"ಇದೇನಿದು ಮಧ್ಯಾಹ್ನಕ್ಕಿಂತ ಮುಂಚೆನೇ ಬೆಳಗಾಗಿದೆ ನಿನ್ನ ಮಗಳಿಗೆ! ಶನಿವಾರ ಅಲ್ಲವೇ ಇವತ್ತು!" ವಾಕಿಂಗ್ ಮುಗಿಸಿ ಒಳಗೆ ಬರುತ್ತಾ ರಾಮರಾಯರು ಮಗಳ ಕಾಲೆಳೆದರು.
"ಅಪ್ಪಾ, ನಾನು ಎದ್ದು ಆಗಲೇ ಗಂಟೆ ಮೇಲಾಯ್ತು" ಸಿಡುಕಿದಳು ಸನ್ನಿಧಿ.
ರಾಯರು: "ಏನ್ ಕೇಳಿದ್ರೂ ChatGPT ಹೀಗನ್ನುತ್ತೆ, ಹಾಗನ್ನುತ್ತೆ ಅಂತಾರಲ್ಲ ರಾಮೇಗೌಡ್ರು! ಏನದು ಹಾಗೆಂದರೆ?"
ಸನ್ನಿಧಿ: "ನಿನ್ನೆ ಅಮ್ಮ ಕೇಳಿದ್ರಲ್ಲ, ಅದೇ ಇದು, ಉತ್ತರ ಕೊಡುವ ಮಾಡೆಲ್."
ಸೀತಮ್ಮ: "ಅಂದ್ರೆ ಏನ್ ಕೇಳಿದ್ರೂ ಉತ್ತರ ಹೇಳುತ್ತಾ?"
ಸನ್ನಿಧಿ: "ಅದಕ್ಕೆ ಟ್ರೈನಿಂಗ್ ಕೊಟ್ಟಿರುವ ವಿಷಯದಲ್ಲಿ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೆ, ಗೊತ್ತಿಲ್ಲದ್ದಕ್ಕೂ ಏನೋ ಒಂದು ಉತ್ತರ ಕೊಟ್ಟುಬಿಡುತ್ತೆ!"
ಸೀತಮ್ಮ: "ಪಕ್ಕದ ಮನೆ ಜಯಮ್ಮ ಹಾಗೆ! ಯಾವುದಕ್ಕೂ 'ನನಗೆ ಗೊತ್ತಿಲ್ಲ' ಅನ್ನೋದೇ ಇಲ್ಲ, ಎಲ್ಲದಕ್ಕೂ ಏನೋ ಒಂದು ಹೇಳ್ತಾರೆ."
ಸನ್ನಿಧಿ: "ಕರೆಕ್ಟ್ ಅಮ್ಮ! ಅದನ್ನೇ ಹೆಲುಸಿನೇಶನ್ ಅಂತಾರೆ."
ರಾಯರು: "ಬೇರೆ ಬೇರೆ ವಿಷಯಕ್ಕೆ ಬೇರೆ ಬೇರೆ ಮಾಡೆಲ್ ಇರುತ್ತಾ?"
ಸನ್ನಿಧಿ: "ಸಾಮಾನ್ಯ ವಿಷಯಗಳಿಗೆ ಈಗ ಜನಪ್ರಿಯ ಮಾಡೆಲ್ಗಳೇ ಸಾಕು. ಆದರೆ ಪ್ರೋಗ್ರಾಂ ಬರೆಯೋದು ಥರಹದ ಸ್ಪೆಷಲ್ ಕೆಲಸಕ್ಕೆ ಅದರದೇ ಆದ ಮಾಡೆಲ್ ಬೇಕಾಗುತ್ತೆ."
ರಾಯರು: "ಎಷ್ಟು ಬೇಕಾದ್ರೂ ಕೇಳಬಹುದಾ?"
ಸನ್ನಿಧಿ: "ನಿಮಗೆ ಸಿಕ್ಕಿರುವ ಟೋಕನ್ ಮುಗಿಯುವವರೆಗೆ ಕೇಳಬಹುದು."
ರಾಯರು: "ಏನದು ಟೋಕನ್ ಅಂದ್ರೆ?"
ಸನ್ನಿಧಿ: "'ನಿನ್ನ ಹೆಸರೇನು?' ಅಂತ ನೀವು ಕೇಳಿದ್ರೆ, ಅದನ್ನ AI ತುಂಡು ತುಂಡು ಮಾಡಿ ಅರ್ಥ ಮಾಡಿಕೊಳ್ಳುತ್ತೆ - ನಿನ್ನ, ಹೆಸರು, ಏನು, ? ಹೀಗೆ. ಯಾವ ಭಾಷೆಯಲ್ಲಿ ಕೇಳಿದ್ರೂ ಅದನ್ನ ತುಂಡು ಮಾಡಿ AI ಮಷೀನ್ಗೆ ಕಳಿಸುತ್ತೆ. ಅಲ್ಲಿ ಆ ತುಂಡುಗಳನ್ನ ಕಂಪ್ಯೂಟರ್ಗೆ ಅರ್ಥ ಆಗುವಂತೆ ಪ್ರಯೋಗ ಮಾಡುತ್ತೆ. ಇದನ್ನೇ ಪ್ರೊಸೆಸಿಂಗ್ ಟೋಕನ್ಸ್ ಅನ್ನೋದು."
