ಸಂಪದದಿಂದಾಗಿ ನಾನು ಬಹಳಷ್ಟು ತಿಳಿದುಕೊಂಡಿದ್ದೇನೆ . ಲೀನಕ್ಸ್ ಬಗ್ಗೆ ಓದಿ ಗೊತ್ತಿತ್ತಲ್ಲದೆ ( ಅದಕ್ಕೇ ತಪ್ಪು ತಪ್ಪಾಗಿ ಅದನ್ನು ಲೈನಕ್ಸ್ ಅಂತ ಉಚ್ಚರಿಸ್ತಿದ್ದೆ ! . ಲೀನಕ್ಸ್ ಅನ್ಬೇಕು ಅಂತ ಸಂಪದದಲ್ಲಿ ಬೈಸಿಕೊಂಡೇ ಗೊತ್ತಾದದ್ದು ! ) ಉಬುಂಟು ಬಗ್ಗೆ ತಿಳಿದುಕೊಂಡದ್ದೂ ಇಲ್ಲೇ . ಉಬುಂಟು ಸೀಡಿ ಯನ್ನು ಪುಕ್ಕಟೆ ತರಿಸಿಕೊಳ್ಳ ಬಹುದೆಂದು ಗೊತ್ತಾದದ್ದೂ ಇಲ್ಲೇ . ಇರಲಿ ಆ ಪ್ರಕಾರ ತರಿಸಿ ನನ್ನ ಕಮ್ಪ್ಯೂಟರ್ನಲ್ಲಿ ಹಾಕಿಕೊಂಡು ಸಂಪದದಲ್ಲಿ ಹರಿಪ್ರಸಾದನಾಡಿಗರೂ ಲಿನಕ್ಸಾಯಣದ ಓಂಶಿವಪ್ರಕಾಶರೂ ಸಂಪದದ ಮೂಲಕ ತಿಳಿಸಿದ ಪ್ರಕಾರ ಕನ್ನಡ ಓದಲು ಬರೆಯಲೂ ಅನುಕೂಲ ಮಾಡಿಕೊಂಡದ್ದು , ಆಗಾಗ ಅಪ್ಡೇಟ್ ಮಾಡಿಕೊಳ್ತಾ ಬಂದದ್ದು , ಡಿಜಿಟಲ್ ಲೈಬ್ರರಿಯಿಂದ ಕನ್ನಡ ಪುಸ್ತಕದ ಪುಟಗಳನ್ನು ತಂತಾನೇ ಇಳಿಸಿಕೊಳ್ಳಲು ಸಣ್ಣ ಪ್ರೋಗ್ರಾಮನ್ನು ಬರಕೊಂಡದ್ದು , ಆಮೇಲೆ ಪೀಡಿಎಫ್ ಕೂಡ ಮಾಡಿಕೊಂಡದ್ದು ಹಳೆಯ ಕತೆ ಅನ್ನಿ. ಇದನ್ನೆಲ್ಲ ಹಿಂದೆ ಹೇಳಿದ್ದೀನಿ. ಈಗ ಹೊಸ ಕತೆ ಏನು ಅಂತೀರೋ ? ಹೇಳ್ತೀನಿ ಆಲಿಸುವಂತವರಾಗಿ.
