ಯಾವುದಾದರೂ ಗೊಂದಲಕ್ಕೆ ಬಿದ್ದಾಗ ನಾಣ್ಯ ಹಾರಿಸಿ ಆಯುವ ಆಯ್ಕೆ ಎಷ್ಟು ಸರಿ ಎಂದು ಆತನಿಗೂ ಗೊತ್ತಿಲ್ಲ. ಆದರೂ ಮೆದುಳು ಎಂಬ ಪ್ರಾಸೆಸರಿನಲ್ಲಿ ಯೋಚನೆಗಳೆಂಬ ಪ್ರೋಗ್ರಾಮುಗಳು ಡೆಡ್ ಲಾಕಿನಲ್ಲಿ ಸಿಕ್ಕಿಬಿದ್ದಾಗ ಅವನು ಅನುಸರಿಸುತ್ತಿದ್ದ ಏಕೈಕ ವಿಧಾನ ಎಂದರೆ ರಿಸರ್ವ್ ಬ್ಯಾಂಕಿನ ಈ ಸ್ಟೀಲ್ ತುಂಡನ್ನು ಮೇಲಕ್ಕೆಸೆಯುವುದು. ಆಯ್ಕೆ ಎನ್ನುವುದು ಆಗ ಆ ನಾಣ್ಯದ ತಿರುಗುವಿಕೆಯ ವೇಗ ಮತ್ತು ಎಸೆದ ಎತ್ತರದ ಮೇಲೆ ನಿರ್ಧರಿತವಾದದ್ದು ಎಂಬ ಸಾಮಾನ್ಯ ವಿಜ್ಞಾನ ಆತನಿಗೆ ಅರಿವಿದ್ದರೂ ತನ್ನ ಮೆದುಳಿಗಿಂತ ಅವನು ನಾಣ್ಯವನ್ನು ನಂಬುತ್ತಿದ್ದ, ಒಂದು ನಿರ್ಧಾರಕ್ಕೆ ಬರಲಾರದ ಆತನಿಗೆ ಅದು ಅನಿವಾರ್ಯವಾಗಿತ್ತು.
ಇಂದು ಅವನಿಲ್ಲ ಕುಳಿತಿರುವ ಸೇತುವೆ ಅವನಂತೆ ಒಂಟಿ, ಆದರೆ ಅದರ ಬದುಕು ನಿರ್ಜೀವ. ಅವನಂತೆ ಅಧಿಕಾರಕ್ಕಾಗಿ ಹೋರಾಡಬೇಕಾದ, ಅವಮಾನಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಆದರೆ ಅವನಿಗಿದೆ. ಕಳೆದ ಹನ್ನೊಂದು ವರ್ಷಗಳಿಂದ ಇದೇ ರೀತಿಯಿಂದ ಬದುಕಿನ ಎಷ್ಟೋ ನಿರ್ಧಾರಗಳನ್ನು ನಾಣ್ಯದ ಮೇಲೆ ಬಿಟ್ಟು ನಿರಾತಂಕನಾಗಿ ಇರುತ್ತಿದ್ದವನಿಗೆ ಇಂದೇಕೋ ಅದರ ಮೇಲೆಯೇ ಸಂದೇಹ ಮೂಡತೊಡಗಿದೆ. ಮತ್ತೊಮ್ಮೆ ಅದನ್ನು ಅಂಗೈಯಲ್ಲಿ ಹಿಡಿದ. ೧೯೯೯ರ ಒಂದು ರೂ ನಾಣ್ಯ ಇನ್ನೂ ತನ್ನ ಹೊಳಪನ್ನು ಬಿಟ್ಟಿರಲಿಲ್ಲ.
