ನಿಮ್ಮ ಕೆಲವು ಕ್ಷಣಗಳನ್ನು ಈ ಲೇಖನ ಓದಿ, ಪ್ರತಿಕ್ರಿಯೆ ನೀಡಲು ಕೇಳುವ ಸಲುವಾಗಿ ಈ ಮನವಿ. ನಿನ್ನೆ ಗೆಳೆಯರ ಜೊತೆಗೆ ಮಾತನಾಡುವಾಗ ಈ ಸಮಸ್ಯೆಯ ತೀವ್ರತೆ ಅರಿವಾಯಿತು. ಕನ್ನಡ ತಂತ್ರಾಂಶಗಳಾದ ಬರಹ, ನುಡಿ, ಶ್ರೀಲಿಪಿ ಇತ್ಯಾದಿಗಳಲ್ಲಿ ಒಂದು ಸಾಫ್ಟ್ವೇರ್ನ ಲಿಪಿಗಳು ಇನ್ನೊಂದರಲ್ಲಿ ತೆರೆದುಕೊಳ್ಳುವುದಿಲ್ಲ. ಅಂದರೆ ಪೋರ್ಟಬಲಿಟಿ ಇಲ್ಲ. ಎಲ್ಲ ಸಾಫ್ಟ್ವೇರ್ಗಳನ್ನು ಕಂಪ್ಯೂಟರ್ನಲ್ಲಿ ಇನ್ಸ್ಟಾಲ್ ಮಾಡುವುದು ಕಷ್ಟ. ನಮ್ಮದೇ ಕಂಪ್ಯೂಟರ್ ಇಲ್ಲವೆಂದಾದಲ್ಲಿ ಇದರ ಕಷ್ಟ ಹೇಳತೀರದು. ಕಂಪ್ಯೂಟರ್ನಲ್ಲಿ ಕನ್ನಡ ಬಳಸಲು ತೊಡಗುವ ಆರಂಭಿಕರಿಗೆ ಈ ವೈವಿಧ್ಯಮಯ ತಂತ್ರಾಂಶಗಳೇ ತೊಡಕುಗಳಾಗಿವೆ ಎಂದರೆ ತಪ್ಪಾಗಲಾರದು. ಈ ಸಮಸ್ಯೆಗಳು ಪರಿಹಾರವಾಗದಿದ್ದಲ್ಲಿ ಆ ವ್ಯಕ್ತಿಗಳು ಇಂಗ್ಲೀಷ್ನ್ನು ಅವಲಂಬಿಸಬಹುದು ಇಲ್ಲವೇ ಕಂಪ್ಯೂಟರ್ ಬಳಕೆಯನ್ನೇ ನಿಲ್ಲಿಸಿಬಿಡುವ ಸಾಧ್ಯತೆ ಇದೆ. (ಈ ಸಮಸ್ಯೆಯನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲೂ ಕಾಣಬಹುದು) ಅಲ್ಲದೇ ಯಾವುದೇ ಫಾಂಟ್ಗಳು ಕೂಡ ಯುನಿಕೋಡ್ ಮಾದರಿಯನ್ನು ಅನುಸರಿಸಿದಂತೆ ಕಾಣುತ್ತಿಲ್ಲ.
