ಈ ಮುಂಬೈಯಲ್ಲಿ  ಕಂಡಕ್ಟರನು ಬಸ್ಸು ಹತ್ತುವವರತ್ತಲೇ ಗಮನ ಇಟ್ಟಿರುತ್ತಾನೆ.  ಹತ್ತುವವರಲ್ಲಿ  ಕೊನೆಯವನು ಕಾಲನ್ನು ಫುಟ್ ಬೋರ್ಡ್ ಮೇಲಿಡುತ್ತಿದ್ದಂತೆ ಬೆಲ್ ಮಾಡುವನು. ಅದನ್ನೇ ಕಾಯುತ್ತಿರುವ ಡ್ರೈವರನು ಬಸ್ಸನ್ನು  ಮುಂದಕ್ಕೆ ಓಡಿಸುವನು. ನಾನು ರಸ್ತೆಯ ಈ ಬದಿ ಇದ್ದೇನೆ. ಆಚೆ ಬದಿಯಲ್ಲಿ ಸ್ವಲ್ಪ ಮುಂದಕ್ಕೆ  ಬಸ್ಸಿನ ಸ್ಟಾಪ್.  ನಾನು ಹತ್ತಬೇಕಾದ  ಬಸ್ಸು  ಈಗಾಗಲೇ ಅಲ್ಲಿ ತಲುಪಿದೆ.  ಕೆಲವರು ಹತ್ತುತ್ತಿದ್ದಾರೆ . ನಾಲ್ಕೈದು ಜನ  ಇನ್ನೂ ಬಸ್ಸು ಹತ್ತಬೇಕು. ನಾನು ಬಸ್ ಹಿಡಿಯಬೇಕೆಂದರೆ  ಆಕಡೆ ಈಕಡೆ  ಬರುತ್ತಿರುವ ವಾಹನಗಳನ್ನು ಗಮನಿಸಿಯೇ ಕ್ರಾಸ್ ಮಾಡುತ್ತ ಬಸ್ಸಿನತ್ತ ಓಡಬೇಕು. ಬೇಗ ನಾನು ತೀರ್ಮಾನಿಸಬೇಕು. ನಾನು ಬಸ್ ಹಿಡಿಯಬೇಕು. ಸರಿ ಓಡಿದೆ.  ರಸ್ತೆ ದಾಟಿದ್ದೀನಿ.  ಬಸ್ಸಿನ ಬಾಗಿಲಿಗೆ ೧೫ ಅಡಿ ಅಂತರ. ನಾಲ್ಕು ಜನ ಹತ್ತಲಿದ್ದಾರೆ.ಈಗ    ಹತ್ತು ಅಡಿ ಅಂತರವಿದೆ , ಇಬ್ಬರು ಹತ್ತಬೇಕು . ಈಗ ಐದು ಅಡಿ .. .. ಈಗ  ಒಬ್ಬ ಬಾಕಿ. ಓಹೋ  ಬಾಗಿಲನ್ನು ತಲುಪಿಬಿಟ್ಟೆ .  ಅವನು ಹತ್ತಲಿ , ನಂತರ ನಾನು ಹತ್ತುವೆ. ಅರೆ ಇದೇನು ? ಈ ಕೊನೆಯವನು ಬಸ್ಸನ್ನು ಹತ್ತಲಿಲ್ಲ ?! ನನಗಾಗಿ ಸರಿದು ದಾರಿ ಬಿಡುತ್ತಿದ್ದಾನೆ ! ಮುಗುಳ್ನಗುತ್ತ  ಏರ್ ಇಂಡಿಯಾದ ಹಳೇ ಸಂಕೇತಚಿಹ್ನೆ - ಮಹಾರಾಜಾ ನಂತೆ ಸ್ವಲ್ಪ ಬಾಗಿ ಹತ್ತಿ ಎನ್ನುವಂತೆ ಅಂಗೈಯ ಸನ್ನೆ ಮಾಡುತ್ತಿದ್ದಾನೆ . ನಾನು ಹತ್ತಿದೆ. ಅವನು ಬಸ್ ಹತ್ತದೆ ನಡೆದು ಹೋದ! ನನಗಾಗಿ ಅರೆಗಳಿಗೆ  ಬಸ್ಸನ್ನು ತಡೆಹಿಡಿದನೇ ಈ ಅಪರಿಚಿತ !!