ಒಕ್ಕೂಟ ವಾದದ ಮೂಲ ಮತ್ತು ಇಂದಿನ ಅಪಪ್ರಚಾರ

ಬ್ರಿಟಿಷರು ಭಾರತದ ಉದ್ದಗಲಕ್ಕೂ ತಂದ ಏಕರೂಪದ ಕಾನೂನುಗಳು ಮತ್ತು ರೈಲುಜಾಲದಿಂದಲೇ 1950ರಲ್ಲಿ ಗಣತಂತ್ರವಾದಾಗ ಭಾರತವೆಂಬ ಬೃಹತ್ ರಾಷ್ಟ್ರ ಉದಯಿಸಿತು ಎಂಬ ವಾದವನ್ನು ಇಂದಿಗೂ ಸಾರ್ವಜನಿಕವಾಗಿ ನಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇದರೊಂದಿಗೆ ಭಾರತವನ್ನು ಉತ್ತರ ಮತ್ತು ದಕ್ಷಿಣವೆಂದು ಭಾವನಾತ್ಮಕವಾಗಿ ವಿಭಜಿಸುವ ಕುತಂತ್ರದ ಆಲೋಚನೆಗಳನ್ನು ಮುಂಚೂಣಿಗೆ ತರಲು ಒಂದು ವ್ಯವಸ್ಥಿತ ಸಾಮಾಜಿಕ ಹಾಗೂ ಬೌದ್ಧಿಕ ಜಾಲ ಸದಾ ಸಕ್ರಿಯವಾಗಿರುತ್ತದೆ. ಇಂದಿನ ಮಾರ್ಕ್ಸ್‌ವಾದಿ ಇತಿಹಾಸಕಾರರು ಮತ್ತು ರಾಹುಲ್ ಗಾಂಧಿಯಂತಹ ರಾಜಕಾರಣಿಗಳು ಶೈಕ್ಷಣಿಕ ವಲಯದಲ್ಲಿ ಇದೇ ನಿಲುವನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರಕಾರ, ಭಾರತವು ಇತಿಹಾಸದಲ್ಲಿ ಎಂದಿಗೂ ಒಂದೇ ರಾಷ್ಟ್ರವಾಗಿರಲಿಲ್ಲ. ಬ್ರಿಟಿಷರಿಗಿಂತ ಮೊದಲು ಇದು ಕೇವಲ ನೂರಾರು ಸ್ವತಂತ್ರ ರಾಜರ ಭೌಗೋಳಿಕ ತುಂಡುಗಳ ಪ್ರಾಂತ್ಯವಾಗಿತ್ತೇ ಹೊರತು ಭಾವನಾತ್ಮಕವಾಗಿ ಒಂದಾಗಿರಲಿಲ್ಲ. ಭಾರತವೆಂಬ ಕಲ್ಪನೆ ಹುಟ್ಟಿದ್ದೇ 1950ರ ಸಂವಿಧಾನದ ವಿಧಿ 1ರ "ರಾಜ್ಯಗಳ ಒಕ್ಕೂಟ" (Union of States) ಎಂಬ ಸಾಲಿನ ಮೂಲಕ; ಇದು ಕೇವಲ ವಿಭಿನ್ನ ಭಾಷೆ-ಸಂಸ್ಕೃತಿಗಳ ರಾಜ್ಯಗಳು ಮಾಡಿಕೊಂಡ ಆಡಳಿತಾತ್ಮಕ ಒಪ್ಪಂದವಾಗಿದ್ದು, ಯುರೋಪಿಯನ್ ಯೂನಿಯನ್ ಮಾದರಿಯ ವ್ಯವಸ್ಥೆಯಾಗಿದೆ ಎಂಬುದು ಇವರ ವಾದದ ಪ್ರಮುಖ ತಿರುಳಾಗಿದೆ.

