ಭಾರತದ ಇತಿಹಾಸದಲ್ಲಿ ಕೇವಲ ವ್ಯಕ್ತಿಯಾಗಿ ಉಳಿಯದೆ ಶೋಷಿತರ ಆತ್ಮಗೌರವದ ಸಂಕೇತವಾದವರು ದಾಕ್ಷಾಯಿಣಿ ವೇಲಾಯುದನ್. ಬಡತನ, ಜಾತಿ ತಾರತಮ್ಯ ಹಾಗೂ ಲಿಂಗ ಅಸಮಾನತೆಯನ್ನು ಮೆಟ್ಟಿ ನಿಂತು, ಭಾರತದ ಸಂವಿಧಾನ ರಚನಾ ಸಭೆಯ (Constituent Assembly) ಅತ್ಯುನ್ನತ ಪೀಠ ಅಲಂಕರಿಸಿದ ಏಕೈಕ ದಲಿತ ಮಹಿಳೆಯ ಜೀವನಗಾಥೆ ಇಂದಿಗೂ ಅಪೂರ್ವ ಸ್ಫೂರ್ತಿ. ಜುಲೈ ೪ ರ ಅವರ ಜನ್ಮದಿನದಂದು ಆ ಧೀಮಂತ ಅಸ್ಮಿತೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ಅಂದು ಕೇರಳದಲ್ಲಿದ್ದ ಜಾತಿ ಪದ್ಧತಿಯ ಕರಾಳ ಶೋಷಣೆಗೆ ಬೇಸತ್ತು ಲಕ್ಷಾಂತರ ದಲಿತರು ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದರು. ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಸ್ವಂತ ತಾಯಿ, ಸಹೋದರರು ಸೇರಿದಂತೆ ಇಡೀ ಕುಟುಂಬವೇ ಧರ್ಮ ಬದಲಾಯಿಸಿದರೂ, ದಾಕ್ಷಾಯಿಣಿ ಮಾತ್ರ ಆ ಮತಾಂತರದ ಬಿರುಗಾಳಿಗೆ ಸಿಲುಕಲಿಲ್ಲ. ಇತಿಹಾಸದ ಕಹಿ ಅನುಭವಗಳ ನಡುವೆಯೂ ಸನಾತನ ಧರ್ಮದ ಮೂಲ ತತ್ವಗಳ ಮೇಲಿನ ಅಚಲ ಪ್ರೀತಿಯಿಂದ ಸ್ವಧರ್ಮದಲ್ಲೇ ಉಳಿದುಕೊಂಡ ಅವರು, ಆಧುನಿಕ ಭಾರತದ ಇತಿಹಾಸದಲ್ಲಿ 'ಹಿಂದೂತ್ವದ ಸಾಕ್ಷಿ ಪ್ರಜ್ಞೆ'ಯಾಗಿ ಮೂಡಿಬರುತ್ತಾರೆ.

೧. ಅವಮಾನಗಳ ಸೀಳಿ ಮೂಡಿದ ಅಕ್ಷರ ಶಕ್ತಿ

ದಾಕ್ಷಾಯಿಣಿ ಅವರು ಜುಲೈ ೪, ೧೯೧೨ ರಂದು ಕೇರಳದ ಕೊಚ್ಚಿನ್ ಸಮೀಪದ ಮುಲವುಕಾಡ್ ಎಂಬ ದ್ವೀಪದಲ್ಲಿ 'ಪುಲಯ' ಸಮುದಾಯದಲ್ಲಿ ಜನಿಸಿದರು. ಇವರ ಸೋದರಮಾವ, ಪ್ರಸಿದ್ಧ ಕವಿ ಮತ್ತು ಸುಧಾರಕ ಪಂಡಿತ್ ಕೆ.ಪಿ. ಕರುಪ್ಪನ್ ಅವರೇ ಇವರ ವೈಚಾರಿಕ ಪ್ರಜ್ಞೆಗೆ ಪ್ರೇರಣೆ. ಛಲಬಿಡದ ದಾಕ್ಷಾಯಿಣಿ ೧೯೩೫ ರಲ್ಲಿ ಎರ್ನಾಕುಲಂ ಮಹಾರಾಜ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಬಿ.ಎ. ಪದವಿ ಮುಗಿಸಿ, ಇಡೀ ಭಾರತದಲ್ಲೇ ಪದವಿ ಮುಗಿಸಿದ ತಮ್ಮ ಸಮುದಾಯದ ಮೊದಲ ದಲಿತ ಮಹಿಳೆಯಾದರು.

