ಬೆಳಗಾವಿ ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶ ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಪಶ್ಚಿಮಘಟ್ಟದ ಮಡಿಲಿನಲ್ಲಿ ನೆಲೆಸಿರುವ ಈ ಸುಂದರ ನಿತ್ಯಹರಿದ್ವರ್ಣ ಕಾಡು ಜೀವವೈವಿಧ್ಯದ ಅಪರೂಪದ ನಿಧಿಯಾಗಿದೆ. ತೇಗ, ಹಲಸು, ನೇರಳೆ ಸೇರಿದಂತೆ ನೂರಾರು ಸಸ್ಯ ಪ್ರಭೇದಗಳು ಇಲ್ಲಿ ಹಸಿರಿನ ಹೊದಿಕೆಯನ್ನು ಹರಡಿವೆ. ಕರಡಿ, ಕಾಡುಕೋಣ, ಚಿರತೆ, ಜಿಂಕೆ ಮೊದಲಾದ ಪ್ರಾಣಿಗಳಿಂದ ಸಮೃದ್ಧವಾಗಿರುವ ಈ ಕಾಡು, ಪ್ರಕೃತಿಯ ಅದ್ಭುತ ವೈಭವವನ್ನು ಸಾರುತ್ತದೆ. ಅರಣ್ಯದ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಸೂಕ್ಷ್ಮಜೀವಿಗಳು, ಕೀಟಗಳು ಹಾಗೂ ಚಿಟ್ಟೆಗಳ ಪಾತ್ರ ಮಹತ್ವದ್ದಾಗಿದೆ. ಬೆಟ್ಟ-ಗುಡ್ಡಗಳ ನಡುವೆ ಹರಿಯುವ ನದಿಗಳು, ಝರಿಗಳು ಮತ್ತು ಜಲಪಾತಗಳು ಈ ಕಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹಸಿರು ನೆಲದ ಮೇಲೆ ಅರಳಿರುವ ಬಿಳಿ ಹೂಗಳು ಹಿಮದ ಹೊದಿಕೆಯಂತೆ ಕಾಣಿಸಿದರೆ, ಗುಲಾಬಿ ಮತ್ತು ಹಳದಿ ಬಣ್ಣದ ಕಾಡುಹೂಗಳು ಪ್ರಕೃತಿಯೇ ಬಿಡಿಸಿದ ರಂಗೋಲಿಯಂತೆ ಕಂಗೊಳಿಸುತ್ತವೆ.

ಈ ಹೂಗಳ ಸುತ್ತ ಮುತ್ತ ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳು ಪ್ರಕೃತಿಯ ಚಲಿಸುವ ಚಿತ್ರಗಳಂತೆ ಕಾಣುತ್ತವೆ. ಅವುಗಳ ರೆಕ್ಕೆಗಳ ಮೇಲಿನ ಬಣ್ಣಗಳ ವೈವಿಧ್ಯತೆ ನೋಡುಗರ ಮನಸೆಳೆಯುತ್ತದೆ. ಗಿಡದಿಂದ ಗಿಡಕ್ಕೆ ಹಾರುತ್ತಾ, ಹೂವಿನಿಂದ ಹೂವಿಗೆ ಮಕರಂದ ಹೀರುತ್ತಾ ಅವುಗಳು ಬಣ್ಣಗಳ ಹಬ್ಬವನ್ನೇ ಸೃಷ್ಟಿಸುತ್ತವೆ. ಹೆಮ್ಮಡಗಾ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿದ್ದು, ಇಲ್ಲಿನ ಬಾವಲಿ ಗುಹೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಸಾಮಾನ್ಯವಾಗಿ ನಾವು ಒಂದೆರಡು ವಿಧದ ಚಿಟ್ಟೆಗಳನ್ನು ಮಾತ್ರ ಕಾಣುತ್ತೇವೆ. ಆದರೆ ಇಲ್ಲಿ ನೂರಾರು ಜಾತಿಯ ಚಿಟ್ಟೆಗಳು ಕಂಡುಬರುತ್ತವೆ. ಕಾಮನ್ ಜೆಜಬೆಲ್, ಕಾಮನ್ ಟೈಗರ್, ಪೀಕಾಕ್ ಪ್ಯಾನ್ಸಿ, ಸ್ಮಾಲ್ ಗ್ರಾಸ್ ಯೆಲ್ಲೋ ಮುಂತಾದ ಚಿಟ್ಟೆಗಳು ಬಣ್ಣಬಣ್ಣದ ವಸ್ತ್ರಗಳನ್ನು ಧರಿಸಿದ ಮಾದರಿಗಳಂತೆ ಕಾಣುತ್ತವೆ. ಗಿಡದಿಂದ ಗಿಡಕ್ಕೆ ಹಾರುತ್ತಾ ಅವುಗಳು ಪ್ರಕೃತಿಯ ಮಧ್ಯೆ ಪ್ಯಾಷನ್ ಶೋ ನಡೆಸುವಂತೆ ಭಾಸವಾಗುತ್ತದೆ. ಈ ಜೀವವೈವಿಧ್ಯದ ಕಾಡಿನಲ್ಲಿ ವಿವಿಧ ಜಾತಿಯ ಹಾವುಗಳು, ಕಪ್ಪೆಗಳು ಹಾಗೂ ಅನೇಕ ಕೀಟಗಳು ವಾಸಿಸುತ್ತವೆ. ಎತ್ತರದ ಬೆಟ್ಟಗಳಿಂದ ಧುಮ್ಮಿಕ್ಕುವ ಜಲಪಾತಗಳ ನಿನಾದ ಸಂಗೀತದಂತೆ ಕಿವಿಗೆ ಇಂಪು ನೀಡುತ್ತದೆ. ಬೆಟ್ಟದ ತುದಿಯಲ್ಲಿ ನಿಂತು ಕೆಳಗೆ ಹರಡಿರುವ ಹಸಿರು ಸಮುದ್ರವನ್ನು ನೋಡಿದಾಗ ಮನಸ್ಸು ಉಲ್ಲಾಸದಿಂದ ತುಂಬಿ ಹೋಗುತ್ತದೆ.ಪ್ರಕೃತಿಯ ಈ ಅದ್ಭುತ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಪರಿಸರದ ಸಮತೋಲನವನ್ನು ಕಾಪಾಡುತ್ತಿದೆ. ಮಾನವನ ಬದುಕನ್ನು ಸಮೃದ್ಧಗೊಳಿಸುವ ಇಂತಹ ಅರಣ್ಯಗಳಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಅದು ಕಡಿಮೆಯೇ. ಕಾಡು, ಚಿಟ್ಟೆಗಳು, ಹೂವುಗಳು ಮತ್ತು ಜಲಪಾತಗಳ ಈ ನೈಸರ್ಗಿಕ ಲೋಕ ನಮಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಕ್ಷಣವೂ ನೆನಪಿಸುತ್ತಿರುತ್ತದೆ.

ಚಿತ್ರ ಲೇಖನ : ವಿನೋದ ರಾ. ಪಾಟೀಲ, ಚಿಕ್ಕಬಾಗೇವಾಡಿ