ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು  . ನಿಂತು ಹೋಗಲು ತಯಾರು ಇದ್ದವರದೊಂದು   ಎರಡನೇ  ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವುದನ್ನು ನಿಲ್ಲಿಸಿದರು . ನಾನು ಬಸ್ ಹತ್ತಿದೆ. ನನಗೇನೂ ಸೀಟು ಸಿಗಲಿಲ್ಲ. ಹಾಗಾಗಿ ಮುಂದಕ್ಕೆ ಹೋಗಿ ಡ್ರೈವರ್ ಹತ್ತಿರ ನಿಂತುಕೊಂಡೆ. ಈ ಮುಂಬೈನಲ್ಲಿ  ಸಾಮಾನ್ಯವಾಗಿ ಹತ್ತುವುದು ಹಿಂದಿನ ಬಾಗಿಲಿನಿಂದ, ಇಳಿಯುವುದು ಮುಂದಿನ ಬಾಗಿಲಿನಿಂದ.  ಇದಕ್ಕೆ ಅಪವಾದ - ಅಂಗವಿಕಲರು , ವಯಸ್ಸಾದವರು  ಇತ್ಯಾದಿ. ಮುಂದಿನ ಬಾಗಿಲಿನ ಹತ್ತಿರ ಒಬ್ಬಳು ಹುಡುಗಿ - ಹದಿನೆಂಟೋ ಇಪ್ಪತ್ತ್ತೋ ವರ್ಷದವಳು. ಹಿಂದೆ ನಾನು. ಬಸ್ಸು  ಭರ್ತಿಯಾಗಿ ಹೊರಟಿತು. ಜನನಿಬಿಡ ರಸ್ತೆ ಆದರೂ , ಸಿಕ್ಕಾಪಟ್ಟೇ ಜನ, ವಾಹನಗಳು ಅಡ್ಡಡ್ಡ ರಸ್ತೆ ತುಂಬ ಇದ್ದರೂ , ಸಾಕಷ್ಟು ವೇಗವಾಗಿಯೇ , ಆಗಾಗ್ಗೆ  ಬ್ರೇಕ್ ಹಾಕುತ್ತ , ರಸ್ತೆಯ ತಗ್ಗು ದಿನ್ನೆಗಳಿಂದಾಗಿ ಓಲಾಡುತ್ತಲೂ ಹೊರಟಿತು.ಮೊದಲ ಸ್ಟಾಪ್ ನಲ್ಲಿ ಬಸ್ಸು ನಿಂತು ಹೊರಡುವ ಹೊತ್ತಿಗೆ, ( ಇಲ್ಲಿ ಬಸ್ಸು ಅಗತ್ಯಕ್ಕಿಂತ ಒಂದು ಮಿಲಿಸೆಕಂಡ್ ಕೂಡ ಹೆಚ್ಚು ನಿಲ್ಲುವುದಿಲ್ಲ ಬೇರೆ- ಮೂರ್ನಾಲ್ಕು ದಿನದ ಹಿಂದೆ ತಾನೇ ಒಂದು ಕ್ಷಣ ಹೆಚ್ಚು ನಿಲ್ಲಿಸಬೇಕು ಅಂತ ಇಲ್ಲಿಯ ಬಸ್ಸಿನವರು  ಆದೇಶ ಹೊರಡಿಸಿದ್ದಾರೆ!) ಒಬ್ಬ ದುರ್ಬಲ ಹೆಂಗಸು , ಸುಮಾರು ೫೫-೬೦ ವರ್ಷದವಳು  ಬಸ್ಸಿನ ಮುಂದಿನ ಬಾಗಿಲಿನ ಮೊದಲ ಮೆಟ್ಟಿಲು ಹತ್ತಿದಳು. ಅವಳು ಒಳಗೆ ಬರುವುದನ್ನೇ ಬಸ್ಸಿನ ಚಾಲಕ ಕಾಯುತ್ತಿದ್ದ. ಅವಳಿಗೆ ಮುಂದಿನ ಮೆಟ್ಟಲು ಹತ್ತುವುದಕ್ಕೆ ಆಧಾರಕ್ಕಾಗಿ   ಸರಳಿಗಾಗಿ ತಡಕಾಡಿದಳು. ಅದು ಮಾಮೂಲು ಸ್ಥಳದಲ್ಲಿ ಮಾಮೂಲು ಆಕಾರದಲ್ಲಿ ಇದ್ದಿರಲಿಲ್ಲ. ಆ ಕ್ಷಣಕ್ಕೆ  , ನನ್ನ ಮುಂದಿದ್ದ ಹುಡುಗಿ ಅವಳ  ನೆರವಿಗಾಗಿ ಕೈ ಚಾಚಿ ಮೇಲಕ್ಕೆ  ಇನ್ನೊಂದೆರಡು ಮೆಟ್ಟಲು ಹತ್ತಿಸಿಕೊಂಡಳು .  