ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು ಹುಟ್ಟಿಹಾಕಿದ್ದುಂಟು. ನಿರ್ವಹಣೆಯೇ ಕಷ್ಟವೆನ್ನುವಷ್ಟಾಗಿತ್ತು. ಹೆಚ್ಚುತ್ತಿದ್ದ ಜನಪ್ರಿಯತೆ, ಟ್ರಾಫಿಕ್ ನಿಂದಾಗಿ ಎದುರಾದ ತಾಂತ್ರಿಕ ಸವಾಲುಗಳು ಭೀತಿ ಹುಟ್ಟಿಸಿದ್ದರ ನಡುವೆಯೇ ಹೀಗೊಂದು ದಿನ ತುಂಬ ತೊಂದರೆಯಾಗಿಹೋಯಿತು. ಹಾರ್ಡ್ವೇರ್ ಸಮಸ್ಯೆಯಿಂದಾಗಿ ಇಡಿಯ ಸರ್ವರ್ ಕೈಕೊಟ್ಟಿತು.

'ಸಂಪದ' ತೀರ ಕಡಿಮೆ ಸಂಪನ್ಮೂಲಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದ ಕಾರಣ ಹೊಸ ಸರ್ವರಿಗೆ ವರ್ಗಾಯಿಸುವ ಕೆಲಸ, ಮತ್ತೊಮ್ಮೆ ಹೀಗಾಗದಂತೆ ಕ್ರಮವಹಿಸಲು 'ಸಂಪದ'ವನ್ನು ಉತ್ತಮಪಡಿಸುವ ಕೆಲಸ ಸುಮಾರು ಎರಡು ತಿಂಗಳುಗಳಷ್ಟು ಸಮಯ ತೆಗೆದುಕೊಂಡಿತು. ನಾಲ್ಕು ವರ್ಷಗಳ ಕಾಲ ಹಲವು ಹೆಜ್ಜೆಗಳಲ್ಲಿ ರೂಪುಗೊಂಡಿದ್ದ 'ಸಂಪದ' ಒಮ್ಮೆಲೇ ಕೆಡವಿಹೋದದ್ದು ಹೊಸತಾಗಿ ಮತ್ತೆ ಜೋಡಿಸಿ ಕಟ್ಟಲೇಬೇಕಾದ ಸವಾಲು ನಮ್ಮ ಮುಂದಿತ್ತು.

ಇದೆಲ್ಲದರ ನಡುವೆ ಏನೆಲ್ಲ ಬೆಳವಣಿಗೆಗಳಾಗಿ ಹೋಗಿವೆ. ಅಂತರ್ಜಾಲದಲ್ಲಿ ಕನ್ನಡ ಕೆಲವು ಉತ್ತಮ ತಾಣಗಳನ್ನು ಕಳೆದುಕೊಂಡಿದೆ. ಕೆಲವು ಹೊಸ ಪ್ರಯತ್ನಗಳು ಸೇರ್ಪಡೆಯಾಗಿ ಹುರುಪು ಮೂಡಿಸಿವೆ.

'ಸಂಪದ' ಸಮುದಾಯದ ಮತ್ತೊಂದು ಯೋಜನೆ 'ಕೃಷಿ ಸಂಪದ' ನಿರೀಕ್ಷೆಗೆ ಮೀರಿದ ಪ್ರೋತ್ಸಾಹ ಪಡೆದಿದೆ. ನಿತ್ಯ ತಾಂತ್ರಿಕ ಜಗತ್ತಿನಲ್ಲಿ ಹೊಸ ಬೆಳವಣಿಗೆಗಳಾಗುತ್ತಿವೆ.

'ಸಂಪದ' ಕೂಡ ಈಗ ಹೊಸ ಸರ್ವರಿನಿಂದ ಕಾರ್ಯನಿರ್ವಹಿಸುತ್ತಿದೆ. ಈಗ Intel Xeon QuadCore, 4GB RAM, 250GB Storage ಮತ್ತು RAID 1 ಸವಲತ್ತು ಲಭ್ಯವಿರುವ ಸರ್ವರ್ ಇದು. ಎರಡು ತಿಂಗಳ ಹಿಂದೆ ಸರ್ವರಿನಲ್ಲಿ ತೆಗೆದಿಟ್ಟ ಬ್ಯಾಕಪ್ ಇದ್ದೂ ಬಳಸಲಾಗದಂತಾದ ಕಾರಣ ಬಳಸಲು ಯೋಗ್ಯವಾಗಿದ್ದ ಬ್ಯಾಕಪ್ (ಜುಲೈ, ೨, ೨೦೦೯ ವರೆಗಿನ ಬ್ಯಾಕಪ್)ನ ಆವೃತ್ತಿಯಿಂದ ಸಂಪದವನ್ನು ಪುನರಾರಂಭಿಸಲಾಗಿದೆ.

ಇನ್ನು ಮುಂದಿರುವ ಸವಾಲುಗಳು:

  • 'ಸಂಪದ' ನಡೆಸುತ್ತಿರುವ, ನೋಡಿಕೊಳ್ಳುತ್ತಿರುವ ತಂಡ ತೀರ ಸಣ್ಣದು.  ನಾವೆಲ್ಲರೂ ನಮ್ಮ ಕೆಲಸಗಳ ನಡುವೆ ಇದನ್ನು ಮಾಡುತ್ತಿದ್ದೇವೆ. 'ಸಂಪದ' ಈಗಾಗಲೇ ಬಹಳಷ್ಟು ಬೆಳೆದು ನಿಂತಿದೆ. ಇದನ್ನು ನಿರ್ವಹಿಸಲು, ನಡೆಸಲು ಸಕ್ರಿಯ ತಂಡವೊಂದು ಬೇಕು. Full-time, dedicated ತಂಡ ಬೇಕು.
  • ಕನ್ನಡದ ನೆಲದಿಂದ ಹುಟ್ಟಿದ ಯೋಜನೆ, ದೇಶೀಯ ಪ್ರಯತ್ನ 'ಸಂಪದ'. ಈ ಯೋಜನೆಗೆ ಬಹುರಾಷ್ಟ್ರೀಯ ಕಂಪೆನಿಗಳಷ್ಟು ಸಂಪನ್ಮೂಲ ಇಲ್ಲ. ಈ ಯೋಜನೆಗಳನ್ನು ಉಳಿಸಿಕೊಂಡು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಹೆಚ್ಚಿನ ಸಂಪನ್ಮೂಲಗಳನ್ನು ಒಟ್ಟುಹಾಕುವ ಅವಶ್ಯಕತೆ ಇದೆ.