ಕಾಲೇಜು ಶುರುವಾಗೋದು ಒಂಬತ್ತು ವರೆಗೆ.. ಮಾಮೂಲಂಗೆ ಹಾಜರಾತಿ ತೆಗೆಯೋ ಸಮಯಕ್ಕೆ ಸರಿಯಾಗಿ ಹೋದೆ (ಹತ್ತು ಕಾಲಕ್ಕೆ) ನನ್ನ ಲಾಸ್ಟ್ ಬೆಂಚ್ ಗೆಳತಿಯರು ಕಾಯ್ತಾ ಇದ್ರು ನಂಗೋಸ್ಕರ..
ಮುಂದಿನ ಪಿರಿಯಡ್ ತುಂಬ ಬೋರಿಂಗ್. ಏನು ಮಾಡೋದು ಅಂತ ಯೋಚ್ನೆ ಮಾಡಿ ಆಮೇಲೆ ಇವತ್ತು ಏನು ತರಲೆ ಮಾಡೋದು ಬೇಡ ಅಂತ ಸುಮ್ನೆ ಡೀಸೆಂಟಾಗಿ(?) ಕೂತಿದ್ವಿ..
ಸರ್ ಬಂದ್ರು ಇನ್ಶೂರೆನ್ಸ್ ಪಾಠ ಶುರು ಮಾಡಿದ್ರು
ಒಂದು ಉದಾಹರಣೆ ಕೊಟ್ರು ಅದನ್ನ ಅವರ ಪದಗಳಲ್ಲೇ ಹೇಳ್ತಿನಿ
"ನಾನು ಇವತ್ತು ಹೊಸ ಬೈಕ್ ತೊಗೊಂಡೆ. ಅದಕ್ಕೆ ಖುಶಿಯಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ೧೮೦ ಪೆಗ್ ಹಾಕೊಂಡು ರಾತ್ರಿ ೧೨ ಘಂಟೆಲಿ ಬರ್ತಾ ಇದ್ದೆ.. ಅಮವಾಸ್ಯೆ ರಾತ್ರಿ ಅವತ್ತು.. ಎದರುಗಡೆಯಿಂದ ಒಬ್ಳು ತುಂಬಾ ಚೆನ್ನಾಗಿರೋ ಹುಡುಗಿ ಬರ್ತಿದ್ಳು. ಮೊದ್ಲೇ ಕುಡ್ದಿದ್ನಲ್ಲ ಬ್ಯಾಲೆನ್ಸ್ ತಪ್ಪಿ ಆ ಹುಡುಗಿಗೆ ಗುದ್ದಿದೆ.. ಆ ಹುಡುಗಿಗೆ ಒಂದು ಕಣ್ಣು ಒಂದು ಕಾಲು ಒಂದು ಕೈ ಹೋಯ್ತು.. ಮಾರನೇ ದಿನ ಅವಳ ಮದುವೆ.. ನಾನು ಡಿಕ್ಕಿ ಹೊಡೆದಮೇಲೆ ಅಲ್ಲಿ ನಿಲ್ಸದೆ ಮುಂದೆ ಹೊರಟು ಹೋದೆ.. ಈಗ ನಾನೇ ಡಿಕ್ಕಿ ಹೊಡೆದಿದ್ದು ಅಂತ ಹೇಗೆ ಕಂಡು ಹಿಡಿತಾರೆ?? ನನ್ನ ಗಾಡಿ ನಂಬರ್ ಯಾರೂ ಬರೆದುಕೊಂಡಿರಲಿಲ್ಲ" ಅಂದ್ರು
ನಾವ್ಯಾರು ಏನು ಮಾತಾಡಲಿಲ್ಲ
ಅವ್ರೇ ಮುಂದುವರಿಸಿಕೊಂಡು ಹೋದ್ರು
"ನಾನು ಹಾಕ್ಕೊಂಡಿದ್ದ ಪ್ಯಾಂಟ್, ಶರ್ಟು, ಕೂಲಿಂಗ್ ಗ್ಲಾಸ್, ಹ್ಯಾಟು ಇದನ್ನೆಲ್ಲಾ ನೋಡಿ ನನ್ನ ಕಂಡು ಹಿಡಿತಾರಾ" ಅಂತ ಕೇಳಿದ್ರು
ಅಷ್ಟು ಹೊತ್ತಿನ ತನಕ ಸುಮ್ನೆ ಕೂತಿದ್ದೆ, ಆಗ ಮಾತ್ರ ನಂಗೆ ನಗು ತಡಿಯಕ್ಕೆ ಆಗ್ಲೇ ಇಲ್ಲ ಜೋರಾಗಿ ನಕ್ಬಿಟ್ಟೆ..