ಆದರೆ, ಕಾಲೇಜಿನಲ್ಲಿ ಮೇಲ್ಜಾತಿಯ ಪ್ರಾಧ್ಯಾಪಕರೊಬ್ಬರು ಇವರನ್ನು ಪ್ರಾಯೋಗಿಕ ತರಗತಿಗಳ (Lab Practical) ವೇಳೆ ಒಳಗಡೆ ಬಿಟ್ಟುಕೊಳ್ಳದೆ, ಕಿಟಕಿಯ ಹೊರಗೆ ನಿಲ್ಲಿಸುತ್ತಿದ್ದರು. ದಾಕ್ಷಾಯಿಣಿ ಕಿಟಕಿಯ ಹೊರಗೆ ನಿಂತು, ಕಣ್ಣೀರು ಒರೆಸಿಕೊಳ್ಳುತ್ತಲೇ ಪಾಠ ಕೇಳಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಮಾಜಕ್ಕೆ ಪ್ರಬಲ ಉತ್ತರ ನೀಡಿದರು.

೨. ಬಾವಿ ನೀರಿನ ವಿಡಂಬನೆ ಮತ್ತು ಸ್ವಧರ್ಮ ನಿಷ್ಠೆ

ಇವರ ಹಿರಿಯ ಸಹೋದರ ಕೃಷ್ಣನ್ ಸೇರಿದಂತೆ ಕುಟುಂಬದ ಬಹುತೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದರು. ಒಮ್ಮೆ ಇವರ ಕುಟುಂಬ ಬಾಡಿಗೆ ಮನೆಯೊಂದರಲ್ಲಿ ಇದ್ದಾಗ ಕಣ್ಣು ತೆರೆಸುವ ಘಟನೆಯೊಂದು ನಡೆಯಿತು. ಮತಾಂತರಗೊಂಡು 'ಕ್ರಿಶ್ಚಿಯನ್' ಆಗಿದ್ದ ಇವರ ತಾಯಿಗೆ ಆ ಮನೆಯ ಬಾವಿಯಿಂದ ನೀರು ಸೇದಲು ಮೇಲ್ಜಾತಿಯವರು ಅವಕಾಶ ನೀಡಿದ್ದರು. ಆದರೆ, ಅದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಧರ್ಮ ಬದಲಾಯಿಸದೆ 'ಹಿಂದೂ ದಲಿತ ಮಹಿಳೆ'ಯಾಗಿಯೇ ಉಳಿದಿದ್ದ ದಾಕ್ಷಾಯಿಣಿ ಅವರಿಗೆ ನೀರು ನಿರಾಕರಿಸಲಾಯಿತು!

ಧರ್ಮ ಬದಲಾಯಿಸಿದರೆ ಸಮಾಜದಲ್ಲಿ ಸಿಗುವ ಈ ತಾತ್ಕಾಲಿಕ 'ಸ್ಪರ್ಶದ ಅರ್ಹತೆ' ಒಂದು ಸಾಮಾಜಿಕ ವಿಡಂಬನೆ ಎಂದು ಆಕೆಗೆ ಮನವರಿಕೆಯಾಯಿತು. ಮತಾಂತರವು ಕೇವಲ ತಾತ್ಕಾಲಿಕ ಪಲಾಯನವಾದವೇ ಹೊರತು ಅದರಿಂದ ಸಮಾಜದ ಮನಸ್ಥಿತಿ ಬದಲಾಗುವುದಿಲ್ಲ ಎಂಬುದನ್ನು ಅರಿತ ಆಕೆ,