ಜಾಗತಿಕ ವೇದಿಕೆಗಳಲ್ಲಿ ಸಿದ್ಧಾಂತದ ಪ್ರದರ್ಶನ

ಈ ಒಕ್ಕೂಟ ವಾದವನ್ನು ಜಾಗತಿಕ ಮಟ್ಟದಲ್ಲೂ ತಾರ್ಕಿಕ ರೂಪದಲ್ಲಿ ಪ್ರಚಾರ ಮಾಡಲಾಗುತ್ತಿದೆ. 2022ರ ಫೆಬ್ರವರಿಯಲ್ಲಿ ಭಾರತದ ಲೋಕಸಭೆಯಲ್ಲಿ "ಇದು ರಾಜ್ಯಗಳ ಒಕ್ಕೂಟ" ಎಂದು ವಾದ ಮಂಡಿಸಿದ ರಾಹುಲ್ ಗಾಂಧಿಯವರು, ಅದೇ ವರ್ಷ ಮೇ ತಿಂಗಳಲ್ಲಿ ಲಂಡನ್‌ನ 'ಐಡಿಯಾಸ್ ಫಾರ್ ಇಂಡಿಯಾ' ಸಮಾವೇಶ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಉಪನ್ಯಾಸಗಳಲ್ಲಿ "ಭಾರತವನ್ನು ಯುನೈಟೆಡ್ ಯುರೋಪ್‌ನಂತೆ ಯೋಚಿಸಿ" ಎಂದು ನೇರವಾಗಿ ಯುರೋಪ್‌ಗೆ ಹೋಲಿಸಿದ್ದರು. ತದನಂತರ 2023ರ ಮೇ-ಜೂನ್‌ನಲ್ಲಿ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹಾಗೂ ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲೂ ಇದೇ ನಿಲುವನ್ನು ಪುನರುಚ್ಚರಿಸಿ, ಕೇಂದ್ರ ಸರ್ಕಾರವು ರಾಜ್ಯಗಳ ಸ್ವಾಯತ್ತತೆಯನ್ನು ಹತ್ತಿಕ್ಕುತ್ತಿದೆ ಎಂದು ದೂರಿದರು. ಭಾರತೀಯತೆಯನ್ನು ಕೇವಲ 75 ವರ್ಷಗಳ ಹಿಂದಿನ ಒಪ್ಪಂದಕ್ಕೆ ಸೀಮಿತಗೊಳಿಸಿ, ದೇಶಕ್ಕೆ ಯಾವುದೇ ಪ್ರಾಚೀನ ಅಥವಾ ಇತಿಹಾಸಪೂರ್ವದ ಅಖಂಡ ಸಾಂಸ್ಕೃತಿಕ ಅಸ್ಮಿತೆ ಇಲ್ಲ ಎಂದು ಜಾಗತಿಕವಾಗಿ ಬಿಂಬಿಸುವುದೇ ಈ ಇಡೀ ಅಭಿಯಾನದ ಮುಖ್ಯ ಕಾರ್ಯಸೂಚಿಯಾಗಿದೆ. ದೇಶದ ಆಂತರಿಕ ವಿಚಾರಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವ ಹಿಂದಿರುವ ನೈಜ ಉದ್ದೇಶ ಏನಿರಬಹುದೆಂಬುದನ್ನು ಓದುಗರೇ ಊಹಿಸಿಕೊಳ್ಳಬೇಕಿದೆ.

ವಸಾಹತುಶಾಹಿ ಚಿಂತಕರ ಆಷಾಢಭೂತಿತನ

ಇದೇ ಧಾಟಿಯ ವಸಾಹತುಶಾಹಿ ಚಿಂತಕರು "ಬ್ರಿಟಿಷರು ಭೌತಿಕವಾಗಿ ದೇಶವನ್ನು ಒಂದು ಮಾಡಿದರೆ, ನಂತರ 1915ರಲ್ಲಿ ಭಾರತಕ್ಕೆ ಬಂದ ಮಹಾತ್ಮಾ ಗಾಂಧೀಜಿಯವರು ಜನಸಾಮಾನ್ಯರನ್ನು ಒಟ್ಟುಗೂಡಿಸಿ ಆಧುನಿಕ ರಾಷ್ಟ್ರ ಸೃಷ್ಟಿಸಿದರು" ಎನ್ನುತ್ತಾರೆ. ಆದರೆ, ಈ ವಾದಕ್ಕೆ ಸ್ವತಃ ಗಾಂಧೀಜಿಯವರೇ ತಮ್ಮ ಪ್ರಸಿದ್ಧ 'ಹಿಂದ್ ಸ್ವರಾಜ್' (1909) ಪುಸ್ತಕದಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಹೀಗೆ ಸ್ಪಷ್ಟ ಉತ್ತರ ನೀಡಿದ್ದಾರೆ:

