ಈ ಹಿಂದೆ ನಾವುಗಳು ಕಾದಂಬರಿಗಳಲ್ಲಿ ಓದಿದಂತೆ, ಒಂಟಿತನ ಒಂದು ವ್ಯಾಧಿಯಂತೆ ಕಾಡುತ್ತಿತ್ತು. ಆದರೆ, ಈಗ ಅದೇ ಒಂಟಿತನಕ್ಕಾಗಿ ಹಂಬಲಿಸುವಂತಾಗುತ್ತದೆ. ಹೀಗೆಯೇ ಯೋಚಿಸುತ್ತ ಕುಳಿತ ನನಗೆ, ಈ ಒಂಟಿತನ ಎಷ್ಟು ಉಪಯುಕ್ತ ಎಂದು ಅರಿವಾಯಿತು. ಒಂಟಿತನ ಒಬ್ಬ ಮನುಷ್ಯನನ್ನು ತನ್ನನ್ನು ತಾನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಒಂದು ರೀತಿಯ "ಸೆಲ್ಫ್ ಅನಾಲಿಸಿಸ್" ಗೆ ಹಚ್ಚುತ್ತದೆ. ಈ ಪ್ರಕ್ರಿಯೆ ಬಹಳ ರೋಚಕವಾದದ್ದು ತಾನು ಇತರರಿಗಿಂತ ಎಲ್ಲಿ ಹಿಂದಿದ್ದೇನೆ, ಯಾವ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂಬೆಲ್ಲ ವಿಷಯಗಳನ್ನು ಕುರಿತು ಯೋಚಿಸಲು ಸಹಾಯ ಮಾಡುತ್ತದೆ. ಅಲ್ಲದೇ emotional quotient ನ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
ಭಾವನಾತ್ಮಕವಾಗಿ ನೋಡಿದಾಗ, ಒಂಟಿತನದಲ್ಲಿ ಮನುಷ್ಯ ಪ್ರಚುರಪಡಿಸುವಷ್ಟು ಭಾವನೆಗಳನ್ನು ಇನ್ನ್ಯಾವ ಸಮಯದಲ್ಲೂ ಅಷ್ಟು ಪ್ರಚುರ ಪಡಿಸಲಾರ. ಆ ಭಾವನೆಯ ಅಭಿವ್ಯಕ್ತಿ ಯಾವುದೇ ರೀತಿಯಲ್ಲಿರಬಹುದು. ಕೆಲವರು ಅಭಿವ್ಯಕ್ತಿಯ ಮಾಧ್ಯಮವಾಗಿ, ಕವನ ರಚನೆ ಇತರ ಕ್ರಿಯಾತ್ಮಕ ವಿಚಾರಗಳಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ಹಾಡುಗಳನ್ನು ಕೆಳುವುದರಲ್ಲೋ ಅಥವಾ ಏನನ್ನೂ ಪ್ರಚುರ ಪಡಿಸದೇ, ಆ ಒಂಟಿತನದ ಭಾವನೆಗಳ ಹರಿವನ್ನು ಹೊರ ಹರಿಯ ಬಿಡದೆ, ತನ್ನೊಳಗೆ ಆ ಒಂಟಿತನವನ್ನು ಆಸ್ವಾದಿಸುವರು. ಈ ಒಂಟಿತನದ ಅನುಭವ ಕೆಲವು ಬಾರಿ ಬಹಳಷ್ಟು ಹಿತವಾಗಿರುತ್ತದೆ. ಆ ಸಮಯದಲ್ಲಿ ಮನಸಿನಲ್ಲಿ ಭಾವನೆಗಳು ತೀವ್ರವಾಗಿರುತ್ತದೆ. ಆಗ ಕೇವಲ ವಾಸ್ತವವಾಗಿ ಯೋಚಿಸದೆ, ಮನಸು ಭಾವನಾತ್ಮಕವಾಗಿಯೂ ಯೋಚಿಸುವುದರಿಂದ ಬೇರೆಯವರ ಕಷ್ಟಗಳನ್ನು ನಮ್ಮದೆಂದು ಭಾವಿಸಿ ಯೋಚಿಸುವ ಶಕ್ತಿ ನಮಗೆ ದೊರಕುತ್ತದೆ. ಅಲ್ಲದೇ ಒಂದು ಸನ್ನಿವೇಶದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ, ಅದನ್ನು ಹೇಗೆ ಸರಿ ಪಡಿಸಿಕೊಳ್ಳಬಹುದೆಂದು ತಿಳಿದುಕೊಳ್ಳಬಹುದು.
ಒಂಟಿತನವೇ ಒಬ್ಬ ಮನುಷ್ಯನನ್ನು ಕವಿಯಾಗಿಸುತ್ತದೆ, ಕಪಿಯಾಗಿಸುತ್ತದೆ. ಆದರೆ ನಾನು ಅನುಭವಿಸಿರುವ ಒಂಟಿತನ ನನಗೆ ಒಳಿತನ್ನೇ ಮಾಡಿದೆ. ಬೇರೆಯವರ ಜೀವನದ ಸನ್ನಿವೇಶಗಳನ್ನು ಪರಿಭಾವಿಸಿ, ನಾನು ಆ ಪರಿಸ್ಥಿತಿಯಲ್ಲಿ ಹೇಗಿರುತ್ತಿದ್ದೆ, ಹೇಗೆ ಪ್ರತಿಕ್ರಿಯಿಸುತ್ತಿದ್ದೇ ಎಂದೆಲ್ಲ ಯೋಚಿಸುತ್ತೇನೆ ಇದರಿಂದ ಬಹಳಷ್ಟು ಅನುಕೂಲವಾಗಿದೆ. ಅದರಂತೆಯೇ ಜೀವನದ ಕಹಿ/ಸಿಹಿ ಕ್ಷಣಗಳನ್ನು ಮೆಲುಕು ಹಾಕಿ, ಮುಂದೆ ಎಂದಾದರೂ ಈ ಪರಿಸ್ಥಿತಿ ಮರುಕಳಿಸಿದರೆ ಅದಕ್ಕೆ ಪರಿಹಾರ ಹೇಗಿರುತ್ತದೆ ಎಂದು ಯೋಚಿಸಲು ಅನುವು ಮಾಡಿಕೊಡುತ್ತದೆ. ಈಗಿನ ಈ ಯಾಂತ್ರಿಕ ಬದುಕಿನಲ್ಲಿ ಈ ಒಂಟಿತನ ನಮ್ಮನ್ನು ನಾವೇ ಅರಿಯಲು, ನಿರಂತರವಾಗಿ ಬೆಳೆಯಲು ಒಂದು ಉಪಯುಕ್ತ ಸಾಧನದಂತೆ ಕೆಲಸ ಮಾಡುತ್ತದೆ. ಈಗಲೂ ಕೆಲವೊಮ್ಮೆ ಈ ಒಂಟಿತನದ ಯಾತನೆಯನ್ನು ಅನುಭವಿಸಲು ಮನಸು ಹಾತೊರೆಯುತ್ತಿರುತ್ತದೆ. ಈ ಒಂಟಿತನ ನಿಮಗೂ ವರವಾಗಲಿ ಎಂದು ಹಾರೈಸುವೆ.
ಪ್ರತಿಕ್ರಿಯೆ (8)