ಆ ವೃದ್ಧೆಯ ಕಣ್ಣಲ್ಲಿ ಕೃತಜ್ಞತೆ ಇಣುಕಿತು.  ಬಸ್ಸು  ಹೊರಟಿತು, ಓಲಾಡುತ್ತ, ಕುಲುಕುತ್ತ.  ಬಾಗಿಲ ಹತ್ತಿರ ಇದ್ದರೆ ಅಪಾಯ ಅಲ್ಲವೇ ? ಅಂದರ್ ಆ ಜಾಯಿಯೆ ಅನ್ನುತ್ತ  ಆ ಹೆಂಗಸನ್ನು ಈ ಹುಡುಗಿ ಇನ್ನಷ್ಟು ಒಳಕ್ಕೆ  ಅಂದರೆ ತನ್ನ ಹಿಂದೆ, ಅವಳ ಹಿಂದೆ ಇರುವ ನನ್ನ ಹಿಂದೆ ಕಳಿಸಿದಳು.ಒಂದೆರಡು ಕ್ಷಣಗಳ ನಂತರ , ನನ್ನ ಹಿಂದಿನಿಂದ , ಸಂದಿಯಿಂದ  ಒಂದು ಕೈ  ಮುಂದಕ್ಕೆ ಚಾಚಿತು! ಆ ಕೈಯಲ್ಲಿ ಒಂದು ಸಾಧಾರಣ ಚಾಕಲೇಟು. ಅದು ಆ  ವಯಸ್ಸಾದಾಕೆಯ ಕೈ!  ಈ ಹುಡುಗಿಯ ಕೈ ತಟ್ಟಿ ಅವಳ ಕೈಗೆ ಈ ಚಾಕಲೇಟು ಹಾಕಿತು.  ಆಗ ಈ ಹುಡುಕಿಯ ಮುಖದಲ್ಲಿ ಪ್ಲೆಸಂಟ್ ಸರ್ ಪ್ರೈಸ್ ... ಅಚ್ಚರಿ! , ವಿಸ್ಮಯ, ಒಂದು ಬಗೆಯ ಸಂತೋಷವನ್ನು ಅಲ್ಲಿ ಕಂಡೆ!.  ಮುಂದೆ  ಒಂದೆರಡು ಕ್ಷಣಕ್ಕೆ ಒಂದು ಸ್ಟಾ ಪ್  ಬಂದಿತು. ಆಗ ಈ ಹುಡುಗಿ ಅಲ್ಲಿ ಇಳಿದಳು. ಬಸ್ ಮುಂದಕ್ಕೆ ಹೊರಡುತ್ತಿದ್ದಂತೆ , ಅವಳು ಮತ್ತೆ  ಈ ಬಸ್ ಕಡೆಗೆ , ಈ  ಹೆಂಗಸಿನ ಕಡೆಗೆ ನೋಟ ಹರಿಸಲು ಪ್ರಯತ್ನಿಸಿದಳು!   ಹಿಂದೆ ನೋಡಿದ ಪ್ಲೆಸಂಟ್ ಸರ್ ಪ್ರೈಸ್ ,  ಅಚ್ಚರಿ , ವಿಸ್ಮಯ, ಒಂದು ಬಗೆಯ ಸಂತೋಷದ ನೆರಳು ಅಲ್ಲಿ ಇನ್ನೂ ಇತ್ತು.ಈ ಘಟನೆಯನ್ನು ನೆನೆಯುತ್ತ , ಅದರ ಬಗೆಗೇ  ಯೋಚಿಸುತ್ತ  ನಾನು ಉಳಿದೆ.    ಈ ಬಗ್ಗೆ    ನನ್ನ ಅನಿಸಿಕೆ , ವಿಚಾರಗಳನ್ನು ಇಲ್ಲಿ ಬರೆಯಬೇಕೇ , ಅದು  ಅಗತ್ಯವೇ ಅಂತ ಯೋಚಿಸುತ್ತ   ಇಲ್ಲಿಗೇ ನಿಲ್ಲಿಸುತ್ತಿದ್ದೇನೆ.