ಸಂಪದ ಎರಡು ತಿಂಗಳು ಸಿಗದೆ ಇದ್ದಾಗ ನಾನು ಒಂಡು ಘನಕಾರ್ಯವನ್ನು ಮಾಡಿದೆ . ಅದು ಏನು ಅಂತೀರೋ ? ನನ್ನ ಕ್ಯಾಸೆಟ್ಟ್ ರಾಶಿಯನ್ನು ಡಿಜಿಟೈಸ್ ಮಾಡಲು ಒಂದು ನಾಲ್ಕು ಸಾವಿರ ಕೊಟ್ಟು ಫಿಲಿಪ್ಸ್ ಸೆಟ್ಟನ್ನು ತಕೊಂಡಿದ್ದೆ . ಕೆಲವು ಹಾಡುಗಳನ್ನು ಎಂ ಪಿ೩ ಗೆ ಬದಲಿಸಲು ಸಾಧ್ಯ ಆಯಿತು. ಕೆಲವು ಕ್ಯಾಸೆಟ್ಟೇ ಸರಿ ಇರಲಿಲ್ಲ , ಅಷ್ಟು ಹೊತ್ತಿಗೆ ಇಂಟರ್ನೆಟ್ಟಿನಲ್ಲಿ ಒಂದು ಮ್ಯೂಸಿಕ್ ಸೈಟ್ ಸಿಕ್ಕಿತು . ಅಲ್ಲಿ ನನಗೆ ಬೇಕಾದ ಎಷ್ಟೋ ಹಾಡುಗಳಿದ್ದವು . ಆದರೆ ಅವನ್ನು ಪ್ಲೇ ಮಾಡಲು ಇಂಟರ್ನೆಟ್ಟು ಕನೆಕ್ಷನ್ ಸರಿಯಾಗಿ ಕೆಲ್ಸ ಮಾಡುತ್ತಿರಬೇಕು. ಅವನ್ನು ಡೌನ್ಲೋಡ್ ಮಾಡುವ ಹಾಗಿರಲಿಲ್ಲ . ಯಾಕಂದರೆ ಅವು ರಿಯಲ್ ಪ್ಲೇಯರ್ ಕಡತಗಳು . ನನ್ನ ಕಂಪ್ಯೂಟರ್ ನಲ್ಲಿ ಉಳಿಸಿಕೊಂಡರೆ ಅವನ್ನು ಕ್ಲಿಕ್ ಮಾಡಿದರೆ ಮತ್ತೆ ಇಂಟರ್ನೆಟ್ ಗೇ ಹೋಗುತ್ತಿತ್ತು. ಗೂಗಲ್ ನಲ್ಲಿ ಹುಡುಕಿ ಆ ಬಗ್ಗೆ ತಿಳಿದುಕೊಂಡೆ . ಅದು ಏನಪ್ಪಾ ಅಂದರೆ ಇವು .rm ಕಡತಗಳು . ಇವನ್ನು ನೋಟ್ ಪ್ಯಾಡ್ ನಲ್ಲಿ ತೆರೆದರೆ .ram ಕಡತದ ವಿಳಾಸ ಸಿಗುತ್ತದೆ . ಆ ಕಡತ ಇಳಿಸಿ ಉಳಿಸಿಕೊಂಡರೆ ಇಂಟರ್ನೆಟ್ ಇಲ್ಲದೇ ಪ್ಲೇ ಮಾಡಬಹುದು . ಸರಿ . ಹಾಗೆ ಇಳಿಸಿಕೊಂಡ ಕಡತವನ್ನು ಎಂಪಿ೩ ಗೆ ಬದಲಿಸುವದು ಹೇಗೆ ? ಅದಕ್ಕೆ ಬೇಕಾದ ಪ್ಯಾಕೇಜನ್ನೂ ಇಳಿಸಿ ಪ್ರತಿಷ್ಠಾಪಿಸಿಕೊಂಡದ್ದೂ , ಅದಕ್ಕೊಂದು ಚಿಕ್ಕ ಪ್ರೋಗ್ರಾಮ್ ಬರಕೊಂಡದ್ದೂ , ಬೇಕು ಬೇಕಾದ ಹಾಡುಗಳನ್ನೆಲ್ಲ ನನ್ನ ಸಂಗ್ರಹಕ್ಕೆ ಸೇರ್ಸಿದ್ದೂ ಆಯಿತು.
