ಸಖೀ,
ಫೆಬ್ರವರಿ ಹದಿನಾಲ್ಕರಂದು ಹೊಸಬಟ್ಟೆಯ
ತೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ಅಂಜುತ್ತಾ ನಾಚುತ್ತಾ ಬಂದ ನಿನ್ನ ಒನಪು,
ನಿನ್ನ ಬರಸೆಳೆದು ನಾ ಅಪ್ಪಿಕೊಂಡಾಗ
ನನ್ನ ನಾಸಿಕಗಳ ಒಳಹೊಕ್ಕು ಮುದ ನೀಡಿದ
ಸುಗಂಧ ಮಿಶ್ರಿತ ನಿನ್ನ ಮೈಬೆವರಿನ ಕಂಪು,
ನಿನ್ನ ಹಿಮ್ಮಡಿಗಳನೆತ್ತಿ, ತುದಿಗಾಲಲಿ ನಿಂತು
ನನ್ನ ಕಿವಿಯೊಳಗೆ ಕೇಳಿಯೂ ಕೇಳಿಸದಂತೆ ನೀ
ಉಲಿದಿದ್ದ ಆ ಮೂರು ಆಂಗ್ಲ ಶಬ್ದಗಳ ಇಂಪು,
ನನ್ನಲ್ಲಿಂದ ಬೀಳ್ಕೊಡುವ ಮೊದಲು ನನ್ನ
ತುಟಿಗಳ ಮೇಲೆ ನೀನು ಒಲವಿಂದ ಅಂದು
ಮೂಡಿಸಿಹೋದ ನಿನ್ನ ಕೆಂದುಟಿಗಳ ಛಾಪು,
ನೀನು ಬಂಡು ಧೈರ್ಯಮಾಡಿ ಎದುರು ಮನೆ
ಹೂದೋಟದಿಂದ ನನಗಾಗಿ ಕದ್ದು ತಂದಿದ್ದ
ಕೆಂಪು ಗುಲಾಬಿ ಮೊಗ್ಗಿನ ಸವಿ ನೆನಪು,
ನನ್ನ ಮನಪಟಲದಲಿ ಅಚ್ಚಳಿಯದಂತೆ ಉಳಿದು
ಆಹ್ಲಾದವನು ನೀಡುತಿರಲು, ನನ್ನ ಪಾಲಿಗೆ
ಪ್ರತಿ ದಿನವೂ ಒಂದು ಹೊಸ ಪ್ರೇಮಿಗಳ ದಿನ;
ಹೇಳು ಕಾಯಬೇಕೇಕೆ ನಾವಿನ್ನು ೩೬೫ ದಿನ?
*-*-*-*-*-*-*-*-*-*-*-*-*-*-*
ಪ್ರತಿಕ್ರಿಯೆ (2)