ಶಿಷ್ಯ: ಮನೆ ಚಿಕ್ಕದಾಯ್ತು ಗುರುಗಳೇ, ಇರೋದು ಕಷ್ಟ ಆಗ್ತಿದೆ. ಅಪ್ಪ, ಅಮ್ಮ, ಹೆಂಡತಿ ಮಕ್ಕಳು ಇಷ್ಟು ಜನ ಆದರೆ ಜಾಗ ತುಂಬಾ ಕಮ್ಮಿ

ಗುರು: ಹೌದ! ಜಾಗ ಕಮ್ಮಿ ಆಯ್ತಾ? ನಮ್ಮ ನಾಲ್ಕು ಶಿಷ್ಯರು ಇಂದಿನಿಂದ ನಿಮ್ಮ ಮನೇಲಿ ಇರ್ತಾರೆ, ಮಲಗೊಕ್ಕೆ ಜಾಗ ಕೊಟ್ರೆ ಸಾಕು!

ಶಿಷ್ಯ: ಗುರುಗಳೇ! ಖಂಡಿತ ಬರ್ಲಿ ಏನು ತೊಂದರೆ ಇಲ್ಲ

ನಾಲ್ಕು ದಿನದ ನಂತರ....

ಗುರು: ಶಿಷ್ಯ ನಮ್ಮ ಶಿಷ್ಯರನ್ನ ವಾಪಸ್ ಕಳಿಸು.

ಗುರು: ಶಿಷ್ಯ ಈಗ ಹೇಗಿದೆ ಮನೆ?

ಶಿಷ್ಯ: ಗುರುಗಳೇ ನಮ್ಮ ಮನೇಲಿ ಇಷ್ಟು ಜಾಗ ಇದೆ ಅಂತ ಗೊತ್ತೇ ಇರಲಿಲ್ಲ! ಧನ್ಯನಾದೆ ಗುರುಗಳೇ ನನಗೆ ಈಗ ದೊಡ್ಡ ಮನೆ ಬೇಡ!

ಏನು ಹಳೆ ಕಥೆ ಹೇಳ್ತ ಇದ್ದೀನಿ ಅಂದುಕೊಂಡ್ರಾ? ದಿನ ಆಫೀಸ್ ಮತ್ತೆ ಬೇರೆ ಬೇರೆ ಕೆಲಸ.. ಟೈಂ ಇಲ್ಲ ಅಂದುಕೊಳ್ಳುತ್ತ ಮನೆಯ ಕೆಲಸಗಳನ್ನ ವಾರಾಂತ್ಯಕ್ಕೆ ತಳ್ಳುತ್ತೇವೆ. ಪ್ರಪಂಚದಲ್ಲಿ ಎಲ್ಲರಿಗೂ ಕೂಡ ೨೪ ಗಂಟೆನೇ ಇರೋದು. ಪ್ರಧಾನಿ ಮೋದಿ ಆಗಿರಬಹುದು ಇಲ್ಲವೇ ರಾಹುಲ ಗಾಂಧಿ ಇರಬಹುದು ಎಲ್ಲರಿಗೂ ಅಷ್ಟೇ ಟೈಮು ಒಂದು ದಿನಕ್ಕೆ. ಈ ಟೈಮ್ ಅಂದ್ರೆ ಪಕ್ಕಾ ೪೨೦ ಅನ್ನೋ ಗಣೇಶಗೂ ೨೪ ಗಂಟೆನೇ! ಕೆಲವರು ಇತರರು ವಾರದಲ್ಲಿ ಮಾಡೋ ಕೆಲಸನ ಒಂದೇ ದಿನದಲ್ಲಿ ಮಾಡುತ್ತಾರೆ, ಇನ್ನು ಕೆಲವರು ಅದಕ್ಕೆ ತದ್ವಿರುದ್ಧ. ಹೇಗೆ ಇದು?!