ಅಷ್ಟು ಹೊತ್ತಿಗೆ ಆ ತಿಂಗಳ ಡೌನ್ಲೋಡ್ ಲಿಮಿಟ್ ಮಿತಿಮೀರಿದ್ದೂ , ಸದ್ಯ ಇಂಟರ್ನೆಟ್ ಗೊಡವೆ ಬೇಡ ಅಂತ ಮೋಡೆಮ್ ನ ಪ್ಲಗ್ಲನ್ನೇ ತೆಗೆದು ಇಟ್ಟೆ . ಅಷ್ಟು ಹೊತ್ತಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಾನು ಪೋಲಿಂಗ್ ಬೂತಿನ ಮುಖ್ಯ ಅಧಿಕಾರಿಯಾಗಿ ಕೆಲಸ ಮಾಡಬೇಕಾಗಿ ಬಂದು ನಾಲ್ಕೈದು ದಿನ ಕಂಪ್ಯೂಟರ್ ಹಚ್ಚಲೇ ಇಲ್ಲ ; ಆಮೇಲೊಂದು ದಿನ ನೋಡ್ತೀನಿ ಕಂಪ್ಯೂಟರ್ ಶುರು ಆಗಲೇ ಇಲ್ಲ ?! ಅದಕ್ಕೆ ನನ್ನ ಮೇಲೆ ಸಿಟ್ಟು ಬಂದಿತ್ತೋ ಏನೋ ? ಕಂಪನಿಯವನಿಗೆ ಫೋನ್ ಮಾಡಿದೆ . ಬಂದ, ನೋಡಿದ, ಮದರ್ ಬೋರ್ಡ್ ಹೋಗಿದೆ . ವಾರಂಟಿ ಅದೇ ತಾನೇ ಮುಗಿದದ್ದರಿಂದ ೩,೫೦೦+೩೫೦ ಖರ್ಚು ಆಗುತ್ತದೆ ಅಂದ ; ಸರಿ ಇನ್ನೇನು ಮಾಡೋದು ಹಾಕು ಅಂದೆ . ಕಚೇರಿಯಲ್ಲಿ ಹೊಸ ಹುಡುಗರಿದ್ದಾರೆ , ಬಿ.ಈ , ಎಂ.ಸಿ.ಎ ಮಾಡಿರೋರು , ಅವರಲ್ಲಿ ನನ್ನ ಗೋಳು ತೋಡಿಕೊಂಡಾಗ ಅಯ್ಯೋ , ಅವರು ಸುಮ್ಮನೆ ಹಾಗೆ ಹೇಳ್ತಾರೆ ಅಷ್ಟೇ , ನೀವೇ ಅದನ್ನು ತೆಗೆದು ಮೆಮೊರಿ ಚಿಪ್ ತೆಗೆದು ಹಾಕಿದರೆ ಬಹುಷ: ಶುರು ಆಗಿರೋದು ಅಂದರು . ಕೈ ಕೈ ಹಿಸುಕಿಕೊಂಡೆ , ನನ್ನ ಕಂಪ್ಯೂಟರ್ ಅಜ್ಞಾನವನ್ನೂ , ದುಡುಕುತನವನ್ನೂ , ಅವ್ಯಾವಾಹಾರಿಕತೆಯನ್ನೂ ನಾನೇ ಬೈದುಕೊಂಡೆ , ಈ ಊರಿನ ಒದ್ದೆ ಹವೆಯನ್ನೂ ಬೈದೆ.
