ನಮ್ಮೂರ ಕಾಮನ ಹಬ್ಬದ ಮಧುರ ನೆನಪುಗಳು:

ನಮ್ಮ ಬೀದಿಯಲ್ಲಿ ಕಾಮನ ಹಬ್ಬ ಜೋರು. ೨೦-೩೦ರ ಯುವಕರು, ೧೮-೨೦ರ ಪಡ್ಡೆಗಳು, ಎಡಬಿಡಂಗಿ ವಯಸಿನ (tweens ಅಂತಾರಿಲ್ಲಿ ) ಹುಡುಗರು, ೮-೧೨ರ ಚಿಳ್ಳೆ ಪಿಳ್ಳೆಗಳು, ಎಲ್ಲರೂ ಸಂಭ್ರಮದಿಂದ ಸೇರ್ತಾ ಇದ್ದ ಹಬ್ಬ. [ಹುಡುಗಿಯರು ಅಂತ ೧೨ ಆದ ಮೇಲೆ ಮೆಜಾರಿಟಿ ಚಟುವಟಿಕೆಗಳೆಲ್ಲ ನಮಗೆ ನಿಷೇಧಿಸಿದ್ದರು :-( ].  ಆದರೇನಂತೆ ಚಿಕ್ಕಂದಿನಲ್ಲಿ  ತೆಂಗಿನಗರಿ, ಮಟ್ಟೆ , ಮತ್ತೆ ಸುತ್ತುಮುತ್ತಲಿನವರ  ಹಿತ್ತಲುಗಳಲ್ಲಿ ಏನೇನು ಸಿಕ್ಕರೂ ಕದ್ದು ದೇವಸ್ತಾನದ ಮಾಳಿಗೆಯ ಮೇಲೆ ಮುಚ್ಚಿಟ್ಟು ಅದನ್ನು ನಿಧಿ ಕಾಯುವಂತೆ, ಸರದಿ ಮೇಲೆ ಕಾವಲು ಕಾಯ್ತಾ ಇದ್ದದ್ದು;  ಆಚೆ ಬೀದಿ, ಈಚೆ ಬೀದಿ ಹುಡುಗರ ಜೊತೆ ಕಾಳಗ ನಡೆಸ್ತಾ ಇದ್ದದ್ದು; ಹುಣಿಸೆ ಹಣ್ಣು ಬೆಳೆ ಇದ್ದವರ ಮನೆಯಲ್ಲಿ ಹುಣಿಸೆ ಬೀಜಗಳನ್ನು ಬೇಡಿ ಸೇರುಗಟ್ಟಲೆ ತರ್ತಾ ಇದ್ದದ್ದು (ಕಾಮನನ್ನು ಸುಡುವೆಡೆ ನಾವು ಹುಡುಗಿಯರು ಇಡುತ್ತಿದ್ದ   ಹುಣಿಸೆ ಬೀಜದ ರಂಗೋಲಿ ನಮ್ಮ ಬೀದಿಯ  ವೈಷಿಷ್ಟ್ಯ ಮಾತ್ರ ಅಂತ ನಾನು ಅಂದ್ಕೊಂಡಿದೀನಿ);  ಕಾಮಣ್ಣನ್ನ ಸುಡುವ ಸ್ವಲ್ಪ ಮೊದಲು, ಯಾರಾದರೊಬ್ಬ ಪಡ್ಡೆ ಹುಡುಗರು 'ರತಿ' ವೇಷದಲ್ಲಿ ಮನೆ ಮನೆಗೂ ಹೋಗಿ, " ನನ್ನ ಗಂಡ ಕೋಪಿಷ್ಟ ಈಶ್ವರನ್ನ ಕೆಣಕಿ ಸುಟ್ ಹೋದ , ಬೇಡವೋ ಮುಂ__ ಮಗನೆ ಅಂದ್ರೂ ಕೇಳ್ಲಿಲ್ಲ, ನೋಡ್ರಮ್ಮ ನನ್ನ ಒಬ್ಬಂಟಿ ಮಾಡಿ ಹೋದ,  ನಂಗೀಗ ಕೆಂಪು ಸೀರೆ, ಒಪ್ಪತ್ತು ಊಟ ಅವಲಕ್ಕಿ ಫಳಾರ ಇಷ್ಟೇ ಕಣ್ರಮ್ಮ (ಆಳೋ ನಾಟಕ).  ಏನಾದ್ರೂ ಸಹಾಯ ಮಾಡಿ ಅಂತ ರಾಗ ರಾಗವಾಗಿ ನಕಲು ಮಾಡಿ ಹಾಡಿ ಮನೆಯವರನ್ನೆಲ್ಲ ನಗಿಸಿ, ಕಡಲೆ ಪುರಿ ಚರುಪಿಗೆ ಕಾಸು ವಸೂಲಿ ಮಾಡ್ತಾ ಇದ್ದದ್ದು;  ಅವರಿಗೆ 'ರತಿ' ವೇಷಕ್ಕೆ ಬೇಕಾದ ಕೆಂಪು ಸೀರೆಯನ್ನು, ನಾವು ಹುಡುಗಿಯರು ನೆರೆಹೊರೆಯ ಮಡಿ ಅಜ್ಜಿಯರ ಸ್ಟಾಕಿನಿಂದ ಕದ್ದು ಸಪ್ಲೈ ಮಾಡ್ತಾ ಇದ್ದದ್ದು; ಈ ಸಾರ್ತಿ 'ರತಿ' ವೇಷ ಹಾಕ್ಕೊಂಡಿರೋದು ಯಾರು ಅಂತ ನಾವೆಲ್ಲಾ ಬೆಟ್ ಮಾಡ್ತಾ ಇದ್ದದ್ದು; ಪೇಟೆ ಬೀದಿಯಲ್ಲಿ  ಶೆಟ್ಟರು ತಮ್ಮ ದಿನಸಿ ಅಂಗಡಿ ಖಾಲಿ ಮಾಡಿ ಕೊಡುತ್ತಿದ್ದ ಜಾಗದಲ್ಲಿ ಕಾಮ, ರತಿ, ಕೆಂಡಗಣ್ಣ ಈಶ್ವರನ ಬೊಂಬೆಗಳ ಪ್ರದರ್ಶನ, ಕಾಮನ ಹುಣ್ಣಿಮೆಯಂದು ಹುಲಿ ವೇಷ, ಒಂದೇ ಎರಡೇ, ಎಲ್ಲವೂ ಈಗಲೂ ಕಣ್ಣು ಕಟ್ಟಿದ ಹಾಗಿದೆ.  ಪ್ರತಿ ಕಾಮನ ಹಬ್ಬಕ್ಕೂ ಮನಸ್ಸು ವೀಸಾ ಗಲಾಟೆ ಇಲ್ಲದೆ ನನ್ನೂರಿನ ಕಡೆ ಹೊರಟುಬಿಡತ್ತೆ.



ನೀವೇ ಹೇಳಿ, ಬಣ್ಣ ಎರಚಾಡಿ ಹೋಳಿ ಅಂದುಬಿಡುವ ಹೋಳಿ ನಿಲ್ಲಬಲ್ಲದೆ ಕನ್ನಡ ಸೊಗಡಿನ ಕಾಮನ ಹಬ್ಬದ ಸೊಗಸಿನ ಮುಂದೆ?

ಶಾಮಲ