ಥಿಯರಿ ಆಫ್ ರಿಲೇಟಿವಿಟಿ ಪ್ರಕಾರ ಟೈಮ್ ಬೇರೆ ಬೇರೆ ಕಡೆ ಬೇರೆ ಬೇರೆ ವೇಗದಲ್ಲಿ ಚಲಿಸುತ್ತಂತೆ, ಅಂದ್ರೆ ಟೈಮು ಒಂದು ಥರ ಅಲೆ ಇದ್ದಂಗೆ. ಇಲ್ಲಿ ಗುರುತ್ವಾಕರ್ಷಣೆ ಜಾಸ್ತಿನೋ ಅಲ್ಲಿ ನಿಧಾನಕ್ಕೆ ಮತ್ತು ಎಲ್ಲಿ ಕಮ್ಮಿ ಇರುತ್ತೋ ಅಲ್ಲಿ ಬೇಗ ಹೋಗುತ್ತಂತೆ.

ಯಾರು ಗುರುತರ ಕೆಲಸ ಮಾಡುತ್ತಾರೋ ಅವರಲ್ಲಿ ಆಕರ್ಷಣೆ ಜಾಸ್ತಿ, ನಮ್ಮ ಮೋದಿಜಿ ಅಂತೆ! ಅಲ್ಲ ಸುಮ್ನೆ ಉದಾಹರಣೆಗೆ. ಅವರ ಹತ್ತಿರ ಸಮಯನು ಸ್ವಲ್ಪ ನಿಧಾನಕ್ಕೆ ಹೋಗೋದು! ಅಂದ್ರೆ ಅಷ್ಟೇ ಸಮಯದಲ್ಲಿ ಹೆಚ್ಚು ಕೆಲಸ ಆಗುತ್ತೆ ಅಂತ. ಅದೇ ರೀಲು, ಮೀಮ್ ನೋಡೋಂಥ ನಮ್ಮಂಥವರ ಹತ್ತಿರ ಟೈಮ್ ಬೇಗ ಹೋಗಿಬಿಡುತ್ತೆ! ಯಾಕಂದರೆ ಮಾಡದೆ ಉಳಿಸಿರುವ ಕೆಲಸಕ್ಕೆ ಈಗ ಸಮಯ ಉಳಿದಿಲ್ಲ!

ನಾವು ನಮ್ಮ ಒಂದು ದಿನದಲ್ಲಿ ಸರಾಸರಿ ಎಷ್ಟು ಕೆಲಸ ಮಾಡುತ್ತೇವೋ ಅದನ್ನು ಒಮ್ಮೆ ಅಳೆದು ನೋಡೋಣ. ಇನ್ನೂ ಏನು ಅದರಲ್ಲಿ ಸೇರಿಸಬೇಕು ನೋಡೋಣ. ವಾಕಿಂಗ್, ದೇವರ ಪೂಜೆ, ಆಟ, ಮನೆ ಮಂದಿ ಜೊತೆ ಮಾತು ಹೀಗೆ. ಮಾಡುವ ಕೆಲಸದಲ್ಲೂ ಸ್ವಲ್ಪ ಜವಾಬ್ದಾರಿ ಜಾಸ್ತಿ ತೊಗೊಳ್ಳೋಣ. ಒಟ್ಟಿನಲ್ಲಿ ಗುರುತರ ಕೆಲಸಗಳು ಆಗಬೇಕು ನಮ್ಮಿಂದ. ಆಗ ನೋಡಿ, ಸಮಯ ದಿನಕ್ಕೆ ಅಷ್ಟೇ ಇದ್ದರೂ ನಾವು ಸುಮಾರು ಎಲ್ಲ ಮಾಡಲು ಆಗುತ್ತದೆ.

ಈಗಲೂ ಸಮಯ ಸಾಕಾಗುತ್ತಿಲ್ಲ ಅನ್ನಿಸಬಹುದು ಆದರೆ ಮಾಡಿರುವ ಗುರುತರ ಸಾಧನೆಗಳು ಇನ್ನೂ ಹೆಚ್ಚು ಹೆಚ್ಚು ಮಾಡುವಂತೆ ಪ್ರೇರೇಪಿಸುತ್ತವೆ ಆವಾಗ.