"ಯಾಕ್ರೀ ಮೇಡಮ್ ಅಷ್ಟು ಜೋರಾಗಿ ನಕ್ತಿದ್ದೀರ" ಅಂದ್ರು
"ಸರ್ ಅಮವಾಸ್ಯೆ ರಾತ್ರಿ ೧೨ ಘಂಟೆಗೆ ನಿಮ್ಗೆ ಕೂಲಿಂಗ್ ಗ್ಲಾಸ್ ಯಾಕೆ ಸರ್" ಅಂದೆ.
ಸರ್ ಗೆ ಸ್ವಲ್ಪ ಸಿಟ್ಟು ಬಂತು ಅನ್ಸುತ್ತೆ ..
"ಕೂಲಿಂಗ್ ಗ್ಲಾಸ್ ಹಾಕಿಕೊಳ್ಳದೆ ಇದ್ರೆ ಹುಡುಗಿನಾ ಮುದುಕಿನಾ ಗೊತ್ತಾಗಲ್ಲ ಅದಕ್ಕೆ" ಅಂದ್ರು..
ಇನ್ನು ಜೋರಾಗಿ ನಕ್ಕು ಬಿಟ್ವಿ
"ನಾನು ಒಂದು ಕನ್ನಡಕನಾದ್ರೂ ಹಾಕಿಕೊಳ್ತಿನಿ ಐದಾದ್ರು ಹಾಕಿಕೊಳ್ತಿನಿ ನಿಮಗೇನು" ಅಂದ್ರು
ಅಷ್ಟು ಹೊತ್ತಿಗೆ ಒಬ್ಬ ಹುಡುಗ "ಸರ್ ಮಾರ್ನೆ ದಿನ ಆಹುಡುಗಿಗೆ ಮದುವೆ ಅಂದ್ರಿ ರಾತ್ರಿ ೧೨ ಘಂಟೆಗೆ ಆ ಹುಡುಗಿ ಅಲ್ಲೇನು ಮಾಡ್ತಿದ್ಲು ಸರ್" ಅಂದ್ಬಿಟ್ಟ..
ಸರ್ ಗೆ ಏನು ಹೇಳೋದು ಅಂತ ಗೊತ್ತಾಗ್ದೆ ನನ್ನ ಎದ್ದು ನಿಲ್ಸಿ ಎಲ್ಲ ನಿಮ್ಮಿಂದನೇ ಶುರುವಾಗಿದ್ದು ಅಂತ ಬೈದ್ರು...
ನಾನು ಮಾಡಿದ್ದು ತಪ್ಪಾ?? :( :(
ಇನ್ನೂ ಎಷ್ಟೊಂದು ಅನುಮಾನಗಳಿವೆ...
ಹೇಗೆ ಪರಿಹರಿಸಿಕೊಳ್ಳೋದು ಗೊತ್ತಿಲ್ಲ :( :(
ನನ್ನಿ
ದೃಶ್ಯ ಪ್ರದೀಪ :)
ಪ್ರತಿಕ್ರಿಯೆ (13)