ಹೀಗಾಗಿ ನಿಮ್ಮ ಮುಂದೆ ಸವಿನಯ ಮನವಿ ಏನೆಂದರೆ ಒಂದು ಸ್ವತಂತ್ರ ತಂತ್ರಾಂಶವನ್ನು (open software) ತಯಾರಿಸಿ ನಮ್ಮ ಕಂಪ್ಯೂಟರ್ಗಳಿಗೆ ಅಳವಡಿಸಿಕೊಂಡಲ್ಲಿ ಈ ಸಮಸ್ಯೆ ನೀಗುವಂತೆ ಮಾಡಬಹುದೇ? (ಆ ಕ್ಷಣಕ್ಕೆ ನನ್ನ ಕಣ್ಣ ಮುಂದೆ ಇರುವ ಉದಾಹರಣೆಯೆಂದರೆ ವಿಎಲ್ಸಿ ಮೀಡಿಯಾ ಪ್ಲೇಯರ್. ಅಲ್ಲಿ ಬೇರೆ ಬೇರೆ ಫಾರ್ಮ್ಯಾಟ್ನ ಫೈಲ್ಗಳನ್ನು ಒಂದು ಸಣ್ಣ ತಂತ್ರಾಂಶವೊಂದು ತೆರೆಯುವುದನ್ನು ತಾವು ಗಮನಿಸಿರುತ್ತೀರಿ, ಅಲ್ಲದೇ ಅದು ಸಾಕಷ್ಟು ಜನಪ್ರಿಯವಾಗಿದೆ.) ಸಂಪದಿಗರಾದ ನಾವು, ಒಂದು ತಂಡವಾಗಿ ಈ ಕೆಲಸ ಮಾಡಬಹುದೇ? (ಕಂಪ್ಯೂಟರ್ ತಾಂತ್ರಿಕತೆಯಲ್ಲಿ ಅನಕ್ಷರಸ್ಥರಾದವರು ನಿಮಗೆ ಸಹಾಯಕರಾಗಿರುತ್ತೇವೆ) ನಮ್ಮ ಮುಂದೆ ಈ ಕೆಲವು ಪ್ರಶ್ನೆಗಳಿವೆ.
೧.ಈ ಯೋಜನೆ ನಿಜಕ್ಕೂ ಕಾರ್ಯಸಾಧುವೇ?
೨.ಇದಕ್ಕಾಗಿ ನಾವು ಆಯಾ ಲಿಪಿ ತಂತ್ರಜ್ಞರ ಅನುಮತಿ ಪಡೆಯಬೇಕೆ?
೩.ಈ ಯೋಜನೆಯಲ್ಲಿ ಬರುವ ತೊಡಕುಗಳೇನು?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದಲ್ಲಿ ಖಂಡಿತಾ ನಾವು ಕನ್ನಡ ಬಳಕೆದಾರರಿಗೆ ಶ್ರೇಷ್ಠ ಕೊಡುಗೆ ನೀಡಿದಂತೆ. ಕನ್ನಡ ಕಟ್ಟುವ ಕೆಲಸದಲ್ಲಿ ಒಂದು ಹೆಜ್ಜೆ ಮುಂದುವರೆದಂತೆಯೇ ಸರಿ. ನಿಮ್ಮನ್ನು ಅನುಸರಿಸಿ ಸಹಾಯ ಮಾಡಲು ನಾವಿದ್ದೇವೆ. (ಈ ಕೆಲಸಕ್ಕೆ ನಮ್ಮ ವಿ.ವಿ.ಯ/ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯುಟರ್ ವಿಜ್ಞಾನ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳ ಸಹಾಯ ಕೇಳಬಹುದು)
ಇದರಿಂದ ಲಿನಕ್ಸ್ನ ಪರೋಕ್ಷ ಪ್ರಚಾರವೂ ಆಗುತ್ತದೆ. ಈ ಯೋಜನೆ ಯಶಸ್ವಿಯಾದಲ್ಲಿ ಅದರ ಯಶಸ್ಸು ಸಂಪದ ಅದರಲ್ಲೂ ಟೆಕ್ ಸಂಪದಕ್ಕೆ ಸಲ್ಲಬೇಕೆಂಬುದೇ ನನ್ನ ಸ್ವಾರ್ಥ. ಇಷ್ಟು ಓದಲು ಕೆಲವು ಕ್ಷಣ ಕೊಟ್ಟಿದ್ದೀರಿ. ಉತ್ತರಿಸಲು/ ಸಲಹೆ ನೀಡಲು ತಡವೇಕೆ ಪ್ಲೀಸ್...
ಪ್ರತಿಕ್ರಿಯೆ (9)