"ಬ್ರಿಟಿಷರು ಭಾರತವನ್ನು ಒಂದು ರಾಷ್ಟ್ರವನ್ನಾಗಿ ಮಾಡಿದರು ಎಂದು ನಮಗೆ ಕಲಿಸಿಕೊಡಲಾಗಿದೆ. ಆದರೆ ಬ್ರಿಟಿಷರು ಬರುವ ಮೊದಲೇ ನಾವು ಒಂದೇ ರಾಷ್ಟ್ರವಾಗಿದ್ದೆವು. ನಮ್ಮ ಆಲೋಚನೆಗಳು ಒಂದೇ ಆಗಿದ್ದವು. ಬ್ರಿಟಿಷರು ಬಂದ ಮೇಲೆ ನಮ್ಮ ನಡುವೆ ಕೃತಕ ಗಡಿಗಳನ್ನು ಸೃಷ್ಟಿಸಿದರು. ನಮ್ಮ ಪೂರ್ವಜರು ದೇಶದ ನಾಲ್ಕೂ ಮೂಲೆಗಳಲ್ಲಿ ಚಾರ್ ಧಾಮ್ ಪುಣ್ಯಕ್ಷೇತ್ರಗಳನ್ನು ಅಂದರೆ ದಕ್ಷಿಣದಲ್ಲಿ ರಾಮೇಶ್ವರಂ, ಪಶ್ಚಿಮದಲ್ಲಿ ದ್ವಾರಕಾ, ಪೂರ್ವದಲ್ಲಿ ಜಗನ್ನಾಥ ಪುರಿ ಮತ್ತು ಉತ್ತರದಲ್ಲಿ ಬದರಿನಾಥ್ ಸ್ಥಾಪಿಸಿದಾಗಲೇ ಅವರಿಗೆ ರಾಷ್ಟ್ರೀಯ ಏಕತೆ ಮತ್ತು ಭೌಗೋಳಿಕ ಅಖಂಡತೆಯ ಕಲ್ಪನೆ ಇತ್ತು. ರೈಲು ಬರುವ ಸಾವಿರಾರು ವರ್ಷಗಳ ಮುನ್ನವೇ ಭಾರತೀಯರು ಇಡೀ ದೇಶವನ್ನು ಮಾತೃಭೂಮಿ ಎಂದು ಭಾವಿಸಿ ಕಾಲ್ನಡಿಗೆಯಲ್ಲೇ ಯಾತ್ರೆ ಮಾಡುತ್ತಿದ್ದರು ಮತ್ತು ಭಾವನಾತ್ಮಕವಾಗಿ ಒಂದಾಗಿದ್ದರು."

ಯಾರನ್ನು ಆಧುನಿಕ ಭಾರತದ ನಿರ್ಮಾತೃ ಎಂದು ಕರೆಯಲಾಗುತ್ತದೆಯೋ, ಅದೇ ಮಹಾತ್ಮಾ ಗಾಂಧೀಜಿಯವರು ಭಾರತದ ಸಾಂಸ್ಕೃತಿಕ ಅಖಂಡತೆಯು ಬ್ರಿಟಿಷರ ಆಡಳಿತಕ್ಕಿಂತ ಹಾಗೂ ಆಧುನಿಕ ಸಾಂವಿಧಾನಿಕ ಒಪ್ಪಂದಕ್ಕಿಂತ ಮೊದಲೇ ಶತಶತಮಾನಗಳಿಂದ ಜೀವಂತವಾಗಿತ್ತು ಎಂದು ಸ್ಪಷ್ಟಪಡಿಸಿರುವುದು ಇಂದಿನ ಇತಿಹಾಸದ ಅಪವ್ಯಾಖ್ಯಾನಕಾರರಿಗೆ ಅತಿ ದೊಡ್ಡ ಬೌದ್ಧಿಕ ಹಿನ್ನಡೆಯಾಗಿದೆ. ಆದರೆ ಈ ವಸಾಹತುಶಾಹಿ ಚಿಂತಕರು ಗಾಂಧೀಜಿಯವರು ಭಾರತವನ್ನು ಒಗ್ಗೂಡಿಸಿದರೆಂದು ಹೇಳುವಾಗ ಅವರುಗಳು ಗಾಂಧೀಜಿಯವರನ್ನು ಸಂಪೂರ್ಣವಾಗಿ ಓದಿದ್ದಾರೆಯೇ ಅಥವಾ ಅದು ಅವರ ಆಷಾಢಭೂತಿತನವೇ ಎಂಬ ಪ್ರಶ್ನೆ ಮೂಡದೆ ಇರದು.