ಸರಿ, ನಾಲ್ಕು ಸಾವಿರ ಕೈ ಬಿಟ್ಟಿತು ಅನ್ನಿ. ಅವನು ಕಂಪ್ಯೂಟರ್ ಕೊಟ್ಟು , ವಿಂಡೋಸ್ ಸರಿಯಾಗಿ ಕೆಲ್ಸ ಮಾಡುವುದನ್ನೂ ಇಂಟರ್ನೆಟ್ಟಿಗೆ ಕನೆಕ್ಟ್ ಆಗುವುದನ್ನೂ ತೋರಿಸಿ ಹಣ ಇ(ಕ)ಸಿದುಕೊಂಡು ಹೋದ . ಸರಿ ಉಬುಂಟುನಲ್ಲಿ ಬೂಟ್ ಮಾಡಿದೆ. ಅದೂ ಸರಿ ಇದ್ದ ಹಾಗೆ ತೋರಿತು . ಆದರೆ ಇಂಟರ್ನೆಟ್ಟು ? ಇಲ್ಲ ? ಮೋಡೆಂ ನ ಲ್ಯಾನ್ ದೀಪ ಹತ್ತುತ್ತಿಲ್ಲ ! ? ಉಬುಂಟು ಮತ್ತೆ ಹಾಕಿ ನೋಡಿದೆ, ಹಳೆಯ ವರ್ಶನ್ ಹಾಕಿ ನೋಡಿದ್ದೆ . ಊಹೂಂ . ಲಾಭ ಇಲ್ಲ ... ಹುಡುಕಾಡಿ ತಡಕಾಡಿ , ನಾಡಿಗರನ್ನೂ ಓಂಶಿವು ಅವರನ್ನೂ ಕಾಡಿ ವಿಷಯವನ್ನು ಅರಿತುಕೊಂಡೆ . ಮದರ್ಬೋರ್ಡ್ (ಮಾತೃ ಫಲಕ ಅಂತಾರಪ್ಪ ಕನ್ನಡದಲ್ಲಿ - ಮದರ್ಬೋರ್ಡ್ ಕಿಂತ ಈ ಶಬ್ದ ಅರ್ಥಮಾಡಿಕೊಳ್ಳಲು ಕಠಿಣ - ತಾಯಿಹಲಗೆ ಹೆಚ್ಚು ಸುಲಭ ) ಬದಲಿಸಿದಾಗ ಲ್ಯಾನ್ ಕಾರ್ಡೂ ಬದಲಾಗಿದೆ ಅಂತೆ . ಅದರ ಡ್ರೈವರ್ ಅನ್ನು ಅವನು ವಿಂಡೋಸ್ ನಲ್ಲಿ ಹಾಕಿದ್ದಾನೆ . ಅದಕ್ಕೆ ವಿಂಡೋಸ್ ನಲ್ಲಿ ಇಂಟರ್ನೆಟ್ಟು ಸಿಗುತ್ತಿದೆ. ಲೀನಕ್ಸ್ ವಿಷಯ ಅವರಿಗೆಲ್ಲ ಎಲ್ಲಿ ಗೊತ್ತು ? ಉಬುಂಟುನಲ್ಲಿ ಆ ಡ್ರೈವರ್ ಇಲ್ಲ . ನನಗೆ ಬೇಕಾದ ಡ್ರೈವರ್ ಯಾವದು ? ಸದ್ಯ ಇರುವ ಲ್ಯಾನ್ಕಾರ್ಡ್ ಯಾವದು ? ಇಲ್ಲಿ ಓಂಶಿವಪ್ರಕಾಶರು ಬಹಳ ಸಹಾಯ ಮಾಡಿದರು . ಅಂತೂ ಇಂತು ನೆಟ್ ಸಂಪರ್ಕ ಸಿಕ್ಕಿತು . ಬ್ರೌಸರಿನಲ್ಲಿ ಕನ್ನಡ ಬರ್ತಿರ್ಲಿಲ್ಲ ; ಲ್ಯಾಂಗ್ವೇಜ್ ಸಪೋರ್ಟ್ ಹಾಕಿಕೊಂಡೆ . ಬರಹ ತರಹ ಟೈಪು ಮಾಡಲು ಸಾಧ್ಯ ಆಗ್ತಿರ್ಲಿಲ್ಲ ; scim , m17n ಇತ್ಯಾದಿ ಹಾಕಿಕೊಂಡೆ . ಇಲ್ಲಿ ಅಷ್ಟು ಹೊತ್ತಿಗೆ ಶುರು ಆದ tech.sampada.net ಸಹಾಯಕ್ಕೆ ಬಂದಿತು ಎಂಬುದನ್ನು ನೆನೆಯಲೇಬೇಕು.
