ಕನ್ನಡಿ ಮುಂದೆ ನಿಂತು ಕೂದಲು ಬಾಚುತ್ತಿದ್ದಳು ಗುನಗುನಿಸುತ್ತ ಎಫ್ ಎಂ ಹಾಡಿನ ಜೊತೆ.. 'ಲಗ ಜಾ ಗಲೆ ಕೆ ಫಿರ್ ಯೇ ಹಸೀ ರಾತ ಹೋ ನ ಹೋ, ಶಾಯದ್ ಫಿರ ಇಸ ಜನಮ್ ಮೇ ಮುಲಾಕಾತ್ ಹೋ ನ ಹೋ..' ಕರೆ ಗಂಟೆ ಸದ್ದಾಯಿತು. ಇಷ್ಟು ಬೇಗ ಬಂದು ಬಿಟ್ರ! ಅಂತ ಲಗುಬಗೆ ಇಂದ ಓಡಿದಳು, ಬಾಗಿಲು ತೆರೆದಾಗ ಕಾಣಿಸಿದ್ದು ಹೂ ಮಾರೋ ಹುಡುಗಿ 'ತೊಗೊಳ್ಳಿ ಅಮ್ಮಾವ್ರೇ ತಾಜಾ ಮಲ್ಲಿಗಿ'. ಒಂದು ಮೊಳ ತೆಗೆದುಕೊಂಡು ಹಣ ಕೊಟ್ಟಳು. 'ಅಮ್ಮಾವ್ರೇ ಇವತ್ತು ಎನು ವಿಶೇಷ? ಹೂವಿಗಿಂತ ನೀವೇ ತಾಜಾ ಕಾಣಿಸ್ತಾ ಇದಿರ' ಅಂದಳು ಹೂ ಹುಡುಗಿ ನಸು ನಗುತ್ತ.
ಮತ್ತೆ ಬಂದು ನಿಂತಳು ಕನ್ನಡಿ ಮುಂದೆ, ಹೂ ಹುಡುಗಿಗೆ ಏನು ವಿಶೇಷ ಕಾಣಿಸಿತು ಅಂತ ನೋಡಲು. ಪರವಾಗಿಲ್ಲ ಮದುವೆಯಾಗಿ ಹತ್ತು ವರ್ಷ ಆದರೂ ಇನ್ನು ತಾಜಾ ಕಾಣಸ್ತೀನಿ ಅಂದ್ಕೊಂಡು ತನಗೆ ತಾನೇ ಮೆಚ್ಚಿಕೊಂಡಳು. ಮುಖ ತೊಳೆದಾಗಿತ್ತು ಪೌಡರ್ ಮತ್ತೆ ತುಟಿಗೆ ರಂಗು ತೆರೆದಿಟ್ಟಳು ಕಪಾಟಿಂದ. 'ಹಾಲು ಗಲ್ಲಕೆ ಬೂದಿ ಯಾಕೆ, ಕೆಂಪು ತುಟಿಗೆ ಬಣ್ಣವೇಕೆ' ಎಂದ ಅವನ ಮಧುಚಂದ್ರದ ಕವನ ನೆನಪಾಯಿತು. ಉಪಯೋಗಿಸದೆ ಎರಡನ್ನು ತೆಗೆದು ಮತ್ತೆ ಅವುಗಳ ಜಾಗಕ್ಕೆ ಇಟ್ಟಳು. ಸೀರೆ ಸೆರಗನ್ನು ಸರಿ ಮಾಡಿಕೊಂಡು ಎಲ್ಲ ಸರಿಯಾಗಿದೆಯೇ ಅಂತ ಇನ್ನೊಮ್ಮೆ ನೋಡಿ ಮಂದಹಾಸ ಬೀರಿದಳು.
ಮತ್ತೆ ಬಾಗಿಲ ಶಬ್ದ, ಅವ ಬಂದನೆಂದು ಮತ್ತದೇ ಹುರುಪಿನಲ್ಲಿ ಬಾಗಿಲು ತೆರೆದಳು. ಹೌದು ಅವನೇ ಬಂದಿದ್ದ, ಮುಖ ಬಾಡಿತ್ತು ಹುಬ್ಬು ಗಂಟಿಕ್ಕಿತ್ತು, ಒಮ್ಮೆ ನೋಡಿ ನೇರವಾಗಿ ಬಚ್ಚಲಿಗೆ ಹೋದ. ಏನಾಯಿತು ಇವನಿಗೆ! ಇವತ್ತು ವಿಶೇಷ ಏನು ಅಂತ ಮರೆತೇ ಹೋಯಿತಾ! ಗಲಿಬಿಲಿ ಗೊಂಡು ಬಾಗಿಲು ಹಾಕಿ ಅವ ಹೋದ ಕಡೆಯೇ ನೋಡುತ್ತಾ ನಿಂತಳು. 'ಎನ್ ಟ್ರಾಫಿಕ್ಕು ಸಾಕಾಯ್ತು, ಸ್ವಲ್ಪ ಕಾಫಿ ಮಾಡು' ಎಂದ ಅಲ್ಲಿಂದಲೇ. 'ಅವನಿಗೆ ಹೇಗೆ ಬೇಕೋ ಹಾಗೆ ತಯಾರಾದೆ ಸರಿಯಾಗಿ ನೋಡಲೂ ಇಲ್ಲ!' ಅಂದು ಕೊಳ್ಳುತ್ತಾ ಕಣ್ಣು ಹನಿ ಗೂಡಿದವು, ಅರಳಿದ ಮೊಗ ಬಾಡಿತು.