ನಾಣ್ಯದ ನಿರ್ಧಾರದ ಮೇಲೆ ತನ್ನನ್ನು ಮೆಚ್ಚುತ್ತಿದ್ದ ಹುಡುಗಿಗೆ 'ಹಾ' ಎಂದದ್ದು ಮತ್ತೆ ಸಂಬಂಧ ಹುಳಿಯಾಗಿ ಅವಳಿಗೆ ಇನ್ನೊಬ್ಬ ಹುಡುಗ ಇಷ್ಟವಾಗಿ 'ನಿನ್ನ ಜೊತೆ ಕಳೆದ ದಿನಗಳನ್ನು ಮರೆಯಲು ಇಚ್ಚಿಸುತ್ತೇನೆ' ಅಂದಿದ್ದು ಅವನಿಗೆ ನೆನಪಾಯಿತು. ಒಂದರ ಹಿಂದೆ ಓಡೋಡಿ ಬರುವ ಯಾವುದೋ ಹಾರರ್ ಸೀನುಗಳಲ್ಲವೇ ನೆನಪುಗಳು. ಅದಕ್ಕೇ ತಾನೇ ಮೂರು ಆಫರ್ ಇಟ್ಟುಕೊಂಡಿದ್ದರೂ ಈಗಿರುವ ಕಂಪನಿ ಸೇರಿದ್ದು, ಮ್ಯಾನೇಜ್ಮೆಂಟ್ ಮೇಲೆ ಸಿಟ್ಟು ಮಾಡಿಕೊಂಡು ಡಿಪ್ರೆಸ್ ಆಗಿದ್ದು, ಮನೆಯೋ ಹಣವೋ ಎಂದಾಗ ಹಣವನ್ನೇ ತೋರಿಸಿದ್ದ ನಾಣ್ಯ ಮನೆಯಿಂದ ಭಾವನಾತ್ಮಕ ಸಂಬಂಧ ತೆಗೆದಿದ್ದು ಎಲ್ಲಾ ನೆನಪಾಗಿ ಅವನಿಗೆ ಅವನ ಮೇಲೆಯೇ ಅಸಹ್ಯವಾಗತೊಡಗಿತು. ಹೆಚ್ಚಾಗಿ ಗೊಂದಲವಿದ್ದಾಗಲೆಲ್ಲಾ ಅವಲಂಬಿಸಿದ ನಾಣ್ಯದ ಚಮತ್ಕಾರದಿಂದ ಆ ಗಳಿಗೆಯಲ್ಲಿ ಎಲ್ಲಾ ಸರಿ ಎಂದೆನಿಸಿದರೂ ಮತ್ತೊಂದು ದಿನ ಎಲ್ಲಾ ತಲೆಕೆಳಗೆ ಆಗಿಬಿಡುತ್ತಿತ್ತು. ಎಲ್ಲಾ ಆ ಗಳಿಗೆಯಲ್ಲಿ ಸರಿಯಾಗುತ್ತಿದುದರಿಂದ ತಾನೇ ಇದರ ಮೇಲೆ ಇಷ್ಟು ನಂಬಿಕೆ. ಆದರೆ ಬದುಕು ಬಹು ಆಯಾಮದ್ದು ಎಂದು ಆತನಿಗೆ ಅರ್ಥವಾದಂತೆ ಕಾಣಲಿಲ್ಲ.
ಮೊದಲ ಬಾರಿ ಹೀಗೆ ನಾಣ್ಯ ಎಸೆದು ನಿರ್ಧಾರ ಮಾಡುವುದು ಸರಿಯೋ ಎಂದು 'ಹೆಡ್ಸ್' ಅಂದು ಮೇಲಕ್ಕೆ ಎಸೆದ. ಅವನ ಮುಖದಲ್ಲಿ ಕಳೆದ ನಾಲ್ಕು ವಾರಗಳ ನಂತರ ಒಂದು ಮುಗುಳ್ನಗು ಮೂಡಿತ್ತು. ಕಿಸೆಯಲ್ಲಿಟ್ಟುಕೊಂಡ. ಮತ್ತೆ ಕೂಡ ಅಲ್ಲೇ ತುಂಬಾ ಹೊತ್ತು ಯೋಚಿಸುತ್ತಿರುವಾಗ ಹರಕುಮುರಕು ಸೀರೆ ಉಟ್ಟ ಮಹಿಳೆಯೊಬ್ಬಳು ಕೈ ಚಾಚಿದಳು. ಜೇಬಿನೊಳಗೆ ಕೈಯಾಡಿಸಿದಾಗ ಅವನಿಗೆ ನಾಣ್ಯ ಸಿಕ್ಕಿತು. ಅದನ್ನು ತೆಗೆದು ಅವಳ ಕೈಗೆ ಹಾಕಿದ. ಅವನು ನಡೆದ. ಮೊದಲ ಬಾರಿಗೆ ನಾಣ್ಯ ಸತ್ಯ ಹೇಳಿದಂತೆ ಆತನಿಗೆ ಅನಿಸಿತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಮಳೆಗೇನು ಗೊತ್ತು
ಅಸ್ತ್ರ
ಬಹಿಷ್ಕೃತ!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (9)