ಆನಂದಿ ಗೋಪಾಲ್ ಬಗ್ಗೆ ಬರೆಯಬೇಕು ಎಂದು ಕಾರಣಗಳನ್ನು ಹುಡುಕುತ್ತಿದ್ದವನಿಗೆ ಕಾರಣ ಈ ಬಾರಿ ಲಭಿಸಿದೆ. ವೈದ್ಯರ ದಿನ ಎಂದು ನನಗೆ ಗೊತ್ತಿರದಿದ್ದ ಇನ್ನೊಂದು ಆಚರಣೆಯಿಂದ. ಆನಂದಿ ಗೋಪಾಲ್ ಬಗ್ಗೆ ಬಯಾಗ್ರಫಿ ಬರೆಯುವುದು ನನ್ನ ಉದ್ದೇಶವಲ್ಲ ಅದು ನಿಮಗೆ ನಾನು ನೀಡುವ ಕೊಂಡಿಗಳಲ್ಲಿ ಹೇರಳವಾಗಿ ಸಿಗುತ್ತದೆ. ಆದರೆ ಅವರ ಬದುಕಿನ ಮೇಲೆ ಒಂದು ಮೇಲ್ನೋಟವನ್ನು ಬೀರುವುದು ನನ್ನ ಈ ಲೇಖನದ ಉದ್ದೇಶ. ಹಾಗೆಯೇ ಈ ಮೂಲಕ ಬಯಾಲಜಿ, ಡಾಕ್ಟರು, ಆಸ್ಪತ್ರೆ ಇವೆ ಮೊದಲಾದ ವಸ್ತು ವಿಷಯಗಳ ಬಗ್ಗೆ ನನ್ನ ಇಲ್ಲದ ಸಂಬಂಧವನ್ನು ಬೆಳೆಸುವ ಒಂದು ಹುನ್ನಾರವೂ ಹೌದು.

ಬಾಲ್ಯದಲ್ಲಿ 'ಆನಂದಿ ಗೋಪಾಲ್' ಧಾರಾವಾಹಿಯಾಗಿ ಬರುತ್ತಿದ್ದ ನೆನಪು ಹಾಗೆಯೇ ಆನಂದಿ ಗೋಪಾಲ್ ಪರಿಚಯ ಕೂಡ. ಎಂದಿನ ಕ್ಲಾಸಿಕ್ ಧಾರಾವಾಹಿಗಳಂತೆ ತುಂಬಾ ಬೋರಿಂಗ್, ಆದ್ದರಿಂದ ಖಂಡಿತವಾಗಿಯೂ ನೋಡುತ್ತಿರಲಿಲ್ಲ. ಆದರೆ ಕ್ರಮೇಣ ಆನಂದಿ ಗೋಪಾಲ್ ಬಗ್ಗೆ ಹೆಚ್ಚು ಹೆಚ್ಚು ಗೊತ್ತಾದಂತೆ ಆಕೆ ನನ್ನ ಮನಸ್ಸನ್ನು ಸೆಳೆದದ್ದು ಮಾತ್ರವಲ್ಲ, ಸಮಸ್ತ ಹೆಣ್ಣು ಜೀವದ ಬಗೆಗಿನ ಗೌರವಕ್ಕೆ ಇನ್ನೊಂದು ಗರಿ ಕೊಟ್ಟಿತ್ತು.
ಸಮಯವನ್ನು ಹಿಂದೆಳೆಯುವುದಾದರೆ ಇಸವಿ ೧೮೮೬. ಆನಂದಿ ಗೋಪಾಲ್ ಮತ್ತು ಕಾದಂಬಿನಿ ಚಕ್ರವರ್ತಿ ಫಿಲಡೆಲ್ಫಿಯಾದಲ್ಲಿ ಮೆಡಿಕಲ್ ಡಿಗ್ರಿ ಪಡೆದಾಗ ರಚಿಸಿದ್ದು ಇತಿಹಾಸ ಮಾತ್ರವಲ್ಲ, ಒಂದು ಅದ್ಭುತ ರೂಪಾಂತರ. ಭಾರತದಂಥಹ ಲೂಟಿ ಮಾಡಿದ ನಂತರ ಉಳಿದ ಬಡ ದೇಶಕ್ಕೆ ಆಂಗ್ಲ ವಿದ್ಯಾರ್ಜನೆ ಎನ್ನುವುದು ಗಗನ ಕುಸುಮವಾಗಿದ್ದ ಕಾಲವದು. ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ಎನ್ನುವುದು ಆಗ ಸಾಮಾನ್ಯವಾಗಿರಲಿಲ್ಲ. ೧೪ ರ ವಯಸ್ಸಿನಲ್ಲಿ ಮಗುವನ್ನು ಹೆತ್ತು ಅದನ್ನು ಕಳಕೊಂಡ ಆನಂದಿ ಬಾಯಿಗೆ ಕಲಿಯಬೇಕು ಎಂದು ಒತ್ತಾಸೆಯಾದದ್ದು ಅವರ ಗಂಡ ಗೋಪಾಲ್ ರಾವ್. ಪ್ರತಿ ಗಂಡಿನ ಸಫಲತೆಯ ಹಿಂದೆ ಒಂದು ಹೆಣ್ಣು ಇರುತ್ತಾಳೆ ನಿಜ, ಹಾಗೆಯೇ ಒಂದು ಹೆಣ್ಣಿನ ಸಫಲತೆಗೆ ಗಂಡು ಬೆಂಗಾವಲಾಗಿ ನಿಂತದ್ದು ನಿಜಕ್ಕೂ ಶ್ಲಾಘನೀಯ. ಸಂಸ್ಕೃತ ಕೂಡ ಗೊತ್ತಿರದ ಆಕೆಗೆ ಸಂಸ್ಕೃತ ಮತ್ತು ಇಂಗ್ಲೀಷ್ ಕಲಿಸಿದ ಆತ ಇನ್ನೂ ಹೆಚ್ಚು ಕಲಿ ಎಂದು ಪ್ರೋತ್ಸಾಹಿಸಿದಾಗ ಆಕೆಗೆ ಅನಿಸಿದ್ದು ಡಾಕ್ಟರ್ ಆಗಬೇಕೆಂದು. ಉದ್ದೇಶವೂ ಸರಳ, ಹೆಚ್ಚಿನ ಮಹಿಳೆಯರಿಗೆ ಪುರುಷ ಡಾಕ್ಟರುಗಳ ಬಳಿಗೆ ಹೋಗಲು ಇರುವ ಸಂಕೋಚದಿಂದ.
