ನೆಂಟರ ಮನೆಯಲ್ಲಿ ಉಳಿದುಕೊಳ್ಳೋದು, ಕರೆಂಟ್ ಇಲ್ಲದ ಸಂಜೆ ಕಳೆಯೋದು, ಬೆಳದಿಂಗಳ ಊಟ ಮಾಡೋದು, ಬೇಸಿಗೆಯಲ್ಲಿ ಮನೆ ಮೇಲೆ ಹಾಸಿಗೆ ಹಾಸಿ ಮಲಗೋದು, ಗೆಳೆಯರೆಲ್ಲ ಸೇರಿ ಬಯಲಲ್ಲಿ ಆಡೋದು ಒಂದೊಂದು ಮರೆಯದ ಅನುಭವಗಳು.
ನೆಂಟರ ಮನೆಯಲ್ಲಿ ಉಳಿದುಕೊಂಡಾಗ ಅವರ ಮಾತು ಕೇಳಲೇಬೇಕಾಗುತ್ತಿತ್ತು. ಅವರ ಪದ್ಧತಿಗೆ ಅನುಗುಣವಾಗಿ ದಿನ ಕಳೆಯುತ್ತಿದ್ದೆವು. ಬೇಗ ಏಳುವುದು, ಬೇಗ ಮಲಗುವುದು, ಟಿವಿ ಕಡಿಮೆ ನೋಡೋದು, ಕೆಲಸದಲ್ಲಿ ಸಹಾಯ ಮಾಡೋದು. ಅದು ಒಂದು ರೀತಿ ಟ್ರೈನಿಂಗ್ ಆಗಿರುತ್ತಿತ್ತು.
ಸಂಜೆ ದೀಪ ಹಚ್ಚೊ ಸಮಯಕ್ಕೆ ಕರೆಂಟ್ ಹೋದರೆ ಏನೋ ಒಂದು ಥರ ಖುಷಿ! ಅವಾಗ ತಾನೇ ಓದಲು ತೆರೆದ ಪುಸ್ತಕ ಎತ್ತಿಟ್ಟು, ಮಾಳಿಗೆ ಏರಿ ಗೆಳೆಯರೊಂದಿಗೆ ಇಲ್ಲವೇ ಅಣ್ಣ ಅಕ್ಕನ ಜೊತೆ ಹರಟುತ್ತಿದ್ದೆವು.
ಆಕಾಶ ಆವಾಗ ನಿಚ್ಚಳವಾಗಿ, ತಾರಾ ಮಂಡಲ ಮನೆಯಂಗಳದಲ್ಲೇ ಕಾಣುತ್ತಿತ್ತು. ಸಪ್ತಋಷಿ ಮಂಡಲ, ಧ್ರುವ ನಕ್ಷತ್ರ ನೋಡುತ್ತಿದ್ದೆವು. ಬೆಳದಿಂಗಳಿದ್ದರೆ ಅದೆಲ್ಲ ಅಷ್ಟು ಕಾಣುತ್ತಿರಲಿಲ್ಲ, ಆಗ ತುಂಬು ಚಂದ್ರನನ್ನು ನೋಡುವುದೇ ಒಂದು ಖುಷಿ. ತಡ ರಾತ್ರಿ ಆದರೂ ಕರೆಂಟ್ ಬರದಿದ್ದರೆ ಅಲ್ಲೇ ಬೆಳದಿಂಗಳ ಊಟವೂ ಆಗುತ್ತಿತ್ತು. ಬೇಸಿಗೆ ಕಾಲ ಇದ್ದರೆ ರಾತ್ರಿ ಮಾಳಿಗೆ ಮೇಲೆಯೇ ಹಾಸಿಗೆ ಹಾಸಿ ನಕ್ಷತ್ರ ನೋಡುತ್ತಾ ಮಲಗಿದ್ದು ನೆನೆದರೆ ಈಗಲೂ ಮಂದಹಾಸ ಬಂದು ಹೋಗುತ್ತದೆ.
ಸಂಜೆ ಗೋಧೂಳಿ ಸಮಯದಲ್ಲಿ ಓದಿದ್ದು ಕಮ್ಮಿ, ಆವಾಗ ಏನಿದ್ದರೂ ಹೊರಗೆ ಆಡೋ ಸಮಯ. ಮುಟ್ಟಾಟ, ಗಿಲ್ಲಿ ದಾಂಡು, ಲಗೋರಿ ಮತ್ತೆ ಏನೇನೋ ಆಟಗಳು! ಮುಂದೆ ಸ್ವಲ್ಪ ದೊಡ್ಡವರಾದಾಗ ಕ್ರಿಕೆಟ್ ಆಟ ಆಡದ ದಿನಗಳೇ ಇಲ್ಲ. ಆಟ ಆಡಿ ಆಡಿ ಸುಸ್ತಾಗಿ ಮನೆಗೆ ಬಂದ ಮೇಲೆ ಓದಬೇಕು. ಊಟಕ್ಕೆ ತಾಟು ಹಾಕಿದೊಡನೆ ಓದಿಗೆ ಮುಕ್ತಿ.
ಆ ದಿನಗಳೇ ಬೇರೆ ನಾವು ಕೂಡ ಬೇರೇನೇ ಇದ್ದೆವು. ಇಂದಿನ ಮಕ್ಕಳು ಆಡೋ ಆಟಗಳು ಬೇರೇನೇ! ರೋಬ್ಲಾಕ್, ಕ್ಯಾಂಡಿ ಕ್ರಶ್, ಪಬ್ಜಿ ಮತ್ತೇನೇನೋ. ಇಂದಿನ ಮಕ್ಕಳು ನಮ್ಮ ಅನುಭವಗಳಿಂದ ವಂಚಿತರಾಗಿರೋದು ನಿಜಕ್ಕೂ ವಿಷಾದನೀಯ. ಏನು ಮಾಡೋದು! ಕಾಲಯ ತಸ್ಮೈ ನಮಃ!
ಪ್ರತಿಕ್ರಿಯೆ (1)
ಸಪ್ತರ್ಷಿಗಳನ್ನ ಆವಾಗಲೇ ನೋಡ್ತಿದ್ವಿ.. ಈಗ ಮುಖ ಮೇಲೆ ಎತ್ತೋಡೆ ಕಷ್ಟ... ಯಾವಾಗಲೂ ನವ ವಧುವಿನಂತೆ ಕೆಳಗೆ ಮುಖ ಮಾಡಿರ್ತೀವಿ..
ha ha ಅಕ್ಷರಶಃ ನಿಜ.. ನವ ವಧುವೇ 😄