ಅಷ್ಟು ಹೊತ್ತಿಗೆ ಉಬುಂಟು ೯.೧೦ ಬಂದಿತು . ಡೌನ್ಲೋಡ್ ಮಾಡೋಣ ಅಂದರೆ ೭೦೦ ಎಂಬಿ. ಅದೂ ಅಲ್ಲದೆ ನನ್ನ ಇಂಟರ್ನೆಟ್ಟಿನ ಸಂಪರ್ಕ ಸರಿ ಬೇರೆ ಇರೋದಿಲ್ಲ ; ಪುಕ್ಕಟೆ ಸೀಡೀ ಆರ್ಡರ್ ಮಾಡೋಣ ಅಂದರೆ ಈಗಾಗಲೇ ಬಹಳ ಸಲ ಸೀಡೀ ತರಿಸಿಕೊಂಡಿದ್ದೀರಿ , ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಿ ಅಂತ ಉಬುಂಟು ತಾಣ ಹೇಳಿತು. ಆಮೇಲೆ ಯಾವ್ದೋ ಕಂಪ್ಯೂಟರ್ ಮ್ಯಾಗಝೀನ್ ಜತೆ ಒಂದು ಸೀಡಿ ಸಿಕ್ಕಿತು . ಅಷ್ಟು ಹೊತ್ತಿಗೆ ಆ iso image ನಿಂದ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ಸಂಪದದಲ್ಲಿ ಓಂಶಿವು ಬ್ಲಾಗಿದ್ದರು . ಪ್ರಯತ್ನ ಮಾಡಿದೆ , ಆಗಲಿಲ್ಲ ; ಅ ಮೇಲೆ ಅನಿಸಿತು . ಬಹುಶ: ಈ iso image ಸರಿಯಾದ ಕಡತ ಅಲ್ಲ - ರಿಲೀಸ್ ಕ್ಯಾಂಡಿಡೇಟ್ ಅಂತ , ಕಡತದ ಹೆಸರಿನಲ್ಲಿ rc ಅಂತ ಇತ್ತು . ಸರಿ ಡೌನ್ಲೋಡ್ ಅನ್ನೇ ಪ್ರಯತ್ನಿಸಿದೆ . ಅದು ಹೇಗೋ ಒಂದು ಟ್ರಿಕ್ ಕಂಡುಕೊಂಡೆ - ಇಂಟರ್ನೆಟ್ ಸಂಪರ್ಕದ ಉಸಿರು ಹೋಗದ ಹಾಗೆ !! . ಎರಡು ಗಂಟೆಯ ನಡುವೆ ಮೂರ್ನಾಲ್ಕು ಸಲ ಅದು ಜೀವ ಬಿಟ್ಟಿತಾದರೂ ಡೌನ್ಲೋಡ್ ಈವರೆಗೆ ಆದಲ್ಲಿಂದ ಮುಂದುವರೆಯಿತು . ಸದ್ಯ ಹೆಚ್ಚಿನ ತೊಂದರೆ ಅಗಲಿಲ್ಲ ;
ಮೀಡಿಯಾ ಪ್ಲೇಯರಿನಲ್ಲಿ ಎಂಪಿ ೩/ ವೀಡಿಯೋ ತುಣುಕುಗಳು ಪ್ಲೇ ಆಗ್ತಿರಲಿಲ್ಲ . ಅದಕ್ಕೆ ಬೇಕಾದ ಪ್ಲಗ್ಗಿನ್ನು ಇಳಿಸಿಕೊಂಡು ಹಾಕಿದ್ದಾಯ್ತು . ವಿಂಡೋಸ್ ಡ್ರೈವುಗಳನ್ನು ಒಂದೊಂದು ಸಲ ಪತ್ತೆ ಮಾಡುವುದಿಲ್ಲ ; ನೋಡೋಣ ಅದಕ್ಕೆ ಏನಾದರೂ ಬೇಗನೇ ಔಷಧಿ ಸಿಗಬಹುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಉಬುಂಟು ಲೀನಕ್ಸಿನಲ್ಲಿ ನಾನು ಗಮನಿಸಿದ ಒಂದು ಅನುಕೂಲ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)