ನಂತರ ಕುಟುಂಬ ಮತ್ತು ಸಮಾಜದ ಎಷ್ಟೇ ವಿರೋಧವಿದ್ದರೂ ಲೆಕ್ಕಿಸದೆ ಆತ ಕಳಿಸಿದ್ದು ಅಮೆರಿಕಾಕ್ಕೆ. ಅಲ್ಲಿ ಎರಡು ವರ್ಷದ ಕಷ್ಟ ಪಟ್ಟ ಜೀವನ, ಹದಗೆಡುತ್ತಿದ್ದ ಆರೋಗ್ಯದ ಮಧ್ಯೆ ಸಂಪ್ರದಾಯ ಉಳಿಸಿಕೊಳ್ಳಲು ಹಣಾಹಣಿ ಮತ್ತು ಮೆಡಿಕಲ್ ಪದವಿಗಾಗಿ ಓದು. ಅಂತೂ ೧೮೮೬ರಲ್ಲಿ ಪದವಿ ಸಿಕ್ಕಾಗ 'ಮೊದಲ ಭಾರತೀಯ ಮಹಿಳಾ ಡಾಕ್ಟರ್' ಎಂಬ ಹೆಗ್ಗಳಿಕೆ, ಅದರೊಂದಿಗೆ ಸಿಕ್ಕ ಎಲ್ಲರ 'standing ovation'. ಟಿಬಿಗೆ ಆಗಲೇ ಗುರಿಯಾಗಿದ್ದ ಆನಂದಿ ಗೋಪಾಲ್ ಬದುಕಿದ್ದು ಮುಂದಿನ ಕೆಲವು ತಿಂಗಳುಗಳು ಮಾತ್ರ. ಸಂಪ್ರದಾಯಸ್ಥ ಡಾಕ್ಟರುಗಳು ಶುಶ್ರೂಷೆಗೆ ನಿರಾಕರಿಸಿದ ಬಳಿಕ ಅವರ ಬಳಿ ಹೆಚ್ಚಿನ ವಿಕಲ್ಪಗಳು ಉಳಿದಿರಲಿಲ್ಲ. ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದ ಅವರ ಆರೋಗ್ಯ ಸಾವಿನತ್ತ ಎಳೆದದ್ದು ೧೮೮೭ ಫೆಬ್ರವರಿಯಲ್ಲಿ. ಅವರ ಅಸ್ಥಿ ಈಗಲೂ ನ್ಯೂಯಾರ್ಕಿನ ಪೋಗ್ಹ್ಕಿಪ್ಸಿ ರೂರಲ್ ಸಿಮಿಟೆರಿಯಲ್ಲಿ ಇದೆ.
ಆನಂದಿ ಗೋಪಾಲ್ ವೈದ್ಯೆಯಾಗಿ ಯಾರ ಬದುಕನ್ನೂ ಉಳಿಸಲಿಲ್ಲ. ಆದರೆ ಅವರು ಮಾದರಿಯಾದದ್ದು ಮುಂದಿನ ತಲೆಮಾರಿಗೆ, ಹೊಸತನಕ್ಕೆ ಮತ್ತು ಇನ್ನೆಷ್ಟೋ ಹೊಸ ಮಹಿಳಾ ವೈದ್ಯರಿಗೆ.
ಚಿತ್ರಕೃಪೆ : http://xdl.drexelmed.edu/zoom/p1591/p1591_001/TileGroup0/0-0-0.jpg
ಹೆಚ್ಚಿನ ಮಾಹಿತಿಗಾಗಿ ಓದಿ:
http://www.ias.ac.in/womeninscience/LD_essays/13-16.pdf
http://en.wikipedia.org/wiki/Anandi_Gopal_Joshi
ಪ್ರತಿಕ್ರಿಯೆ (7)