ನಾನು ಮುಂಜಾನೆಯ ವಾಯು ವಿಹಾರ ಮುಗಿಸಿ
ಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ
ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂ
ಸುಖ ನಿದ್ದೆಯಲ್ಲಿದ್ದಳು ಆ ನೋಟವೇ ಆಹಾ!
ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳ
ಸುದೀರ್ಘ ವಾರಾಂತ್ಯದ ರಜೆಯ ಸುಖಾನುಭವ
ನನಗೋ ಆ ನಾಲ್ಕು ಗೋಡೆಗಳ ನಡುವೆ ನನ್ನನ್ನು
ಬಂಧಿಸಿಯೇ ಇಟ್ಟಿರುವಂತಹ ವಿಚಿತ್ರವಾದ ಅನುಭವ
"ಸರಿ ಘಂಟೆ ಎಂಟಾಯ್ತು ಇನ್ನಾದರೂ ನೀನು ಎದ್ದು
ತಿಂಡಿನೀಡಿದರೆ ಚುರುಗುಟ್ಟುವ ನನ್ನೀ ಹೊಟ್ಟೆಗೆ ತೃಪ್ತಿ"
ಎಂದು ನಿದ್ದೆಯಿಂದ ಎಬ್ಬಿಸಿ ಕೂರಿಸಿದಾಗ ಆಕೆ ತನ್ನ
ಕಣ್ಣುಗಳಿಂದಲೇ ತೋರಿದಳು ತನ್ನೊಳಗಿನ ಅತೃಪ್ತಿ
ರಾತ್ರಿ ಬೆಳಗಾಗುವುದರೊಳಗೆ ಏನಾಗಿದೆ ಈಕೆಗೆ
ಏಕೀ ಮುನಿಸಿನ ಶುಭೋದಯದ ಸಂದೇಶ ನನಗೆ
ರಮಿಸಿ ಕೇಳಿದಾಗ ಸಿಕ್ಕಿತು ಉತ್ತರ ನಾ ದಂಗಾದೆ
"ಸ್ವಲ್ಪವೂ ಜವಾಬ್ದಾರಿ ಇಲ್ಲ ಅಲ್ವೇನ್ರೀ ನಿಮಗೆ?"
"ತಿಂಡಿ ಕೇಳುವುದರಲ್ಲಿ ಜವಾಬ್ದಾರಿಯ ಮಾತೇನು
ಬಿಡಿಸಿ ಹೇಳಬಾರದೇ ಈ ಒಗಟು ಮಾತುಗಳೇಕೆ?"
"ಇಂದು ಗೊತ್ತಲ್ವಾ ಭಾರತ್ ಬಂದ್ ಕಣ್ರೀ ಹಾಗಾಗಿ
ನಮ್ಮ ಈ ಅಡುಗೆಮನೆಯಲ್ಲಿ ಕೆಲಸ ನಡೆಯಬೇಕೇಕೆ?
ಭಾರತಕ್ಕೆ ನಮ್ಮೀ ಮನೆಯೂ ಹೊರತಲ್ಲ ಹಾಗಾಗಿ
ನಾನೂ ಇಂದು ಇಲ್ಲಿಯೇ ನಡೆಸುತ್ತೇನೆ ಪ್ರತಿಭಟನೆ
ನಿಮ್ಮ ಸಹಕಾರವೂ ಇರಲಿ ಭಾಜಪದ ಬೇಡಿಕೆಗಳಿಗೆ
ಅಲ್ಲಿ ಇರುವಂತೆ ಕಮುನಿಸ್ಟರ ಅನುಮೋದನೆ"
************************
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (10)