ಓಶೋ ಹೇಳಿದ ಈ ಕಥೆ ನನ್ನ ಮುಖದ ಮೇಲೆ ಸ್ವಲ್ಪ ಮಂದಹಾಸ ತರಿಸಿತು. ನಾನೇನೂ ಓಶೋ ರಜನೀಶರ ಅಭಿಮಾನಿಯಲ್ಲ, ಆದರೂ ಅವರ ರೆಕಾರ್ಡಿಂಗ್ಗಳನ್ನು ಕೇಳಿದಾಗ ಅವರೇಕೆ ಅಷ್ಟು ಜನಪ್ರಿಯರಾಗಿದ್ದರು ಎಂಬುದು ಗೊತ್ತಾಗುತ್ತದೆ.
ಕಥೆ ಹೀಗಿದೆ..
ಹೀಗೊಂದು ಊರಿನಲ್ಲಿ ಇಬ್ಬರು ದಾರ್ಶನಿಕರಿದ್ದರಂತೆ - ಒಬ್ಬ ಆಸ್ತಿಕ, ಮತ್ತೊಬ್ಬ ನಾಸ್ತಿಕ. ಆಸ್ತಿಕನ ಮಾತು ಕೇಳಿದ ಜನರಿಗೆ ದೇವರಿರುವ ಬಗ್ಗೆ ನಂಬಿಕೆ ಮೂಡುತ್ತಿತ್ತು. ಹಾಗೆಯೇ ನಾಸ್ತಿಕನ ಉಪದೇಶ ಕೇಳಿದವರಿಗೆ ದೇವರ ಮೇಲಿನ ನಂಬಿಕೆ ಕರಗುತ್ತಿತ್ತು. ಇದಕ್ಕೊಂದು ಇತ್ಯರ್ಥ ಮಾಡಲೇಬೇಕೆಂದು ಊರ ಹಿರಿಯರೆಲ್ಲ ಸೇರಿ ಒಂದು ಸಂವಾದ ಏರ್ಪಡಿಸಿದರು. ವಾಗ್ವಾದದಲ್ಲಿ ಯಾರು ಗೆಲ್ಲುತ್ತಾರೋ, ಇನ್ನು ಮುಂದೆ ಇಡೀ ಊರು ಅವರು ಹೇಳಿದಂತೆ ದೇವರನ್ನು ನಂಬಬೇಕು ಇಲ್ಲವೇ ನಂಬದಿರಬೇಕು ಎಂದು ನಿರ್ಣಯಿಸಲಾಯಿತು. ಸಂವಾದ ಭರಾಟೆಯಿಂದ ಸಾಗಿತು. ಹಗಲು ಕಳೆದು ರಾತ್ರಿಯಾಯಿತು, ಜನರು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು. ಅಪರಾತ್ರಿಯ ಹೊತ್ತಿಗೆ ವಾಗ್ವಾದ ನಿಂತಿತು, ಇಬ್ಬರೂ ವಾದಿಗಳು ಶಾಂತರಾದರು.
ಮರುದಿನ ಊರ ಹಿರಿಯರು ಬಂದು ನೋಡಿದಾಗ, ಆಸ್ತಿಕ ಹೇಳಿದನಂತೆ: "ನನ್ನ ಜನ್ಮ ವ್ಯರ್ಥವಾಗುತ್ತಿತ್ತು! ನಿಮ್ಮೆಲ್ಲರಿಗೂ ಧನ್ಯವಾದ. ನಮ್ಮ ಹಣೆಬರಹ ನಮ್ಮ ಕೈಯಲ್ಲೇ ಇದೆ, ದೇವರು ನಾವೇ!" ಊರ ಜನ ಹರ್ಷದಿಂದ ನಾಸ್ತಿಕನ ಬಳಿ ಹೋಗಿ ಅಭಿನಂದಿಸಿದರು.
ಆದರೆ ನಾಸ್ತಿಕ ಹೇಳಿದ: "ನನ್ನ ಇಡೀ ಜನ್ಮ ವ್ಯರ್ಥವಾಯಿತು, ಬಹಳ ಪಾಪ ಮಾಡಿದೆ. ನಾನು ದೇವರನ್ನು ನಂಬದಿರುವುದಷ್ಟೇ ಅಲ್ಲ, ಇತರರನ್ನೂ ನಂಬದಂತೆ ಮಾಡಿದೆ! ನನಗೆ ಕ್ಷಮೆಯೇ ಇಲ್ಲ." ಎಂದು ಹೇಳಿ ತೀರ್ಥಯಾತ್ರೆಗೆ ತೆರಳಿದನಂತೆ.
ಊರ ಜನರ ಪಾಲಿಗೆ ಸಮಸ್ಯೆ ಹಾಗೇ ಉಳಿಯಿತು - ದೇವರು ಇದ್ದಾನೆಯೇ, ಇಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!