ಬಹಳ ದಿನಗಳ ನಂತರ, ಮತ್ತೊಮ್ಮೆ ಸಂಪದದ ಕದ ತಟ್ಟುತ್ತಿದ್ದೇನೆ. ಈಗ ಸಂಪದ ತನ್ನ ಹೊಸ ರೂಪದಿಂದ ಕಂಗೊಳಿಸುತ್ತಿದೆ. ಈಗಿನ ಸಂಪದದ ಪುಟಗಳು ಬಹಳ ಸುಂದರವಾಗಿವೆ. ಬಹಳ ದಿನಗಳ ನಂತರ, ಸಂಪದದಲ್ಲಿ ಬರೆಯುವ... ಎಂದು ಅಂದುಕೊಂಡೆ, ಆದರೆ ತುಂಬಾ ದಿನಗಳಾದ ಮೇಲೆ ಬರೆಯುತ್ತಿರುವುದರಿಂದ, ಏನು ಬರೆಯುವುದೆಂದು ಯೋಚಿಸುತ್ತಿದ್ದೆ. ಆಗ ಈ ಮಳೆಯ ಬಗ್ಗೆ ನೆನಪಾಯಿತು, ಮುಂಚೆಯೇ ಮಳೆಯ ಬಗ್ಗೆ, ಮತ್ತು ಮಳೆಗೂ ಮತ್ತು ಬೋಂಡಕ್ಕೂ ನಡುವಿನ ನಂಟಿನ ಬಗ್ಗೆ ಬರೆದಿದ್ದೆ ಆದರೆ ಆ ಲೇಖನದಲ್ಲಿ ಈ ಅನುಭವಗಳನ್ನು ಹಂಚಿಕೊಂಡಿರಲಿಲ್ಲ. ಅದಕ್ಕಾಗಿ ಮತ್ತೊಂದು ಸಣ್ಣ ಬರಹ, ನಿಮ್ಮ ಪ್ರೋತ್ಸಾಹ ಪೂರ್ವಕ ಪೂರ್ವಕ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ........

     ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
     ಸೋ... ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು....

ಇದು ಕವಿಯು ಮಳೆಯ ನೀರಿನಲ್ಲಿ, ಸಂಗೀತವನ್ನು ಕಂಡ ಪರಿ.. ನಿಜಕ್ಕೂ ಇದೊಂದು ಅದ್ಭುತ ಅನುಭವ. ಕವಿಯ ಪದಗಳಲ್ಲಿನ ಆ ಭಾವ, ಭಾವಕ್ಕೆ ತಕ್ಕುದಾದ ಸಂಗೀತ, ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಎಂಥ ಸಂಭ್ರಮದ ಭಾವ ಎಲ್ಲರಲ್ಲೂ ಮೂಡಿಸುವಂಥ ಆ ಹಾಡು ಇಂದಿಗೂ ಕಿವಿಯಲ್ಲಿ ದನಿಸುತ್ತಿದೆ. ಆ ಭಾವ ನಿಜಕ್ಕೂ ಒಬ್ಬ ಕವಿಯಲ್ಲಿ ಅಥವಾ ಒಬ್ಬ ಭಾವನಾ ಜೀವಿಯಲ್ಲಿ ಮಾತ್ರವೇ ಮೊಳೆಯಬಹುದಾದುದು.ಕವಿಯು ಇಡಿಯ ಈ ಭೂಮಿಯನ್ನು ಹೆಣ್ಣಿಗೆ ಹೋಲಿಸಿ, ಈ ಮಳೆಯಲ್ಲಿ ಮಿಂದಂತೆ ಭಾವಿಸುತ್ತಾನೆ. ಆಗ ಈ ಭೂರಮೆಯ ಸೌಂದರ್ಯ ಇಮ್ಮಡಿಯಾಗಿ ಕಂಗೊಳಿಸುವುದನ್ನು ಕವಿಯ ಕಣ್ಣಲ್ಲಿ ಕಾಣುವುದು ನಿಜಕ್ಕೂ ಒಂದು ಸಮ್ಮೋಹಕ ಭಾವಸ್ಫುರತೆ. ಮಳೆ ಎಂದೊಡನೆ, ಥಟ್ಟನೆ ನೆನಪಾಗುವ ಈ ಹಾಡು, ತನ್ನಲ್ಲಿ ಈ ಎಲ್ಲ ಗುಣಗಳನ್ನೂ ಮೇಳೈಸಿಕೊಂಡಿದೆ.
                  ಮಳೆ ಎಂದೊಡನೆ ಮತ್ತೊಂದು ಮಧುರ ಅನುಭವ ಎಂದರೆ, ಮಳೆ ಬಿದ್ದ ಮಣ್ಣಿನ ವಾಸನೆ. ಆ ಮಧುರ ವಾಸನೆ ಇನ್ನೂ ಹೆಚ್ಚಾಗಬಾರದೆ ಎನ್ನುವಷ್ಟು ತೀವ್ರವಾಗಿರುತ್ತದೆ.