"ನನ್ನ ಸಹೋದರರು ಧರ್ಮ ಬದಲಾಯಿಸಿ ಸೌಲಭ್ಯ ಪಡೆಯಬಹುದು, ಆದರೆ ನಾನು ನನ್ನ ಸ್ವಧರ್ಮದ ಕಂದಾಚಾರಗಳನ್ನು ಇಲ್ಲೇ ಇದ್ದುಕೊಂಡು ಎದುರಿಸಿ, ನನ್ನ ಸ್ವಂತ ಅರ್ಹತೆಯಿಂದ ಗೌರವ ಗಳಿಸುತ್ತೇನೆ"

ಎಂದು ಸಾರುವ ಮೂಲಕ ಹಿಂದೂ ಧರ್ಮದ ಒಳಗೇ ಇದ್ದು ಹೋರಾಡುವ ಸಂಕಲ್ಪ ಮಾಡಿದರು.

೩. ಸ್ವಾಭಿಮಾನದ ನಡಿಗೆ ಮತ್ತು ರಾಜಕೀಯ ಹೆಜ್ಜೆ

೧೯೪೦ ರ ಸೆಪ್ಟೆಂಬರ್‌ನಲ್ಲಿ ಪ್ರಖ್ಯಾತ ದಲಿತ ನಾಯಕ ಹಾಗೂ ಗಾಂಧಿವಾದಿ ಆರ್. ವೇಲಾಯುದನ್ ಅವರೊಂದಿಗೆ ವರ್ಧಾದ ಮಹಾತ್ಮಾ ಗಾಂಧಿ ಆಶ್ರಮದಲ್ಲಿ ಇವರ ವಿವಾಹವಾಯಿತು. ಖುದ್ದಾಗಿ ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರಬಾ ಸಾಕ್ಷಿಯಾಗಿ ನಿಂತು ಆಶೀರ್ವದಿಸಿದ್ದರು. ವಿದ್ಯಾಭ್ಯಾಸದ ನಂತರ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರೂ ಅಲ್ಲೂ ಜಾತಿ ತಾರತಮ್ಯ ಎದುರಾದಾಗ, ಬದುಕಿನ ನೌಕರಿಗಿಂತ ಶೋಷಿತ ಸಮಾಜದ ಧ್ವನಿಯಾಗಲು ಕೆಲಸ ತ್ಯಜಿಸಿದರು.

ದಲಿತರು ರಸ್ತೆಯಲ್ಲಿ ನಡೆಯುವುದನ್ನೂ ಸಹಿಸದ ಕಾಲದಲ್ಲಿ, ತಮ್ಮ ಸ್ವಾತಂತ್ರ್ಯ ಸಾರಲು ಸ್ವಂತ ಕಾರ್ ಒಂದನ್ನು ಖರೀದಿಸಿ ಅದರಲ್ಲಿ ಗಾಂಭೀರ್ಯದಿಂದ ಸವಾರಿ ಮಾಡುವ ಮೂಲಕ ಅಸ್ಪೃಶ್ಯರ ಆತ್ಮವಿಶ್ವಾಸ ಹೆಚ್ಚಿಸಿದರು. ನಂತರ ಕೊಚ್ಚಿನ್ ಕೌನ್ಸಿಲ್‌ಗೆ ನಾಮನಿರ್ದೇಶನಗೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಹೆಜ್ಜೆ ಇಟ್ಟರು.

