ಹಗಲ ಸೆರಗನು ಹಿಡಿದು ಇರುಳೋಡಿ
ಇರುಳ ನೆರಳನು ಹಿಡಿದು ಹಗಲೋಡಿ
ಆಯಿತದು ಭುವಿಯ
ಹಗಲು-ಇರುಳಿನ ಪ್ರಣಯ.....
ಸತಿ-ಪತಿಗಳಿಬ್ಬರೂ ಒಲವಿಂದ ಕೂಡಿ
ಆಯಿತದು ಭುವಿಯ ಮೇಲಿನ
ನಲ್ಲ-ನಲ್ಲೆಯರ ಪ್ರಣಯ.....
ಮೊಗ್ಗಿಗೆ ಭ್ರಮರದ ಪರಾಗ ಸ್ಪರ್ಶವಾಗಿ
ಆ ಮೊಗ್ಗು ಹೂವಾಗಿ ಪರಿಮಳವ ಬೀರಿ
ಆಯಿತದು ಹೂದೋಟದ
ಹೂ-ಭ್ರಮರಗಳ ಪ್ರಣಯ....
ಸಾಗರವು ತೋಳ್ತೆರೆದು ಹುಣ್ಣಿಮೆಯ ರಾತ್ರಿಯಲಿ
ಚಂದ್ರನನ್ನಾಲಿಂಗಿಸುವ ತವಕದಲಿ ಭೋರ್ಗರೆದು
ಆಯಿತದು ಸಾಗರ-ಚಂದಿರರ ಪ್ರಣಯ....
ವಸಂತ ಮಾಸದಲಿ ಕೋಗಿಲೆಯು ವಲಸೆಗೆ ಹಾರಿ
ಸೊಂಪಾದ ಮಾಮರದಿ ಪಂಚಮಸ್ವರ ಹಾಡಿದಾಗ
ಆಯಿತದು ಕೋಗಿಲೆ-ಮಾಮರದ ಪ್ರಣಯ....
ಬಾನಿನಲಿ ನೀಲ ಶ್ಯಾಮ ಮೇಘವಾಗಿ
ಧರಣಿಯ ವನದೇವಿ ಅವನನ್ನು ಸೆಳೆದು
ಆಯಿತದು ಮೇಘ-ವನದೇವಿಯರ ಪ್ರಣಯ...
ಗಾಳಿಯದು ರಭಸದಲಿ ಜೋರಾಗಿ ಬೀಸಿ
ಸಾಗರದ ನೀರನ್ನು ಹಗುರಾಗಿ ನೂಕಿ
ಭೋರ್ಗರೆವ ಅಲೆಗಳಿಗೆ ಜನನವನು ನೀಡಿ
ಆಯಿತದು ಗಾಳಿ-ನೀರಿನ ಪ್ರಣಯ.....
ನೂರುಂಟು ಪ್ರಕೃತಿಯಲಿ ಈ ಪರಿಯ ಸಲ್ಲಾಪಗಳು
ನಮ್ಮ ನಯನಗಳಿವು ಅದ ನೋಡಿ ಬೆರಗಾಗಿ
ಆಯಿತದು ನಯನ-ಪ್ರಕೃತಿಯ ಪ್ರಣಯ.....
ಪ್ರತಿ...........
ಪ್ರತಿಕ್ರಿಯೆ (8)