ಒಂದು ಕಾಲದಲ್ಲಿ ಅತ್ಯಂತ ಜನಪ್ರೀಯವಾದ ಜನಪದ ಸಾಹಿತ್ಯವು, ಇಂದು ಕಾನ್ವೆಂಟ್ ಸ್ಕೂಲ್ ಗಳ ಇಂಗ್ಲಿಷ್ ವ್ಯಾಮೋಹದಿಂದ , D J song ಗಳ ಭರಾಟೆಯಿಂದ, ಧಾರವಾಹಿಗಳ ದರ್ಪ ದಿಂದ, ಲೈವ್ ಶೋ ಗಳ ಶೋಕಿಯಿಂದ, ಸೊರಗಿ ಸುಣ್ಣವಾಗಿ, ಇತಿಹಾಸದ ಪುಟಗಳಲ್ಲಿ ಲೀನಾವಾಗುತ್ತಿದೆ.

ಈ ಜಾನಪದಗಳಲ್ಲಿ, ಮಾನವೀಯ ಸಂಬಂಧಗಳ ಮೌಲ್ಯ ಗಳನ್ನು, ಸಂಸ್ಕಾರವನ್ನು, ಧಾರ್ಮಿಕ ಪರಂಪರೆ ಯನ್ನು ಸರಳವಾಗಿ ಮತ್ತು ಮರ್ಮಿಕವಾಗಿ ಮುಂದಿನ ಪೀಳಿಗೆಗೆ ತಿಳುಸುವ ತತ್ವವಿದೆ, ಸತ್ವವಿದೆ, ಸಾಹಿತ್ಯದ ರಸದೌತಣವಿದೆ. ಆಗಿನ ಹೆಣ್ಣುಮಕ್ಕಳು ತಮ್ಮ ಮನದಾಳದ ಭಾವನೆಗಳನ್ನು, ದುಗುಡು ದುಮ್ಮಾನಗಳನ್ನು, ಅಂತರಾಳದ ಅಭಿಪ್ರಾಯಗಳನ್ನು ಇಂತಹ ಜಾನಪದಗಳ ಮೂಲಕ ವ್ಯಕ್ತಪಡಿಸುತ್ತಿದ್ದರು, ಅಂತಹ ಕೆಲವೊಂದು ನುಡಿಗಳು ಇಲ್ಲಿವೆ.

ಬ್ಯಾಸಗಿ ದಿವಸಕ್ಕ, ಬೇವಿನ ಮರ ತಂಪ, ಭೀಮಾ ರತಿ ಎಂಬ ಹೊಳೆ ತಂಪ, ಭೀಮಾ ರತಿ ಎಂಬ ಹೊಳೆ ತಂಪ, ಹಡೆದವ್ವ, ನೀ ತಂಪ ನನ್ನ ತವರೀಗೆ....

ಯಾರೂ ಇದ್ದರೂ ನನ್ನ ತಯಾವ್ವನ ಹೋಲರು, ಸಾವಿರ ಕೊಳ್ಳಿ ಒಲೆಯಾಗ, ಸಾವಿರ ಕೊಳ್ಳಿ ಒಲೆಯಾಗ, ಇದ್ದರೂ ಜ್ಯೋತಿ ನಿನ್ನ ಯಾರು ಹೋಲುವರ.....

ತಾಯಿ ಇಲ್ಲದ ಮನೆಗೆ, ಹೋಗದಿರು ನನ್ನ ಮನವೇ ನೀರಿಲ್ಲದ ಕೆರೆಗೆ ಕರು ಬಂದು, ನೀರಿಲ್ಲದ ಕೆರೆಗೆ ಕರು ಬಂದು, ತಿರುಗಾಗ ಆಗ ನೋಡದರ ದುಃಖಗಳ...

ಹೆಣ್ಣು ಮಕ್ಕಳ ದುಃಖ, ಹೆತ್ತವ್ವ ಬಲ್ಲಳು, ಹುತ್ತದ ಒಳಗಿರೋ ಸರುಪನ ಹುತ್ತದ ಒಳಗಿರೋ ಸರುಪನ, ಬೇಗೆಯ ನೆತ್ತಿಯ ಮೇಲಿರುವ ಶಿವ ಬಲ್ಲ....

ತಾಯವ್ವನ ನೆನೆಯೂದು, ಯಾ ವ್ಯಾಳೆ ಯಾ ಹೊತ್ತ, ಊರೆಲ್ಲ ಉಂಡು ಮಲಗಾನ, ಊರೆಲ್ಲ ಉಂಡು ಮಲಗಾನ, ಬೆಳ್ಳಿಚಿಕ್ಕಿ ಹೊಂಡಾಗ ಹಡೆದವ್ವನ ನೆನದೇನ....

ತಾಯವ್ವಗ ಬೈಬ್ಯಾಡ ತಿಳಿಗೇಡಿ ನನ್ನ ತಮ್ಮ ಬಾಳ ದಿನದಾಕಿ ಹಡೆದವ್ವ, ಬಾಳ ದಿನದಾಕಿ ಹಡೆದವ್ವನ ಬೈದರ ಬಾಳ ಮರುಗ್ಯಾಳ ಮನದಾಗ...

ಶ್ರೀ ಸಂಗಮೇಶ ಕೆರೂಟಗಿ