೪. ಹಿಂದೂ ಅಸ್ಮಿತೆಯೊಂದಿಗೆ ಸಂವಿಧಾನ ಸಭೆಯಲ್ಲಿ ಗರ್ಜನೆ

೧೯೪೬ ರಲ್ಲಿ ಭಾರತದ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ೧೫ ಮಹಿಳೆಯರಲ್ಲಿ ಇವರೊಬ್ಬರೇ ದಲಿತ ಮಹಿಳೆಯಾಗಿದ್ದರು ಮತ್ತು ಅತ್ಯಂತ ಕಿರಿಯ ಸದಸ್ಯರಾಗಿದ್ದರು. ಸಭೆಯಲ್ಲಿ ದಲಿತರಿಗೆ ಧರ್ಮದ ಆಧಾರದ ಮೇಲೆ ಪ್ರತ್ಯೇಕ ಮತಕ್ಷೇತ್ರ ಅಥವಾ ವಿಶೇಷ ರಕ್ಷಣೆಗಳನ್ನು ಕೊಡುವುದನ್ನು ಅವರು ತೀವ್ರವಾಗಿ ವಿರೋಧಿಸಿದರು. ಬಲಿಷ್ಠ ಮತ್ತು ಒಗ್ಗಟ್ಟಿನ ಹಿಂದೂ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ 'ಪ್ರತ್ಯೇಕ ಮತಕ್ಷೇತ್ರ'ದ ನೀತಿಯನ್ನು ವಿರೋಧಿಸಿ, ಗಾಂಧೀಜಿಯವರ ಜಂಟಿ ಮತಕ್ಷೇತ್ರ ಹಾಗೂ ವಿಕೇಂದ್ರೀಕರಣದ ತತ್ವವನ್ನು ಬೆಂಬಲಿಸಿದರು.

ನವೆಂಬರ್ ೨೯, ೧೯೪೮ ರಂದು ಸಂವಿಧಾನದ ಅಸ್ಪೃಶ್ಯತೆ ನಿವಾರಣಾ ವಿಧಿಯ ಚರ್ಚೆಯಲ್ಲಿ ಗರ್ಜಿಸಿದ ದಾಕ್ಷಾಯಿಣಿ, "ಕೇವಲ ಕಾಗದದ ಮೇಲೆ ಕಾನೂನು ಬರೆದರೆ ಸಾಲದು, ಸಮಾಜದ ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು" ಎಂದು ಪ್ರತಿಪಾದಿಸಿದರು. ಇವರ ಹೋರಾಟದ ಫಲವಾಗಿಯೇ ಸಂವಿಧಾನದ ೧೭ನೇ ವಿಧಿ (Article 17) ಜನ್ಮತಾಳಿ ಅಸ್ಪೃಶ್ಯತೆ ಮತ್ತು ಬಲವಂತದ ಜೀತ ಪದ್ಧತಿಯನ್ನು ನಿಷೇಧಿಸಲಾಯಿತು. ಹಿಂದೂ ಧರ್ಮದಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ಕಾನೂನಿನ ಮೂಲಕ ತೊಡೆದುಹಾಕಿ ಸಮಾಜವನ್ನು ಸುಧಾರಿಸಬಹುದೇ ಹೊರತು ಧರ್ಮ ಬಿಡುವುದರಿಂದ ಅಲ್ಲ ಎಂಬುದನ್ನು ದೇಶದ ಅತ್ಯುನ್ನತ ಪೀಠದಲ್ಲಿ ನಿಂತು ಸಾಬೀತುಪಡಿಸಿದರು.

