ಜೀವನದ ಹಲವು ಮಜಲುಗಳಲ್ಲಿ ಕವಿತೆ ಹುಟ್ಟುತ್ತದೆ. ಕವಿತೆ ಹುಟ್ಟುವ ಕಾಲ ನಿರ್ಧರಿತವಾದದ್ದಲ್ಲ ಎಂಬುದು ಸತ್ಯವಾದರೂ, ಒಂಟಿತನದಲ್ಲಿ ಕವಿತೆ ಹುಟ್ಟಬಹುದೆಂದು ಅಂದುಕೊಳ್ಳಬಹುದು.
ಈ ಸಾಹಿತ್ಯದ ಹುಟ್ಟಿಗೆ ಬಹಳಷ್ಟು ಕಾರಣಗಳಿರುತ್ತವೆ ಅಥವಾ ಅಕಾರಣವಾಗಿಯೂ ಹುಟ್ಟಬಹುದು. ಸಂತೋಷಕ್ಕೆ, ದುಃಖಕ್ಕೆ ಹೀಗೆ ನಾನಾ (ಅ)ಕಾರಣಗಳಿಗಾಗಿ. ಕವಿತೆಯ ಹುಟ್ಟಿನ ಬಗೆಗೆ ಏಕೆ ಬರೆಯುತ್ತಿದ್ದೇನೆ ಎನ್ನಲು ಕೆಲವು (ಅ)ಕಾರಣಗಳಿವೆ. ನಿನ್ನೆ ಹೆಸರಾಂತ ಭಾರತೀಯ ಅಂಗ್ಲ ಸಾಹಿತಿ  ಎ. ಕೆ. ರಾಮಾನುಜನ್ ಅವರ ಒಂದು ಹಳೆಯ ಪದ್ಯವನ್ನು ಓದುತ್ತಿದ್ದೆ. ನನ್ನನ್ನು ಬಹಳಷ್ಟು ಆಕರ್ಷಿಸಿದ್ದು, ಆ ಪದ್ಯದ ಶೀರ್ಷಿಕೆ. "Obituary "(ಸಂತಾಪ) ಕವಿತೆಯ ಶೀರ್ಷಿಕೆ
ಈ ಕವಿತೆಯಲ್ಲಿ  ಕವಿ ರಾಮಾನುಜನ್ ತಮ್ಮ ತಂದೆಯ ಮರಣದ ಬಗೆಗೆ ತಿಳಿಸುತ್ತ, ತಂದೆ ತನಗಾಗಿ ಬಿಟ್ಟು ಹೋಗಿರುವ ಆಸ್ತಿಯ ಬಗೆಗೆ ಮಾತನಾಡುತ್ತಾ, ತನ್ನ ತಂದೆಯ ಮೇಜಿನ ಮೇಲಿರುವ ಹಳೆಯ ಕಾಗದಗಳು, ತನ್ನ ತಂದೆ ಮಾಡಿದ್ದ ಸಾಲ, ತನಗಾಗಿ ಬಿಟ್ಟು ಹೋಗಿರುವ ಮದುವೆಗಿರುವ ತಂಗಿ,ಇವುಗಳೇ ತನಗಾಗಿ ಉಳಿದಿರುವ ಆಸ್ತಿ ಎಂದು ಯೋಚಿಸುತ್ತಿರುತ್ತಾರೆ.ತಂದೆಯ ಮರಣದ ನಂತರ ಒಬ್ಬ ಮಗನಾಗಿ ತಾನು ಮಾಡಬೇಕಾದ ಕರ್ತವ್ಯಗಳನ್ನು ನೆನೆಯುತ್ತ, ಆ ಪ್ರತಿಯೊಂದು ಕಾರ್ಯದ ಬಗೆಗೂ ತಮಗಿರುವ ಅಭಿಪ್ರಾಯಗಳನ್ನು ತಿಳಿಸುತ್ತಾ ಓದುಗರಿಗೂ ಕವಿಯ ತಂದೆಯ ಮೇಲೆ ತಾತ್ಸಾರ ಹುಟ್ಟುವಷ್ಟರ ಮಟ್ಟಿಗೆ ಕವಿತೆ ತನ್ನ ಬಿಗಿಯನ್ನು ಕಾಯ್ದುಕೊಳ್ಳುತ್ತದೆ.

ಕವಿಗೆ ತಾನು ಏನೇ ಕೊಂಡರೂ, ಆ ಸಾಮಾನು ಕಟ್ಟಿರುವ ಕಾಗದ ಓದುವ ಹವ್ಯಾಸ. ಅದರಂತೆಯೇ, ಒಂದು ದಿನ ಅಂಗಡಿಯಿಂದ ಸಾಮಾನು ಕೊಂಡು ತಂದ ಕವಿ, ಆ ಕಾಗದವನ್ನು ಓದುವಾಗ ಅವರ ತಂದೆಯವರ ಸಾವಿನ ಸಂತಾಪ ಸೂಚಿಸುವ ಒಂದು ದೊಡ್ಡ ಅಂಕಣವನ್ನು ಕಾಣುತ್ತಾರೆ.ಆಗಲೇ ತಮ್ಮ ತಂದೆ ಆಸ್ತಿ ಸಂಪಾದಿಸದಿದ್ದರೂ ಪ್ರೀತಿ, ಅಭಿಮಾನ ಎಂಬ ಆಸ್ತಿ ಸಂಪಾದಿಸಿದ್ದಾರೆ ಎಂದು ಅರಿಯುತ್ತಾರೆ.ಈ ಕವಿತೆ ಓದಿದ ಬಳಿಕ ನನಗನ್ನಿಸಿದ್ದು, ಕವಿ ಈ ಕವಿತೆಯನ್ನು ಬಹಳ ಹಿಂದೆ ಬರೆದಿರಬಹುದು ಆದರೆ ಅದರ ಸಾರ ಇಂದಿಗೂ ಬಹಳಷ್ಟು ಮಟ್ಟಿಗೆ ಪ್ರಸ್ತುತ. ಇಂದಿನ ಈ ಕಾಲದಲ್ಲಿ ದುಡ್ಡೇ ಸರ್ವಸ್ವ ಎಂದು ಪ್ರತಿಪಾದಿಸುವವರಿದ್ದಾರೆ. ಆದರೆ ಈ ಕವಿತೆ ಓದಿದ ಬಳಿಕ ಒಂದು ಸಲವಾದರೂ ನಮ್ಮ ಮನದಲ್ಲಿ ಈ ಕುರಿತು ಯೋಚನೆ ಬಾರದೆ ಇರಲಾರದು. ತನ್ನ ತಂದೆಯ ಸಾವಿನ ಸಮಯದಲ್ಲೂ ಕವಿತೆ ಹುಟ್ಟಬಲ್ಲದು ಅದೂ ಜೀವನ ಪಾಠ ಕಲಿಸುವ ಕವಿತೆ ಹುಟ್ಟಬಲ್ಲದು.

ಈ ಕವಿತೆ ಓದಿದಾಗಿನಿಂದ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ತವಕವಿತ್ತು ಅದಕ್ಕಾಗಿಯೇ ಈ ಪುಟ್ಟ ಕವಿ(ತೆ) ನಮನ.