ಪ್ರಾಚೀನ ವಾಙ್ಮಯದಲ್ಲಿ ಭಾರತದ ನಿಖರ ಚಿತ್ರಣ: "ಭಾರತದ ಪರಿಕಲ್ಪನೆ ಆಧುನಿಕ ಜಗತ್ತು ಕೊಟ್ಟಿದ್ದು" ಎಂಬ ಮಾರ್ಕ್ಸ್‌ವಾದಿಗಳ ವಾದವನ್ನು ನಮ್ಮ ಪ್ರಾಚೀನ ವೈದಿಕ ಮತ್ತು ಪೌರಾಣಿಕ ವಾಙ್ಮಯಗಳು ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತುಪಡಿಸುತ್ತವೆ. ವಿಷ್ಣು ಪುರಾಣವು ಭಾರತದ ಭೌಗೋಳಿಕ ಗಡಿಯನ್ನು ಇಂದಿನ ನಕ್ಷೆಯಷ್ಟೇ ನಿಖರವಾಗಿ ನಿರೂಪಿಸಿದೆ:

"ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ ।

ವರ್ಷಂ ತದ್ ಭಾರತಂ ನಾಮ ಭಾರತಿ ಯತ್ರ ಸಂತತಿಃ ॥"

(ಯಾವ ಭೂಭಾಗವು ಸಮುದ್ರಕ್ಕೆ ಉತ್ತರದಲ್ಲಿದೆಯೋ ಮತ್ತು ಹಿಮಾಲಯಕ್ಕೆ ದಕ್ಷಿಣದಲ್ಲಿದೆಯೋ, ಅದೇ ಭಾರತವರ್ಷ; ಅಲ್ಲಿನ ಪ್ರಜೆಗಳೇ ಭಾರತಿ). ಇದು ಕೇವಲ ಮಣ್ಣಿನ ತುಂಡನ್ನು ಗುರುತಿಸದೆ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ವಾಸಿಸುವ ಇಡೀ ಜನಸಮುದಾಯವನ್ನು ಒಂದೇ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಅಸ್ಮಿತೆಯಡಿ ತರುತ್ತದೆ.

ಇದಲ್ಲದೆ, ಅತ್ಯಂತ ಪ್ರಾಚೀನ ಗ್ರಂಥವಾದ ಋಗ್ವೇದದ 'ನದೀಸೂಕ್ತ'ವು (೧೦ನೇ ಮಂಡಲ, ಸೂಕ್ತ ೭೫) ಇಂದಿನ ಅಫ್ಘಾನಿಸ್ತಾನದ ಕಾಬೂಲ್ (ಕುಭಾ), ಕುರ್ರಮ್ (ಕ್ರುಮು), ಗೋಮಲ್ (ಗೋಮತೀ) ಮತ್ತು ಆಮು ದಾರ್ಯಾ (ರಸಾ) ನದಿಗಳಿಂದ ಹಿಡಿದು ಭಾರತದ ಸಿಂಧೂ, ಸರಸ್ವತಿ, ಗಂಗಾ ಮತ್ತು ಯಮುನಾ ನದಿಗಳನ್ನು ಒಂದೇ ಸೂಕ್ತದಲ್ಲಿ ಸ್ತುತಿಸುವ ಮೂಲಕ ಇಡೀ ಉಪಖಂಡವನ್ನು ಒಂದೇ ಸಾಂಸ್ಕೃತಿಕ ಘಟಕವಾಗಿ ನೋಡಿದೆ.