ಮುಖ ತೊಳೆದು ಕುರ್ಚಿ ಮೇಲೆ ಬಂದು ಕುಳಿತ ದಿನ ಪತ್ರಿಕೆ ಓದುತ್ತ. 'ತೊಗೊಳ್ಳಿ ಕಾಫಿ' ಎಂದಳು ನೀರಸ ಸ್ವರದಲ್ಲಿ. ಲೋಟ ಹಿಡಿದು ಅವಳ ಮುಖ ಒಮ್ಮೆ ದಿಟ್ಟಿಸಿದ, ಈಗಾದರು ನೋಡಿದನಲ್ಲ ಅಂತ ಕಣ್ಣರಳಿಸಿದಳು. 'ಏನದು ಗಲ್ಲದ ಮೇಲೆ, ನೋಡಿಕೋ ಕನ್ನಡಿಯಲ್ಲಿ' ಅಂದ ಮುಖ ಗಂಟು ಮಾಡಿ. 'ಏನು!' ಅಂತ ಒರೆಸುತ್ತ ಕನ್ನಡಿ ಮುಂದೆ ನಿಂತಳು ಗಲಿಬಿಲಿಗೊಂಡು. ಹಿಂದಿನಿಂದ ಬಂದು ಒಂದು ಕೈ ಇಂದ ಮುಚ್ಚಿದ ಅವಳ ಕಣ್ಣನ್ನು. 'ಏನಿದು! ಎನ್ ಮಾಡ್ತಿದಿರ' ಅಂದಳು ಆಶ್ಚರ್ಯದಿಂದ. 'ಶ್... ಕಣ್ಣು ತೆರೆಬೇಡ ನಾ ಹೇಳೋತನಕ' ಅಂದ ಮೇಲುವಾಗಿ. ಡಬ್ಬದಿಂದ ತೆಗೆದು ವಜ್ರದ ನೆಕ್ಲೇಸ್, ಹಾಕಿದ ಅವಳ ಕೊರಳಿಗೆ. ನಿಧಾನವಾಗಿ ತೆರೆ ಕಣ್ಣು ಅಂದ ಪಿಸುಮಾತಲ್ಲಿ. ತೆರೆದಳು ಕಣ್ಣನ್ನ ದೀಪದ ಬೆಳಕಿಗೆ ಹೊಳೆಯುತ್ತಿತ್ತು ವಜ್ರದ ಹಾರ, ಅದರ ಹೊಳಪಿಗೆ ಅವಳ ಕಣ್ಣು ಇನ್ನಷ್ಟು ಮಿಂಚಿದವು. 'Happy 10th Anniversary' ಅಂದ ತುಂಟ ನಗೆ ಬೀರಿ. ಖುಷಿಯಿಂದ ಮನ ಉಬ್ಬಿ ಹಿಡಿದಳು ಅವನ ತಬ್ಬಿ, ಸರಿದು ಮುಖವನ್ನು ನೋಡಿದಳು ಧನ್ಯತಾ ಭಾವದಿಂದ. 'ವಜ್ರದ ಹಾರ ಕೊಟ್ಟೆ ಅಂತಲ್ಲ ಈ ಖುಷಿ, ಇಂದಿನ ವಿಶೇಷ ನೆನಪಿತ್ತಲ್ಲ ಅದಕ್ಕೆ' ಅಂದಳು ಮತ್ತೆ ಹನಿಗೂಡಿತ್ತು ಕಣ್ಣು. ಕಣ್ಣೊರೆಸಿ ತಲೆ ನೇವರಿಸಿ ಗಲ್ಲ ಸವರಿ ಗದ್ದ ಹಿಡಿದು ತಂದ ತನ್ನ ತುಟಿಯ ಮುತ್ತು ಕೊಡಲು ಹತ್ತಿರ. ಬಿಸಿ ಉಸಿರು ಬಡಿದಿತ್ತು, ತುಟಿ ಸನಿಹ ಬಂದಿತ್ತು, ಇನ್ನೇನು ಸೇರಬೇಕು ಒಂದನೊಂದು.. ಅಪ್ಪ ... ಅಮ್ಮ ... ಅಂತ ಮುದ್ದಿನ ಮಗಳು ಬಂದು ನಿಂತಳು ಇಬ್ಬರ ನಡುವೆ! ಇಬ್ಬರು ಹಿಡಿದು ಅವಳನ್ನು ಎತ್ತಿ, ಕೊಟ್ಟರು ಮುತ್ತನು ಅವಳ ಹಾಲು ಗಲ್ಲಕ್ಕೆ ಖುಷಿಯಿಂದ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!