ರಾಯರು: "ಪ್ರತಿ ಶಬ್ದಕ್ಕೂ ಒಂದು ಟೋಕನ್ ಹಾಗಾದ್ರೆ!"
ಸನ್ನಿಧಿ: "ಹಾಗೇನಿಲ್ಲ. ಈಗ 'ಶಬ್ದಾರ್ಥ' ಅನ್ನೋದು ಒಂದೇ ಶಬ್ದ ಆದ್ರೂ, ನಾವು ಸಂಧಿ ಬಿಡಿಸಿ 'ಶಬ್ದ + ಅರ್ಥ' ಅಂತ ಬೇರ್ಪಡಿಸ್ತೀವಲ್ಲ - ಆವಾಗ ಅರ್ಥ ಚೆನ್ನಾಗಿ ಆಗುತ್ತೆ ಅಲ್ವಾ? ಹಾಗೇ ಮಷೀನ್ಗೂ ಯಾವುದು ಅನುಕೂಲವೋ ಹಾಗೆ ತುಂಡು ಮಾಡಿಕೊಳ್ಳುತ್ತೆ."
"ಎಷ್ಟು ಜಾಸ್ತಿ ಟೋಕನ್ ಉಪಯೋಗಿಸ್ತೀವೋ ಅಷ್ಟು ಖರ್ಚು ನಮಗೆ. ಯಾಕಂದ್ರೆ ಇದೆಲ್ಲ ಪ್ರೊಸೆಸಿಂಗ್ ಆಗೋದು ಇಲ್ಲಿ ಫೋನ್ ಅಲ್ಲಿ ಅಲ್ಲ, ದೊಡ್ಡ ದೊಡ್ಡ ಡೇಟಾ ಸೆಂಟರ್ಗಳಲ್ಲಿ."
ರಾಯರು: "ಅಂದ್ರೆ ಎಷ್ಟು ದೊಡ್ಡ ಜಾಗ ಅದು?"
ಸನ್ನಿಧಿ: " ನೂರಾರು ಸರ್ವರ್ಗಳಿರೋ ಬೃಹತ್ ಕಟ್ಟಡ! ಅವನ್ನೆಲ್ಲ ನಡೆಸಲು ಕರೆಂಟು, ತಣ್ಣಗಿಡಲು ನೀರು - ಎಲ್ಲ ಬೇಕು."
ರಾಯರು: "ಮೊನ್ನೆ ತಾನೇ ಡೇಟಾ ಸರ್ವರ್ ಭಾರತದಲ್ಲೇ ಮಾಡಲು ವಿದೇಶಿ ಕಂಪನಿಗಳಿಗೆ ತೆರಿಗೆ ಇಲ್ಲ ಎಂದು ಸಮಾಚಾರ ಕೇಳಿದ್ದೆ"
ಸೀತಮ್ಮ: "ನಮಗೆ ಕುಡಿಯಲು ನೀರಿಲ್ಲ ಇನ್ನು ಈ ಡೇಟಾ ಸೆಂಟರ್ಗಳಿಗೆ ಎಲ್ಲಿಂದ ಕೊಡ್ತಾರೆ ನೀರು ಮೋದಿಜಿ?"
ರಾಯರು: "ಎಷ್ಟೊಂದು ದುಡ್ಡು ಬರುತ್ತೆ ಭಾರತಕ್ಕೆ ಮತ್ತೆ ಎಷ್ಟು ಜನಕ್ಕೆ ಕೆಲಸ ಸಿಗುತ್ತೆ ಗೊತ್ತಾ?"
ಸನ್ನಿಧಿ: "ನಾವು ಕೊಡೊ ಡೇಟಾ ಅಂದರೆ ನಮ್ಮೆಲ್ಲರ ಬಗ್ಗೆ ಮಾಹಿತಿ, ಇದೆಲ್ಲ ಎಲ್ಲೋ ಅಮೆರಿಕದ ಸರ್ವರ್ಗಳಲ್ಲಿ ಹೋಗಿ ಕೂರುತ್ತಿತ್ತು, ಇನ್ಮೇಲೆ ಇಲ್ಲೇ ಭಾರತದಲ್ಲೇ ಇರುತ್ತೆ ಈ ಡೇಟಾ ಸೆಂಟರ್ಗಳಿಂದ"
"ಸರಿ, ತಿಂಡಿ ಆಗಿದೆ, ಎದ್ದು ಸ್ನಾನ ಮಾಡಲು ಎಷ್ಟು ಟೋಕನ್ ಖರ್ಚಾಗುತ್ತೆ ನಿಮ್ಮಿಬ್ಬರಿಗೂ?" ಎಂದರು ಸೀತಮ್ಮ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!