ಮೂಲ ಸರಸ್ವತಿ ನದಿ ಬತ್ತಿಹೋದರೂ, ಭಾರತೀಯರು ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ದೇಶದಾದ್ಯಂತ ಅನೇಕ ಸಣ್ಣ ನದಿಗಳಿಗೆ 'ಸರಸ್ವತಿ' ಎಂದೇ ಹೆಸರಿಟ್ಟಿರುವುದು ಹೆಮ್ಮೆಯ ವಿಷಯ. ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಸರಸ್ವತಿ ಹೆಸರಿನ ಉಪನದಿಗಳಿವೆ. ಅಷ್ಟೇ ಅಲ್ಲದೆ, ತ್ರಿಪುರದಲ್ಲಿ 'ಸರಸ್ವತಿ ಚಾರ' ಎಂಬ ತೊರೆಯೂ, ಕೇರಳದಲ್ಲಿ 'ಸರಸ್ವತಿ ತೋಡ್' ಎಂಬ ಜಲಮೂಲವೂ ಇವೆ. ಪ್ರಯಾಗರಾಜದ ತ್ರಿವೇಣಿ ಸಂಗಮದಲ್ಲಿ ಸರಸ್ವತಿಯು ಗುಪ್ತಗಾಮಿನಿಯಾಗಿ ಗಂಗೆ ಮತ್ತು ಯಮುನೆಯನ್ನು ಸೇರುತ್ತಾಳೆ ಎಂಬ ನಂಬಿಕೆಯಿದೆ. ಅದೇ ರೀತಿ ಕರ್ನಾಟಕದ ಭಾಗಮಂಡಲದಲ್ಲೂ ಸರಸ್ವತಿಯು ಕಾವೇರಿ ಮತ್ತು ಕನ್ನಿಕೆಯ ಜೊತೆ ಸಂಗಮವಾಗುತ್ತಾಳೆ ಎಂಬ ನಂಬಿಕೆಯಲ್ಲೇ ಋಗ್ವೇದದ ಆ ನದಿಯನ್ನು ಪೂಜಿಸಲಾಗುತ್ತಿದೆ. ದೇಶದ ಮೂಲೆ ಮೂಲೆಗಳಲ್ಲಿರುವ ಈ ನಂಬಿಕೆಯು, ಭಾರತೀಯರೆಲ್ಲರೂ ಒಂದೇ ಮತ್ತು ಭಾರತವು ಅತ್ಯಂತ ಪ್ರಾಚೀನವಾದ ಅಖಂಡ ರಾಷ್ಟ್ರ ಎಂಬುದಕ್ಕೆ ಸಾಕ್ಷಿಯಾಗಿದೆ.

ಮಹಾಭಾರತದ ಭೀಷ್ಮ ಪರ್ವದಲ್ಲಂತೂ ಇಡೀ ಭಾರತದ ನದಿ, ಪರ್ವತ ಹಾಗೂ ಪ್ರಾಂತ್ಯಗಳ ಸುದೀರ್ಘ ಪಟ್ಟಿಯಿದ್ದು, ಕುರುಕ್ಷೇತ್ರ ಯುದ್ಧದಲ್ಲಿ ಅಫ್ಘಾನಿಸ್ತಾನದ ಗಾಂಧಾರದಿಂದ ಹಿಡಿದು ಅಸ್ಸಾಂ ಹಾಗೂ ದಕ್ಷಿಣದ ಚೋಳ, ಚೇರ, ಪಾಂಡ್ಯ ರಾಜರೆಲ್ಲರೂ ಭಾಗವಹಿಸಿದ್ದು ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಒಗ್ಗಟ್ಟನ್ನು ಸಾಬೀತುಪಡಿಸುತ್ತದೆ. ಭಾಗವತ ಪುರಾಣವು ಭಾರತವನ್ನು ದೇವತೆಗಳೂ ಬಯಸುವ ಪರಮ ಪವಿತ್ರ "ಕರ್ಮಭೂಮಿ" ಎಂದರೆ, ಕ್ರಿ.ಪೂ. 4ನೇ ಶತಮಾನದಲ್ಲೇ ಚಾಣಕ್ಯನು ತನ್ನ ಅರ್ಥಶಾಸ್ತ್ರದಲ್ಲಿ ಹಿಮಾಲಯದಿಂದ ಸಮುದ್ರದವರೆಗಿನ ಭೂಭಾಗವನ್ನು ಒಬ್ಬ ಚಕ್ರವರ್ತಿಯು ಆಳಬೇಕಾದ 'ಏಕೈಕ ದೇಶ' (ಚಕ್ರವರ್ತಿ ಕ್ಷೇತ್ರ) ಎಂದು ಸ್ಪಷ್ಟಪಡಿಸಿದ್ದಾನೆ.