೫. ಹಿಂದೂ ತತ್ವದಡಿ ದಲಿತ ಮಹಿಳೆಯರ ಸೇವಾ ಯಜ್ಞ

ಸ್ವಾತಂತ್ರ್ಯದ ನಂತರ ದೆಹಲಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡ ದಾಕ್ಷಾಯಿಣಿ, ಗಾಂಧೀಜಿಯವರ 'ಹರಿಜನ ಸೇವಕ ಸಂಘ'ದ ತತ್ವಗಳ ಆಧಾರದ ಮೇಲೆ ದೆಹಲಿಯ ಹರಿಜನ ಬಸ್ತಿಗಳು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮಹಿಳೆಯರ ಕಲ್ಯಾಣಕ್ಕಾಗಿ ಬದುಕನ್ನು ಸವೆಸಿದರು. ೧೯೭೭ ರಲ್ಲಿ ಅವರು ಸ್ಥಾಪಿಸಿದ ‘ಮಹಿಳಾ ಜಾಗೃತಿ ಪರಿಷತ್’ ಸಂಘಟನೆಯು ಮತಾಂತರದ ಆಮಿಷಗಳಿಗೆ ಬಲಿಯಾಗುತ್ತಿದ್ದ ಬಡ ದಲಿತ ಮಹಿಳೆಯರ ಪಾಲಿಗೆ ಸಂಜೀವಿನಿಯಾಯಿತು.

ಮಹಿಳೆಯರ ಗುಡಿಸಲುಗಳಲ್ಲೇ ರಾತ್ರಿ ಶಾಲೆಗಳನ್ನು ತೆರೆದು ಅಕ್ಷರ ಕ್ರಾಂತಿ ಆರಂಭಿಸಿದರು. ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಉಚಿತ ಹೊಲಿಗೆ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು. ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡಿ ಮಕ್ಕಳನ್ನು ಶಾಲೆಗೆ ಸೇರಿಸಿದರು. ದಲಿತ ಸಮಾಜದ ಹೆಣ್ಣುಮಕ್ಕಳು ಶಿಕ್ಷಣ ಪಡೆದು, ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಗೌರವದಿಂದ ಬದುಕಬೇಕು ಎಂಬುದೇ ಇವರ ಆಶಯವಾಗಿತ್ತು.

ಅಮರ ಸ್ಮರಣೆ

ಜುಲೈ ೨೦, ೧೯೭೮ ರಂದು ತಮ್ಮ ೬೬ ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಈ ಮಹಾನ್ ಚೇತನದ ಆಶಯಗಳನ್ನು ಇಂದು ಅವರ ಮಗಳು, ಖ್ಯಾತ ಇತಿಹಾಸಕಾರ್ತಿ ಡಾ. ಮೀರಾ ವೇಲಾಯುದನ್ ಮುಂದುವರಿಸುತ್ತಿದ್ದಾರೆ. ಕೇರಳ ಸರ್ಕಾರವು ಇವರ ಗೌರವಾರ್ಥವಾಗಿ "ದಾಕ್ಷಾಯಿಣಿ ವೇಲಾಯುದನ್ ಪ್ರಶಸ್ತಿ"ಯನ್ನು ನೀಡುತ್ತಿದೆ.

ದಾಕ್ಷಾಯಿಣಿ ಅವರು ಕೇವಲ ಸಂವಿಧಾನ ಶಿಲ್ಪಿಯಾಗಿ ಉಳಿಯುವುದಿಲ್ಲ; ಮತಾಂತರದ ಕಠಿಣ ಪರಿಸ್ಥಿತಿಯಲ್ಲೂ ಹೆಮ್ಮೆಯಿಂದ ಸ್ವಧರ್ಮವನ್ನು ರಕ್ಷಿಸಿಕೊಂಡು, ಹಿಂದೂ ಸಮಾಜದ ಒಳಗೇ ಇದ್ದು ಸುಧಾರಣೆಗೆ ಶ್ರಮಿಸಿದ ಪ್ರಖರ ಹಿಂದೂತ್ವದ ಸಾಕ್ಷಿ ಪ್ರಜ್ಞೆ. ಅವಮಾನಗಳ ಬೆಂಕಿಯಲ್ಲೂ ಬೆಂದು ಸ್ವಧರ್ಮ ನಿಷ್ಠೆಯನ್ನು ಜಗತ್ತಿಗೆ ಸಾರಿದ ಅವರ ಬದುಕು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಸದಾ ಮಿನುಗಬೇಕಾಗಿದೆ.

ಉತ್ತರಪ್ರಭ, 03 ಜುಲೈ, 2026<br>✍️ ಕಿರಣ್ ಬಿ