ವಿಪರೀತ ಶೇಖೆಯಿಂದ ಕೊಂಚ ಸುತ್ತಾಡಬೇಕು, ಹಸಿರು ವನ ಹೇಳುವ ಕಥೆಗಳಿಗೆ ಕಿವಿಯಾಗಬೇಕು ಎಂದು ನಮ್ಮೂರ ಸಮೀಪದ ಪಶ್ಚಿಮ ಘಟ್ಟದ ಕಾಡಿನತ್ತ ಹೆಜ್ಜೆ ಹಾಕಿದೆವು. ನಗರಗಳ ಗದ್ದಲ, ಯಂತ್ರಗಳ ಉಷ್ಣ, ದಿನನಿತ್ಯದ ಒತ್ತಡ ಇವೆಲ್ಲವನ್ನೂ ಹಿಂದೆ ಬಿಟ್ಟು ಕಾಡಿನ ದಾರಿಯಲ್ಲಿ ಸಾಗುತ್ತಿದ್ದಂತೆ ತಂಪಾದ ಗಾಳಿ ನಮ್ಮನ್ನು ಬರಮಾಡಿಕೊಂಡಿತು. ನೆರಳು ಕೊಡುವ ಮರಗಳು ಮೌನ ಸ್ನೇಹಿತರಂತೆ ಜೊತೆಗಾದವು.

ರಸ್ತೆ ಬದಿಯಲ್ಲಿ ಮಾರಾಟಕ್ಕಿದ್ದ ನೇರಳೆ, ಹಲಸಿನ ತಳಿ, ಕವಳಿ ಹಣ್ಣುಗಳು ಕಣ್ಣಿಗೆ ಬಿದ್ದವು. ಕಾಡಿನ ರುಚಿಯನ್ನು ಹೊತ್ತ ಆ ಹಣ್ಣುಗಳನ್ನು ಸವಿಯುತ್ತಾ ಪ್ರಯಾಣ ಮುಂದುವರಿಸಿದೆವು. ವಾಹನದೊಳಗಿನ ಎ.ಸಿ.ಗಿಂತ ಪ್ರಕೃತಿಯ ಗಾಳಿಯೇ ಮಿಗಿಲೆಂದು ಭಾಸವಾಗಿ ಅದನ್ನೇ ಆಫ್ ಮಾಡಬೇಕಾಯಿತು.

ಸ್ವಲ್ಪ ಹೊತ್ತಿನ ಬಳಿಕ ನದಿತೀರ ತಲುಪಿದೆವು. ಕಲ್ಲುಬಂಡೆಯ ಮೇಲೆ ಕುಳಿತು ಕಾಡಿನ ಸಂಗೀತವನ್ನು ಆಲಿಸಿದೆವು. ಹರಿಯುವ ನೀರಿನ ಕಲರವ, ಎಲೆಗಳು ನೆಲಕ್ಕೆ ಬೀಳುವ ಮೃದು ಶಬ್ದ, ದೂರದಲ್ಲಿ ಕೂಗುವ ಹಕ್ಕಿಗಳ ನಿನಾದ—ಇವೆಲ್ಲವೂ ಸೇರಿ ಅಪರೂಪದ ಸಂಗೀತ ಕಛೇರಿಯಂತೆ ಭಾಸವಾಯಿತು.

ಆದರೆ ಈ ಯಾನದ ನಿಜವಾದ ಆಕರ್ಷಣೆ ಕಾಡುಹೂಗಳು. ಮರಗಳ ನಡುವೆ ಮೃದುವಾಗಿ ನಗುತಿದ್ದ ಮಲಬಾರ್ ಮೆಲಾಸ್ಟೋಮ್ ತನ್ನ ನೇರಳೆ ಬಣ್ಣದ ದಳಗಳಿಂದ ಕಣ್ಣಿಗೆ ಹಬ್ಬವಾಯಿತು. ಈ ಹೂವು ಪಶ್ಚಿಮ ಘಟ್ಟದ ಒದ್ದೆಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ತೆಳುವಾದ ದಳಗಳು ಬೆಳಗಿನ ಮಂಜನ್ನು ಹೊತ್ತು ಮಿನುಗುತ್ತವೆ.