ಸ್ಥಿರವಾಗಿ ಉಳಿಯುವ ಸಾಂಸ್ಕೃತಿಕ ಅಂತಃಸತ್ವ

ಇತಿಹಾಸದುದ್ದಕ್ಕೂ ರಾಜಕೀಯ ಅಧಿಕಾರಗಳು ಮತ್ತು ಸಾಮ್ರಾಜ್ಯಗಳು ಬದಲಾದಂತೆ ದೇಶದ ಆಡಳಿತಾತ್ಮಕ ಗಡಿಗಳು ಬದಲಾಗಿರಬಹುದು; ಮೌರ್ಯರು, ಗುಪ್ತರು, ಚೋಳರು ಅಥವಾ ಮೊಘಲರ ಕಾಲದಲ್ಲಿ ರಾಜಕೀಯ ನಕ್ಷೆಗಳು ಏರಿಳಿತ ಕಂಡಿರುವುದು ಐತಿಹಾಸಿಕ ಸತ್ಯ. ಆದರೆ, ದೇಶವು ನೂರಾರು ಸಂಸ್ಥಾನಗಳಾಗಿ ವಿಭಜನೆಗೊಂಡಿದ್ದ ಅತ್ಯಂತ ಕಠಿಣ ಕಾಲದಲ್ಲೂ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಸಾಮಾನ್ಯ ಜನರಲ್ಲಿ ತಾವೆಲ್ಲರೂ ಒಂದೇ "ಭಾರತವರ್ಷ"ದ ಭಾಗ ಎಂಬ ದೃಢವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ನಿರಂತರವಾಗಿ ಜೀವಂತವಾಗಿತ್ತು. ಭಕ್ತಿ ಚಳವಳಿಯ ಕಾಲದಲ್ಲಿ ದಕ್ಷಿಣದ ಆಳ್ವಾರ್-ನಾಯನ್ಮಾರರಿಂದ ಹಿಡಿದು ಕರ್ನಾಟಕದ ಶರಣರು-ದಾಸರು, ಮಹಾರಾಷ್ಟ್ರದ ಸಂತರು, ಉತ್ತರ ಭಾರತದ ಕಬೀರ್, ತುಳಸೀದಾಸ್, ಮೀರಾಬಾಯಿಯವರವರೆಗೆ ಎಲ್ಲರೂ ಇಡೀ ದೇಶವನ್ನು ಒಂದೇ ಸಾಂಸ್ಕೃತಿಕ ತಂತುವಿನಲ್ಲಿ ಪೋಣಿಸಿದ್ದರು.

ಆದ್ದರಿಂದ, ಬ್ರಿಟಿಷರಾಗಲಿ ಅಥವಾ 1950ರ ಸಾಂವಿಧಾನಿಕ ಒಪ್ಪಂದವಾಗಲಿ ಭಾರತವನ್ನು ಶೂನ್ಯದಿಂದ ಹೊಸದಾಗಿ 'ಸೃಷ್ಟಿ' ಮಾಡಲಿಲ್ಲ. ಇವೆಲ್ಲವೂ ಈಗಾಗಲೇ ಶತಶತಮಾನಗಳಿಂದ ಜನರ ಮನಸ್ಸಿನಲ್ಲಿ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಅಸ್ತಿತ್ವದಲ್ಲಿದ್ದ ಅಖಂಡ ಸಾಂಸ್ಕೃತಿಕ ರಾಷ್ಟ್ರಕ್ಕೆ ಒಂದು ಆಧುನಿಕ ರಾಜಕೀಯ ಮತ್ತು ಆಡಳಿತಾತ್ಮಕ ಚೌಕಟ್ಟನ್ನು ನೀಡಿದವು ಅಷ್ಟೆ. ವೈವಿಧ್ಯತೆಯೇ ಭಾರತದ ಸೌಂದರ್ಯ ಹೌದು, ಆದರೆ ಆ ವೈವಿಧ್ಯತೆಯನ್ನು ಒಳಗಿನಿಂದ ಒಂದಾಗಿಸುವ ಸಾಂಸ್ಕೃತಿಕ ಅಂತಃಸತ್ವವೇ ಈ ದೇಶದ ನಿಜವಾದ ಪ್ರಾಣಶಕ್ತಿಯಾಗಿದೆ. ಈ ಸನಾತನ, ಅವಿಭಾಜ್ಯ ಸಾಂಸ್ಕೃತಿಕ ಏಕತೆಯೇ ಇಂದಿಗೂ ಮತ್ತು ಎಂದೆಂದಿಗೂ ಭಾರತವನ್ನು ಜಗತ್ತಿನ ಎದುರು ಒಂದು ಬಲಿಷ್ಠ, ಸಾಮರಸ್ಯದ ಮತ್ತು ಅಖಂಡ ರಾಷ್ಟ್ರವಾಗಿ ಮುನ್ನಡೆಸುವ ನೈಜ ಚೇತನವಾಗಿದೆ.

-ಕಿರಣ್ ಬಿ