ಸಂಸ್ಕೃತ ಭಾಷೆಯಲ್ಲಿ ಭಾಸ ಕವಿಯು 13 ನಾಟಕಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟ ಐದು ನಾಟಕಗಳನ್ನು ಕಾವ್ಯರೂಪದಲ್ಲಿ ಶ್ರೀ ಡಿ ವಿ ಗುಂಡಪ್ಪನವರು ಅನುವಾದ ಮಾಡಿದ್ದಾರೆ. ಇವನ್ನು ಗದ್ಯ ರೂಪದಲ್ಲಿ ಶ್ರೀ ಜಿ ಪಿ ರಾಜರತ್ನಂ ಅವರು ಅನುವಾದ ಮಾಡಲು ಶ್ರೀ ಡಿ ವಿ ಗುಂಡಪ್ಪನವರು ಅನುಮತಿ ಕೊಟ್ಟರು. ಶ್ರೀ ಜಿ ಪಿ ರಾಜರತ್ನಂ ಅವರು ಭಾಸನ ಭಾರತ ಎಂಬ ಪುಸ್ತಕದಲ್ಲಿ ಈ ಗದ್ಯಾನುವಾದಗಳನ್ನು ಕೊಟ್ಟಿದ್ದಾರೆ. ಈ ಪುಸ್ತಕವು Archive.org ತಾಣದಲ್ಲಿ ಪುಕ್ಕಟೆಯಾಗಿ ಲಭ್ಯವಿದೆ. ಅದನ್ನು ಇಳಿಸಿಕೊಂಡು ನೀವು ಓದಬಹುದು.

ಧಾರವಾಡದಲ್ಲಿ ಕರೆಂಟ್ ಹೋಗಿರುವುದರಿಂದ ನನ್ನ ಹಳೆಯ ಮೊಬೈಲ್ ನಲ್ಲಿಇಳಿಸಿಕೊಂಡಿದ್ದ ಈ ಪುಸ್ತಕವನ್ನು ಓದುತ್ತಾ ಕುಳಿತಿದ್ದೇನೆ. ಈ ಪುಸ್ತಕವು ಸುಮಾರು ನೂರು ಪುಟಗಳಲ್ಲಿ ಇದೆ. ಮೊದಲಿಗೆ ಇರುವದು ಮಧ್ಯಮ ವ್ಯಾಯೋಗ, ಇದರಲ್ಲಿ ವನವಾಸದಲ್ಲಿ ಇರುವ ಪಾಂಡವರು ಭೀಮನನ್ನು ಒಬ್ಬನನ್ನೇ ಆಶ್ರಮವನ್ನು ಕಾಯಲು ಬಿಟ್ಟು ಎಲ್ಲಿಗೋ ಹೋಗುತ್ತಾರೆ. ಹಿಡಿಂಬೆಯು ಭೀಮನನ್ನು ಭೇಟಿಯಾಗುವ ವಿಚಾರದಿಂದ ಮಗ ಘಟೋತ್ಕಚನನ್ನು ಕಳಿಸುತ್ತಾಳೆ. ತಂದೆಯು ಮಗನ ಗುರುತು ಹಿಡಿಯುತ್ತಾನೆ. ಆದರೆ ಮಗ ಘಟೋತ್ಕಚನು ಮೊದಲಿಗೆ ತಂದೆಯಾದ ಭೀಮನ ಗುರುತು ಹಿಡಿಯುವುದಿಲ್ಲ.

ಎರಡನೆಯದಾಗಿ ಇರುವುದು ದೂತ ವಾಕ್ಯ . ಕೃಷ್ಣನು ಪಾಂಡವರ ದೂತನಾಗಿ ದುರ್ಯೋಧನದಲ್ಲಿ ಬರುವುದರ ಸಂಗತಿ ಇದೆ. ಇಲ್ಲಿ ಧೃತರಾಷ್ಟ್ರನು ಶ್ರೀಕೃಷ್ಣನ ಕಾಲಿಗೆ ಬಿದ್ದಾಗ ಅಯ್ಯೋ ಅಜ್ಜನು ಎಡವಿ ಬಿದ್ದನು ಎಂದು ಕೃಷ್ಣನು ನಾಟಕ ಮಾಡುತ್ತಾನೆ!

ಮೂರನೆಯದಾಗಿ ದೂತ ಘಟೋತ್ಕಚ ಇದೆ . ಇದರಲ್ಲಿ ಘಟೋತ್ಕಚನು ದೂತನಾಗಿ ಕೌರವರಲ್ಲಿ ಬಂದು ದುರ್ಯೋಧನನನ್ನು ಭೇಟಿಯಾದ ಸಂಗತಿ ಇದೆ.

ನಾಲ್ಕನೇಯದಾಗಿ ಕರ್ಣಭಾರ ಇದೆ. ಯುದ್ಧದಲ್ಲಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಬಂದು ಕರ್ಣನಿಂದ ಕವಚ ಕುಂಡಲಗಳನ್ನು ದಾನ ಪಡೆಯುವ ಸಂಗತಿ ಇದೆ.

ಐದನೆಯದಾಗಿ ಊರುಭಂಗ ನಾಟಕದ ಕಥೆ ಇದೆ. ಇದರಲ್ಲಿ ಭೀಮನು ಯುದ್ಧದ ಮರ್ಯಾದೆಯನ್ನು ಮೀರಿ ದುರ್ಯೋಧನ ತೊಡೆಗೆ ತನ್ನ ಗದೆಯಿಂದ ಪೆಟ್ಟು ಹಾಕಿ ಕೊಲ್ಲುವ ಸಂಗತಿ ಇದೆ.

ಇದಲ್ಲದೆ ಪಂಚರಾತ್ರ ಎಂಬ ಭಾಸನ ಸ್ವಲ್ಪ ದೊಡ್ಡ ನಾಟಕದ ಕುರಿತೂ ಇದೆ. ಆದರೆ ಇದರಲ್ಲಿ ದುರ್ಯೋಧನನು ಪಾಂಡವರ ವನವಾಸದ ನಂತರ ತಾನು ಆಡಿದ ಮಾತಿನಂತೆ ಅರ್ಧ ರಾಜ್ಯವನ್ನು ಕೊಟ್ಟು ಅವರೊಂದಿಗೆ ಸುಖವಾಗಿ ಬಾಳುತ್ತಾನೆ!

ಕೊನೆಯಲ್ಲಿ ವ್ಯಾಸ ಭಾರತದ 18 ಪರ್ವಗಳ ಸಂಕ್ಷಿಪ್ತ ವಿವರಣೆ ಇದೆ. ಆ ಪ್ರಕಾರ ಕೌರವ ಪಾಂಡವರ ದ್ವೇಷದ ಕತೆಯು 10ನೇ ಪರ್ವದಲ್ಲಿ ಮುಗಿದು ಹೋಗುತ್ತದೆ! .