ಸ್ವಲ್ಪ ದೂರದಲ್ಲಿ ಇಂಡಿಯನ್ ರೋಡೊಡೆಂಡ್ರಾನ್ ತನ್ನ ಕೆಂಪು ಮತ್ತು ಗುಲಾಬಿ ಮಿಶ್ರಿತ ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಪರ್ವತ ಪ್ರದೇಶದ ತಂಪನ್ನು ಇಷ್ಟಪಡುವ ಈ ಹೂವು ಕಾಡಿನ ನಡುವೆ ರಾಜಮನೆತನದ ಅಲಂಕಾರವಂತೆ ಕಾಣಿಸಿತು.

ಮತ್ತೆ ಕೆಲವು ಕಡೆ ಅರ್ಡಿಸಿಯಾ ಸಸ್ಯದ ಸಣ್ಣ ಬಿಳಿ ಮತ್ತು ಗುಲಾಬಿ ಹೂಗಳು ಮುತ್ತಿನ ಸರಗಳಂತೆ ಹೊಳೆಯುತ್ತಿದ್ದವು. ಚಿಕ್ಕದಾದರೂ ಗಮನ ಸೆಳೆಯುವ ಈ ಹೂಗಳು ಸೌಂದರ್ಯಕ್ಕೆ ಗಾತ್ರ ಮುಖ್ಯವಲ್ಲ ಎಂಬುದನ್ನು ನೆನಪಿಸಿದವು.

ಬಣ್ಣ ಬಣ್ಣದ ಈ ಹೂಗಳ ಸುತ್ತ ಚಿಟ್ಟೆಗಳ ನೃತ್ಯ ಇನ್ನಷ್ಟು ಮನಮೋಹಕವಾಗಿತ್ತು. ಹಳದಿ, ನೀಲಿ, ಕಿತ್ತಳೆ, ಕಪ್ಪು ಬಣ್ಣದ ಚಿಟ್ಟೆಗಳು ಹೂವಿನಿಂದ ಹೂವಿಗೆ ಹಾರಾಡುತ್ತಾ ಪ್ರಕೃತಿಯ ಹಬ್ಬವನ್ನೇ ನಡೆಸುತ್ತಿದ್ದವು. ಹೂಗಳು ಸುಗಂಧ ನೀಡುತ್ತಿದ್ದರೆ, ಚಿಟ್ಟೆಗಳು ಚೈತನ್ಯ ತುಂಬುತ್ತಿದ್ದವು.

ಕಾಡುಹಣ್ಣುಗಳು ನಾಲಿಗೆಗೆ ರುಚಿ ತಂದರೆ, ಕಾಡುಕುಸುಮಗಳು ಕಣ್ಣಿಗೆ ಮುದ ನೀಡಿದವು. ದಂಡೆಯ ಮೇಲೆ ಕುಳಿತ ಕಪ್ಪೆಗಳು ನೀರಿನತ್ತ ಜಿಗಿಯುತ್ತಿದ್ದ ದೃಶ್ಯ ಬಾಲ್ಯದ ಆಟಗಳನ್ನು ನೆನಪಿಸಿತು.

ಇಂದಿನ ಮಾನವ ಬದುಕಿಗೆ ಇಂತಹ ಕಾಡುಯಾನಗಳು ಅತ್ಯಗತ್ಯ. ಹೂಗಳ ಸೌಂದರ್ಯ ನೋಡುವುದೇ ಮನಸ್ಸಿಗೆ ಔಷಧಿ. ಪ್ರಕೃತಿಯ ನಡುವೆ ಕಳೆದ ಕೆಲವು ಗಂಟೆಗಳು ಹಲವು ದಿನಗಳ ಆಯಾಸವನ್ನೇ ಕರಗಿಸಿಬಿಟ್ಟವು.

ಕಾಡು ಹೇಳುವ ಪಾಠ ಒಂದೇ—ಬಣ್ಣಗಳಿಂದ ಬದುಕು ಸುಂದರವಾಗುತ್ತದೆ; ಪ್ರಕೃತಿಯಿಂದ ಬದುಕು ಸಮತೋಲನ ಹೊಂದುತ್ತದೆ.

ಚಿತ್ರ ಲೇಖನ ವಿನೋದ ರಾ ಪಾಟೀಲ ಚಿಕ್ಕಬಾಗೇವಾಡಿ