ನು ಗದರಿಸುತ್ತಿದ್ದ ಕಾರಣ, ಅವರು ಇಲ್ಲದ ವೇಳೆಯಲ್ಲೇ ಭಿಕ್ಷುಕರು ಓಣಿಯಲ್ಲಿ ಕಾಣಿಸುತ್ತಿದ್ದರು. ಗೌಡರಿಗೆ ಸಂಪ್ರದಾಯದ ಕಲೆಗಳು ಗೊತ್ತಿದ್ದ ಕಾರಣ ಊರಿನವರಿಗೆ ಇವರು ಅಚ್ಚುಮೆಚ್ಚು. ಹೊರಸು ಹೆಣೆಯುವುದು, ಚರ್ಮದ ಕೆಲವು ಕಾಯಿಲೆಗಳಿಗೆ ನಾಟಿ ಔಷಧಿ ನೀಡುವುದು ಹೀಗೆ ಹಲವು ಕಾರ್ಯಗಳಿಂದ ಪ್ರಸಿದ್ಧಿ ಪಡೆದಿದ್ದರು. ಅವರದ್ದು ಗಟ್ಟಿಮುಟ್ಟಾದ ಶರೀರ. ಗೌಡರಿಗೆ ಅವರವ್ವ ಊಟ ಬಡಿಸುವಾಗ ಗಿಂಡಿ ತುಂಬ ತುಪ್ಪ ಹಾಕುತ್ತಿದ್ದರು. ಮಗನಿಗೆ ಇದ್ದ ಹಾಲನ್ನೆಲ್ಲ ಕುಡಿಯಲು ಕೊಡುತ್ತಿದ್ದರು. ಹೀಗಾಗಿ ಅವರು ಒಳ್ಳೆಯ ಶರೀರ ಹೊಂದಿದ್ದರು. ಯಾವುದೇ ವ್ಯಸನಗಳನ್ನು ಹೊಂದಿರಲಿಲ್ಲ.
ಅವರವ್ವನ ಸಾವಿನ ನಂತರ ಮನೆಯ ತಿಜೋರಿ ಚಾವಿ ಮಾತ್ರ ಗೌಡಶ್ಯಾನಿ ಬಳಿಯಿತ್ತು. ಒಮ್ಮೆ ಅವಸರದಲ್ಲಿ ಗೌಡರು ಮಂಗಳಕಾರ್ಯಕ್ಕೆ ಬೆಳಗಾವಿಗೆ ಹೊರಟಿದ್ದರು. ಊರಿನ ಸಂಗಪ್ಪಗೌಡರು ಹಾಗೂ ಗೌಡಶ್ಯಾನಿ ಊರ ಹೊರಗಿನ ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದರು. ಗೌಡರು ಹೊಸ ಬಿಳಿ ಜುಬ್ಬಾ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಹೊರಟಿದ್ದರು. ಗೌಡರು ಮುಂದೆ ಸಾಗುತ್ತಿದ್ದರೆ, ಅವರ ಹಿಂದೆ ಗೌಡಶ್ಯಾನಿ ಯಾರಾದರೂ ಮನೆಯ ಮುಂದೆ ಮುಡಿಗೆ ಮುಡಿಯಲು ಮಲ್ಲಿಗೆ ಹೂ ಇದೆಯೇ ಎಂದು ಗಮನಿಸುತ್ತಿದ್ದರು. ಅದರ ಸಲುವಾಗಿ ಹೂವಿನ ಬಳ್ಳಿಯ ಅನ್ವೇಷಣೆಯಲ್ಲಿದ್ದರು. ಹೀಗಾಗಿ ಸ್ವಲ್ಪ ಅಂತರ ಬಿಟ್ಟು ಸಾಗುತ್ತಿದ್ದರು. ಮನೆಯೊಂದರ ಮುಂದೆ ಮಲ್ಲಿಗೆ ಸಿಕ್ಕ ಕಾರಣ ಹೂ ಕಿತ್ತಿಕೊಳ್ಳಲು ನಿಂತರು. ಅಷ್ಟರೊಳಗೆ ಬೆಳಗಾವಿಗೆ ಹೋಗುವ ಬಸ್ಸು ಬಂತು. ಗೌಡರು, “ಗೌಡಶ್ಯಾನಿ ಹಿಂದೆ ಇದ್ದಾಳೆ, ಹತ್ತುವಳು,” ಎಂದುಕೊಂಡು ಬಸ್ಸು ಏರಿದರು. ಅವರು ಮುಂದಿನ ಆಸನದಲ್ಲಿ ಆಸೀನರಾದರು. ಚಲಿಸುತ್ತಿರುವ ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ಕೇಳುತ್ತಾ ಬಂದು ಗೌಡರ ಮುಂದೆ ನಿಂತು, “ಟಿಕೆಟ್ ತಗೊಳ್ಳಿ,” ಎಂದರು. ಆಗ ಗೌಡರು, “ಹಿಂದ ನಮ್ಮ ಗೌಡಶ್ಯಾನಿ ಅದಾಳ, ನೋಡ. ಅಲ್ಲಿ ಹೋಗಿ ಕೇಳು,” ಎಂದರು. ಕಳೆದ ವರ್ಷದಿಂದ ಮನೆಯ ಖಜಾನಿಯ ಚಾವಿ ಗೌಡಶ್ಯಾನಿ ಹತ್ತಿರವೇ ಇದ್ದ ಕಾರಣ ಗೌಡರ ಜೇಬಿನಲ್ಲಿ ಕಾಸು ಇರಲಿಲ್ಲ. ನಿರ್ವಾಹಕ ಎರಡು-ಮೂರು ಸಾರಿ ಹಿಂದೆ ಹೋಗಿ, “ಗೌಡರ ಹೆಂಗಸರು ಯಾರು?” ಎಂದು ಕೇಳಿದರೂ ಅಲ್ಲಿದ್ದ ಹೆಂಗಸರು ಮುಖಮುಖ ನೋಡಿಕೊಳ್ಳುತ್ತಿದ್ದರು. ಅವರ ನಿರುತ್ತರ ಕಂಡು ಕೋಪದಿಂದ ಬಂದು, “ಹಿಂದ ಅಷ್ಟ ಮಂದಿ ಹೆಂಗಸರು ಕುಳಿತ್ತಾರ. ಅದರಾಗ ನಿಮ್ಮವಳು ಯಾರು ಹೇಳ್ರಿ?” ಎಂದ. ಆಗ ಗೌಡರು, “ಏಲ್ಲಿ ಅದಿ ಇಕಿಯಾ?” ಎಂದು ಕೇಳಿದರು.
ಅಲ್ಲಿ ಗೌಡಶ್ಯಾನಿ ಇಲ್ಲದ್ದನ್ನು ಕಂಡು , “ಅಲಿ ಇಕಿಣಾ ಬಸ್ಸು ಹತ್ತಲಿಲ್ಲೇನಪ್ಪಾ!” ಎಂದ. ಆಗ ಗೌಡರಿಗೆ ಗೌಡಶ್ಯಾನಿಯನ್ನು ಬಿಟ್ಟು ತಾವು ಮಾತ್ರ ಬಸ್ಸು ಹತ್ತಿರುವುದು ಅರಿವಾಯಿತು. ಅಲ್ಲೇ ಕುಳಿತಿದ್ದ ನಮ್ಮೂರಿನ ಸಹಪ್ರಯಾಣಿಕ, “ನಾನು ಟಿಕೆಟ್ ತಗಸಲೇನ್ರಿ ಗೌಡ್ರ?” ಎಂದರು. “ಬ್ಯಾಡ. ಅಕಿಗ ಒಂದು ಫೋನ್ ಮಾಡಿ, ಮುಂದಿನ ಊರಿನ ಬಸ್ ನಿಲ್ದಾಣ ಹಂತೇಕ ನಿಲ್ಲತೇನ ಅಂತಾ ಹೇಳು,” ಎಂದು ಮನೆಯಾಕೆಯನ್ನು ಶಪಿಸುತ್ತಾ ಬಸ್ಸು ಇಳಿದರು. ಅವರ ಮುಖ ನೋಡಿ ಪ್ರಯಾಣಿಕರು ಮುಸಿ ಮುಸಿ ನಗುತ್ತಾ ತಮ್ಮ ತಮ್ಮ ಜೇಬುಗಳನ್ನು ನೋಡಿಕೊಳ್ಳತೊಡಗಿದರು.
- ವಿನೋದ ರಾಮನಗೌಡ ಪಾಟೀಲ ಚಿಕ್ಕಬಾಗೇವಾಡಿ
ಪ್ರತಿಕ್ರಿಯೆ (1)
Thank you